ADVERTISEMENT

ಪ್ರಶ್ನೋತ್ತರ: ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರ ಠೇವಣಿ ಎಷ್ಟು ಸುರಕ್ಷಿತ?

ಯು.ಪಿ.ಪುರಾಣಿಕ್
Published 29 ಡಿಸೆಂಬರ್ 2020, 19:32 IST
Last Updated 29 ಡಿಸೆಂಬರ್ 2020, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಎನ್‌.ಆರ್‌. ವಿಜಯಶೇಖರ, ಮಹಲಿಂಗಾಪುರ

ಪ್ರಶ್ನೆ: ನಾನು 1966ರಿಂದಲೂ ಪ್ರಜಾವಾಣಿ ಓದುಗ. ನಿಮ್ಮ ಅಂಕಣ ಪ್ರಾರಂಭವಾದಾಗಿನಿಂದಲೂ ಓದುತ್ತಿದ್ದೇನೆ. ನನ್ನ ವಯಸ್ಸು 73 ವರ್ಷ. ನಾನು ಭೂ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೆ, ನನ್ನ ಪತ್ನಿ ಬಿಇಎಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ನಿವೃತ್ತಿಯಾಗಿ ಮಹಲಿಂಗಾಪುರದಲ್ಲಿ ವಾಸವಾಗಿದ್ದೇವೆ. ನನ್ನ ಹೆಂಡತಿ ಹಾಗೂ ನನ್ನ ಹೆಸರಿನಲ್ಲಿ ತಲಾ ₹ 15 ಲಕ್ಷ ಎಸ್‌ಬಿಐ ಠೇವಣಿ ಇರಿಸಿದ್ದೇವೆ. ತೆರಿಗೆ ವಿಚಾರದಲ್ಲಿ ಹಾಗೂ ಹೆಚ್ಚಿನ ವರಮಾನ ಪಡೆಯುವ ವಿಚಾರದಲ್ಲಿ ಸಲಹೆ ನೀಡಿರಿ. ಬೇರೆ ಆದಾಯವಿಲ್ಲ.

ಉತ್ತರ: ಅಂಚೆ ಕಚೇರಿಯಲ್ಲಿ ಲಭ್ಯವಿರುವ ಹಿರಿಯ ನಾಗರಿಕರ ಠೇವಣಿ ಮಾಡಬಹುದು. ಈ ಠೇವಣಿಯ ಸದ್ಯದ ಬಡ್ಡಿದರ ಶೇಕಡ 7.4 ಹಾಗೂ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು. ಅವಧಿ 5 ವರ್ಷ. ಗರಿಷ್ಠ ಮಿತಿ ತಲಾ ₹ 15 ಲಕ್ಷ. ನಿಮ್ಮೊಡನೆ ಇರುವ ₹ 30 ಲಕ್ಷ ಈ ಠೇವಣಿಯಲ್ಲಿ ತಲಾ ₹ 15 ಲಕ್ಷ ಇಡಬಹುದು. ಆದರೆ ಈ ಠೇವಣಿಯ ಅವಧಿಯ ನಡುವೆ ಅಸಲು ಹಣ ಹಿಂಪಡೆಯುವುದು ಕಷ್ಟ. ಹಾಗಾಗಿ ನಿಮ್ಮ ಹೆಸರಿನಲ್ಲಿ ₹ 13 ಲಕ್ಷ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ₹ 15 ಲಕ್ಷ ಇರಿಸಿ. ಉಳಿದ ₹ 2 ಲಕ್ಷ ಎಸ್‌ಬಿಐನಲ್ಲಿ ಒಂದು ಅಥವಾ ಎರಡು ವರ್ಷಗಳಿಗೆ ಠೇವಣಿ ಮಾಡಿರಿ. ತುರ್ತು ಪರಿಸ್ಥಿತಿಯಲ್ಲಿ ಈ ಠೇವಣಿಯನ್ನು ಅವಧಿಗೆ ಮುನ್ನ ಪಡೆಯಬಹುದು. ಈ ಯೋಜನೆಯಲ್ಲಿ ಗರಿಷ್ಠ ಶೇ 6ರಷ್ಟು ಬಡ್ಡಿ ಬರಬಹುದು. ಪ್ರತೀ ಏಪ್ರಿಲ್ ಒಂದನೇ ವಾರ 15 ಎಚ್‌ ನಮೂನೆ ಫಾರಂ ಬ್ಯಾಂಕ್‌ಗೆ ಸಲ್ಲಿಸಿ ಟಿಡಿಎಸ್‌ ಆಗದಂತೆ ನೋಡಿಕೊಳ್ಳಿ. ನೀವಿಬ್ಬರೂ ಯಾವ ತರಹದ ತೆರಿಗೆಗೂ ಒಳಗಾಗುವುದಿಲ್ಲ. ಐ.ಟಿ. ರಿಟರ್ನ್ಸ್‌ ತುಂಬುವ ಅಗತ್ಯವೂ ಇಲ್ಲ. ಹೆಚ್ಚಿನ ಬಡ್ಡಿ ಆಸೆಯಿಂದ ಬ್ಯಾಂಕ್‌ ಠೇವಣಿ ಹೊರತುಪ‍ಡಿಸಿ ಬೇರಾವ ಯೋಜನೆಯಲ್ಲಿಯೂ ಹಣ ತೊಡಗಿಸಬೇಡಿ.

