ADVERTISEMENT

ಸಣ್ಣ ಉದ್ದಿಮೆಗಳಿಗೆ ಇನ್‌ಸ್ಟಾಮೋಜೊ ನೆರವು

​ಕೇಶವ ಜಿ.ಝಿಂಗಾಡೆ
Published 1 ಜನವರಿ 2019, 19:31 IST
Last Updated 1 ಜನವರಿ 2019, 19:31 IST
ಇನ್‌ಸ್ಟಾಮೋಜೊ ಸಹ ಸ್ಥಾಪಕರಾದ ಆದಿತ್ಯ ಸೇನ್‌ಗುಪ್ತಾ, ಸಂಪದ್‌ ಸ್ವೈನ್‌ (ಸಿಇಒ) ಮತ್ತು ಆಕಾಶ್‌ ಗೆಹಾನಿ
ಇನ್‌ಸ್ಟಾಮೋಜೊ ಸಹ ಸ್ಥಾಪಕರಾದ ಆದಿತ್ಯ ಸೇನ್‌ಗುಪ್ತಾ, ಸಂಪದ್‌ ಸ್ವೈನ್‌ (ಸಿಇಒ) ಮತ್ತು ಆಕಾಶ್‌ ಗೆಹಾನಿ   

ಐದಾರು ವರ್ಷಗಳ ಹಿಂದೆ ಸಣ್ಣ ಪುಟ್ಟ ಉದ್ದಿಮೆ ವಲಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡುವುದು, ಹಣ ಪಾವತಿಸುವುದು ದೊಡ್ಡ ಸಮಸ್ಯೆಯಾಗಿತ್ತು. ಗೃಹ ಕೈಗಾರಿಕೆಗಳಿಗೆ ಆನ್‌ಲೈನ್‌ನಲ್ಲಿ ವ್ಯವಹರಿಸುವುದು, ಮಾರುಕಟ್ಟೆ ಕಂಡುಕೊಳ್ಳುವುದು, ಹಣ ಪಡೆಯುವುದೂ ಸುಲಭವಾಗಿರಲಿಲ್ಲ. ದೇಶಿ ಮಾರುಕಟ್ಟೆಯಲ್ಲಿ ಸರಕುಗಳ ಬೇಡಿಕೆಗೆ ಕೊರತೆ ಏನೂ ಇಲ್ಲ. ಪೂರೈಕೆಯದ್ದೇ ಸಮಸ್ಯೆ ಇತ್ತು. ಈ ಎಲ್ಲ ಕೊರತೆಗಳನ್ನು ಬೆಂಗಳೂರಿನ ಇನ್‌ಸ್ಟಾಮೋಜೊ (Instamojo) ನವೋದ್ಯಮವು ತುಂಬಿಕೊಟ್ಟಿದೆ. ಹೊಸ ಪೇಮೆಂಟ್‌ ಲಿಂಕ್‌ ಮೂಲಕ ಹಣ ಪಾವತಿಗೆ ಸುಲಭ ಸೌಲಭ್ಯ ಕಲ್ಪಿಸಿಕೊಡಲಾಗಿದೆ.

2012ರಲ್ಲಿ ಮುಂಬೈನಲ್ಲಿ ಆರಂಭಗೊಂಡಿದ್ದ ಸಂಸ್ಥೆ ಈಗ ಬೆಂಗಳೂರಿನಲ್ಲಿನ ಪ್ರಧಾನ ಕಚೇರಿ ಮೂಲಕ ದೇಶದಾದ್ಯಂತ ಸೇವೆ ಒದಗಿಸುತ್ತಿದೆ. 2013ರಲ್ಲಿ ಕಾರ್ಯಾರಂಭಗೊಂಡಿದ್ದ ಸಂಸ್ಥೆಯ ಸೇವೆಯನ್ನು ಗೃಹ ಉದ್ದಿಮೆ, ಗುಡಿ ಕೈಗಾರಿಕೆ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) 6 ಲಕ್ಷ ಗ್ರಾಹಕರು ಪಡೆದುಕೊಳ್ಳುತ್ತಿದ್ದಾರೆ.

