ADVERTISEMENT

ವಾಣಿಜ್ಯ ಪ್ರಶ್ನೋತ್ತರ: ಹಣಕಾಸು ವಿಚಾರ

ಯು.ಪಿ.ಪುರಾಣಿಕ್
Published 27 ಅಕ್ಟೋಬರ್ 2020, 19:31 IST
Last Updated 27 ಅಕ್ಟೋಬರ್ 2020, 19:31 IST
ಪುರಾಣಿಕ್
ಪುರಾಣಿಕ್   

ಹೆಸರು ಬೇಡ, ಬೆಂಗಳೂರು

l ಪ್ರಶ್ನೆ: ಗಂಡ ಹಾಗೂ ಹೆಂಡತಿ ಬೇರೆ ಬೇರೆ ಹೆಸರಿನಲ್ಲಿ ಠೇವಣಿ ಇರಿಸಿದಾಗ ಹೆಂಡತಿಯ ಠೇವಣಿಗೆ ಬರುವ ಬಡ್ಡಿಯನ್ನು ಸೆಕ್ಷನ್‌ 64(1ಎ) ಆಧಾರದ ಮೇಲೆ ಗಂಡನ ಆದಾಯಕ್ಕೆ ಸೇರಿಸಿ, ಗಂಡನಾದವನು ಆದಾಯ ತೆರಿಗೆ ಕೊಡಬೇಕಾಗುತ್ತದೆ ಎಂಬುದಾಗಿ ಕಳೆದ ವಾರದ ಅಂಕಣದಲ್ಲಿ ತಿಳಿಸಿದ್ದೀರಿ. ಕಾನೂನಿನ ಪ್ರಕಾರ ಗಂಡ, ಹೆಂಡತಿ ಇಬ್ಬರೂ ಸ್ವತಂತ್ರರು. ಇದಕ್ಕೆ ಅಪವಾದ (exception) ವಿನಾಯಿತಿ ಇಲ್ಲವೇ?

ಉತ್ತರ: ನಿಮ್ಮದು ನ್ಯಾಯಸಮ್ಮತ ಪ್ರಶ್ನೆ. ಗಂಡನಾದವನು ತಾನು ಸಂಪಾದಿಸಿದ ಹಣದ ಮೇಲೆ ತೆರಿಗೆ ಉಳಿಸಲು, ಹೆಂಡತಿ ಹೆಸರಿನಲ್ಲಿ ಠೇವಣಿ ಇರಿಸುವುದಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶ ಇಲ್ಲ. ಇದೇ ವೇಳೆ ಹೆಂಡತಿಯಾದವಳಿಗೆ ತವರು ಮನೆಯಿಂದಲೋ, ಅಣ್ಣ ತಮ್ಮಂದಿರಿಂದಲೋ ಸ್ವಂತ ಮಕ್ಕಳಿಂದಲೋ ಇನಾಮು, ಉಡುಗೊರೆ, ದಾನದ ರೂಪ‍ದಲ್ಲಿ ಹಣ ಬರಬಹುದು. ಹಾಗೂ ಸ್ವಂತ ದುಡಿಮೆ ಕೂಡಾ ಇರಬಹುದು. ಹೀಗೆ ಬಂದ ಹಣವನ್ನು ಆಕೆ ಠೇವಣಿಯಾಗಿ ಇರಿಸಿ ಬಡ್ಡಿ ಪಡೆಯುತ್ತಿರುವಲ್ಲಿ ಇಂತಹ ಬಡ್ಡಿ ಗಂಡನ ಆದಾಯಕ್ಕೆ ಸೇರಿಸುವ ಅಥವಾ ಗಂಡನಾದವನು ಈ ಆದಾಯಕ್ಕೆ ತೆರಿಗೆ ಕೊಡುವ ಅವಶ್ಯವಿಲ್ಲ. ಕಳೆದ ವಾರದ ಸಾಬೋಜಿ ಪ್ರಶ್ನೆಯಲ್ಲಿ ₹ 30 ಲಕ್ಷ ತವರು ಮನೆಯಿಂದ ಬಂದ ಹಣವಾದ್ದರಿಂದ ತೆರಿಗೆ ಬರುವುದಿಲ್ಲ ಎಂದು ಬರೆದಿದ್ದೆ.