ADVERTISEMENT

**
ಎಲ್‌.ಜಿ. ರಾಯ್ಕರ್‌, ಶಿರಸಿ

ಪ್ರಶ್ನೆ: ಪಿಎಂಸಿ ಬ್ಯಾಂಕ್‌ನಿಂದ ₹ 1 ಲಕ್ಷಗಳ ತನಕ ವಾಪಾಸು ಪಡೆಯಲು ಆರ್‌ಬಿಐ ಆದೇಶಿಸಿದ್ದು ನಾನು ₹ 1 ಲಕ್ಷ ವಾಪಾಸು ಪಡೆದಿದ್ದೇನೆ. ನಂತರ 23–9–2019ರಲ್ಲಿ ಮತ್ತೊಂದು ಆದೇಶ ನೀಡಿದ್ದು ಬ್ಯಾಂಕ್‌ನವರು ತಮಗೆ ಆದೇಶ ಬರಲಿಲ್ಲ ಎನ್ನುತ್ತಾರೆ. ಮುಂದೇನು ಮಾಡಬೇಕು?

ಉತ್ತರ: ನನಗೆ ತಿಳಿದಂತೆ ಪಿಎಂಸಿ ಬ್ಯಾಂಕ್‌ನವರು ಆರ್‌ಬಿಐ ಆದೇಶ ನಿರಾಕರಿಸುವಂತಿಲ್ಲ. ಇದೇ ವೇಳೆ ಆರ್‌ಬಿಐ ಕೊಟ್ಟಿರುವ ಆದೇಶದ ನಕಲು ನಿಮ್ಮೊಡನಿದ್ದರೆ ನೀವು ಆರ್‌ಬಿಐಗೆ ದೂರು ಸಲ್ಲಿಸಬಹುದು. ಶಿರಸಿಯಲ್ಲಿ ನಿಮ್ಮ ಹಾಗೇ ಇತರ ಠೇವಣಿದಾರರೂ ಇರುವುದರಿಂದ ಆರ್‌ಬಿಐ ಆದೇಶ ಬಂದಿರುವುದು ನಿಜವೇ ಎಂದು ದೃಢಪಡಿಸಿಕೊಳ್ಳಿ. ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಇಂತಹದೇ ಸಮಸ್ಯೆ ಆಗಿದ್ದು, ಅವರು ಆರ್‌ಬಿಐ ನಿರ್ದೇಶನ ಪಾಲಿಸುತ್ತಿದ್ದಾರೆ. ಒಟ್ಟಿನಲ್ಲಿ ಯಾವುದೇ ಬ್ಯಾಂಕ್‌ ಆದರೂ ಆರ್‌ಬಿಐ ನಿರ್ದೇಶನ ಕಡೆಗಣಿಸುವಂತಿಲ್ಲ.

**
ಧರ್ಮ, ಬೆಂಗಳೂರು

ಪ್ರಶ್ನೆ: ನಾನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಒಟ್ಟು ₹ 9 ಲಕ್ಷ ಶೇ 6.30ರ ಬಡ್ಡಿದರದಲ್ಲಿ ಠೇವಣಿ ಇರಿಸಿದ್ದೇನೆ. ಈ ಬ್ಯಾಂಕ್‌ ಭದ್ರವಾಗಿದೆಯೇ? ಹಣ ಮುಂದುವರಿಸಬಹುದೇ ತಿಳಿಸಿರಿ ಅಥವಾ ಅಂಚೆ ಕಚೇರಿ ಠೇವಣಿಯಲ್ಲಿ ಇರಿಸಲೇ ತಿಳಿಸಿ. ಸದ್ಯ ಜಮೀನು ಮಾರಾಟ ಮಾಡಿದ್ದು, ₹ 5 ಲಕ್ಷ ಬಂದಿದೆ.

ಉತ್ತರ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅನ್ನು ಕೆನರಾ ಬ್ಯಾಂಕ್‌ ಸ್ಪಾನ್ಸರ್ ಮಾಡಿದ್ದು, ಈ ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸಲು ಭಯಪಡುವ ಅವತ್ಯವಿಲ್ಲ. ಅದು ಉತ್ತಮವಾದ ಹಾಗೂ ಭದ್ರವಾದ ಬ್ಯಾಂಕ್‌. ಇದೇ ವೇಳೆ ಅಂಚೆ ಕಚೇರಿಯ ಹಿರಿಯ ನಾಗರಿಕರ ಠೇವಣಿಯ ಇಂದಿನ ಬಡ್ಡಿದರ ಶೇ 7.4 ಇದ್ದು, ಇಲ್ಲಿ ಹಿರಿಯ ನಾಗರಿಕರು ₹ 15 ಲಕ್ಷಗಳ ತನಕ ಠೇವಣಿ ಇರಿಸಬಹುದು. ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಹೂಡಿಕೆಯಲ್ಲಿ ಇರುವ ಮುಖ್ಯ ವ್ಯತ್ಯಾಸವೆಂದರೆ ಬ್ಯಾಂಕ್‌ಗಳ ಅವಧಿ ಠೇವಣಿ, ಅವಧಿಗೆ ಮುನ್ನ ಕೂಡಾ ಅಸಲಿನಲ್ಲಿ ಕಡಿತವಿಲ್ಲದೆ ಪಡೆಯಬಹುದು ಹಾಗೂ ಅದೇ ಬ್ಯಾಂಕ್‌ನಲ್ಲಿ ಸಾಲ ಕೂಡಾ ಪಡೆಯಬಹುದು. ಈ ಸೌಲಭ್ಯ ಅಂಚೆ ಕಚೇರಿ ಠೇವಣಿಗಳಲ್ಲಿ ಇರುವುದಿಲ್ಲ. ₹ 9 ಲಕ್ಷ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಮುಂದುವರಿಸಿ, ಇನ್ನು ಉಳಿದ ₹ 5 ಲಕ್ಷ ಅಂಚೆ ಕಚೇರಿಯಲ್ಲಿ ಇಡಿ.

ಯು.ಪಿ.ಪುರಾಣಿಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.