ADVERTISEMENT

ಸ್ಫೂರ್ತಿಯ ಉದ್ಯಮಿ: ಟೇಲರಿಂಗ್ ಮಹದೇವ, ‘1ಬ್ರಿಡ್ಜ್‌’ ಸಲಹೆಗಾರ

ಎಂ.ಶ್ರೀನಿವಾಸ
Published 21 ಅಕ್ಟೋಬರ್ 2020, 21:35 IST
Last Updated 21 ಅಕ್ಟೋಬರ್ 2020, 21:35 IST
ಮಹದೇವ
ಮಹದೇವ   

ಮಂಡ್ಯ ಜಿಲ್ಲೆಯ ಮುತ್ತನಹಳ್ಳಿಯ ಈ ಟೇಲರಿಂಗ್ ಅಂಗಡಿ ಗ್ರಾಹಕರಿಂದಸದಾ ಗಿಜಿಗಿಜಿ ಅನ್ನುತ್ತಿರುತ್ತದೆ. ಮೂವತ್ತನಾಲ್ಕು ವರ್ಷ ವಯಸ್ಸಿನ ಮಹದೇವ ತಮ್ಮ ಗ್ರಾಹಕರ ವಿವಿಧ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು, ತಾಳ್ಮೆಯಿಂದ ಅವರೊಡನೆ ವ್ಯವಹರಿಸುವುದನ್ನು ನಾವು ಕಾಣಬಹುದು. ಮುತ್ತನಹಳ್ಳಿಯ ಈ ಸಣ್ಣ ಟೇಲರಿಂಗ್ ಅಂಗಡಿಗೆ ಪ್ರತಿನಿತ್ಯ 70ಕ್ಕೂ ಹೆಚ್ಚು ಗ್ರಾಹಕರು ಬರುತ್ತಾರೆ.

ಮಹದೇವ ಅವರಿಗೆ ಸ್ವಂತ ಉದ್ಯಮ ಸ್ಥಾಪಿಸುವ ಇರಾದೆ ಬಹುಕಾಲದಿಂದ ಇತ್ತು. ಈ ಇರಾದೆಯ ಕಾರಣದಿಂದ ಅವರು ತಮಗೆ 18 ವರ್ಷ ವಯಸ್ಸಾಗಿದ್ದಾಗಲೇ ಟೇಲರಿಂಗ್ ಅಂಗಡಿ ಆರಂಭಿಸಿದರು. ಹೊಸದನ್ನು ಆವಿಷ್ಕರಿಸುವ ತುಡಿತ ಹೊಂದಿದ್ದ ಮಹದೇವ ತಮ್ಮ ಟೇಲರಿಂಗ್ ಅಂಗಡಿಯಲ್ಲಿಯೇ ವಿವಿಧ ರೀತಿಯ ವ್ಯಾಪಾರಗಳಿಗೆ ಅವಕಾಶ ಹುಡುಕುತ್ತಿದ್ದರು. ಕೆಲವೇ ಸಮಯದಲ್ಲಿ ಅವರ ಪುಟ್ಟ ಟೇಲರಿಂಗ್ ಅಂಗಡಿಯಲ್ಲಿ ಹಲವು ಬಗೆಯ ಗ್ರಾಹಕ ಸೇವೆಗಳು ಲಭ್ಯವಾಗತೊಡಗಿದವು.

ಮಹದೇವ ಹೇಳುವಂತೆ: ‘ನಾನು ಮುತ್ತನಹಳ್ಳಿಯಲ್ಲೇ ಹುಟ್ಟಿ ಬೆಳೆದವನು. ನಾನು ದೊಡ್ಡವನಾಗುತ್ತಿದ್ದಂತೆ ನನ್ನ ಮಾವ ನನಗೆ ಟೇಲರಿಂಗ್ ವೃತ್ತಿಯನ್ನು ಪರಿಚಯಿಸಿದರು. ಗ್ರಾಹಕರನ್ನು ಭೇಟಿ ಮಾಡಲು ಅವರು ನನ್ನನ್ನು ಕರೆದೊಯ್ಯುತ್ತಿದ್ದರು. ವ್ಯರ್ಥ ಎಂದು ಬಿಟ್ಟಿದ್ದ ಬಟ್ಟೆಗಳನ್ನು ಬಳಸಿ ಟೇಲರಿಂಗ್ ಕಲಿಯಲಾರಂಭಿಸಿದೆ. ನನ್ನ ಮಾವನ ಕೆಲಸಗಳಲ್ಲಿ ನಾನು ಖುಷಿಯಿಂದ ಕೈಜೋಡಿಸುತ್ತಿದ್ದೆ. ನನ್ನ ಬಿಡುವಿನ ವೇಳೆಯಲ್ಲಿ, ರಜಾ ದಿನಗಳಲ್ಲಿ ಟೇಲರಿಂಗ್ ಮತ್ತು ಸ್ಥಳೀಯ ಮಾದರಿಯ ಎಂಬ್ರಾಯ್ಡರಿಯನ್ನು ಕರಗತ ಮಾಡಿಕೊಂಡೆ. ಈ ಸಂದರ್ಭದಲ್ಲಿಯೇ ನಾನು ಟೇಲರಿಂಗ್ ಉದ್ಯಮ ಆರಂಭಿಸಲು ತೀರ್ಮಾನಿಸಿದೆ’.

