ADVERTISEMENT

ಕೊರೊನಾ ವೈರಸ್‌ ಲಾಕ್‌ಡೌನ್ ಸಂಕಷ್ಟದಲ್ಲಿ ‘ಸಿಪ್‌’ ನಿಲ್ಲಿಸಬೇಡಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 19:45 IST
Last Updated 28 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಷೇರುಪೇಟೆಯಲ್ಲಿ ಭಾರಿ ಮಾರಾಟದ ಒತ್ತಡ ಕಂಡು ಬಂದಿರುವ ಸಂದರ್ಭದಲ್ಲಿಯೂ ವ್ಯವಸ್ಥಿತ ಹೂಡಿಕೆ ಯೋಜನೆಯಿಂದ (ಸಿಪ್‌) ಹಿಂದೆ ಸರಿಯದಿದ್ದರೆ ಸರಾಸರಿ ಆದಾಯ ಹೆಚ್ಚುವುದಷ್ಟೇ ಅಲ್ಲ,, ದೀರ್ಘಾವಧಿಯವರೆಗೆ ಇದೇ ಪರಿಸ್ಥಿತಿ ಮುಂದುವರಿಯುವುದನ್ನು ಇಲ್ಲಿ ವಿವರಿಸಲಾಗಿದೆ

ಕೊರೊನಾ ವೈರಸ್‌ ಹಾಗೂ ಜಾಗತಿಕ ಮಟ್ಟದಲ್ಲಿ ಉಂಟಾದ ಲಾಕ್‌ಡೌನ್‌ನಿಂದಾಗಿ, ಭಾರತೀಯ ಷೇರುಪೇಟೆಯ ವಹಿವಾಟುದಾರರಲ್ಲಿ ಇನ್ನಿಲ್ಲದ ಆತಂಕ ಮನೆ ಮಾಡಿದೆ. ಷೇರುಗಳ ತೀವ್ರ ಪ್ರಮಾಣದ ಮಾರಾಟದ ಬಳಿಕವೂ ಪೇಟೆಯಲ್ಲಿ ಅನಿಶ್ಚಿತತೆಯ ಮೋಡ ದಟ್ಟವಾಗಿದೆ. ಮಾರುಕಟ್ಟೆಗೆ ಮಾರ್ಗದರ್ಶನ ನೀಡಬಲ್ಲಂತಹ ಒಂದೇ ಒಂದು ಸಕಾರಾತ್ಮಕ ವಿದ್ಯಮಾನವೂ ಸದ್ಯಕ್ಕೆ ಗೋಚರಿಸುತ್ತಿಲ್ಲ.

ಆದರೆ, ಮಾರುಕಟ್ಟೆಯ ದೃಷ್ಟಿಯಿಂದ ನೋಡುವುದಾದರೆ, ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೂ ಇದೆ. ವೈರಸ್‌ ಎಷ್ಟೇ ಹಾನಿ ಉಂಟುಮಾಡಿದರೂ ಅರ್ಥವ್ಯವಸ್ಥೆಯು ಮುಂದೆ ಖಂಡಿತವಾಗಿಯೂ ಚೇತರಿಕೆ ಕಾಣಲಿದೆ. 3 ರಿಂದ 5 ವರ್ಷಗಳ ದೀರ್ಘಾವಧಿಯ ದೃಷ್ಟಿಯಿಂದ ನೋಡಿದರೆ, ಈಗಿನ ಸ್ಥಿತಿಯಿಂದ ಆರ್ಥಿಕತೆಗೆ ಅಥವಾ ಷೇರು ಪೇಟೆಗೆ ದೊಡ್ಡ ಹಾನಿಯಾಗಲಿದೆ ಎಂದು ಭಾವಿಸಲಾಗದು.

