ADVERTISEMENT

ಉತ್ಸಾಹಿ ಉದ್ಯಮಿಗಳಿಗೆ ‘ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌’ ನೆರವು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 2:31 IST
Last Updated 6 ಮಾರ್ಚ್ 2021, 2:31 IST
ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌
ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌   

ಬೆಂಗಳೂರು: ಕಿರಾಣಿ ಅಂಗಡಿಗಳು ಮತ್ತು ಕಿರು, ಸಣ್ಣ, ಮಧ್ಯಮ (ಎಂಎಸ್‌ಎಂಇ) ಉದ್ದಿಮೆದಾರರನ್ನು ತಂತ್ರಜ್ಞಾನದ ನೆರವಿನಿಂದ ಸಬಲೀಕರಣಗೊಳಿಸುವ ಉದ್ದೇಶದ ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌, ಅನೇಕ ಸಣ್ಣ ಉದ್ಯಮಿಗಳ ವಹಿವಾಟು ವಿಸ್ತರಿಸಲು ನೆರವಾಗುತ್ತಿದೆ.

ವಹಿವಾಟಿನಿಂದ ವಹಿವಾಟು (ಬಿಟುಬಿ) ಮಾದರಿಯ ‘ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌’ ಸಣ್ಣ ಪುಟ್ಟ ಕಿರಾಣಿ ವರ್ತಕರು ಮತ್ತು ‘ಎಂಎಸ್‌ಎಂಇ‘ ಉದ್ಯಮಿಗಳು ತಮ್ಮ ವಹಿವಾಟಿಗಾಗಿ ಸಗಟು ರೂಪದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಸರಕುಗಳನ್ನು ಖರೀದಿಸಲು ಇದು ನೆರವಾಗಲಿದೆ.

2020ರ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿರುವ ‘ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌’ ನೆರವಿನಿಂದ ಅಸಂಖ್ಯ ಉದ್ಯಮಿಗಳು ಡಿಜಿಟಲ್‌ ಆರ್ಥಿಕತೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ.

ADVERTISEMENT

‘ಸಣ್ಣ ಪ್ರಮಾಣದ ಉದ್ದಿಮೆ ವ್ಯವಹಾರವನ್ನು ಸವಾಲಿನ ದಿನಗಳಲ್ಲಿ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಸಕಾಲದಲ್ಲಿ ಗುಣಮಟ್ಟದ ಸರಕುಗಳು ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಾಗಬೇಕು. ಅಂತಹ ಅಗತ್ಯವನ್ನು ‘ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌‘ ಒದಗಿಸುತ್ತಿದೆ‘ ಎಂದು ಮಂಜುನಾಥ ವಿಶ್ವಕರ್ಮ ಅವರು ಹೇಳುತ್ತಾರೆ. ಸೋದರ ವೇಣುಗೋಪಾಲ್‌ ಜತೆ ಮಂಜುನಾಥ್‌ ಅವರು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿರುವ ‘ವೈಷ್ಣವಿ ಫ್ಯಾಷನ್‌‘ಗೆ ಫ್ಲಿಪ್‌ಕಾರ್ಟ್‌ನ ಹೋಲ್‌ಸೇಲ್‌ ನೆರವಿಗೆ ಬಂದಿದೆ.

‘ಸ್ವಂತ ವ್ಯವಹಾರ ಆರಂಭಿಸಬೇಕೆಂದು ಬಯಸುವ ಅನೇಕ ಉದ್ಯಮಶೀಲರ ಕನಸನ್ನೂ ‘ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌’ ನನಸಾಗಿಸುತ್ತಿದೆ. ವಹಿವಾಟಿಗೆ ಅಗತ್ಯವಾಗಿರುವ ಸರಕುಗಳನ್ನು ಫ್ಲಿಪ್‌ಕಾರ್ಟ್‌, ವಿಶ್ವಾಸಾರ್ಹ ರೀತಿಯಲ್ಲಿ ಪೂರೈಸುತ್ತಿರುವುದರಿಂದ ನನ್ನ ವಹಿವಾಟು ಗಮನಾರ್ಹವಾಗಿ ಬೆಳೆಯುತ್ತಿದೆ‘ ಎಂದು ಉದ್ಯಮಿ ಸೈಯ್ಯದ್‌ ಸೈಫ್‌ ಅವರು ಹೇಳುತ್ತಾರೆ.

‘ಸದ್ಯಕ್ಕೆ ಫ್ಲಿಪ್‍ಕಾರ್ಟ್ ಹೋಲ್‍ಸೇಲ್ ಆ್ಯಪ್‌ನಲ್ಲಿ ಫ್ಯಾಷನ್ ಉತ್ಪನ್ನಗಳು, ಉಡುಗೆಗಳು, ಪಾದರಕ್ಷೆಗಳು ಮತ್ತಿತರ ಪರಿಕರಗಳನ್ನು ಒದಗಿಸಲಾಗುತ್ತಿದೆ. ಈ ಆ್ಯಪ್‍ನಲ್ಲಿನ ಫ್ಯಾಷನ್ ವಿಭಾಗವು ಶೇ.50 ರಷ್ಟು ಬೆಳವಣಿಗೆ ಕಂಡಿದ್ದು, ಆರಂಭದಿಂದ ಇಲ್ಲಿವರೆಗೆ 2.5 ಲಕ್ಷ ಆರ್ಡರ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ’ ಎಂದು ಫ್ಲಿಪ್‌ಕಾರ್ಟ್‌ ವಕ್ತಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.