ADVERTISEMENT

ಬಾಡಿಗೆ ಬಟ್ಟೆಗೆ ಕ್ಯಾಂಡಿಡ್‌ನಾಟ್ಸ್‌

ವಿಶ್ವನಾಥ ಎಸ್.
Published 11 ಡಿಸೆಂಬರ್ 2018, 19:30 IST
Last Updated 11 ಡಿಸೆಂಬರ್ 2018, 19:30 IST
   

ಪುರುಷರು ಸಭೆ ಸಮಾರಂಭಗಳಲ್ಲಿ ಧರಿಸುವ ಉಡುಪುಗಳನ್ನು ಬಾಡಿಗೆಗೆ ನೀಡುವ ‘ಕ್ಯಾಂಡಿಡ್‌ನಾಟ್ಸ್‌’ ನವೋದ್ಯಮವು ಬೆಂಗಳೂರಿನಲ್ಲಿ ಆರಂಭವಾಗಿದೆ. ಪ್ರತಿಯೊಬ್ಬರ ದೇಹಾಕಾರಕ್ಕೆ ಒಪ್ಪುವ, ಹೊಸ ವಿನ್ಯಾಸಗಳುಳ್ಳ ದಿರಿಸುಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದಾಗಿದೆ. ಸದ್ಯಕ್ಕೆ ಇದರ ಕಾರ್ಯವ್ಯಾಪ್ತಿ ಬೆಂಗಳೂರಿಗೆ ಮಾತ್ರವೇ ಸೀಮಿತವಾಗಿದ್ದು, ಮುಂಬೈ,ದೆಹಲಿಯಲ್ಲಿಯೂ ವಹಿವಾಟು ವಿಸ್ತರಣೆಗೆ ಯೋಜನೆ ರೂಪಿಸಿದೆ.

‘ಶುಭ ಕಾರ್ಯಕ್ಕೆಂದು ಖರೀದಿಸಿದ ದುಬಾರಿ ಶೇರ್ವಾನಿ ಅಥವಾ ಸೂಟ್‌ ಎಷ್ಟು ಬಾರಿ ಬಳಸಿದ್ದೇವೆ ಎಂದು ಪ್ರಶ್ನಿಸಿಕೊಂಡರೆ, ಎರಡಕ್ಕಿಂತ ಹೆಚ್ಚು ಬಾರಿಯೇನೂ ಇಲ್ಲ ಎನ್ನುವ ಸಾಮಾನ್ಯ ಉತ್ತರ ಸಿಗುತ್ತದೆ. ಏಕೆಂದರೆ, ಇಂತಹ ಬಟ್ಟೆಗಳನ್ನು ನಿತ್ಯವೂ ಬಳಸುವುದಿಲ್ಲ. ಇಂತಹ ಬಟ್ಟೆಗಳು ಕಡಿಮೆ ಬೆಲೆಗೆ ಬಾಡಿಗೆಗೆ ಸಿಗುತ್ತಿರುವಾಗ, ಅವುಗಳನ್ನು ಖರೀದಿಸುವ ಅಗತ್ಯವಾದರೂ ಏನಿದೆ’ ಎಂದು ನವೋದ್ಯಮ ಸ್ಥಾಪನೆಯ ಹಿಂದಿನ ಉದ್ದೇಶವನ್ನುಸ್ಥಾಪಕಿ ಶ್ವೇತಾ ಪೊದ್ದಾರ್‌ ಪ್ರಶ್ನಿಸುತ್ತಾರೆ.

‘ಮಹಿಳೆಯರು ಬಟ್ಟೆಗೆ ಒಪ್ಪುವ ಕಿವಿಯೋಲೆ, ಹಣೆಬೊಟ್ಟು, ಬಳೆ, ಪಾದರಕ್ಚೆ ಬಳಸುವಂತೆ, ಪುರುಷರು ಸಹ ತಾವು ಧರಿಸುವ ಬಟ್ಟೆಗಳ ಬಗ್ಗೆ ಹೆಚ್ಚಿನ ಗಮನ ನೀಡಲಾರಂಭಿಸಿದ್ದಾರೆ. ಪ್ರತಿ ಬಾರಿಯೂ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಬಯಸುವವರಿಗೆ ಹೊಸ ಆಯ್ಕೆಗಳೂ ಇಲ್ಲಿವೆ. 16 ರಿಂದ 45 ವರ್ಷದೊಳಗಿನ ಪುರುಷರನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ತಲುಪಿಸುವ ಮತ್ತು ಹಿಂದಕ್ಕೆ ಪಡೆಯುವ ಸೇವೆ ಕಲ್ಪಿಸಲಾಗಿದೆ. ಕೋರಮಂಗಲದಲ್ಲಿರುವ ಕಚೇರಿಯಲ್ಲಿ ಟ್ರಯಲ್‌ ರೂಂ ಸಹ ಇದೆ. ಅಂಗಡಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದ ಬಳಿಕ ಬಾಡಿಗೆಗೆ ಪಡೆಯುವವರಿಗೆ ಈ ಆಯ್ಕೆ ನೀಡಲಾಗಿದೆ.‌

