ADVERTISEMENT

ಪ್ರಶ್ನೋತ್ತರ: ಹೆಂಡತಿ, ಮಕ್ಕಳ ಹೆಸರಿನ ಆರ್‌ಡಿ/ಎಫ್‌ಡಿಗೆ ತೆರಿಗೆ ಕಟ್ಟಬೇಕೇ?

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 19:30 IST
Last Updated 14 ಏಪ್ರಿಲ್ 2020, 19:30 IST
ಯು.ಪಿ. ಪುರಾಣಿಕ್
ಯು.ಪಿ. ಪುರಾಣಿಕ್   

ರಮೇಶ, ಹಾಸನ

l ನಾನು ಸರ್ಕಾರಿ ನೌಕರ. ಹೆಂಡತಿ, ಮಕ್ಕಳ ಹೆಸರಿನಲ್ಲಿ ಆರ್‌ಡಿ/ಎಫ್‌ಡಿ ಇಟ್ಟಿದ್ದೇನೆ. ಅವರು ತೆರಿಗೆ ಕೊಡಬೇಕಾಗುತ್ತದೆಯೇ?

ಉತ್ತರ: ನಿಮ್ಮ ಹೆಂಡತಿ, ಮಕ್ಕಳ ಹೆಸರಿನಲ್ಲಿ ಆರ್‌ಡಿ/ಎಫ್‌ಡಿ ಅಥವಾ ಇನ್ನಿತರ ಹೂಡಿಕೆ ನಿಮ್ಮ ದುಡಿಮೆಯಿಂದ ಮಾಡಿದರೆ ಅಲ್ಲಿ ಬರುವ ಆದಾಯ ನಿಮ್ಮ ಆದಾಯಕ್ಕೆ ಸೇರಿಸಿ ನೀವೇ ತೆರಿಗೆ ಕೊಡಬೇಕಾಗುತ್ತದೆ. ಸೆಕ್ಷನ್‌ 64 (1ಎ) ಆಧಾರದ ಮೇಲೆ ನೀವು ವಿನಾಯ್ತಿ ಪಡೆಯುವಂತಿಲ್ಲ. ಇದೇ ವೇಳೆ ಪ್ರಾಪ್ತ ವಯಸ್ಕ, ಮಕ್ಕಳ ಹೆಸರಿನಲ್ಲಿ ಇಟ್ಟರೆ ಅವರೇ ಆದಾಯ ತೆರಿಗೆ ಸಲ್ಲಿಸಬೇಕು.

ADVERTISEMENT

***

ಶರಣಪ್ಪ, ಬಿಜಾಪುರ

lನನ್ನ ವಯಸ್ಸು 69. ಬೆಂಗಳೂರಿಗ. ಕೆಂಪೇಗೌಡ ಬಡಾವಣೆಯಲ್ಲಿ 30X40 ನಿವೇಶನ ಮಂಜೂರಾಗಿದ್ದು, ಅದನ್ನು ನನ್ನ ಹೆಸರಿಗೆ ನೋಂದಾಯಿಸಿಕೊಂಡಿದ್ದೇನೆ. ಈ ನಿವೇಶನ 10 ವರ್ಷಗಳ ತನಕ ಮಾರಾಟ ಮಾಡುವಂತಿಲ್ಲ ಎಂದು ಬಿಡಿಎದವರು ತಿಳಿಸಿದ್ದಾರೆ. ನನಗೆ ಈ ನಿವೇಶನ ನನ್ನ ಅಣ್ಣನ ಮಗನಿಗೆ ಕೊಡಬೇಕೆಂದಿದ್ದೇನೆ. ಮುಂದೇನು ಮಾಡಬೇಕು ಎಂದು ತಿಳಿಸಿ.

ಉತ್ತರ: ನಿಮ್ಮ ಬೆಂಗಳೂರಿನ ಕೆಂಪೇಗೌಡ ಬಡಾವಣೆಯ ನಿವೇಶನ ಬಿಡಿಎದವರು ತಿಳಿಸಿರುವಂತೆ ಮಾರಾಟ ಮಾಡಲು 10 ವರ್ಷ ಕಾಯಬೇಕಾದರೂ ಈ ನಿವೇಶನವನ್ನು ನಿಮ್ಮ ಅಣ್ಣನ ಮಗನಿಗೆ ನಿಮ್ಮ ಇಚ್ಚೆಯಂತೆ ದಾನವಾಗಿ ಈಗಲೇ ಕೊಡಲು ಬರುತ್ತದೆ. ವ್ಯಕ್ತಿಯ ಹತ್ತಿರದ ರಕ್ತ ಸಂಬಂಧಿಗಳಿಗೆ ಗಿಫ್ಟ್‌ ಡೀಡ್‌ ಮೂಖಾಂತರ ಹಸ್ತಾಂತರಿಸಲು ಕಾನೂನಿಲ್ಲಿ ಅವಕಾಶವಿದೆ. ಹೀಗೆ ಮಾಡುವಾಗ ನಿಮಗಾಗಲಿ, ನಿಮ್ಮ ಅಣ್ಣನ ಮಗನಿಗಾಗಲಿ ಯಾವುದೇ ತರಹದ ತೆರಿಗೆ ಬರುವುದಿಲ್ಲ. ನಿವೇಶನದ ಬೆಲೆಗೆ ತಕ್ಕಂತೆ ಸ್ಟ್ಯಾಂಪ್‌ ಪೇಪರ್‌ ಮೇಲೆ ಗಿಫ್ಟ್‌ ಡೀಡ್‌ ಅನ್ನು ಬರೆದು ಸಬ್ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಾಯಿಸಬೇಕು. ಹೀಗೆ ಮಾಡಿದಲ್ಲಿ ನಿಮ್ಮ ಆಸೆ ನೆರವೇರಲಿದೆ. ಇದೇ ವೇಳೆ, ಬಿಡಿಎ ಕಾನೂನಿನಂತೆ ನಿವೇಶನವನ್ನು ಅಣ್ಣನ ಮಗನಿಗೆ ಮುಂದೆ ಮಾರಾಟ ಮಾಡಲು ಕೊಂಡ ತಾರೀಕಿನಿಂದ 10 ವರ್ಷಗಳ ತನಕ ಕಾಯಬೇಕಾಗುತ್ತದೆ. ನೀವು ಹೀಗೆ ದಾನಪ‍ತ್ರದಲ್ಲಿ ಮಾಡಿರುವುದನ್ನು ಬಿಡಿಎ ಪ್ರಶ್ನಿಸುವಂತಿಲ್ಲ.