ADVERTISEMENT

ಸದ್ಯದ ಸ್ಥಿತಿಯಲ್ಲಿ ಭಾರಿ ನಷ್ಟದ ಭಾವನೆಯನ್ನು ಹೊಂದಿರುವ ಹೂಡಿಕೆದಾರರು, ವಿಶೇಷವಾಗಿ ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment P*an- SIP ) ಹೂಡಿಕೆದಾರರು ಈ ಸ್ಥಿತಿಯನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಹಣಕಾಸು ‍ಪೇಟೆಯಲ್ಲಿ ಆಗಿರುವ ಹಠಾತ್‌ ಬದಲಾವಣೆ ಹಾಗೂ ಪತ್ರಿಕೆಗಳಲ್ಲಿ ದಿನನಿತ್ಯವೂ ನಕಾರಾತ್ಮಕ ತಲೆಬರಹಗಳೇ ಬರುತ್ತಿರುವಾಗ, ಹೂಡಿಕೆದಾರರು ತಮ್ಮ ಹೂಡಿಕೆ ಕುರಿತ ನಿರ್ಧಾರವನ್ನು ಮರು ಪ್ರಶ್ನಿಸಿಕೊಳ್ಳುವುದು ಸಹಜ. ‘ಹಾನಿ ಉಂಟು ಮಾಡಬಲ್ಲಂತಹ ಯಾವುದೇ ಹಠಾತ್‌ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಬದಲಿಗೆ ಒಂದು ಹೆಜ್ಜೆ ಹಿಂದಿಟ್ಟು, ಮುಂಬರುವ ದಿನಗಳಲ್ಲಿ ಆರ್ಥಿಕತೆ ಯಾವ ಹಾದಿ ಹಿಡಿಯಬಹುದು, ನಾವೆಂತಹ ನಿರ್ಧಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ಚಿಂತಿಸಿ’ ಎಂಬುದೇ ಇಂಥ ಸಂದರ್ಭದಲ್ಲಿ ನಾವು ಹೂಡಿಕೆದಾರರಿಗೆ ನೀಡುವ ಸಲಹೆಯಾಗಿದೆ.

ಮಾರುಕಟ್ಟೆಯ ಇತಿಹಾಸದ ಮೇಲೆ ದೃಷ್ಟಿ ಹರಿಸಿದರೆ ಈ ದಿಕ್ಕಿನಲ್ಲಿಸಾಗಲು ಒಂದಷ್ಟು ಸಹಾಯವಾಗಬಹುದು.

ಬಿಕ್ಕಟ್ಟಿನ ಸಂದರ್ಭದಲ್ಲಿ ‘ಎಸ್‌ಐಪಿ’ ಹಂಚಿಕೆ ಹೇಗೆ ವರ್ತಿಸಿತ್ತು?

ಭಾರತೀಯ ಷೇರುಪೇಟೆಯ ಕಳೆದ 20 ವರ್ಷಗಳ (2000 –2020) ಅಧ್ಯಯನವನ್ನು ನಾವು ಮಾಡಿದ್ದೇವೆ. ಸಾಮಾನ್ಯ ಸ್ಥಿತಿಯಲ್ಲಿ ‘ಎಸ್‌ಐಪಿ’ ಹೂಡಿಕೆದಾರರು ಹೇಗೆ ವರ್ತಿಸಿದ್ದಾರೆ ಮತ್ತು ಭಾರಿ ಮಾರಾಟದ ಸಂದರ್ಭದ ನಂತರ ಅವರ ಅನುಭವ ಹೇಗೆ ಬದಲಾಗಿದೆ ಎಂಬುದನ್ನೂ ಕಂಡುಕೊಂಡಿದ್ದೇವೆ. ಒಂದು ಉದಾಹರಣೆಯಾಗಿ ನಿಫ್ಟಿ–50 ಸೂಚ್ಯಂಕದ ಷೇರುಗಳಲ್ಲಿ ‘ಎಸ್‌ಐಪಿ’ ಮೂಲಕ ಹೂಡಿಕೆ ಮಾಡಿರುವವರು 3 ವರ್ಷ, 5 ವರ್ಷ ಹಾಗೂ 7 ವರ್ಷಗಳಲ್ಲಿ ಗಳಿಸಿರುವ ಆದಾಯ ಲೆಕ್ಕಹಾಕಿದ್ದೇವೆ (ಗ್ರಾಫ್‌–ಎ). ಚಿತ್ರದಲ್ಲಿ ನಮೂದಿಸಿರುವಂತೆ ಸರಾಸರಿ ಆದಾಯ ಶೇ 13 ರಿಂದ ಶೇ 17ರ ಮಟ್ಟದಲ್ಲಿ ಇದೆ.