ADVERTISEMENT

‘ಶಿಕ್ಷಣ ಮೊಟಕುಗೊಳಿಸಿ ಟೇಲರಿಂಗ್ ಆರಂಭಿಸುವಂತೆ ನನ್ನ ಕುಟುಂಬದ ಸದಸ್ಯರು ನನ್ನನ್ನು ಒತ್ತಾಯಿಸಿದಾಗ ನಾನು ನನ್ನ ಹಳ್ಳಿಯ ಶಿಕ್ಷಿತ ಯುವಕರು ದುಡಿಮೆಗಿಳಿದು ತಮ್ಮ ಕುಟುಂಬಕ್ಕೆ ನೆರವಾಗುತ್ತಿರುವ ಉದಾಹರಣೆಗಳಿವೆಯೇ ಎಂಬ ಬಗ್ಗೆ ಒಮ್ಮೆ ಪರಾಮರ್ಶಿಸಿದೆ. ನನಗೆ ಅಂತಹ ಯಾವುದೇ ಮಾದರಿ ಕಂಡುಬರಲಿಲ್ಲ. ಹೀಗಾಗಿ ಟೇಲರಿಂಗ್ ಉದ್ಯಮವನ್ನು ಸ್ಥಾಪಿಸುವ ಮೂಲಕ ವೃತ್ತಿ ಜೀವನವನ್ನು ಸಣ್ಣ ವಯಸ್ಸಿನಲ್ಲೇ ಆರಂಭಿಸಲು ನಿಶ್ಚಯಿಸಿದೆ’ ಎಂದು ಮಹದೇವ ಹೇಳುತ್ತಾರೆ.

ಪ್ರಾರಂಭದ ದಿನಗಳಲ್ಲಿ ಬಂಡವಾಳ ಮತ್ತು ನೆರವಿನ ಕೊರತೆಯಿಂದಾಗಿ ವಹಿವಾಟು ನಡೆಸುವುದು ಕಷ್ಟಕರವಾಗಿತ್ತು. ಆದರೆ, ಮಹದೇವ ಅವರಿಗೆ ಅವರ ತಾಯಿಯಿಂದ ಹೆಚ್ಚಿನ ಪ್ರೋತ್ಸಾಹ ಮತ್ತು ಬೆಂಬಲ ದೊರಕಿತು. ಅವರ ನೆರವಿನಿಂದ ಮನೆಯಲ್ಲಿಯೇ ಕೆಲಸ ಮಾಡಿ ಮಹದೇವ ಆರಂಭದ ಕೆಲವು ಗ್ರಾಹಕರಿಗೆ ಸೇವೆ ಒದಗಿಸಿದರು. ಕಾಲಕ್ಕೆ ತಕ್ಕಂತೆ ತಮ್ಮಲ್ಲಿ ಬದಲಾವಣೆ ತಂದುಕೊಳ್ಳಲು, ಹೊಸ ವಿನ್ಯಾಸಗಳಿಗಾಗಿ ಮಹದೇವ ಇಂಟರ್‌ನೆಟ್ ಮೊರೆ ಹೋದರು. ಮೇಲಾಗಿ ತಮ್ಮ ಗ್ರಾಹಕರಿಗೂ ಅಂತಹ ವಿನ್ಯಾಸದ ಬಟ್ಟೆ ಹೊಲಿಸಿಕೊಳ್ಳುವಂತೆ ಮನವರಿಕೆ ಮಾಡಿದರು. ಕಾಲಕ್ರಮೇಣ ಮಹದೇವ ಅವರ ಟೇಲರಿಂಗ್ ಅಂಗಡಿಯು ನವನವೀನ ಶೈಲಿಗೆ, ಗುಣಮಟ್ಟದ ಕೆಲಸಕ್ಕೆ ಮತ್ತು ಸಮಯ ಪರಿಪಾಲನೆಗೆ ಹೆಸರು ಪಡೆದುಕೊಂಡಿತು. ಮಹದೇವ ತಮ್ಮ ಅಂಗಡಿಯ ಬಿಸಿನೆಸ್ ಕಾರ್ಡ್‌ಗಳನ್ನು ಮುದ್ರಿಸಿ ಹೆಚ್ಚಿನ ಗ್ರಾಹಕರನ್ನು ತಲುಪುವ ಪ್ರಯತ್ನ ಮಾಡಿದರು. ಅವರ ಪ್ರಯತ್ನಗಳು ಫಲ ನೀಡಿದವು.

