ADVERTISEMENT

ನಾವು ಆರ್ಥಿಕ ಹಿಂಜರಿತಕ್ಕೆ ಕಾಲಿಟ್ಟಿದ್ದೇವೆ: ಐಎಂಎಫ್‌ ಮುಖ್ಯಸ್ಥೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 3:33 IST
Last Updated 28 ಮಾರ್ಚ್ 2020, 3:33 IST
   

ವಾಷಿಂಗ್ಟನ್‌ (ಎಎಫ್‌ಪಿ): ‘ನಾವು ಆರ್ಥಿಕ ಹಿಂಜರಿತಕ್ಕೆ ಕಾಲಿಟ್ಟಿದ್ದೇವೆ. 2009ರಲ್ಲಿ ಇದ್ದಂತಹ ಸ್ಥಿತಿಗಿಂತಲೂ ಇದು ಕೆಟ್ಟದಾಗಿರಲಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿಯಾ ಅವರು ಎಚ್ಚರಿಕೆ ನೀಡಿದ್ದಾರೆ.

‘ಕೊರೊನಾ ವೈರಸ್‌ ಸೋಂಕು ಜಾಗತಿಕ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ನೆರವು ಬೇಕಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಆರ್ಥಿಕ ಚಟುವಟಿಕೆಗಳು ದಿಢೀರನೆ ಸ್ಥಗಿತಗೊಂಡಿವೆ. ಇದರಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ₹185 ಲಕ್ಷ ಕೋಟಿಗಳಷ್ಟು ಹಣಕಾಸಿನ ನೆರವು ನೀಡಬೇಕಾಗಿದೆ. ಇದು ಕನಿಷ್ಠ ಮಟ್ಟದ ಅಂದಾಜಾಗಿದೆ. ಪ್ರವರ್ಧಮನಾಕ್ಕೆ ಬರುತ್ತಿರುವ ದೇಶಗಳು ಇತ್ತೀಚಿನ ವಾರಗಳಲ್ಲಿ ₹6.145 ಲಕ್ಷ ಕೋಟಿಗೂ ಅಧಿಕ ನಷ್ಟ ಅನುಭವಿಸಿವೆ. ಈ ನಷ್ಟ ತುಂಬಿಕೊಳ್ಳಲು ದೇಶಿ ವರಮಾನದ ಕೊರತೆಯೂ ಎದುರಾಗಿದೆ. ಈಗಾಗಲೇ ಕೆಲವು ದೇಶಗಳು ಭಾರಿ ಪ್ರಮಾಣದ ಸಾಲದ ಹೊರೆಯಲ್ಲಿ ಸಿಲುಕಿವೆ.

ADVERTISEMENT

‘ಕಡಿಮೆ ಆದಾಯ ಇರುವ 80ಕ್ಕೂ ಅಧಿಕ ದೇಶಗಳಲ್ಲಿ ಬಹುತೇಕ ದೇಶಗಳುಐಎಂಎಫ್‌ನಿಂದ ತುರ್ತು ನಿಧಿಗಾಗಿ ಬೇಡಿಕೆ ಸಲ್ಲಿಸಿವೆ’ ಎಂದು ಅವರು ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಾಷಿಂಗ್ಟನ್‌ ಮೂಲದ ಹಣಕಾಸು ಸಮಿತಿಯೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಅವರು, ಈಗಿರುವ ₹ 3.70 ಲಕ್ಷ ಕೋಟಿತುರ್ತು ನಿಧಿ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಅಮೆರಿಕ ಘೋಷಿಸಿರುವ ಪ್ಯಾಕೆಜ್‌ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.