ಷೇರುಪೇಟೆಯು ಶೇ 25ರಷ್ಟು ಕುಸಿತ ದಾಖಲಿಸಿದ ಸಂದರ್ಭದಲ್ಲಿ ಇದೇ ಹೂಡಿಕೆದಾರರು ಗಳಿಸಿರುವ ಆದಾಯದ ಲೆಕ್ಕಾಚಾರವನ್ನೂ ನಾವು ಮಾಡಿದ್ದೇವೆ (ಗ್ರಾಫ್‌ –ಬಿ).

ನಿಜ, ಮುಂಬರುವ ದಿನಗಳಲ್ಲೂ ಹೂಡಿಕೆಯು ಹಿಂದಿನಂತೆಯೇ ಪ್ರದರ್ಶನ ನೀಡಬೇಕೆಂದಿಲ್ಲ. ನಿಫ್ಟಿ–50 ಸೂಚ್ಯಂಕದ ಷೇರುಗಳಲ್ಲಿ ದೀರ್ಘಾವಧಿಯ ಹೂಡಿಕೆ ಮತ್ತು ‘ಎಸ್‌ಐಪಿ’ ಯ ಮಾಸಿಕ ಪ್ರದರ್ಶನ ಹೇಗೆ ಇರಬಹುದು ಎಂಬುದನ್ನು ತಿಳಿಯಲು ಇಲ್ಲಿ ಊಹಾತ್ಮಕವಾದ ಒಂದು ವಿಶ್ಲೇಷಣೆ ಮಾಡಿದ್ದೇವೆ. ಇಲ್ಲಿ ಸೂಚಿಸಿರುವ ಆದಾಯವು ಆ್ಯಕ್ಸಿಸ್‌ ಮ್ಯೂಚುವಲ್‌ ಫಂಡ್‌ನ ವಾಸ್ತವ ಅಥವಾ ನಿರೀಕ್ಷಿತ ಚಿತ್ರಣವಲ್ಲ.

ಮಾರುಕಟ್ಟೆಯಲ್ಲಿ ಸರಾಸರಿ ಆದಾಯವು ಶೇ 13ರಿಂದ ಶೇ 17ರಷ್ಟು ಇರುವುದನ್ನು ಮೇಲಿನ ಉದಾಹರಣೆಯಿಂದ ಕಾಣಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಾರುಕಟ್ಟೆಯಲ್ಲಿ ಉಂಟಾಗುವ ತೀಕ್ಷ್ಣವಾದ ಏರಿಳಿತವು ಸರಾಸರಿ ಆದಾಯದ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂಬುದು. ಈ ಅವಧಿಯಲ್ಲಿ ‘ಎಸ್‌ಐಪಿ’ ಹೂಡಿಕೆದಾರರ ಕನಿಷ್ಠ ಆದಾಯವು ಋಣಾತ್ಮಕವಾಗಬಹುದು. ಆದರೆ ಹೂಡಿಕೆಯ ಅವಧಿ ದೀರ್ಘವಾದಂತೆ, ನಷ್ಟದ ಪ್ರಮಾಣ ಕಡಿಮೆಯಾಗುತ್ತಾ ಹೋಗಿದೆ. 7 ವರ್ಷಗಳ ಅವಧಿ ಮುಗಿಯುವ ವೇಳೆಗೆ ಆದಾಯವು ಧನಾತ್ಮಕವಾಗಿ ಪರಿಣಮಿಸಿದೆ.

ಷೇರುಪೇಟೆಯಲ್ಲಿ ಭಾರಿ ಮಾರಾಟದ ಬಳಿಕ ಕೆಲವು ಆಸಕ್ತಿದಾಯಕ ಸಂಗತಿಗಳು ಕಂಡುಬರುತ್ತವೆ. ಈ ಹಂತದಲ್ಲಿ ಹೂಡಿಕೆ ಆರಂಭಿಸುವವರ ಸರಾಸರಿ ಆದಾಯವು ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ, ದೀರ್ಘಾವಧಿಯವರೆಗೆ ಈ ಸ್ಥಿತಿ ಮುಂದುವರಿಯುತ್ತದೆ.