ADVERTISEMENT

‘ಫ್ಯಾಷನ್‌ ಷೋ, ವಿಚಾರಗೋಷ್ಠಿ, ಸಂದರ್ಶನ, ಕಾರ್ಪೊರೇಟ್‌ ಕಾರ್ಯಕ್ರಮಗಳು, ಕಾಲೇಜಿನಲ್ಲಿ ನಡೆಯುವ ಸಮಾರಂಭಗಳು ಹೀಗೆ ಎಲ್ಲದಕ್ಕೂ ಹೊಂದುವಂತಹ ದಿರಿಸುಗಳು ನಮ್ಮಲ್ಲಿ ಸಿಗುತ್ತವೆ. ಸೂಟ್‌, ಬ್ಲೇಜರ್‌, ಮೋದಿ ಜಾಕೆಟ್.. ಹೀಗೆ ಸದ್ಯ ಜನಪ್ರಿಯವಾಗಿರುವ ಮತ್ತು ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ದಿರಿಸುಗಳೂ ಇವೆ. ಬಾಡಿಗೆ ದರ ₹ 299ರಿಂದ ಆರಂಭವಾಗುತ್ತದೆ.ಇ–ಕಾಮರ್ಸ್‌ ಮೂಲಕ ಖರೀದಿಸಿದ ಬಟ್ಟೆಯ ಸೈಜ್‌ ಬಹಳಷ್ಟು ಬಾರಿ ಸರಿ ಇರುವುದಿಲ್ಲ. ಬದಲಾಯಿಸಬೇಕಾಗುತ್ತದೆ. ಆದರೆ, ಕ್ಯಾಂಡಿಡ್‌ನಾಟ್ಸ್‌ನಲ್ಲಿ ಅಂತಹ ಸಮಸ್ಯೆ ಎದುರಾಗುವುದಿಲ್ಲ. ಏಕೆಂದರೆ ಪ್ರತಿ ಆನ್‌ಲೈನ್‌ ಆರ್ಡರ್‌ಗೂ ಡೆಲಿವರಿ ನೀಡುವ ಪ್ರತಿನಿಧಿಯೊಂದಿಗೆ ಒಂದೇ ಡ್ರೆಸ್‌ನ ಎರಡರಿಂದ ಮೂರು ಸೈಜ್‌ ಕಳುಹಿಸಲಾಗುತ್ತದೆ’ ಎಂದು ಕ್ಯಾಂಡಿಡ್‌ನಾಟ್ಸ್‌ನ ವೈಶಿಷ್ಟ್ಯ ವಿವರಿಸಿದರು.

‘ಬೆಂಗಳೂರಿನಲ್ಲಿರುವ ಹೊಸ ವಿನ್ಯಾಸಕಾರರ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಯಾರು ತಮ್ಮ ಹೊಸ ಕಲೆಕ್ಷನ್‌ಗಳನ್ನು ನಮ್ಮಲ್ಲಿ ಬಾಡಿಗೆಗೆ ನೀಡುತ್ತಾರೋ ಅವರಿಗೆ ಪ್ರತಿಯೊಂದು ಬಾಡಿಗೆಗೆ ಕಮಿಷನ್‌ ನೀಡಲಾಗುತ್ತದೆ. ಕೆಲವು ಗ್ರಾಹಕರು ಸಹ ತಮ್ಮಲ್ಲಿರುವ ಮದುವೆ ಬಟ್ಟೆಗಳನ್ನು ಬಾಡಿಗೆ ನೀಡಿ ಕಮಿಷನ್‌ ಪಡೆಯುತ್ತಿದ್ದಾರೆ.

‘ಗ್ರಾಹಕರು ನೀಡುವ ಪ್ರತಿಕ್ರಿಯೆ, ಸಲಹೆ, ಸೂಚನೆಗಳೇ ನಮ್ಮ ದೀರ್ಘಾವಧಿಯ ಬೆಳವಣಿಗೆಗೆ ಪ್ರಾಥಮಿಕ ಅಂಶಗಳಾಗಿವೆ. ಪ್ರತಿಯೊಂದು ಪ್ರತಿಕ್ರಿಯೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತೇವೆ. ನಮ್ಮ ಉತ್ಪನ್ನವನ್ನು ಉತ್ತಮಗೊಳಿಸಲು ಸಾಧ್ಯವಿರು
ವಂತಹ ಅಗತ್ಯ ಸಲಹೆ, ಸೂಚನೆಗಳಿದ್ದರೆ ಅದನ್ನು ಪರಿಗಣಿಸಲಾಗುವುದು.

