ADVERTISEMENT

ನಿರುದ್ಯೋಗಿಗಳ ಪಾಲಿನ ಭರವಸೆ

ಮಧುರಾ ಎಚ್.
Published 23 ಜೂನ್ 2020, 19:30 IST
Last Updated 23 ಜೂನ್ 2020, 19:30 IST
ದಿಲೀಪ್‌ ಎಂ. ಗೌಡ
ದಿಲೀಪ್‌ ಎಂ. ಗೌಡ   

ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುವಾಗ ಖರ್ಚುವೆಚ್ಚ ಸರಿದೂಗಿಸಲು ಹೌಸ್‌ ಕೀಪಿಂಗ್‌ ಬಾಯ್ ಕೆಲಸ ನಿರ್ವಹಿಸುತ್ತಿದ್ದ ಗ್ರಾಮೀಣ ಯುವಕನೊಬ್ಬ, ನಂತರದ ವರ್ಷಗಳಲ್ಲಿ ಗ್ರಾಮೀಣ ಯುವ ಪ್ರತಿಭೆಗಳಿಗೆ ಕೆಲಸ ಕೊಡಿಸುವ ಮತ್ತು ಅಗತ್ಯ ತರಬೇತಿ ನೀಡುವ ಕಂಪನಿ ಸ್ಥಾಪಿಸಿದ ಯಶೋಗಾಥೆ ಇಲ್ಲಿದೆ. ಸ್ನಾತಕೋತ್ತರ ಪದವಿ ಪಡೆದು, ಕಾರ್ಪೊರೇಟ್‌ಗಳ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದಲ್ಲಿ ಕೆಲಸ ನಿರ್ವಹಿಸಿ ಆ ಅನುಭವವನ್ನೇ ಬಂಡವಾಳ ಮಾಡಿಕೊಂಡು ಉದ್ಯೋಗ ಮತ್ತು ತರಬೇತಿ ನೀಡುವ ಸ್ವಂತ ಕಂಪನಿ ಸ್ಥಾಪಿಸುತ್ತಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಯ (ಎಚ್.ಆರ್) ಕಂಪನಿ ಸ್ಥಾಪಿಸಿ ಗ್ರಾಮೀಣ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲು ನೆರವಾಗುತ್ತಿದ್ದಾರೆ.

ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಮದನೆ ಎಂಬ ಪುಟ್ಟ ಹಳ್ಳಿಯ ದಿಲೀಪ್‌ ಎಂ. ಗೌಡ (35) ಅವರು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೇ, ಗ್ರಾಮೀಣ ಭಾಗದ ನಿರುದ್ಯೋಗಿ ಯುವ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವ ಕನಸು ಕಂಡಿದ್ದರು. ಮಾನವ ಸಂಪನ್ಮೂಲ ಮತ್ತು ಮಾನವ ಹಕ್ಕುಗಳ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿರುವ ದಿಲೀಪ್‌, ಮಾನವ ಸಂಪನ್ಮೂಲ ಕ್ಷೇತ್ರದ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಆ ಅನುಭವ ಆಧರಿಸಿಯೇ ಕಂಪನಿ ಆರಂಭಿಸಿದ್ದಾರೆ.

ಆರಂಭದಲ್ಲಿ ದೊರೆತ ಹೊರಗುತ್ತಿಗೆ ಕಂಪನಿಗೆ ಸೇವೆ ಒದಗಿಸುವ ಅವಕಾಶವು ಇವರಿಗೆ ಕಂಪನಿಗಳ ವಿವಿಧ ಸೌಲಭ್ಯಗಳು ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಅಪಾರ ಅನುಭವ ನೀಡಿತು. ಕಂಪನಿಯ ಕಾರ್ಯಕ್ಷೇತ್ರ ವಿಸ್ತರಿಸಲೂ ಇದು ದೊಡ್ಡ ಸ್ಫೂರ್ತಿಯಾಯಿತು. ಹೊರಗುತ್ತಿಗೆ ಸೇವೆ ಪ್ರಾರಂಭಿಸಿದಾಗ ಸಮಾನ ಮನಸ್ಕ ಗೆಳೆಯ ಹನುಮಾನ್ ಎಂ. ಕೆ. ಇವರ ಜತೆ ಕೈ ಜೋಡಿಸಿದ್ದಾರೆ.

