ADVERTISEMENT

ಪ್ರಶ್ನೋತ್ತರ: ಬಂಗಾರ, ಬೆಳ್ಳಿ ಬೆಲೆ ಕಡಿಮೆ ಆಗಬಹುದೇ?

ಯು.ಪಿ.ಪುರಾಣಿಕ್
Published 16 ಮಾರ್ಚ್ 2021, 19:30 IST
Last Updated 16 ಮಾರ್ಚ್ 2021, 19:30 IST
ಪುರಾಣಿಕ್
ಪುರಾಣಿಕ್   

*ಪ್ರಶ್ನೆ: ನನ್ನ ವಯಸ್ಸು 33 ವರ್ಷ. ವೃತ್ತಿ ಒಕ್ಕಲುತನ. ನನ್ನ ಮನೆಯ ವಾರ್ಷಿಕ ಆದಾಯ ₹ 2 ಲಕ್ಷ. ನನಗೆ ಷೇರುಪೇಟೆಯಲ್ಲಿ ನಡೆಯುವ ವ್ಯವಹಾರದ ಬಗ್ಗೆ ಮಾಹಿತಿ ಬೇಕಾಗಿದೆ. 1) ನಾನು ಷೇರುಪೇಟೆಯಲ್ಲಿ ಭಾಗೀದಾರನಾಗಲು ಏನು ಮಾಡಬೇಕು? 2) ಐಪಿಒಗಳಲ್ಲಿ ಹೂಡಿಕೆ ಹೇಗೆ? 3) ಷೇರು ಖರೀದಿ, ಮಾರಾಟ ಹೇಗೆ? 4) ಪ್ರಾರಂಭಿಕ ಹಂತ ಯಾವುದು? 5) ಡಿಮ್ಯಾಟ್‌ ಖಾತೆ ಎಲ್ಲಿ ತೆರೆಯಬಹುದು? 6) ಸಣ್ಣ ಪ್ರಮಾಣದ ಹೂಡಿಕೆ ಹೇಗೆ?

-ಹೆಸರು ಬೇಡ, ದೇವದುರ್ಗ, ರಾಯಚೂರು ಜಿಲ್ಲೆ

ಉತ್ತರ: ನೀವು ಒಮ್ಮೆ ರಾಯಚೂರಿಗೆ ಹೋಗಿ ಅಲ್ಲಿಯ ಷೇರು ಬ್ರೋಕರ್ ಅಲ್ಲಿ ಒಂದು ಖಾತೆ ಪ್ರಾರಂಭಿಸಿರಿ. ಷೇರ್‌ಖಾನ್‌, ಆನಂದರಾಠಿ ಹೀಗೆ ಷೇರು ಬ್ರೋಕರ್ಸ್‌ ಇರುತ್ತಾರೆ. ಅವರೇ ಡಿಮ್ಯಾಟ್‌ ಖಾತೆ ಪ್ರಾರಂಭಿಸಲು ಸಹಾಯ ಮಾಡುತ್ತಾರೆ. ಇದು ಉಳಿತಾಯ ಖಾತೆಯ ತರಹದ್ದು. ಇಲ್ಲಿ ಷೇರು ಜಮಾ, ಖರ್ಚು ಆಗುತ್ತಿರುತ್ತದೆ. ಈ ಬ್ರೋಕರ್ಸ್‌ ಮುಖಾಂತರ ನೀವು ನಿಮ್ಮ ಊರಿನಲ್ಲೇ ಇದ್ದು ಆನ್‌ಲೈನ್‌ ಮೂಲಕ ಷೇರು ಖರೀದಿ ಹಾಗೂ ಮಾರಾಟ ಮಾಡಬಹುದು. ಕೆಲವು ಕಂಪನಿಗಳು ಐಪಿಒ ಪ್ರಾರಂಭಿಸಿದಾಗ ಫಾರ್ಮ್‌ ಪಡೆದು ತುಂಬಿ ಬ್ಯಾಂಕ್‌ ಮುಖಾಂತರ ಅರ್ಜಿ ಸಲ್ಲಿಸಬಹುದು. ನಿಮಗೆ ಕಂಪನಿಯು ಷೇರು ಅಲಾಟ್‌ ಮಾಡಿದಲ್ಲಿ ನಿಮ್ಮ ಡಿಮ್ಯಾಟ್‌ ಖಾತೆಯಲ್ಲಿ ಷೇರು ಜಮಾ ಆಗುತ್ತದೆ. ನೀವು ಈ ಷೇರುಗಳನ್ನು ಉತ್ತಮ ದರ ಬಂದಾಗ ಮಾರಾಟ ಮಾಡಿ ಲಾಭ ಪಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ಕನಿಷ್ಠ ಒಂದು ಷೇರು ಕೂಡಾ ಕೊಳ್ಳಬಹುದು ಹಾಗೂ ಮಾರಾಟ ಮಾಡಬಹುದು. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಷೇರು ಮಾರುಕಟ್ಟೆಯ ವಿಚಾರದಲ್ಲಿ ಪರಿಣತರು ಪ್ರತಿ ಸೋಮವಾರ ವಿವರಣೆ ನೀಡುವುದನ್ನು ಗಮನಿಸಿ, ಸಾಧ್ಯವಾದರೆ ದೂರವಾಣಿ ಮುಖಾಂತರ ಸಂಪರ್ಕಿಸಿ.

