ADVERTISEMENT

ಸ್ಫೂರ್ತಿಯ ಉದ್ಯಮಿ: ವಿನಿತಾ ಕಟ್ಟಿದ ಆರೋಗ್ಯಸೇವಾ ಉದ್ಯಮ

ಎಂ.ಶ್ರೀನಿವಾಸ
Published 24 ಮಾರ್ಚ್ 2021, 19:31 IST
Last Updated 24 ಮಾರ್ಚ್ 2021, 19:31 IST
ಡಾ. ವಿನಿತಾ ಶರ್ಮಾ
ಡಾ. ವಿನಿತಾ ಶರ್ಮಾ   

ವ್ಯಕ್ತಿಯ ಬದುಕಿನ ದಿಕ್ಕನ್ನು ನಿರ್ಧರಿಸುವುದು ಶಿಕ್ಷಣ. ಈ ಮಾತಿನಲ್ಲಿ ನಿಮಗೆ ನಂಬಿಕೆ ಇಲ್ಲದಿದ್ದರೆ ಡಾ. ವಿನಿತಾ ಶರ್ಮಾ ಅವರನ್ನು ಭೇಟಿಯಾಗಿ! ವೈದ್ಯರಾಗಿರುವ ವಿನಿತಾ ‘ಡರ್ಮಾಗ್ಲೊ ಲೇಸರ್‌ ಕ್ಲಿನಿಕ್‌’ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ರಾಜಸ್ಥಾನದ ಜೋಧಪುರ ಸಮೀಪದ ಚಿಕ್ಕ ಹಳ್ಳಿಯ ವಿನಿತಾ ಜೈಪುರದಲ್ಲಿ ಎಂಬಿಬಿಎಸ್‌ ಪದವಿ ಪಡೆದು, ಲಂಡನ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ ಇತ್ಯಾದಿ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಸರಿಯಾಗಿ ಸಿಗುತ್ತಿಲ್ಲ. ಅಂಥದ್ದರಲ್ಲಿ ವಿನಿತಾ ವೈದ್ಯಕೀಯ ಪದವಿ ಪಡೆದಿದ್ದಾದರೂ ಹೇಗೆ? ‘ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ಶಿಕ್ಷಣ ಬೇಕು ಎಂದು ನನ್ನ ತಂದೆ ದೃಢವಾಗಿ ನಂಬಿದ್ದರು. ಮೊದಲು ಶಿಕ್ಷಣ, ಮಿಕ್ಕಿದ್ದೆಲ್ಲ ನಂತರ ಎನ್ನುವುದು ಅವರ ಮಂತ್ರವಾಗಿತ್ತು’ ಎನ್ನುತ್ತಾರೆ ವಿನಿತಾ.

ತಮ್ಮ ‘ಡರ್ಮಾಗ್ಲೊ’ ಪಯಣದ ಬೇರಿರುವುದೇ ತಮ್ಮ ಪುಟ್ಟ ಹಳ್ಳಿಯಲ್ಲಿ ಎನ್ನುತ್ತಾರೆ ಅವರು. ‘ನನ್ನ ತಂದೆ ರೇಡಿಯಾಲಜಿಸ್ಟ್‌. ನನ್ನ ಅಜ್ಜ ಸಹ ವೈದ್ಯರು. ಅಜ್ಜಿಗೆ ಅಲೋಪಥಿಯಲ್ಲಿ ನಂಬಿಕೆ ಇರಲಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಅವರು ಪಥ್ಯ ಮತ್ತು ಗಿಡಮೂಲಿಕೆಗಳಿಂದಲೇ ಗುಣಪಡಿಸಿಕೊಳ್ಳುತ್ತಿದ್ದರು. ಆಧುನಿಕ ವೈದ್ಯ ಪದ್ಧತಿಯನ್ನು ಅವರು ಸದಾ ಪ್ರಶ್ನಿಸುತ್ತಿದ್ದರು. ನನ್ನ ತಂದೆಗೆ ಆಯುರ್ವೇದದಲ್ಲಿ ನಂಬಿಕೆ ಇರಲಿಲ್ಲ. ಹಾಗಾಗಿ ಎರಡು ವಿಭಿನ್ನ ನೋಟಗಳು ನನ್ನಲ್ಲಿ ಬೆಳೆದವು. ಆರೋಗ್ಯ ಮತ್ತು ಚಿಕಿತ್ಸೆಯ ಬಗ್ಗೆ ಹೊಸ ಆಲೋಚನೆಗಳಿಗೆ ನಾನು ತೆರೆದುಕೊಳ್ಳಲು ಸಾಧ್ಯವಾಯಿತು’ ಎಂದು ಅವರು ಹೇಳುತ್ತಾರೆ.

