ADVERTISEMENT

ಯಶಸ್ಸಿನ ಉತ್ತುಂಗದಲ್ಲಿ ಶ್ರೇಯಾ ಮೆಟಲ್ಸ್‌..!

ಸಿಂದಗಿಯ ಯುವ ಉದ್ಯಮಿಯ ಯಶೋಗಾಥೆ; 4 ಜಿಲ್ಲೆಗಳಿಗೆ ರೂಪಿಂಗ್ ಮೆಟಲ್ ಶೀಟ್ಸ್ ಪೂರೈಕೆ

ಶಾಂತೂ ಹಿರೇಮಠ
Published 13 ಫೆಬ್ರುವರಿ 2019, 19:45 IST
Last Updated 13 ಫೆಬ್ರುವರಿ 2019, 19:45 IST
ಸಿಂದಗಿಯ ಶ್ರೇಯಾ ಮೆಟಲ್ ರೂಪಿಂಗ್ ಶೀಟ್ಸ್‌ ಉದ್ಯಮದ ಮಾಲೀಕ ಬಸವರಾಜ ಅಂಬಲಗಿ
ಸಿಂದಗಿಯ ಶ್ರೇಯಾ ಮೆಟಲ್ ರೂಪಿಂಗ್ ಶೀಟ್ಸ್‌ ಉದ್ಯಮದ ಮಾಲೀಕ ಬಸವರಾಜ ಅಂಬಲಗಿ   

ಸಿಂದಗಿ:ನಿರುದ್ಯೋಗಿಗಳಿಗೆ ಕೆಲಸ ಕೊಡಬೇಕೆಂಬ ಸಂಕಲ್ಪ ತೊಟ್ಟು ರಾಜಧಾನಿ ತೊರೆದರು. ಕೈಲಿದ್ದ ಉದ್ಯೋಗವನ್ನೇ ಬಿಟ್ಟರು. ಹುಟ್ಟೂರಿಗೆ ಮರಳಿ, ಗೆಳೆಯರ ನೆರವಿನಿಂದ ಹೊಸ ಉದ್ಯಮ ಆರಂಭಿಸಿದರು. ಇದೀಗ ಯುವ ಸಮೂಹಕ್ಕೆ ಮಾದರಿಯಾದವರು ಸಿಂದಗಿಯ ಯುವ ಉದ್ಯಮಿ ಬಸವರಾಜ ಬಾಬು ಅಂಬಲಗಿ.

ಕಂಪ್ಯೂಟರ್ ಡಿಪ್ಲೊಮಾ ಪದವೀಧರ. ಬೆಂಗಳೂರಿನಲ್ಲಿ ಆರು ವರ್ಷ ಅಂತರರಾಷ್ಟ್ರೀಯ ಕಂಪನಿಯೊಂದರಲ್ಲಿ ನೌಕರಿ ಮಾಡಿದ ಬಸವರಾಜ, ಹೊಸ ಸಾಹಸಕ್ಕಾಗಿ ಇದ್ದ ನೌಕರಿಗೆ ಗುಡ್‌ ಬೈ ಹೇಳಿ ಹುಟ್ಟೂರಿಗೆ ಮರಳಿದ ಛಲಗಾರ.

ಸಾಧನೆಯ ಹಾದಿ ಸುಗಮಕ್ಕಾಗಿ ಹಲವು ಬ್ಯಾಂಕ್‌ಗೆ ಅಲೆದರೂ ಚಿಕ್ಕಾಸಿನ ನೆರವು ದೊರಕಲಿಲ್ಲ. ಸ್ನೇಹಿತರ ಬಳಿ ತನ್ನ ಕನಸು ಹಂಚಿಕೊಂಡಾಗ; ಎಲ್ಲರೂ ಕೈ ಜೋಡಿಸಿ ₹ 70 ಲಕ್ಷ ಬಂಡವಾಳ ಹೊಂದಿಸಿದರು.

ADVERTISEMENT

ಸಿಂದಗಿಯ ಕೈಗಾರಿಕಾ ಪ್ರದೇಶದಲ್ಲಿ 2016ರ ಡಿಸೆಂಬರ್‌ನಲ್ಲಿ ‘ಶ್ರೇಯಾ ಮೆಟಲ್ಸ್’ ಆರಂಭವಾಯ್ತು. ಎರಡು ವರ್ಷದ ಅವಧಿಯಲ್ಲಿ ಪ್ರಗತಿಯ ದಾಪುಗಾಲಿನ ಮುನ್ನುಡಿ ಬರೆದು, ಯಶಸ್ಸಿನ ಹಾದಿಯಲ್ಲಿ ಸಾಗಿದೆ ಉದ್ಯಮ.

ಇಲ್ಲಿ ತಯಾರಾಗುವ ಮೆಟಲ್‌ ಶೀಟ್ಸ್‌ಗಳು ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಪೂರೈಕೆಯಾಗುತ್ತಿವೆ. ಕುರಿ ಶೆಡ್‌, ಸಮುದಾಯ ಭವನ, ಶಾಲಾ ಕಟ್ಟಡ, ಮನೆಗಳು, ಬೃಹತ್‌ ಶೆಡ್‌ಗಳು ಸೇರಿದಂತೆ ಇನ್ನಿತರ ನಿರ್ಮಾಣ ಕೆಲಸದಲ್ಲಿ ಇಲ್ಲಿನ ಮೆಟಲ್‌ ಶೀಟ್‌ಗಳು ಬಳಕೆಯಾಗುತ್ತಿವೆ. ಉದ್ಯಮಿ ಅಂಬಲಗಿಗೆ ಮ್ಯಾನೇಜರ್ ಎಂ.ಪಿ.ಬಿರಾದಾರ ಸದಾ ಸಹಕಾರಿಯಾಗಿ ಬೆಳವಣಿಗೆಯ ಬೆನ್ನೆಲುಬಾಗಿದ್ದಾರೆ.

ಸಾಲ ನೀಡಲು ಹಿಂದೇಟು ಹಾಕಿದ್ದ ಬ್ಯಾಂಕರ್‌ಗಳು ಇದೀಗ ಆರ್ಥಿಕ ನೆರವು ನೀಡಲು ಮುಂದಾಗಿವೆ. ಮತ್ತದೇ ಷರತ್ತುಗಳ ಕಾಟ. ಐದರಿಂದ ಆರು ಪ್ಲಾಟ್‌ಗಳನ್ನು ಬ್ಯಾಂಕ್‌ ಹೆಸರಿಗೆ ನೋಂದಾಯಿಸಿದ ಬಳಿಕ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ₹ 45 ಲಕ್ಷ ಸಾಲ ನೀಡಿದೆ.

ವ್ಯವಸ್ಥಾಪಕರೊಬ್ಬರನ್ನು ಒಳಗೊಂಡಂತೆ ಐವರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲ ವರ್ಷ ₹ 1.50 ಕೋಟಿ ವಹಿವಾಟು ನಡೆದರೆ, ಎರಡನೇ ವರ್ಷದಲ್ಲಿ ₹ 3.5 ಕೋಟಿ ವಹಿವಾಟು ನಡೆದಿದೆ. ಖರ್ಚು, ಸಂಬಳ ಎಲ್ಲವನ್ನೂ ಬಿಟ್ಟು ₹ 10 ಲಕ್ಷ ಲಾಭ ಸಿಕ್ಕಿದೆ. ಜಿಎಸ್‌ಟಿ ಕಾಯ್ದೆ ಜಾರಿಗೊಂಡ ಬಳಿಕ ₹ 65 ಲಕ್ಷ ತೆರಿಗೆ ಕಟ್ಟಿದ್ದೇವೆ ಎನ್ನುತ್ತಾರೆ ಬಸವರಾಜ.

‘ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ₹ 1 ಕೋಟಿ ಸಾಲ ಮಂಜೂರಾಗಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಇದರ ಜತೆ ಕೈಗಾರಿಕಾ ಪ್ರದೇಶದಲ್ಲಿ ಮತ್ತಷ್ಟು ಜಾಗ ಸಿಕ್ಕರೆ, ಸ್ಕ್ವಾಯರ್ ಮೆಟಲ್ ಪಿವಿಸಿ ಪೈಪ್‌ಗಳನ್ನು ಉತ್ಪಾದಿಸುವ ಉದ್ದೇಶ ಹೊಂದಿದ್ದೇನೆ. ಇದು ಆರಂಭವಾದರೆ ಹಲ ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ’ ಎಂದು ಅಂಬಲಗಿ ‘ಪ್ರಜಾವಾಣಿ’ ಬಳಿ ತಮ್ಮ ಕನಸನ್ನು ಬಿಚ್ಚಿಟ್ಟರು.

ಸಂಪರ್ಕ ಸಂಖ್ಯೆ: 7996686854 / 9945666559

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.