ಮೇಲಿನ ವಿಶ್ಲೇಷಣೆಯು ಹೊಸದಾಗಿ ‘ಎಸ್‌ಐಪಿ’ ಹೂಡಿಕೆ ಮಾಡುವವರಿಗೆ ಸಂಬಂಧಿಸಿದ್ದು. ಹಾಲಿ ಇರುವ ‘ಎಸ್‌ಐಪಿ’ ಹೂಡಿಕೆದಾರರು ಸಹ ಮೂರು ಪ್ರಮುಖ ಹೆಜ್ಜೆಗಳ ಮೂಲಕ ಇದರ ಲಾಭವನ್ನು ಪಡೆಯಬಹುದಾಗಿದೆ.

‘ಎಸ್‌ಐಪಿ’ ಮುಂದುವರಿಸಿ

‘ಎಸ್‌ಐಪಿ’ ಮೂಲಕ ಪಾವತಿಸುವ ಪ್ರತಿ ಕಂತೂ ಹೊಸ ‘ಎಸ್‌ಐಪಿ’ ಗೆ ಸಮಾನವಾಗಿರುತ್ತದೆ. ಆದ್ದರಿಂದ ಹೂಡಿಕೆಯನ್ನು ಮುಂದುವರಿಸಿ ಆದಾಯವನ್ನು ಹೆಚ್ಚಿಸಬಹುದು.

ಯೂನಿಟ್‌ ಹಿಂದೆ ಪಡೆಯಬೇಡಿ

ಈ ಹಿಂದೆ ಮಾಡಿರುವ ‘ಎಸ್‌ಐಪಿ’ ಹೂಡಿಕೆಯಿಂದ ಗಳಿಸಿರುವ ಯೂನಿಟ್‌ಗಳನ್ನು ಇಂತಹ ಸಂದರ್ಭಗಳಲ್ಲಿ ಮಾರಾಟ ಮಾಡಬೇಡಿ. ಮಾರುಕಟ್ಟೆ ಬೆಲೆಯು ದಿನನಿತ್ಯ ಏರುಪೇರಾಗುತ್ತಿದ್ದರೂ ಹೂಡಿಕೆದಾರರ ಮೇಲೆ ನಿಜವಾದ ಪರಿಣಾಮ ಉಂಟುಮಾಡುವುದು ಪ್ರವೇಶ ಮತ್ತು ನಿರ್ಗಮನದ ಸಮಯದ ದರಗಳು. ಆದ್ದರಿಂದ ಮಾರುಕಟ್ಟೆಯ ದೀರ್ಘಾವಧಿಯ ಸಾಧ್ಯತೆಗಳ ಕಡೆಗೆ ಗಮನಹರಿಸಿ.

ಟಾಪ್‌ಅಪ್‌ ಅಥವಾ ಹೊಸ ‘ಎಸ್‌ಐಪಿ’

ನಿಮ್ಮ ಕೈಯಲ್ಲಿ ದುಡ್ಡು ಇದೆ ಎಂದಾದರೆ ಷೇರುಪೇಟೆಯ ಮಾರಾಟ ಒತ್ತಡವು ಲಾಭ ಮಾಡಿಕೊಳ್ಳಲು ಅತ್ಯುತ್ತಮ ಸಮಯವಾಗಿದೆ. ಷೇರುಪೇಟೆಯು ಭಾರಿ ಏರಿಳಿತದಿಂದ ಕೂಡಿರುತ್ತದೆ. ಸೂಚ್ಯಂಕವು ಶೇ 25ಕ್ಕೂ ಹೆಚ್ಚಿನ ಕುಸಿತವನ್ನು ಕಂಡಿರುವ ಅನೇಕ ಸಂದರ್ಭಗಳನ್ನು ನಾವು ನೋಡಿದ್ದೇವೆ. ಅಷ್ಟೇ ಅಲ್ಲ, ಮಾರಾಟದ ಒತ್ತಡವಿರುವ ಸಂದರ್ಭದಲ್ಲೂ ಭಯಬೀಳದೆ, ಹೂಡಿಕೆ ಮುಂದುವರಿಸಿದವರ ಮನೋಬಲವನ್ನು ಹೆಚ್ಚಿಸುವ ರೀತಿಯಲ್ಲಿ ಮಾರುಕಟ್ಟೆಯು ಶರ ವೇಗದಲ್ಲಿ ಪುಟಿದೆದ್ದಿರುವುದನ್ನೂ ಕಂಡಿದ್ದೇವೆ.