ಸಣ್ಣ ಪ್ರಮಾಣದಲ್ಲಿ ವೈವಿಧ್ಯಮಯ ಸರಕು / ಉತ್ಪನ್ನಗಳನ್ನು ತಯಾರಿಸುವ ಕುಶಲ ಕರ್ಮಿಗಳು ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ಸಂಖ್ಯೆ ನೋಂದಾಯಿಸಿ ಡಿಜಿಟಲ್‌ ಪಾವತಿ ಸೇವೆ ಒದಗಿಸುವ ಈ ತಾಣದ ಸದಸ್ಯತ್ವ ಪಡೆದುಕೊಳ್ಳಬಹುದು. ಈ ಮೂಲಕ ತಮ್ಮ ಸರಕುಗಳ ಮಾರಾಟ, ಹಣ ಪಾವತಿ ಮತ್ತಿತರ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ADVERTISEMENT

ಬ್ರ್ಯಾಂಡ್‌ರಹಿತ ಸರಕುಗಳ ತಯಾರಕರಿಗೆ ಆನ್‌ಲೈನ್‌ ಮಾರುಕಟ್ಟೆಯಲ್ಲಿ (ಇ–ಕಾಮರ್ಸ್‌) ಹೊಸ ಮಾರುಕಟ್ಟೆ ಒದಗಿಸಿ ಕೊಡುವ ಉದ್ದೇಶದಿಂದ ಈ ನವೋದ್ಯಮ ಸ್ಥಾಪಿಸಲಾಗಿತ್ತು. ಇದು ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅಂತರ್ಜಾಲ ತಾಣದಲ್ಲಿ (ಇ–ಕಾಮರ್ಸ್‌) ‘ಎಂಎಸ್‌ಎಂಸಿ’ ಉದ್ದಿಮೆಗಳಿಗೆ ಹೊಸ ವೇದಿಕೆ ದೊರೆತಿತ್ತು. ಉಚಿತ ಆನ್‌ಲೈನ್‌ ಮಳಿಗೆ – ಉತ್ಪನ್ನಗಳ ಬಗ್ಗೆ ಬೆಲೆ, ವಿನ್ಯಾಸದ ಮಾಹಿತಿಯೂ ಇಲ್ಲಿ ದೊರೆಯುತ್ತಿದೆ. ಆನ್‌ಲೈನ್‌ ಮಳಿಗೆಗಳಿಗೆ ಫೇಸ್‌ಬುಕ್‌ ಮತ್ತಿತರ ಹೊಸ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲು ಸಾಧ್ಯವಿದೆ.

ದೇಶಿ ಸಂಘಟಿತ ರಿಟೇಲ್‌ ಮಾರುಕಟ್ಟೆಗಿಂತ ಅಸಂಘಟಿತ ರಿಟೇಲ್‌ ಮಾರುಕಟ್ಟೆ ಇನ್ನೂ ದೊಡ್ಡದು. ಅಸಂಘಟಿತ ವಲಯದ ತಯಾರಕರಿಗೂ ಇ–ಕಾಮರ್ಸ್‌ನ ಪ್ರಯೋಜನ ಒದಗಿಸಿಕೊಡಲು ಇನ್‌ಸ್ಟಾಮೋಜೊ ನವೋದ್ಯಮ ಅಸ್ತಿತ್ವಕ್ಕೆ ಬಂದಿದೆ. ಸಾಮಾನ್ಯರ ಪಾಲಿಗೆ ಕೈಗೆಟುಕದ ತಂತ್ರಜ್ಞಾನವನ್ನು ಸರಳ ಮತ್ತು ಅಗ್ಗಗೊಳಿಸಿದೆ.

‘ಸಣ್ಣ ಉದ್ದಿಮೆಗಳ ಪಾಲಿಗೆ ಇದೊಂದು ಸುಲಭವಾಗಿ ಬಳಸುವ ತಂತ್ರಜ್ಞಾನ ವೇದಿಕೆಯಾಗಿದೆ. ಇದರ ಸೇವೆ ಪಡೆಯುವವರು ತಂತ್ರಜ್ಞಾನದಲ್ಲಿ ಪರಿಣತರಾಗಿರಬೇಕಾದ ಅಗತ್ಯವೇನೂ ಇಲ್ಲ. ಗೂಗಲ್‌, ವಾಟ್ಸ್‌ಆ್ಯಪ್‌ ಬಳಸುವಷ್ಟು ಕನಿಷ್ಠ ಪರಿಜ್ಞಾನ ಇದ್ದರೆ ಸಾಕು’ ಎಂದು ಸಿಇಒ ಸಂಪದ್‌ ಸ್ವೈನ್‌ ಹೇಳುತ್ತಾರೆ.

