ADVERTISEMENT

ಸ್ಫೂರ್ತಿಯ ಉದ್ಯಮಿ: ಕೇಕ್‌ನಿಂದ ಡೆಸರ್ಟ್‌ ಉದ್ಯಮದವರೆಗೆ

ಎಂ.ಶ್ರೀನಿವಾಸ
Published 23 ಸೆಪ್ಟೆಂಬರ್ 2020, 23:05 IST
Last Updated 23 ಸೆಪ್ಟೆಂಬರ್ 2020, 23:05 IST
ಎಸ್. ಸಂಧ್ಯಾ
ಎಸ್. ಸಂಧ್ಯಾ   

ಪ್ರ ತಿ ಉದ್ಯಮವೂ ವಿಶಿಷ್ಟ ಕೌಶಲವನ್ನು ನಿರೀಕ್ಷಿಸುತ್ತದೆ. ಅಂತಹ ಕೌಶಲದಲ್ಲಿ ಪರಿಪೂರ್ಣತೆ ಸಾಧಿಸಿರಿ. ನಂತರ, ಸಂಪೂರ್ಣ ಆತ್ಮವಿಶ್ವಾಸವಿದ್ದಲ್ಲಿ ಮಾತ್ರ ಸ್ವಂತ ಉದ್ಯಮ ಪ್ರಾರಂಭಿಸಿ. ಗ್ರಾಹಕರನ್ನು ಆಕರ್ಷಿಸಲು ನಿಮ್ಮ ಉತ್ಪನ್ನಗಳು, ಸೇವೆಗಳಲ್ಲಿ ಸ್ಥಿರತೆ ಇರಬೇಕಿರುವುದು ಬಹಳ ಮುಖ್ಯ...

-ಇದು ಮಹಿಳಾ ಉದ್ಯಮಿಗಳಿಗೆ ಎಸ್. ಸಂಧ್ಯಾ ಅವರ ಸಲಹೆ. ಬಹಳಷ್ಟು ಮಂದಿ ಉದ್ಯಮಿಗಳಾಗುವ ಕನಸು ಕಂಡಿರುವುದಿಲ್ಲ. ಸಂಧ್ಯಾ ಕೂಡ ಆರಂಭದಲ್ಲಿ ಉದ್ಯಮ ಶುರುಮಾಡುವ ಆಲೋಚನೆ ಹೊಂದಿರಲಿಲ್ಲ. ಎಂಬಿಎ ಪದವೀಧರರಾದ‌ ಸಂಧ್ಯಾ, ಖಾಸಗಿ ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗದಲ್ಲಿದ್ದರು. ಯಾವುದೇ ಉದ್ಯಮ ಪ್ರೀತಿಯಿಂದ ಒಂದು ಉತ್ಪನ್ನ ಸಿದ್ಧಪಡಿಸಿದಲ್ಲಿ, ಆ ಉತ್ಪನ್ನ ಯಶಸ್ಸು ಕಾಣುತ್ತದೆ ಎಂದು ಸಂಧ್ಯಾ ನಂಬಿದ್ದರು. ಬೇಕ್‌ ಮಾಡುವುದು ಸಂಧ್ಯಾ ಅವರಿಗೆ ಇಷ್ಟದ ಕೆಲಸ. ಆದರೆ ಅವರಿಗೆ ಕಪ್‌ ಕೇಕ್‌ ಹೊರತುಪಡಿಸಿ ಬೇರೇನನ್ನೂ ಬೇಕ್‌ ಮಾಡಲು ಬರುತ್ತಿರಲಿಲ್ಲ.

ಬೇಕಿಂಗ್ ಉದ್ಯಮ ಆರಂಭಿಸಲು ಉದ್ದೇಶಿಸಿ,ಅದು ಎಷ್ಟು ಚೆನ್ನಾಗಿ ನಡೆಯಬಹುದು ಎಂಬುದನ್ನು ಪರೀಕ್ಷಿಸಲು ಸಂಧ್ಯಾ ಕೆಲವು ಆಹಾರ ಮೇಳಗಳಲ್ಲಿ ಕಪ್‌ ಕೇಕ್‌ಗಳನ್ನು ಮಾರಿದರು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂತು. ಈ ಯಶಸ್ಸು ಅವರಲ್ಲಿ ಆತ್ಮವಿಶ್ವಾಸ ಮೂಡಿಸಿತು. ಕಪ್‌ ಕೇಕ್‌ನಂತಹ ಸಿಹಿ ತಿನಿಸಿನ ಉದ್ಯಮ ಸ್ಥಾಪಿಸಲು ನಿರ್ಧರಿಸಿದರು. ಇದಕ್ಕಾಗಿ ಬೇಕಿಂಗ್‌ನಲ್ಲಿ ತರಬೇತಿ ಪಡೆದರು. ತಮ್ಮದೇ ಆದ ಕೇಕ್‌ ಕೆಫೆ ಪ್ರಾರಂಭಿಸುವುದು ಸಂಧ್ಯಾ ಅವರ ಯೋಜನೆಯಾಗಿತ್ತು. ಆದರೆ, ಮುಂದಿನ ಹೆಜ್ಜೆ ಇಡಲು ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಎದುರಾಗಿತ್ತು. ಹೀಗಿದ್ದರೂ, ಹಿಂಜರಿಯಲಿಲ್ಲ. ವ್ಯವಹಾರದ ನಯ-ನಾಜೂಕು ಅರಿತರು. ಹಲವು ಕಿಚನ್, ಕೆಫೆಗಳಲ್ಲಿ ಕೆಲಸ ಮಾಡಿ, ಪ್ರಾಯೋಗಿಕ ಜ್ಞಾನ ಗಳಿಸಿದರು. ಸಾಮರ್ಥ್ಯದ ಮೇಲೆ ವಿಶ್ವಾಸ ಮೂಡಿದ ನಂತರ ಸಂಧ್ಯಾ ತಮ್ಮ ಉಳಿತಾಯದ ಹಣ ವಿನಿಯೋಗಿಸಿ, ‘ಡೆಸರ್ಟ್‌ ರೋಸ್’‌ ಹೆಸರಿನ ಕೆಫೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು.