ADVERTISEMENT

ವಿನಿತಾ ಅವರ ಅನುಭವದ ಆಧಾರದಿಂದಲೇ ಇಂದು ‘ಡರ್ಮಾಗ್ಲೊ’ ಇಂದು ಗ್ರಾಹಕರಿಗೆ ಸಮಗ್ರ ಚಿಕಿತ್ಸೆ ನೀಡುತ್ತಿದೆ. ಇಲ್ಲಿ ಅತ್ಯಾಧುನಿಕ ಚಿಕಿತ್ಸಾ ಪದ್ಧತಿ ಮತ್ತು ಸಾಂಪ್ರದಾಯಿಕ ಪದ್ಧತಿಯ ಸಮ್ಮಿಲನವನ್ನು ಕಾಣಬಹುದು. ಉನ್ನತ ಶಿಕ್ಷಣ ಮತ್ತು ಜೀವನಾನುಭವದ ನೆರವಿನಿಂದ ಡಾ. ವಿನಿತಾ 2010ರಲ್ಲಿ ಡರ್ಮಾಗ್ಲೋ ಆರಂಭಿಸಿದರು. ಬೆರಳೆಣಿಕೆಯಷ್ಟು ವೈದ್ಯರಿಗೆ ಮಾತ್ರ ಸಾಧ್ಯವಾಗುವಂತೆ ರೋಗಿಗಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡರು.

‘ನನ್ನ ಕ್ಲಿನಿಕ್‌ನಲ್ಲಿ ನಾನೊಬ್ಬಳೇ ವೈದ್ಯೆ. ಹಾಗಾಗಿ ನನ್ನ ರೋಗಿಗಳೊಂದಿಗೆ ವೈಯಕ್ತಿಕ ಮಟ್ಟದ ಸಂಪರ್ಕ ಇದೆ. ರೋಗಿಗಳಿಗೆ ಅವರ ಎದುರು ಇರುವ ಎಲ್ಲ ಸಾಧ್ಯತೆಗಳ ಬಗ್ಗೆ ನಾನು ಮುಕ್ತವಾಗಿ ತಿಳಿಸುತ್ತೇನೆ. ವಾಣಿಜ್ಯ ದೃಷ್ಟಿಕೋನ ಇದರಲ್ಲಿ ಇರುವುದಿಲ್ಲ. ಈ ಎರಡು ಅಂಶಗಳು ಸಂಬಂಧ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ’ ಎಂದು ಅವರು ಹೇಳುತ್ತಾರೆ.

‘ಕೋವಿಡ್‌–19 ಒಂದು ಚಂಡಮಾರುತದಂತೆ ಬಂತು. ಲಾಕ್‌ಡೌನ್‌ ಮತ್ತು ಭಯದಿಂದಾಗಿ ಜನರು ಕ್ಲಿನಿಕ್‌ಗೆ ಬರುವುದನ್ನು ಕಡಿಮೆ ಮಾಡಿದರು. ಅದೊಂದು ಬಿಕ್ಕಟ್ಟಿನ ಪರಿಸ್ಥಿತಿಯಾಗಿತ್ತು. ಆದರೆ ನಾವು ಅದನ್ನು ಚೆನ್ನಾಗಿ ನಿಭಾಯಿಸಿದೆವು. ನಮ್ಮ ಉದ್ಯೋಗಿಗಳನ್ನು ನಾವು ಚೆನ್ನಾಗಿ ನೋಡಿಕೊಂಡರೆ ಅವರು ನಮ್ಮೊಂದಿಗೆ ದೀರ್ಘಾವಧಿಗೆ ಇರುತ್ತಾರೆ. ಹಾಗಾಗಿ ನಾನು ನನ್ನ ಉದ್ಯೋಗಿಗಳ ವೇತನ ಕಡಿಮೆ ಮಾಡಲಿಲ್ಲ. ಅವರು ನನ್ನೊಂದಿಗೆ ದೃಢವಾಗಿ ನಿಂತರು. ಕೋವಿಡ್‌ ಹಂತ ದಾಟಿದ ನಂತರ, ಯಾವ ಪರಿಸ್ಥಿತಿಯನ್ನಾದರೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ನನಗೆ ಬಂದಿದೆ’ ಎಂದು ಡಾ. ವಿನಿತಾ ಹೇಳುತ್ತಾರೆ.

‘ಮಾರುಕಟ್ಟೆ ತಂತ್ರಗಳಲ್ಲಿ ನನಗೆ ನಂಬಿಕೆಯೇ ಇರಲಿಲ್ಲ. ನಮ್ಮ ಸೇವೆ ಉತ್ತಮವಾಗಿದ್ದರೆ ಜನ ಖಂಡಿತ ಬರುತ್ತಾರೆ ಎಂದು ನಂಬಿದ್ದೆ. ಜನರಿಗೆ ನಮ್ಮ ಸೇವೆಗಳ ಬಗ್ಗೆ ತಿಳಿಸುವುದು ಅಗತ್ಯ. ಸಮುದಾಯಕ್ಕೆ ಅದರಿಂದ ಆಗುವ ಪ್ರಯೋಜ ನಗಳ ಅರಿವು ಬರಬೇಕು’ ಎಂಬುದು ಅವರು ಕಂಡುಕೊಂಡ ವಿಚಾರ. ಸ್ವಂತ ಉದ್ಯಮ ನಡೆಸ ಬೇಕೆನ್ನುವ ಎಲ್ಲರಿಗೂ ಒಂದು ಕಿವಿಮಾತು. ‘ಶಿಕ್ಷಣ ಅಂದರೆ ಕೇವಲ ಡಿಗ್ರಿ ಅಲ್ಲ; ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯವೂ ಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.