ಉದ್ಯಮ ಪಯಣದ ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳುವ ಮಹದೇವ, ‘ನನ್ನ ಟೇಲರಿಂಗ್ ಷಾಪ್‌ಗಾಗಿ ಸೂಕ್ತ ಬಾಡಿಗೆ ಮಳಿಗೆಯನ್ನು ಹುಡುಕುತ್ತಿದ್ದೆ. ನನ್ನ ಷಾಪ್ ಸುತ್ತಮುತ್ತಲಿನ ಹಳ್ಳಿಗಳಿಗೆ ಹತ್ತಿರದಲ್ಲಿರಬೇಕಿತ್ತು. ಹಳ್ಳಿಗರು ತಮ್ಮ ಊರುಗಳಿಗೆ ಹೋಗುವಾಗ ನನ್ನ ಷಾಪ್‌ಗೆ ಭೇಟಿ ನೀಡಿ ಬಟ್ಟೆ ಹೊಲಿಯಲು ನೀಡುವಂತಿರಬೇಕು ಎಂಬುದು ನನ್ನ ಮನಸ್ಸಿನಲ್ಲಿದ್ದ ಲೆಕ್ಕಾಚಾರವಾಗಿತ್ತು. ಮೊದಲ ವರ್ಷದಲ್ಲೇ ನನಗೆ ಅದುವರೆಗಿನ ದೊಡ್ಡ ಆರ್ಡರ್ ದೊರಕಿತು. ನನಗೆ ತೀರಾ ಪರಿಚಯವಿದ್ದ ಕುಟುಂಬವೊಂದರಲ್ಲಿ ವಿವಾಹ ಕಾರ್ಯಕ್ರಮವಿತ್ತು. ಕುಟುಂಬದ ಸದಸ್ಯರೆಲ್ಲರಿಗೂ ವಿವಾಹ ಸಂದರ್ಭಕ್ಕಾಗಿ ಬಟ್ಟೆಗಳನ್ನು ಹೊಲಿಯುವ ಅವಕಾಶ ದೊರೆಯಿತು. ನನ್ನ ಕೆಲಸದ ಗುಣಮಟ್ಟ ಕುರಿತು ಒಬ್ಬರಿಂದ ಇನ್ನೊಬ್ಬರಿಗೆ ಸುದ್ದಿ ಹರಡಿ ನನಗೆ ಜನಪ್ರಿಯತೆಯೂ ದೊರಕಿತು’ ಎನ್ನುತ್ತಾರೆ.

ಮಹದೇವ ಅವರ ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಕೋವಿಡ್ ಸಾಂಕ್ರಾಮಿಕದಿಂದ ವಹಿವಾಟು ಕಡಿಮೆಯಂತೂ ಆಗಿದೆ ಎಂದು ಮಹದೇವ್ ಹೇಳುತ್ತಾರೆ. ಅದೃಷ್ಟವಶಾತ್, ಕಾಯಂ ಗ್ರಾಹಕರು ಮಹದೇವ ಅವರಿಗೆ ಬೆಂಬಲವಾಗಿದ್ದಾರೆ. ಗೆಳೆಯರ ಬಳಗದಲ್ಲಿ ಮಹದೇವ ಅವರನ್ನು ‘ಯಶಸ್ವಿ ಉದ್ಯಮಿ’ ಎಂದೇ ಗುರುತಿಸಲಾಗುತ್ತದೆ.

ಮಹದೇವ ಅವರ ಉದ್ಯಮಶೀಲ ಮನಸ್ಸು ಅವರ ಗಮನ ‘1ಬ್ರಿಡ್ಜ್’ ಕಡೆ ಹರಿಯುವಂತೆ ಮಾಡಿತು. ‘1ಬ್ರಿಡ್ಜ್’ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಂಪನ್ಮೂಲ ಮತ್ತು ಉದ್ಯಮಿಗಳ ಬೆಂಬಲದಿಂದ ಗ್ರಾಹಕ ಸೇವೆಗಳನ್ನು ಒದಗಿಸುವ ನೆಟ್‌ವರ್ಕ್. ಇಂದು ಮಹದೇವ ‘1ಬ್ರಿಡ್ಜ್’ನ ಸಲಹೆಗಾರರೂ ಹೌದು. ‘1ಬ್ರಿಡ್ಜ್’ನ ಬೆಂಬಲದಿಂದಾಗಿ ಮಹದೇವ ಅವರಿಗೆ ಹೊಸ ಗ್ರಾಹಕರ ಲಭ್ಯತೆ ಹೆಚ್ಚಾಗಿದೆ. ‘ಗ್ರಾಹಕರ ನಂಬಿಕೆ ಮತ್ತು ಭರವಸೆಯನ್ನು ಗಳಿಸಿಕೊಳ್ಳುವುದು ಮತ್ತು ಅವರೊಂದಿಗೆ ಸಂಬಂಧ ಉಳಿಸಿಕೊಳ್ಳುವುದು ಯಾವುದೇ ವಹಿವಾಟಿನ ಯಶಸ್ಸಿಗೆ ಅತ್ಯಂತ ಅವಶ್ಯಕ’ ಎಂಬುದು ಮಹದೇವ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.