ADVERTISEMENT

ಹಣಕಾಸು: ಸೆಪ್ಟೆಂಬರ್ 30ರೊಳಗೆ ನೀವು ಈ 5 ಕೆಲಸಗಳನ್ನು ಮಾಡಿ ಮುಗಿಸಲೇಬೇಕು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2021, 13:35 IST
Last Updated 31 ಆಗಸ್ಟ್ 2021, 13:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೈಯಕ್ತಿಕ ಹಣಕಾಸಿನ ಶಿಸ್ತು ಎನ್ನುವುದು ಪ್ರತಿಯೊಬ್ಬರಿಗೆ ಮುಖ್ಯವಾದದ್ದು. ಈ ವಿಷಯದಲ್ಲಿ ಶಿಸ್ತು ಪಾಲಿಸದಿದ್ದರೆ ಆತನು ಕಳೆದುಕೊಳ್ಳುವುದೇ ಹೆಚ್ಚು. ಹೀಗಾಗಿ ಯಾವಾಗಲೂ ಹಣಕಾಸು ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡುತ್ತಲೆ ಇರುತ್ತಾರೆ.

ನಾವು ದೈನಂದಿನ ವ್ಯವಹಾರದಲ್ಲಿ ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಕೆಲಸಗಳನ್ನು ಮಾಡಿ ಮುಗಿಸಬೇಕಾಗುತ್ತದೆ. ಇದೇ ರೀತಿ ಈ ವರ್ಷ ಸೆಪ್ಟೆಂಬರ್ 30 ರೊಳಗೆ ಮಾಡಿ ಮುಗಿಸಬೇಕಾದ ಅತ್ಯಗತ್ಯ ಟಾಪ್ ಐದು ಕೆಲಸಗಳು ಯಾವವು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ಒಂದು ವೇಳೆ ನೀವು ಈ ಕೆಲಸಗಳನ್ನು ನಿಗದಿತ ಗಡುವಿನೊಳಗೆ ಮಾಡಿ ಮುಗಿಸದಿದ್ದರೆ ದಂಡ ಅಥವಾ ಅನರ್ಹತೆಗೆ ಗುರಿಯಾಗುವ ಸಂಭವವಿದೆ.

ADVERTISEMENT

1) ಪಿಎಫ್‌ ಖಾತೆಗೆ ಆಧಾರ್ ಜೋಡಣೆ

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌ಓ) ಯು ಸಂಬಳ ತೆಗೆದುಕೊಳ್ಳುವ ನೌಕರರಿಗೆ ತಮ್ಮ ಆಧಾರ್‌ ಕಾರ್ಡ್‌ನ್ನು ಯುಎಎನ್‌ ಸಂಖ್ಯೆಗೆ ಜೋಡಿಸಲು ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಹಾಗೂ ಯಾವುದೇ ಮೋಸವನ್ನು ತಪ್ಪಿಸಬಹುದಾಗಿದೆ. ಈಗಾಗಲೇ ಸಾಕಷ್ಟು ಬಾರಿ ಇಪಿಎಫ್‌ಓ ಆಧಾರ್ ಜೋಡಣೆಗೆ ಸಾಕಷ್ಟು ಸಮಯ ನೀಡಿತ್ತು. ಇದೀಗ ಸಂಬಳ ಪಡೆಯುವವರು ಪ್ರತಿಯೊಬ್ಬರು ಸೆಪ್ಟೆಂಬರ್ 30ರೊಳಗಾಗಿ ತಮ್ಮ ಆಧಾರ್‌ನ್ನು ಲಿಂಕ್ ಮಾಡಬೇಕಿದೆ.

2 ಐಟಿ ರಿಟರ್ನ್ಸ್

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಪ್ರತಿ ವರ್ಷ ₹5ಲಕ್ಷ ಮೇಲ್ಪಟ್ಟು ಆದಾಯ ಪಡೆಯುವ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. 2020–21 ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಸಲು ಈಗಾಗಲೇ ಸರ್ಕಾರ ಹಲವು ಬಾರಿ ಸರ್ಕಾರ ಗಡುವು ವಿಸ್ತರಿಸಿತ್ತು. ಕೊರೊನಾ ಎರಡನೇ ಅಲೆಯಿಂದಾಗಿ ಲಾಕ್‌ಡೌನ್‌ ಇದ್ದಿದ್ದರಿಂದ ಈ ಹಿಂದೆ ಜುಲೈ 31ಕ್ಕೆ ವಿಸ್ತರಿಸಲಾಗಿತ್ತು. ಅದಾಗ್ಯೂ ಸೆ.30ರವರೆಗೆ ಕಡೆಯ ಬಾರಿ ಗಡುವು ವಿಸ್ತರಿಸಲಾಗಿದೆ. ಹೀಗಾಗಿ ಐಟಿ ರಿಟರ್ನ್ಸ್ ಸಲ್ಲಿಸುವವರು ಬರುವ ಸೆ.30 ರೊಳಗೆ ಫೈಲ್ ಮಾಡುವುದು ಸೂಕ್ತ.