ADVERTISEMENT

ಅಸಂಖ್ಯ ಯುವಕರು ಉದ್ಯೋಗ ಅರಸಿ ನಗರಕ್ಕೆ ಹೋಗಿ ಕೆಲವೇ ದಿನಗಳಲ್ಲಿ ವಾಪಸ್ ಬರುತ್ತಾರೆ. ತಾವು ಓದಿದ ಉದ್ಯೋಗ ಸಿಗಲಿಲ್ಲ ಎನ್ನುವುದು ಅವರ ಮುಖ್ಯ ಆಕ್ಷೇಪವಾಗಿರುತ್ತದೆ. ಗ್ರಾಮೀಣ ಯುವ ಜನತೆ ಎದುರಿಸುವ ಈ ಬಗೆಯ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ದಿಲೀಪ್‌ ಅವರು 2012ರಲ್ಲಿ ‘ರೈಟ್‌ ಟ್ರ್ಯಾಕ್‌ ಕಾರ್ಪೋರೇಟ್‌ ಸರ್ವಿಸ್‌’ ಕಂಪನಿ ಸ್ಥಾ‍ಪಿಸಿದರು. ಪತ್ನಿ ಕೀರ್ತಿ ಮತ್ತು ಸ್ನೇಹಿತ ಹನುಮಾನ್ ಎಂ.ಕೆ ಇವರ ಬೆಂಬಲಕ್ಕೆ ನಿಂತಿದ್ದಾರೆ. ಸ್ಥಾಪಕರ ಶ್ರದ್ಧೆ, ಕಾರ್ಯದಕ್ಷತೆಗಳಿಂದ ಕಂಪನಿಗೆ ಕ್ರಮೇಣ ಕಾರ್ಪೊರೇಟ್ ವಲಯದಲ್ಲಿ ಮನ್ನಣೆ ದೊರೆಯತೊಡಗಿತು. ದಕ್ಷಿಣ ರಾಜ್ಯಗಳಲ್ಲಿ 50 ಕ್ಕೂ ಹೆಚ್ಚು ಕಂಪನಿಗಳಿಗೆ ವಿವಿಧ ಸ್ಥರಗಳಲ್ಲಿ ಕಂಪನಿಯು ಉದ್ಯೋಗಿಗಳನ್ನು ಒದಗಿಸಿದೆ.

ಕಾರ್ಪೋರೇಟ್‌ ಕಂಪನಿಗಳಿಗೆ ಮಾನವ ಸಂಪನ್ಮೂಲ ನಿರ್ವಹಣೆಯ ಸೇವೆ ಒದಗಿಸುವ ಉದ್ದೇಶಕ್ಕಾಗಿ ಸ್ಥಾಪನೆಯಾಗಿದ್ದ ಕಂಪನಿಯು ಕ್ರಮೇಣ ಭದ್ರತಾ ಸಿಬ್ಬಂದಿ, ಸೌಲಭ್ಯಗಳ ನಿರ್ವಹಣೆ ಅಗತ್ಯಗಳಿಗೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದೆ. ಹೌಸ್‌ ಕೀಪಿಂಗ್‌, ಗಾರ್ಡನಿಂಗ್‌, ಲ್ಯಾಂಡ್‌ಸ್ಕೇಪ್‌, ಭದ್ರತೆ, ಸ್ವಚ್ಛತೆ, ದಿನಗೂಲಿ, ಫ್ಯಾಕ್ಟರಿ ಸ್ಥಳಾಂತರ ಮತ್ತಿತರ ಚಟುವಟಿಕೆಗಳ ನಿರ್ವಹಣೆಯಲ್ಲಿ ಇರುವ ವಿಪುಲವಾದ ಅವಕಾಶಗಳನ್ನು ಕಂಪನಿಯು ಬಳಸಿಕೊಳ್ಳುತ್ತಿದೆ.

’ಗ್ರಾಮೀಣ ಜನರಿಗೆ ಅವರ ಪ್ರತಿಭೆಗಳಿಗೆ ಅನುಗುಣವಾಗಿ ಸೂಕ್ತ ಉದ್ಯೋಗ ಒದಗಿಸಿಕೊಡಲು ಕಂಪನಿಯು ಶ್ರಮಿಸುತ್ತಿದೆ. ಶಿಕ್ಷಣ ಪಡೆಯಲು ಆಗದೇ ಇರುವವರು, ಅರ್ಧದಲ್ಲೇ ಶಿಕ್ಷಣ ಬಿಟ್ಟವರು, ಹಳ್ಳಿಗಳಲ್ಲಿ ದುಡಿಯಲು ಅವಕಾಶ ಸಿಗದವರು , ನಗರದಲ್ಲೇ ಏನನ್ನಾದರೂ ಉದ್ಯೋಗ ಮಾಡಲು ಇಚ್ಛಿಸುವವರು, ಶಿಕ್ಷಣ ಪಡೆದು ತಮ್ಮದೇ ಆದ ಕನಸಿನ ಉದ್ಯೋಗ ಹುಡುಕುತ್ತಿರುವವರು... ಹೀಗೆ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುತ್ತೇವೆ. ಶಿಕ್ಷಣದಿಂದ ವಂಚಿತರಾದವರನ್ನೂ ಗುರುತಿಸಿ ತರಬೇತಿ ನೀಡುತ್ತೇವೆ. ಆ ಮೂಲಕ ಅವರಿಗೆ ಉದ್ಯೋಗ ಕಲ್ಪಿಸಲು ಶ್ರಮಿಸಲಾಗುವುದು’ ಎಂದು ದಿಲೀಪ್ ಹೇಳುತ್ತಾರೆ.