ADVERTISEMENT

***

ಎಸ್‌. ನಾರಾಯಣ, ಕಮ್ಮಸಂದ್ರ, ಬೆಂಗಳೂರು

l ನನ್ನ ವಯಸ್ಸು 72 ವರ್ಷ. ಚಹಾ ಹೋಟೆಲ್‌ನಲ್ಲಿ ಹಾಗೂ 20 ವರ್ಷ ದೇವಸ್ಥಾನವೊಂದರಲ್ಲಿ ಕೆಲಸ ಮಾಡಿ, ಸಿಕ್ಕ ಸಂಬಳದಲ್ಲಿ ಒಂದಿಷ್ಟು ಉಳಿಸುತ್ತಾ ಅದನ್ನು ಬ್ಯಾಂಕ್‌ನ ಎಸ್‌ಬಿ ಖಾತೆಯಲ್ಲಿ ಇಡುತ್ತಾ ಬಂದಿದ್ದೇನೆ. ಈಗ ಅದು
₹ 14 ಲಕ್ಷವಾಗಿದೆ. ಇದನ್ನು ಅಂಚೆ ಕಚೇರಿ ಹಿರಿಯ ನಾಗರಿಕ ಠೇವಣಿ ಅಥವಾ ಎಲ್‌ಐಸಿ ವಯೋವಂದನಾ ಯೋಜನೆಯಲ್ಲಿ ಇರಿಸಬೇಕೆಂದಿದ್ದೇನೆ. ಇವೆರಡರಲ್ಲಿ ಯಾವುದು ಸೂಕ್ತ ಹಾಗೂ ಉತ್ತಮ? ನನಗೆ ಬೇರೆ ಆದಾಯವಿಲ್ಲ. 15ಎಚ್‌ ಕೊಡಬೇಕಾಗಿದ್ದರೆ ತಿಳಿಸಿ.

ಉತ್ತರ: ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿ ಹಾಗೂ ಎಲ್‌ಐಸಿ ವಯೋವಂದನಾ ಯೋಜನೆ ಇವೆರಡರ ಸ್ವರೂಪ ಬಹುತೇಕ ಒಂದೇ ರೀತಿಯದ್ದಾಗಿದ್ದು, ಅವಧಿಯಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಿದೆ. ಬಡ್ಡಿದರವು ಎರಡರಲ್ಲೂ ಶೇಕಡ 7.4ರಷ್ಟಿದೆ. ಅಂಚೆ ಕಚೇರಿ ಠೇವಣಿ ಅವಧಿ 5 ವರ್ಷ. ವಯೋವಂದನಾ ಯೋಜನೆ ಅವಧಿ 10 ವರ್ಷ. ಅಂಚೆ ಕಚೇರಿ ಠೇವಣಿಯಲ್ಲಿ 3 ತಿಂಗಳಿಗೊಮ್ಮೆ ಬಡ್ಡಿ ಬಂದರೆ, ವಯೋವಂದನಾ ಯೋಜನೆಯಲ್ಲಿ ಪ್ರತಿ ತಿಂಗಳು ಬಡ್ಡಿ ಪಡೆಯಬಹುದು. ನಿಮಗೆ 72 ವರ್ಷ ವಯಸ್ಸಾಗಿರುವುದರಿಂದ ನೀವು ಅಂಚೆ ಕಚೇರಿ ಠೇವಣಿಯನ್ನೇ ಆರಿಸಿಕೊಳ್ಳಿ. ಹಣವನ್ನು ಚೆಕ್‌ ಮುಖಾಂತರವೇ ಕೊಡಿ. ಬಡ್ಡಿ ಹಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಡೆಯಲು, ಅಂಚೆ ಕಚೇರಿ ಉಳಿತಾಯ ಖಾತೆ ಪ್ರಾರಂಭಿಸಿ. ಬಡ್ಡಿ ಹಣ ಪಡೆಯಲು ಚೆಕ್ ಸೌಲಭ್ಯವಿದೆ. ನೀವು ಆದಾಯ ತೆರಿಗೆಗೆ ಒಳಗಾಗದಿದ್ದರೂ ₹ 50 ಸಾವಿರಕ್ಕೂ ಹೆಚ್ಚಿನ ಬಡ್ಡಿಯನ್ನು ವಾರ್ಷಿಕವಾಗಿ ಪಡೆಯುವುದರಿಂದ 15 ಎಚ್‌ ನಮೂನೆ ಫಾರಂ ಹಣ ಇರಿಸುವಾಗ ಹಾಗೂ ಪ್ರತಿ ಏಪ್ರಿಲ್‌ನ ಒಂದನೇ ವಾರ ಅಂಚೆ ಕಚೇರಿಗೆ ತಪ್ಪದೇ ಸಲ್ಲಿಸಿ. ನೀವು ಐ.ಟಿ. ರಿಟರ್ನ್ಸ್‌ ಸಲ್ಲಿಸಬೇಕಿಲ್ಲ.

ನಿಮಗೆ ಬೇರೆ ಯಾವುದೇ ಆದಾಯವಿಲ್ಲವಾದ್ದರಿಂದ, ಠೇವಣಿ ಅವಧಿ ಐದು ವರ್ಷವಾದ್ದರಿಂದ ₹ 12 ಲಕ್ಷ ಮಾತ್ರ 5 ವರ್ಷಗಳ ಠೇವಣಿಯಲ್ಲಿ ಇರಿಸಿ. ಇನ್ನುಳಿದ ₹ 2 ಲಕ್ಷವನ್ನುನಿಮ್ಮ ತುರ್ತು ಅಥವಾ ಆಪತ್ಕಾಲದ ಅಗತ್ಯಕ್ಕಾಗಿ ಉಳಿತಾಯ ಖಾತೆಯಲ್ಲಿ ಇರಿಸಿಕೊಳ್ಳಿ. ಇನ್ನು ಮುಂದೆ ನೀವು ಪತ್ರ ಬರೆಯಬೇಕಿಲ್ಲ. ನನಗೆ (ದೂರವಾಣಿ ಸಂಖ್ಯೆ: 9448015300) ನೇರವಾಗಿ ಕರೆ ಮಾಡಿ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ನೀಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.