‘ಅಂತರ್ಜಾಲ ತಾಣದಲ್ಲಿ ತಮ್ಮ ಸರಕುಗಳಿಗೆ ಮಾರಾಟ ಕುದುರಿಸಿಕೊಳ್ಳುವವರು ‘ಇನ್‌ಸ್ಟಾಮೋಜೊ’ದ ಮೊಬೈಲ್‌ ಆ್ಯಪ್‌ ಮತ್ತು ಅಂತರ್ಜಾಲ ತಾಣದ ಮೂಲಕ ವ್ಯವಹರಿಸಬಹುದು. ಈ ನವೋದ್ಯಮಕ್ಕೆ ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ಗ್ರಾಹಕರಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಇದನ್ನು 10 ಲಕ್ಷಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

‘ಸರಕುಗಳ ಸಾಗಾಣಿಕೆ, ಮಾರಾಟ, ಹಣ ಪಾವತಿ, ಸಾಲ ಸೌಲಭ್ಯವೂ ಇಲ್ಲಿದೆ. ವಹಿವಾಟು ವಿಸ್ತರಣೆಗೆ ಹೆಚ್ಚುವರಿಯಾಗಿ ₹ 50 ಕೋಟಿಗಳಿಂದ ₹ 60 ಕೋಟಿ ಹೂಡಿಕೆ ಮಾಡಲಾಗು‌ತ್ತಿದೆ. ಇದುವರೆಗೆ ಈ ತಾಣದಲ್ಲಿ 10 ಲಕ್ಷ ವಹಿವಾಟುಗಳು ನಡೆದಿವೆ. ದೇಶದ ಅತಿದೊಡ್ಡ ಎಸ್‌ಎಂಇ ವೇದಿಕೆ ಇದಾಗಿದೆ. ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆ ಇದೆ. ದಕ್ಷಿಣ ಭಾರತದಲ್ಲಿ ವಹಿವಾಟು ಗಮನಾರ್ಹವಾಗಿದೆ’ ಎಂದು ಹೇಳುತ್ತಾರೆ.

ಎರಡು ಹೊಸ ಸೇವೆಗಳಾದ, ‘ ಮೋಜೊ ಎಕ್ಸ್‌ಪ್ರೆಸ್’ ಮತ್ತು ‘ಮೋಜೊ ಕ್ಯಾಪಿಟಲ್’ ಸೌಲಭ್ಯಗಳು ಸಣ್ಣ ಉದ್ಯಮಗಳ ಸಾಗಾಣಿಕೆ ಅಗತ್ಯ ಮತ್ತು ಹಣಕಾಸು ನೆರವಿನ ಅಗತ್ಯಗಳನ್ನು ಈಡೇರಿಸಲಿವೆ. ‘ಮೋಜೊ ಎಕ್ಸ್‌ಪ್ರೆಸ್’ ಸೇವೆಯನ್ನು, ವಿವಿಧ ಸರಕು ಸಾಗಾಣಿಕೆ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಒದಗಿಸಲಾಗುತ್ತದೆ. ಇದನ್ನು ಇನ್‍ಸ್ಟಾಮೋಜೊ ಆ್ಯಪ್‍ಸ್ಟೋರ್ ಮೂಲಕವೂ ಪಡೆಯಬಹುದು. ‘ಮೋಜೊ ಕ್ಯಾಪಿಟಲ್’ ಹಣಕಾಸು ಅಗತ್ಯಗಳನ್ನು ‘ಎಂಎಸ್‍ಎಂಇ’ಗಳಿಗೆ ಒದಗಿಸಲಿದೆ. ತಯಾರಕರು, ವಹಿವಾಟುದಾರರು ತಮ್ಮ ಗ್ರಾಹಕರಿಗೆ ಸರಕು ಪೂರೈಸಲು ಇದುವರೆಗೆ ಬೇರೆ, ಬೇರೆ ಸಂಸ್ಥೆಗಳ ನೆರವು ಪಡೆಯಬೇಕಾಗುತ್ತಿತ್ತು. ಇನ್ನು ಮುಂದೆ ಆ ತಲೆನೋವು ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.