ADVERTISEMENT

PV Web Exclusive: ಸೂಪರ್ ಬಾಟಮ್ಸ್- ಕೂಸಿನೊಂದಿಗೆ ಹುಟ್ಟಿಕೊಂಡ ಕನಸು

ಈ ಉದ್ಯಮಕ್ಕೆ ಲಂಗೋಟಿಯೇ ಪ್ರೇರಣೆ!

ಸುಶೀಲಾ ಡೋಣೂರ
Published 24 ಜೂನ್ 2021, 1:23 IST
Last Updated 24 ಜೂನ್ 2021, 1:23 IST
ಸೂಪರ್ ಬಾಟಮ್ಸ್
ಸೂಪರ್ ಬಾಟಮ್ಸ್   

ಪುಟ್ಟ ಕಂದನಿಗೆ ಲಂಗೋಟಿಯಿಂದ ಉಂಟಾದ ಕಿರಿಕಿರಿ, ಅದರಿಂದ ತಾಯಿ ಅನುಭವಿಸಿದ ಹಿಂಸೆ ಒಂದು ನವೋದ್ಯಮಕ್ಕೆ ನಾಂದಿ ಹಾಡಿದ ಕಥೆಯಿದು. ನೂರಾರು–ಸಾವಿರಾರು ಕಂದಮ್ಮಗಳು, ತಾಯಂದಿರು ಈ ಸವಾಲನ್ನು ಎದುರಿಸುತ್ತಲೇ ಬಂದರೂ, ಆ ಕಂದಮ್ಮಗಳ ಹಟ–ಅಳುವಿನಲ್ಲೂ ಮತ್ತು ತಾಯಂದಿರ ಆತಂಕ ಅಸಹಾಯಕತೆಗಳಲ್ಲಿಯೂ ಮುಗಿದು ಹೋಗುತ್ತಿತ್ತು. ಶತಮಾನಗಳಿಂದ ಇದು ಹೀಗೆಯೇ ಮುಂದುವರಿದಿತ್ತು. ಆದರೆ ಇಂಥದ್ದೊಂದು ಸಮಸ್ಯೆಗೆ ಇಲ್ಲೊಬ್ಬ ತಾಯಿ ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ. ತನ್ನ ಕಂದ ಮಾತ್ರವಲ್ಲ, ಯಾವ ಕಂದಮ್ಮಗಳಿಗೂ ಈ ಕಿರಿಕಿರಿ ಅಸಹನೆಯನ್ನು ಉಂಟುಮಾಡಬಾರದು ಎನ್ನುವ ಕಳಕಳಿಯೇ ಈ ಉದ್ಯಮಕ್ಕೆ ನಾಂದಿ ಹಾಡಿದ್ದು.

ಪಲ್ಲವಿ ಉತಗಿ

ಡಿಸ್ಪೋಸೆಬಲ್ ಡೈಪರ್‌ನಿಂದ ತಮ್ಮ ಕಂದ ಅನುಭವಿಸಿದ ಯಾತನೆಯೊಂದಿಗೆ ಮುಂಬೈ ಮೂಲದ ಪಲ್ಲವಿ ಉತಗಿ ಅವರ ಯಶೋಗಾಥೆ ಆರಂಭವಾಗುತ್ತದೆ. ಹಗಲು–ರಾತ್ರಿ ಎನ್ನದೇ ಅಳುವ ಕೂಸು ಅಸಾಧ್ಯ ಕಿರಿಕಿರಿ ಅನುಭವಿಸುತ್ತ, ಮನೆಮಂದಿಯ ನಿದ್ದೆ ಕೆಡಿಸಿದಾಗ ಪಲ್ಲವಿ ಅವರ ಮನಸ್ಸಿನಲ್ಲಿ ಆತಂಕದ ನಡುವೆಯೂ ಹೊಸ ಆಲೋಚನೆಯೊಂದು ಮೊಳಕೆಯೊಡೆಯಿತು.