ಷೇರುಪೇಟೆಯಲ್ಲಿ ಮಾರಾಟದ ಒತ್ತಡ ನಿರ್ಮಾಣವಾಗಿರುವುದು ಹೊಸ ವಿಚಾರವೇನೂ ಅಲ್ಲ (ಸೂಚ್ಯಂಕ ಕುಸಿತಕ್ಕೆ ಕಾರಣಗಳು ಮಾತ್ರ ಬೇರೆ ಇರಬಹುದು). ತಮ್ಮ ಸುದೀರ್ಘವಾದ ಹೂಡಿಕೆಯ ಹಾದಿಯನ್ನು ಇಂತಹ ಸಂದರ್ಭಗಳು ಹಾಳುಮಾಡದಂತೆ ಎಚ್ಚರವಹಿಸುವುದು ಅಗತ್ಯ. ಮಧ್ಯಮದಿಂದ ದೀರ್ಘಾವಧಿಯೊಳಗೆ ಮಾರುಕಟ್ಟೆ ಮತ್ತೆ ಸಹಜ ಸ್ಥಿತಿಗೆ ಬರಲಿದೆ ಎಂಬ ವಿಶ್ವಾಸ ನಮಗಿದೆ.

ಇಂಥ ಕಠಿಣ ಸ್ಥಿತಿಯಲ್ಲಿ ಹೂಡಿಕೆ ಮಾಡಲು ‘ಎಸ್‌ಐಪಿ’ಯು ಒಳ್ಳೆಯ ಅವಕಾಶವನ್ನು ತೆರೆಯುತ್ತದೆ. ಇನ್ನೂ ಒಂದಿಷ್ಟು ತಿಂಗಳುಗಳ ಕಾಲ ಅನಿಶ್ಚಿತತೆ ಮುಂದುವರಿದರೂ ನಿಯಮಿತವಾಗಿ ಹೂಡಿಕೆ ಮುಂದುವರಿಸುವುದರಿಂದ ಹೂಡಿಕೆದಾರರ ಲಾಭವೂ ಮುಂದುವರೆಯಲಿದೆ ಎನ್ನುವುದನ್ನು ಮರೆಯಬೇಡಿ.

*ನಷ್ಟಕ್ಕೆ ಗುರಿಯಾಗುವ ಹಠಾತ್‌ ನಿರ್ಧಾರಕ್ಕೆ ಬರಬೇಡಿ

*ಆರ್ಥಿಕತೆ ಸಾಗುವ ಜಾಡು ಊಹಿಸಿ ನಿರ್ಧಾರಕ್ಕೆ ಬನ್ನಿ

*‘ಎಸ್‌ಐಪಿ’ ಮುಂದುವರೆಸಿ ಆದಾಯ ಹೆಚ್ಚಿಸಿಕೊಳ್ಳಿ

*ಯುನಿಟ್‌ಗಳನ್ನು ಮಾರಾಟ ಮಾಡಬೇಡಿ

*ಪೇಟೆಯಲ್ಲಿನ ಮಾರಾಟ ಒತ್ತಡದ ಸದ್ಬಳಕೆ ಮಾಡಿಕೊಳ್ಳಿ

*ಸುದೀರ್ಘಮಯ ಹೂಡಿಕೆಯ ಹಾದಿ ಹಾಳು ಮಾಡಿಕೊಳ್ಳಬೇಡಿ

(ಲೇಖಕ: ಆ್ಯಕ್ಸಿಸ್‌ ಎಎಂಸಿ, ಷೇರು ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.