ADVERTISEMENT

*ಪ್ರಶ್ನೆ: ನನಗೆ ಇಬ್ಬರು ಹೆಣ್ಣುಮಕ್ಕಳು. ವಯಸ್ಸು 24 ಹಾಗೂ 26 ವರ್ಷ. ಸಾಧ್ಯವಾದರೆ ಇಬ್ಬರ ಮದುವೆಯನ್ನೂ ಇದೇ ವರ್ಷ ಮಾಡಬೇಕೆಂದಿದ್ದೇವೆ. ಇಬ್ಬರೂ ಐ.ಟಿ. ಕಂಪನಿಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ. ಅವರ ಆದಾಯ ತೆರಿಗೆ ಉಳಿಸಲು ನಮಗೆ ಮಾರ್ಗದರ್ಶನ ಮಾಡಿ. ಬಂಗಾರ, ಬೆಳ್ಳಿ ಬೆಲೆ ಕಡಿಮೆ ಆಗಬಹುದೇ?

-ಮಹಾಲಕ್ಷ್ಮಿ, ಚಿತ್ರದುರ್ಗ

ಉತ್ತರ: ನಿಮ್ಮ ಇಬ್ಬರೂ ಹೆಣ್ಣು ಮಕ್ಕಳು ಆದಾಯ ತೆರಿಗೆಯಿಂದ ಕೆಲವೊಂದು ವಿನಾಯಿತಿ ಪಡೆಯಲು ಸೆಕ್ಷನ್ 80ಸಿ ಆಧಾರದ ಮೇಲೆ ಪಿಪಿಎಫ್‌, ಜೀವವಿಮೆ, ತೆರಿಗೆ ಉಳಿಸುವ 5 ವರ್ಷಗಳ ಬ್ಯಾಂಕ್‌ ಠೇವಣಿ ಮಾಡಲಿ. ಇವೆಲ್ಲಾ ಸೇರಿ ಗರಿಷ್ಠ ₹ 1.50 ಲಕ್ಷವನ್ನು ಒಟ್ಟು ಆದಾಯದಿಂದ ಕಳೆದು ತೆರಿಗೆ ಕೊಡಬಹುದು. ಇದರ ಹೊರತಾಗಿ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ಕನಿಷ್ಠ ₹ 50 ಸಾವಿರ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್‌) ಹೂಡಿ ಇಲ್ಲಿ ಕೂಡಾ ವಿನಾಯಿತಿ ಪಡೆಯಬಹುದು. ಮಕ್ಕಳ ಮದುವೆಯ ಸಲುವಾಗಿ ಬಂಗಾರ, ಬೆಳ್ಳಿ ಈಗಲೇ ಕೊಳ್ಳಬಹುದು. ಇವೆರಡರ ಬೆಲೆ ಈಗಾಗಲೇ ತುಂಬಾ ಮೇಲಕ್ಕೆ ಹೋಗಿದ್ದು, ಇನ್ನೂ ಏರಿಕೆ ಆಗುವ ಸಂದರ್ಭ ಇರಲಾರದು. ಅಲ್ಪ ಸ್ವಲ್ಪ ಕಡಿಮೆ ಆದರೂ ಆಗಬಹುದು. ಬೆಳ್ಳಿ, ಬಂಗಾರದ ಬೆಲೆ ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಬಂಗಾರದ ಒಡವೆ, ಬೆಳ್ಳಿ ತಟ್ಟೆ ಮುಂತಾದವನ್ನು ಕೊಳ್ಳಲು ಮದುವೆ ತನಕ ಕಾಯುವುದರಲ್ಲಿ ತಪ್ಪೇನಿಲ್ಲ. ಬೆಲೆ ವಿಚಾರದಲ್ಲಿ ಬಹಳ ವ್ಯತ್ಯಾಸ ಇರುವುದಿಲ್ಲ. ಇಬ್ಬರೂ ಹೆಣ್ಣುಮಕ್ಕಳಿಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.