ಹೊಸ ತಾಯಿಯಾಗಿ, ಹಳೆಯ ಸವಾಲನ್ನೇ ಹೊಸದಾಗಿ ಎದುರಿಸುತ್ತ ಕುಳಿತ ಪಲ್ಲವಿ ತನ್ನ ಕಂದ ನೀಡುವ ಇಷ್ಟೇ ಇಷ್ಟು ಸಮಯದಲ್ಲಿ ಡೈಪರ್‌ ಕಿರಿಕಿರಿಗೆ ಅಂತ್ಯ ಹಾಡಬಲ್ಲ ಮಾರ್ಗಗಳಿಗಾಗಿ ಹುಡುಕಾಟಕ್ಕಿಳಿದವರು. ತಮ್ಮ ಆ ಪ್ರಯತ್ನವನ್ನು ವಿವರಿಸಿದ್ದು ಹೀಗೆ–

ADVERTISEMENT

‘ನಾನು ಅಮ್ಮನಾದಾಗ ನನ್ನ ಮುಂದೆ ಇದ್ದಿದ್ದು ಎರಡೇ ಆಯ್ಕೆ. ಅಮ್ಮ–ಅಜ್ಜಿ ಮನೆಯಲ್ಲೇ ತಯಾರಿಸಿದ ಲಂಗೋಟಿಗಳು ಹಾಗೂ ಬ್ರಾಂಡೆಡ್‌ ಡೈಪರ್‌ಗಳು. ಆದರೆ ಎರಡಕ್ಕೂ ಅವುಗಳದೇ ಆದ ಸಾಕಷ್ಟು ತೊಡಕುಗಳಿದ್ದವು. ಲಂಗೋಟಿಗಳನ್ನು ಪದೇ ಪದೇ ಬದಲಿಸಬೇಕಾದ ಸವಾಲು, ಇದರಿಂದ ಕಂದನಿಗೂ ದಣಿವು, ನನಗೂ ಆಯಾಸ. ಪದೇ ಪದೇ ಒದ್ದೆಯಾಗುವ ಲಂಗೋಟಿಗಳನ್ನು ಬದಲಾಯಿಸುವುದರಲ್ಲೇ ಬಾಣಂತಿಯರ ರಾತ್ರಿಗಳು ಕಳೆದು ಹೋಗುತ್ತವೆ. ಇದನ್ನು ನಿರ್ವಹಿಸುವುದು ಎಷ್ಟು ಕಷ್ಟ ಎನ್ನುವುದನ್ನು ತಿಳಿದುಕೊಂಡೆ. ಇನ್ನು ಡೈಪರ್‌, ಕಂದನ ಸೂಕ್ಷ್ಮ ಚರ್ಮದ ಮೇಲೆ ಕೆಂಪು ಗುಳ್ಳೆಗಳಾಗುವ, ತುರಿಕೆಯ ಕಿರಿಕಿರಿ. ಇದರಿಂದ ಮಗು ರಾತ್ರಿ ಸರಿಯಾಗಿ ನಿದ್ರೆಯನ್ನೇ ಮಾಡುತ್ತಿರಲಿಲ್ಲ. ಈ ಎರಡನ್ನೂ ಬಿಟ್ಟು ಮತ್ತೊಂದು ಆರಾಮದಾಯಕ ಆಯ್ಕೆ ನಮ್ಮ ಮುಂದಿಲ್ಲವೆ ಎನ್ನುವುದು ನನ್ನ ಮನದಲ್ಲಿನ ಪ್ರಶ್ನೆಯಾಗಿತ್ತು.’

ಬಾಣಂತಿಯರನ್ನು, ಸಣ್ಣ ಮಕ್ಕಳ ತಾಯಂದಿರನ್ನು ಕೇಳಿದಾಗ ಅನೇಕರು ಇದೊಂದು ಪರಿಹಾರವಿಲ್ಲದ ಸಮಸ್ಯೆ ಎನ್ನುವ ಅಳಲು ತೋಡಿಕೊಂಡರು. ಅವರೆಲ್ಲ ಇದರೊಂದಿಗೆ ಸೆಣಸಾಡುತ್ತಲೇ ಬಾಣಂತನವನ್ನು ಮುಗಿಸಿಕೊಂಡಿದ್ದರು. ಇನ್ನೂ ಕೆಲವರು ಮಕ್ಕಳು ಹಾಸಿಗೆ ಒದ್ದೆ ಮಾಡುವ ಅವಧಿಯನ್ನು ದಾಟುವವರೆಗೆ ಇದೇ ಸವಾಲನ್ನು ಎದುರಿಸುತ್ತಿದ್ದರು.

ಅದೂ ಅಲ್ಲದೆ, ಪ್ರತಿದಿನ ಕಸದ ಬುಟ್ಟಿಗೆ ಎಸೆಯುವ ಪ್ಲಾಸ್ಟಿಕ್‌ ಡೈಪರ್‌ಗಳ ಸಂಖ್ಯೆಯನ್ನು ಕಂಡು ನಾನು ಮತ್ತು ನನ್ನ ಪತಿ ನಿಜವಾಗಿಯೂ ಆತಂಕಕ್ಕೊಳಗಾದೆವು. ಇದಕ್ಕೆಲ್ಲಾ ಒಂದು ಪರಿಹಾರ ಯಾಕಿಲ್ಲ ಎನ್ನುವುದು ನಮ್ಮನ್ನು ಕಾಡಿದ ಬಹುದೊಡ್ಡ ಪ್ರಶ್ನೆಯಾಯಿತು. ಈ ವ್ಯವಸ್ಥೆಗೆ ಪರ್ಯಾಯವನ್ನು ಹುಡುಕಲಾರಂಭಿಸಿದೆ.