***

ಲಕ್ಷ್ಮೀದೇವಿ, ಚಿತ್ರದುರ್ಗ

lನಾನು ಪ್ರಾಥಮಿಕ ಶಾಲಾ ಶಿಕ್ಷಕಿ. ಪತಿ ಹೈಸ್ಕೂಲ್‌ ಶಿಕ್ಷಕರು. ಸದ್ಯಕ್ಕೆ ಮಕ್ಕಳಿಲ್ಲ. ನಾವು ಗರಿಷ್ಠ ₹ 40 ಸಾವಿರ ತಿಂಗಳಿಗೆ ಉಳಿಸಬಹುದು. ಇಲ್ಲಿ ಒಂದು 30X40 ಅಳತೆಯ ನಿವೇಶನ ಕೊಂಡಿದ್ದೇವೆ. ನಮ್ಮ ಉಳಿತಾಯ ಖಾತೆಯಲ್ಲಿ ₹6 ಲಕ್ಷ ಇದೆ. ನಾವು 3–4 ವರ್ಷಗಳಲ್ಲಿ ಸಾಲರಹಿತ ₹30 ರಿಂದ ₹ 40 ಲಕ್ಷದೊಳಗೆ ಮನೆ ಕಟ್ಟಲು ನಿಮ್ಮ ಮಾರ್ಗದರ್ಶನ ಬೇಕಾಗಿದೆ.

ಉತ್ತರ: ನಿಮಗೆ ಈ ವಿಚಾರದಲ್ಲಿ ಎರಡು ಮಾರ್ಗವಿದೆ. ಮೂರ್ನಾಲ್ಕು ವರ್ಷಗಳು ಕಳೆದ ನಂತರ ಮನೆ ಕಟ್ಟುವಲ್ಲಿ ನಿಮ್ಮ ಅಂದಾಜಿಗಿಂತ ಕನಿಷ್ಠ ಶೇ 30ರಷ್ಟು ಹೆಚ್ಚು ಖರ್ಚು ಮಾಡಬೇಕಾದೀತು. ಇದರ ಬದಲಾಗಿ ನೀವು ಸಂಬಳ ಪಡೆಯುವ ಬ್ಯಾಂಕ್‌ನಲ್ಲಿ ₹ 30 ಲಕ್ಷ ಗೃಹ ಸಾಲ ಪಡೆದು ಈಗಲೇ ಮನೆ ಕಟ್ಟಿಸಿಕೊಳ್ಳಿ. ಸಾಲ ನಿಮ್ಮ ಪತಿ ಹೆಸರಿನಲ್ಲಿ ಇರಲಿ. ಅವರು ಗೃಹ ಸಾಲದ ಕಂತು ಹಾಗೂ ಬಡ್ಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಈ ಮಾರ್ಗ ಬೇಡವಾದರೆ, ನೀವು ಉಳಿಸಬಹುದಾದ ₹ 40 ಸಾವಿರ 4 ವರ್ಷಗಳಿಗೆ ಆರ್‌.ಡಿ ಮಾಡಿದಲ್ಲಿ 4 ವರ್ಷಾಂತ್ಯಕ್ಕೆ ಅಸಲು ಬಡ್ಡಿ ಸೇರಿ ಶೇ 7 ಬಡ್ಡಿದರದಲ್ಲಿ ₹ 22,19,200 ಪಡೆಯುವಿರಿ. ಗೃಹ ಸಾಲ ಹಾಗೂ ಶಿಕ್ಷಣ ಸಾಲ ಎರಡೂ ಉತ್ತಮ ಹೂಡಿಕೆಯಾಗಿದ್ದು, ಇವುಗಳನ್ನು ಸಾಲವೆಂದು ಪರಿಗಣಿಸುವ ಅವಶ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.