ADVERTISEMENT

ಉದ್ಯಮವನ್ನು ಸುಲಲಿತವಾಗಿ ನಡೆಸಲು ಮಹಿಳಾ ಉದ್ಯಮಿಯು ರಿಸ್ಕ್‌ ತೆಗೆದುಕೊಳ್ಳಬೇಕು ಎಂಬದು ಸಂಧ್ಯಾ ಅಭಿಪ್ರಾಯ. ‘ಆಕರ್ಷಕ ಸಂಬಳ ಬರುತ್ತಿದ್ದ ನನ್ನ ಉದ್ಯೋಗವನ್ನು ಬಿಟ್ಟು ನಾನು ಸ್ವಂತ ಉದ್ಯಮ ಸ್ಥಾಪಿಸಿದೆ. ದೊಡ್ಡ ಸವಾಲನ್ನೇ ಸ್ವೀಕರಿಸಿದೆ. ಉದ್ಯಮ ಪ್ರಾರಂಭವಾದ ನಂತರ ನಾನು ಬೇಕಿಂಗ್‌ ಆರ್ಡರ್‌ ತೆಗೆದುಕೊಳ್ಳಲು ಪ್ರಾರಂಭಿಸಿದೆ. ನಾನು ಸದಾ ಸವಾಲುಗಳಿಗೆ ಒಡ್ಡಿಕೊಳ್ಳುವ ಪ್ರವೃತ್ತಿಯವಳು. ಹಾಗಾಗಿ ನವೀನ ತಿನಿಸುಗಳ ಬೇಕಿಂಗ್‌ ಪ್ರಾರಂಭಿಸಿದೆ’ ಎಂದು ಸಂಧ್ಯಾ ಹೇಳುತ್ತಾರೆ.

ಉದ್ಯಮದ ಬೆಳವಣಿಗೆಗೆ ಕಾರಣರಾಗಬಲ್ಲ ಕೆಲಸಗಾರರನ್ನು ಹುಡುಕುವುದು ಸಂಧ್ಯಾ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಹಲವಾರು ಕೇಕ್‌ ಶಾಪ್‌ಗಳ ನಡುವೆ ತನ್ನದೇ ಆದ ಛಾಪು ಮೂಡಿಸುವ ಮಾರ್ಗವನ್ನು ಅವರು ಹುಡುಕತೊಡಗಿದರು. ಅವರು ಡೆಸರ್ಟ್‌ ರೋಸ್‌ ಕೆಫೆಯನ್ನು ಕೇಕ್‌ಗಳಿಗೆ ಸೀಮಿತಗೊಳಿಸದೆ ಇತರ ಸಿಹಿ ಖಾದ್ಯಗಳನ್ನೂ ಮಾರಲು ಪ್ರಾರಂಭಿಸಿದರು. ಹಲವು ಬಗೆಯ ಖಾದ್ಯಗಳು ಒಂದೇ ಸೂರಿನಡಿ ಲಭ್ಯವಾಗತೊಡಗಿದವು. ಸಕ್ಕರೆ ರಹಿತ, ಗ್ಲುಟನ್‌ ರಹಿತ, ಕೀಟೋ ಮತ್ತು ವೇಗನ್‌ ಡೆಸರ್ಟ್‌ಗಳನ್ನೂ ಸಂಧ್ಯಾ ಒದಗಿಸತೊಡಗಿದರು. ಸಂಧ್ಯಾ ಪ್ರತಿ ವಾರ ಅಡುಗೆ‌ ತರಗತಿಗಳನ್ನೂ ನಡೆಸುತ್ತಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಹಲವಾರು ಉದ್ಯಮಗಳು ಬೇಡಿಕೆ ಕುಸಿತ ಎದುರಿಸಿದರೂ ಸಂಧ್ಯಾ ಅವರಿಗೆ ಆರ್ಡರ್‌ ಕೊರತೆ ಇರಲಿಲ್ಲ. ಆದರೆ ಆರ್ಡರ್‌ ಪೂರೈಸಲು ಕೆಲಸಗಾರರ ಕೊರತೆ ಎದುರಾಯಿತು. ಲಾಕ್‌ಡೌನ್‌ ಕಾರಣದಿಂದಾಗಿ ಹೆಚ್ಚಿನ ಕೆಲಸಗಾರರು ತಮ್ಮ ಊರುಗಳಿಗೆ ಹಿಂದಿರುಗಿದ್ದರು. ಕೊರತೆಯನ್ನು ನೀಗಿಸಲು ಅವರು ಬೇರೆ ಕೆಲಸಗಾರರನ್ನು ನೇಮಿಸಿಕೊಂಡರು. ಈಗಲೂ ಅವರು ನುರಿತ ಕೆಲಸಗಾರರ ಶೋಧದಲ್ಲಿದ್ದಾರೆ. ಯಾವುದೇ ಉದ್ಯಮವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸೂಕ್ತ ಬೆಂಬಲದ ವ್ಯವಸ್ಥೆ ಬೇಕು ಎಂದು ಸಂಧ್ಯಾ ನಂಬುತ್ತಾರೆ. ಇತ್ತೀಚೆಗೆ ಅವರು ದಕ್ಷಿಣ ಬೆಂಗಳೂರಿನ ಬೇಕರ್‌ಗಳ ಸಮುದಾಯವನ್ನೂ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.