ಸೂಪರ್ ಬಾಟಮ್ಸ್

ಸಾಕಷ್ಟು ಶೋಧನೆಯ ನಂತರ ನನಗೆ ಅಮೆರಿಕದಂತಹ ದೇಶಗಳಲ್ಲಿ ಬಟ್ಟೆಯ ಡೈಪರ್‌ಗಳು ಈಗಾಗಲೇ ಜನಪ್ರಿಯವಾಗುತ್ತಿವೆ ಎನ್ನುವುದು ತಿಳಿಯಿತು. ವಿದೇಶಗಳಿಂದ ಅಂತಹ ಕೆಲವು ಡೈಪರ್‌ಗಳನ್ನು ತರಿಸಿಕೊಂಡೆ. ಆದರೆ ಅವು ಭಾರತೀಯ ಶಿಶುಗಳಿಗೆ. ಇಲ್ಲಿನ ವಾತಾವರಣಕ್ಕೆ ಅಷ್ಟು ಸರಿಯಾಗಿ ಹೊಂದುವುದಿಲ್ಲ ಎನ್ನುವುದು ಗೊತ್ತಾಯಿತು. ನಮ್ಮ ವಾತಾವರಣ, ನಮ್ಮ ಕಂದಮ್ಮಗಳ ಮೈಗುಣಕ್ಕೆ ಅನುಗುಣವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಿತ್ತು. ಅಷ್ಟೊತ್ತಿಗೆ ನನ್ನ ಹೆರಿಗೆಯ ರಜೆಗಳು ಮುಗಿದು ನಾನು ಕೆಲಸಕ್ಕೆ ವಾಪಸಾಗಿದ್ದೆ. ಮಗುವನ್ನು ನೋಡಿಕೊಳ್ಳುವುದರ ಜೊತೆಗೆ ಕಚೇರಿಯ ಜವಾಬ್ದಾರಿಯೂ ಸೇರಿತು. ಹಾಗೆಂದು ನಾನೇನು ಸುಮ್ಮನಾಗಲಿಲ್ಲ, ನನ್ನ ಪ್ರಯತ್ನವನ್ನು ಮುಂದುವರೆಸಿದೆ. ಅದಕ್ಕಾಗಿ ವಾರಾಂತ್ಯದ ಸಮಯವನ್ನು ಮೀಸಲಿಟ್ಟೆ.

ಬಿಸಾಡಬಹುದಾದ ಡೈಪರ್‌ನ ಕಾರ್ಯಕ್ಷಮತೆಯನ್ನು ಹೊಂದಿರುವ ಜೊತೆಗೆ ಲಂಗೋಟಿಯಂತೆ ಆರೋಗ್ಯಕ್ಕೆ ಅನುಕೂಲವಿರುವಂತಹ, ಭಾರತೀಯ ಶಿಶುಗಳಿಗೆ ಸೂಕ್ತವಾಗಿರುವ ಮತ್ತು ನೋಡಲೂ ಆಕರ್ಷಕವಾದ ಡೈಪರ್‌ ಅನ್ನು ಸಿದ್ಧಪಡಿಸುವುದು ನನ್ನ ಗುರಿಯಾಗಿತ್ತು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುದ್ದಾದ ಮುದ್ರಣಗಳೊಂದಿಗೆ ಹತ್ತಿ ಬಟ್ಟೆಯ ಡೈಪರ್‌ಗಳನ್ನು ತಯಾರಿಸಿದೆ. ನನ್ನ ಕೂಸಿನೊಂದಿಗೆ ಹುಟ್ಟಿಕೊಂಡ ಕನಸೊಂದು ‘ಸೂಪರ್ ಬಾಟಮ್ಸ್’ ಎನ್ನುವ ಆಕರ್ಷಕ ನಾಮಾಂಕಿತದೊಂದಿಗೆ ಹೀಗೆ ವಾಸ್ತವಕ್ಕೆ ಬಂದಿತ್ತು!

ಮೊದಲ ಪ್ರಯತ್ನವಾಗಿ ಅದನ್ನು ಸಣ್ಣ ಮಕ್ಕಳನ್ನು ಹೊಂದಿರುವ ನನ್ನ ