ADVERTISEMENT

4ಬೇಸ್‌ಕೇರ್‌ ಸ್ಟಾರ್ಟ್‌ಅಪ್‌: ₹ 14.60 ಕೋಟಿ ಬಂಡವಾಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 6:04 IST
Last Updated 19 ಮಾರ್ಚ್ 2021, 6:04 IST
-
-   

ಬೆಂಗಳೂರು: 4ಬೇಸ್‌ಕೇರ್‌ ಸ್ಟಾರ್ಟ್‌ಅಪ್‌, ಬಂಡವಾಳ ಹೂಡಿಕೆ ಸಂಸ್ಥೆಗಳ ಒಕ್ಕೂಟದಿಂದ ಮೊದಲ ಸುತ್ತಿನಲ್ಲಿ ₹ 14.60 ಕೋಟಿ ಬಂಡವಾಳ ಸಂಗ್ರಹಿಸಿದೆ.

ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಜಿನೊಮಿಕ್ ಪರೀಕ್ಷೆಗಳ ಸದುಪಯೋಗ ಪಡೆಯುವುದನ್ನು ಹೆಚ್ಚಿಸುವ ಮೂಲಕ ಕ್ಯಾನ್ಸರ್‌ನ ನಿಖರ ಚಿಕಿತ್ಸೆಯಲ್ಲಿ ನಿರ್ದಿಷ್ಟ ಜೀನ್ ಪ್ಯಾನಲ್ ಅಭಿವೃದ್ಧಿಪಡಿಸಲು ಕಾರ್ಯಪ್ರವೃತ್ತವಾಗಿದೆ. ಕ್ಯಾನ್ಸರ್‌ನ ಸೂಕ್ತ ಚಿಕಿತ್ಸೆಯ ಆಯ್ಕೆಗಳನ್ನು ಗುರುತಿಸಲು ಕ್ಯಾನ್ಸರ್ ಸಂಬಂಧಿ ಹೆಚ್ಚಿನ ಸಂಖ್ಯೆಯ ಜೀನ್‌ಗಳನ್ನು ವಿಶ್ಲೇಷಿಸುವ ಕೆಲಸವನ್ನು ಜೀನ್ ಪ್ಯಾನಲ್ ಮಾಡಲಿದೆ.

ದೇಶದಲ್ಲಿ ವಾರ್ಷಿಕ 15 ಲಕ್ಷಕ್ಕೂ ಹೆಚ್ಚು ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಆರ್ಥಿಕವಾಗಿ ಸಬಲರಾಗಿರುವ ಕೆಲವೇ ಕೆಲವರಿಗೆ ಮಾತ್ರ ಜಿನೊಮಿಕ್ ಪರೀಕ್ಷೆಗಳ ಪ್ರಯೋಜನ ಲಭ್ಯವಾಗುತ್ತಿದೆ. ಸದ್ಯಕ್ಕೆ ಇಂತಹ ಪರೀಕ್ಷೆಗಳ ಸೇವೆಯನ್ನು ವಿದೇಶಿ ಕಂಪನಿಗಳಿಂದ ಪಡೆಯಲಾಗುತ್ತಿದ್ದು, ಅವು ಸಾಕಷ್ಟು ದುಬಾರಿಯಾಗಿವೆ. ಹೀಗಾಗಿ ಅತಿ ಹೆಚ್ಚು ರೋಗಿಗಳಿಗೆ ಅನುಕೂಲವಾಗುವಂತಹ ಕಡಿಮೆ ವೆಚ್ಚದ ಮತ್ತು ಸ್ಥಳೀಯವಾಗಿ ಲಭ್ಯವಿರುವ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯ ಹೆಚ್ಚಾಗಿದೆ.

ADVERTISEMENT

4 ಬೇಸ್‌ಕೇರ್ ನವೋದ್ಯಮವು ಸಂಗ್ರಹಿಸಿರುವ ಬಂಡವಾಳವನ್ನು ಜಿನೊಮಿಕ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲು ಮತ್ತು ಏಷ್ಯಾದಾದ್ಯಂತ ತನ್ನ ವಹಿವಾಟಿನ ವ್ಯಾಪ್ತಿ ವಿಸ್ತರಿಸಲು4ಬೇಸ್‌ಕೇರ್‌ ಬಳಸಿಕೊಳ್ಳಲಿದೆ.

4ಬೇಸ್‌ಕೇರ್‌ನ ಸಿಇಒ ಹಿತೇಶ್ ಗೋಸ್ವಾಮಿ ಅವರು ಮಾತನಾಡಿ, ‘ಸುಧಾರಿತ ತಂತ್ರಜ್ಞಾನಗಳು ಲಭ್ಯವಾದರೆ ಚಿಕಿತ್ಸೆಯ ಗುಣಮಟ್ಟ ಉತ್ತಮಗೊಳ್ಳುವುದಲ್ಲದೆ ಪ್ರತಿಯೊಬ್ಬರಿಗೂ ಚಿಕಿತ್ಸೆಯ ಪ್ರಯೋಜನ ದೊರೆಯಲಿದೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.