ಸಂಸ್ಥೆಯು ಇದೀಗ ಮತ್ತೊಂದು ಯೋಜನೆ ರೂಪಿಸಿದೆ. ಹಳ್ಳಿಗಳಲ್ಲಿ ನೆಲೆಸಿದವರಿಗೆ ತಾತ್ಕಾಲಿಕ ಉದ್ಯೋಗ ಒದಗಿಸಲು ಮುಂದಾಗಿದೆ. ಕೋವಿಡ್‌ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಈ ಯೋಜನೆಯು ಹಲವಾರು ಉದ್ಯೋಗ ಆಕಾಂಕ್ಷಿಗಳಿಗೆ ನೆರವಾಗಲಿದೆ. ಗ್ರಾಮೀಣ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿರುವ ನಿರುದ್ಯೋಗಿಗಳನ್ನು ತಲುಪಲು ಸ್ಥಳೀಯ ಮಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಸಂಪರ್ಕ ಇಟ್ಟುಕೊಳ್ಳಲಾಗಿದೆ. ಜೊತೆಗೆ ಉದ್ಯೋಗ ಮೇಳ ನಡೆಸುವ ಮೂಲಕ ನಿರುದ್ಯೋಗಿಗಳನ್ನು ನೇರವಾಗಿ ಸಂಪರ್ಕಿಸಲಾಗುತ್ತಿದೆ. ಅಭ್ಯರ್ಥಿಯ ಶಿಕ್ಷಣ, ಅರ್ಹತೆ, ಬುದ್ಧಿಮತ್ತೆ, ದೈಹಿಕ ಸಾಮರ್ಥ್ಯ ಆಧರಿಸಿ ಅವರಿಗೆ ಸೂಕ್ತ ಉದ್ಯೋಗ ಒದಗಿಸಲು ಉದ್ದೇಶಿಸಲಾಗಿದೆ.

ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿರುವ ನಿರುದ್ಯೋಗಿ ಯುವಜನರು ಮತ್ತು ಉದ್ಯೋಗಿಗಳನ್ನು ಹುಡುಕುತ್ತಿರುವ ಕಂಪನಿಗಳ ನಡುವೆ ಏರ್ಪಟ್ಟಿರುವ ಕಂದಕಕ್ಕೆ ಗಟ್ಟಿಯಾದ ಸಂಪರ್ಕ ಸೇತುವೆಯಾಗಿ ರೈಟ್ ಟ್ರ್ಯಾಕ್ ಕಂಪನಿ ಬೆಳೆಸಬೇಕು ಎಂಬುದು ದಿಲೀಪ್‌ ಅವರ ಗುರಿಯಾಗಿದೆ. ಇದಕ್ಕಾಗಿ ದೇಶದೆಲ್ಲೆಡೆ ಉದ್ಯೋಗ ಮೇಳಗಳನ್ನು ಆಯೋಜಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲೂ ಯೋಜಿಸಿದೆ. ಈ ಮೂಲಕ ಅಟೊಮೊಬೈಲ್‌, ಐ.ಟಿ, ಬಿಪಿಒ ಹಾಗೂ ಇನ್ನಿತರೆ ವಲಯಗಳ ಕಂಪನಿಗಳಿಗೆ ಒದಗಿಸುತ್ತಿರುವ ಸೇವೆ ವಿಸ್ತರಿಸಲು ಉದ್ದೇಶಿಸಿದೆ.

ಸದ್ಯಕ್ಕೆ ಕಂಪನಿಯು ಹಲವು ತಯಾರಿಕೆ ಕಂಪನಿಗಳಿಗೆ ಹಾಗೂ ಇ–ಕಾಮರ್ಸ್‌ನ ವಹಿವಾಟು ನಡೆಸುವ ಬಿಗ್‌ ಬಾಸ್ಕೆಟ್‌, ಮೈರಾ ಮೆಡಿಷಿನ್ಸ್‌, ವರ್ಟೆಕ್ಸ್‌ ಕಂಪನಿಗಳಿಗೆ ಬೇಕಾಗುವ ಅಗತ್ಯ ಸಿಬ್ಬಂದಿ ಒದಗಿಸುತ್ತಾ ಬಂದಿದೆ. ಇಂತಹ ಕಂಪನಿಗಳಿಗೆ ಬೇಕಾದ ಅರ್ಹ ಸಿಬ್ಬಂದಿಯನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿಯನ್ನೂ ನೀಡುತ್ತಿದೆ.

ಕಂಪನಿ ಗುರುತಿಸಿದ ಉದ್ಯೋಗಾವಕಾಶ ವಲಯಗಳು

* ಸಮಗ್ರ ಸೌಲಭ್ಯಗಳ ನಿರ್ವಹಣೆ

* ಯಾಂತ್ರೀಕೃತ ಶುಚಿತ್ವ ವ್ಯವಸ್ಥೆ

* ಭದ್ರತಾ ವ್ಯವಸ್ಥೆ

* ಉದ್ಯಾನಗಳ ಅಭಿವೃದ್ಧಿ

* ಕ್ಲಬ್‌ ಹೌಸ್‌ ನಿರ್ವಹಣೆ

* ಉತ್ಪಾದನೆಗೆ ನೆರವು

* ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯ

* ಕ್ಯಾಂಟಿನ್‌ಗಳ ನಿರ್ವಹಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.