3 ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್

ಇನ್ನೊಂದು ಮಹತ್ವದ ಕೆಲಸ ಎಂದರೆ ನಿಮ್ಮ ಆಧಾರ್‌ನ್ನು ನಿಮ್ಮ ಪ್ಯಾನ್‌ ಕಾರ್ಡ್‌ಗೆ ಲಿಂಕ್ ಮಾಡಲು ಕೂಡ ಇದೇ ಸೆ. 30 ಕೊನೆಯ ದಿನವಾಗಿದೆ. ತಪ್ಪಿದರೆ ನಿಮ್ಮ ಪ್ಯಾನ್ ಕಾರ್ಡ್ ಮೂಲಕ ನಡೆಯುವ ಎಲ್ಲ ಹಣಕಾಸು ವ್ಯವಹಾರಗಳು ತಡೆಹಿಡಿಯಲ್ಪಡುತ್ತವೆ. ಅಲ್ಲದೇ ದೊಡ್ಡ ಮೊತ್ತದ ದಂಡ ಕೂಡ ಪಾವತಿಸಬೇಕಿದೆ.

4 ಡಿಮ್ಯಾಟ್ ಅಕೌಂಟ್‌ಗೆ ಕೆವೈಸಿ ಪೂರ್ಣಗೊಳಿಸಿ

ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ದಿ ಸೆಕ್ಯೂರಿಟಿ ಎಕ್ಸಚೆಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿರ್ದೇಶನ ನೀಡಿದ್ದು ಸೆ.30 ರೊಳಗೆ ಯಾರು ಡಿಮ್ಯಾಟ್ ಅಕೌಂಟ್ ಹೊಂದಿರುತ್ತಾರೋ ಅಂತವಹರು ಕೆವೈಸಿಯನ್ನು (Know Your Customer) ಪೂರ್ಣಗೊಳಿಸಬೇಕಾಗುತ್ತದೆ. ಈ ಹಿಂದೆ ಜುಲೈ 31 ಕಡೆಯ ದಿನಾಂಕವಾಗಿತ್ತು. ಮತ್ತೊಂದು ಸಾರಿ ಅವಧಿ ವಿಸ್ತರಿಸಲಾಗಿದೆ.

5 ಡೆಬಿಟ್/ಕ್ರೆಡಿಟ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆ

ಕಾರ್ಡ್ ವ್ಯವಹಾರಗಳ ಸುರಕ್ಷತೆ ಬಲಪಡಿಸಲು, ಆರ್‌ಬಿಐ ಅಕ್ಟೋಬರ್ 1 ರಿಂದ ಕೆಲವು ಹೆಚ್ಚುವರಿ ಅಂಶಗಳನ್ನು ಕಡ್ಡಾಯಗೊಳಿಸುತ್ತಿದೆ. ಥರ್ಡ್-ಪಾರ್ಟಿ ವೆಬ್‌ಸೈಟ್‌ಗಳ (ಇ–ಪೇಮೆಂಟ್ ಸರ್ವಿಸ್) ಮೂಲಕ ಕ್ರೆಡಿಟ್ ಕಾರ್ಡ್ ಪಾವತಿಗಳಿಗಾಗಿ, ಬ್ಯಾಂಕ್ ನಿಮ್ಮ ಮೊಬೈಲ್ ಸಂಖ್ಯೆಗೆ ಪಾವತಿ ದಿನಾಂಕಕ್ಕಿಂತ ಕನಿಷ್ಠ 24 ಗಂಟೆಗಳ ಮೊದಲು ಸಂದೇಶವನ್ನು ಕಳುಹಿಸಬೇಕಾಗುತ್ತದೆ. ಮುಂಬರುವ ಪಾವತಿಯ ಬಗ್ಗೆ ಇದು ನಿಮಗೆ ತಿಳಿಸುತ್ತದೆ. ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ ದೃಢಿಕರಣಗೊಂಡಿರಬೇಕು. ಇಲ್ಲದಿದ್ದರೆ ವ್ಯವಹಾರ ಸ್ಥಗಿತವಾಗುತ್ತದೆ. ಇದನ್ನು ಮಾಡಲು ಸೆ.30 ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.