*ಪ್ರಶ್ನೆ: ನನ್ನ ವಯಸ್ಸು 42 ವರ್ಷ. 4 ವರ್ಷದ ಒಬ್ಬ ಮಗ, ಎರಡು ವರ್ಷದ ಒಬ್ಬಳು ಮಗಳು ಇದ್ದಾರೆ ನನಗೆ. ಇಬ್ಬರ ಹೆಸರಿನಲ್ಲಿ ತಿಂಗಳಿಗೆ ₹ 2 ಸಾವಿರ ಆರ್‌.ಡಿ ಮಾಡಿದ್ದೇನೆ. ನಾನು ಬಟ್ಟೆ ವ್ಯಾಪಾರಿ. ನನಗೆ ಬ್ಯಾಂಕ್‌ ವ್ಯವಹಾರದಲ್ಲಿ ಮಾಹಿತಿ ಇಲ್ಲ. ಅಂಗಡಿ ವಿಚಾರದಲ್ಲಿ ಖಾತೆ ತೆರೆಯುವುದು ಹಾಗೂ ಸಾಲ ಪಡೆಯುವುದು ಇವೆಲ್ಲಾ ವಿವರವಾಗಿ ತಿಳಿಸಿ.

-ಚಂದ್ರಯ್ಯ, ಊರುಬೇಡ

ಉತ್ತರ: ನೀವು ನಿಮ್ಮ ಅಂಗಡಿ ಸಮೀಪದ ಬ್ಯಾಂಕ್‌ನಲ್ಲಿ ಒಂದು ಚಾಲ್ತಿ ಖಾತೆಯನ್ನು (current account) ಅಂಗಡಿ ಹೆಸರಿನಲ್ಲಿ ತೆರೆಯಿರಿ. ಈ ಖಾತೆಯಲ್ಲಿ ಪ್ರತೀ ದಿನದ ವಹಿವಾಟು ಜಮಾ–ಖರ್ಚು ಮಾಡುತ್ತಾ ಬನ್ನಿ. ಹೀಗೆ ಆರು ತಿಂಗಳಾದ ನಂತರ ಅದೇ ಬ್ಯಾಂಕ್‌ನಲ್ಲಿ ಒಂದು ಓವರ್‌ ಡ್ರಾಫ್ಟ್‌ ಖಾತೆಗೆ ಅರ್ಜಿ ಹಾಕಿರಿ. ನಿಮ್ಮ ವ್ಯವಹಾರ, ನೀವು ಅಂಗಡಿಯಲ್ಲಿ ಹೊಂದಿರುವ ಬಟ್ಟೆಯ ಮೊತ್ತ ಲೆಕ್ಕ ಹಾಕಿ, ಬ್ಯಾಂಕ್‌ನವರು ಒಂದು ಮಿತಿ ನಿರ್ಧರಿಸಿ ಓ.ಡಿ. ಸವಲತ್ತು ಕೊಡುತ್ತಾರೆ. ಓಡಿ ಖಾತೆಯ ಮಿತಿಯೊಳಗೆ ನೀವು ಜಮಾ ಖರ್ಚು ಮಾಡುತ್ತಾ ಬನ್ನಿ. ಈ ಓ.ಡಿ. ಖಾತೆಗೆ ನಿಮ್ಮ ಅಂಗಡಿಯಲ್ಲಿರುವ (Stock of goods) ವಸ್ತುಗಳ Hypothecation ಮಾಡಿಕೊಳ್ಳುತ್ತಾರೆ. ನೀವು ಬ್ಯಾಂಕ್‌ಗೆ ಪ್ರತೀ ತಿಂಗಳೂ ಸ್ಟಾಕ್‌ ಸ್ಟೇಟ್‌ಮೆಂಟ್‌ ಕೊಡಬೇಕಾಗುತ್ತದೆ. ಇದೇ ವೇಳೆ, ಈ ಖಾತೆಯ ಸಲುವಾಗಿ ಒಂದು ಆರ್‌.ಡಿ. 5 ವರ್ಷಗಳ ಅವಧಿಗೆ ಮಾಡಿ. 5 ವರ್ಷಗಳ ನಂತರ ನೀವು ನಿಮ್ಮ ಆರ್‌.ಡಿ. ಮೊತ್ತದ ಮೇಲೆ ಓ.ಡಿ. ಪಡೆಯಬಹುದು. ಹಾಗೂ ಆರ್ಥಿಕ ಸ್ವಾತಂತ್ರ್ಯದೊಂದಿಗೆ ವ್ಯವಹಾರ ಮಾಡಬಹುದು. ನಿಮ್ಮ ಮಕ್ಕಳ ಸಲುವಾಗಿ ನೀವು ಈಗ ಮಾಡಿರುವ ಆರ್‌.ಡಿ. ದೀರ್ಘಾವಧಿಯದ್ದಾಗಿರಲಿ. ಮುಂದೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಸಾಧ್ಯವಾದರೆ ಹೆಣ್ಣು ಮಗುವಿನ
ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.