ಯಾವುದೇ ಒಬ್ಬ ಗ್ರಾಹಕ ನಮ್ಮ ಸಂಗ್ರಹದಲ್ಲಿ ಹೊಸ ವಿನ್ಯಾಸ ಬಯಸಿದರೆ ಅದನ್ನು ನೀಡಲು ನಾವು ಸಿದ್ಧರಿದ್ದೇವೆ. ನಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರು ಸಂತುಷ್ಟರಾಗಿದ್ದಾರೆ. ಗ್ರಾಹಕರು ಬಾಡಿಗೆಗೆ ಖರೀದಿಸಿದ ದಿರಿಸು ಹರಿದು ಹೋದರೆ ಅಥವಾ ಇನ್ಯಾವುದೇ ರೀತಿಯಲ್ಲಿ ಹಾನಿಗೊಳಗಾದರೆ ಎನ್ನುವ ಕಾರಣಕ್ಕಾಗಿ ಮುಂಚಿತವಾಗಿಯೇ ಅವರಿಂದ ಸುರಕ್ಷತಾ ಠೇವಣಿ ಪಡೆದಿರುತ್ತೇವೆ. ಇದುವರೆಗೆ ಶೇ 95ರಷ್ಟು ಗ್ರಾಹಕರು ಯಥಾಸ್ಥಿತಿಯಲ್ಲಿಯೇ ದಿರಿಸನ್ನು ಹಿಂದಿರುಗಿಸಿದ್ದಾರೆ’ ಎಂದು ಶ್ವೇತಾ ತಿಳಿಸಿದರು.

ಪ್ರಯೋಜನಗಳೇನು?
ಸ್ವಂತಕ್ಕೆಂದು ಖರೀದಿಸುವ ಒಂದು ಬಟ್ಟೆಯ ಬೆಲೆಯಲ್ಲಿಯೇ 7 ರಿಂದ 10 ಔಟ್‌ಫಿಟ್‌ಗಳು ಸಿಗುತ್ತವೆ. ಒಂದೇ ದಿನ ಇದ್ದಂತೆ ಅಥವಾ ದಿಢೀರನೆ ಮರುದಿನ ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿ ಬಂದರೆ ಆರ್ಡರ್‌ ಮಾಡಿದ ಮೂರು ಗಂಟೆಯ ಒಳಗಾಗಿ ಗ್ರಾಹಕರ ಮನೆ ಬಾಗಿಲಿಗೆ ಉಡುಪು ಬರಲಿದೆ.

ದುಬಾರಿ ಉಡುಪನ್ನು ಹಾಳಾಗದಂತೆ ಸುರಕ್ಷಿತವಾಗಿ ಇಡುವ ತಲೆನೋವೂ ಇರುವುದಿಲ್ಲ. ಡ್ರೈ ಕ್ಲೀನ್‌ ಮತ್ತು ಐರನ್‌ ಆಗಿರುವ ಬಟ್ಟೆಗಳೇ ಸಿಗುತ್ತವೆ. ಕಾರ್ಯಕ್ರಮಕ್ಕೆ ಅನುಗುಣವಾಗಿ ಯಾವ ಬಟ್ಟೆ ಧರಿಸಬಹುದು ಎನ್ನುವ ಸಲಹೆಯೂ ಸಿಗುತ್ತದೆ.

ಒಂದಕ್ಕಿಂತಲೂ ಹೆಚ್ಚಿನ ಆಯ್ಕೆಗಳು: ಒಂದೇ ಬಟ್ಟೆಯನ್ನು ಹಲವು ಕಾರ್ಯಕ್ರಮಕ್ಕೆ ಧರಿಸಿಕೊಂಡು ಹೋದರೆ ಎಲ್ಲರೂ ಅದನ್ನು ಗುರುತಿಸುತ್ತಾರೆ. ಅದರಲ್ಲೂ ಫೋಟೊ, ಸೆಲ್ಫಿ ತೆಗೆದು ಅದನ್ನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಷೇರ್‌ ಮಾಡುವ ಈ ಕಾಲದಲ್ಲಿ, ಎಲ್ಲಾ ಪೋಟೊಗಳಲ್ಲಿ ಒಂದೇ ಬಟ್ಟೆಯಲ್ಲಿ ಕಾಣಿಸಿಕೊಂಡು ಮುಜುಗರಕ್ಕೀಡಾಗುವುದು ತಪ್ಪಿಸಬಹುದು.

ಜಾಲತಾಣ: candidknots.com

ಸ್ಥಾಪಕಿ ಶ್ವೇತಾ ಪೊದ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.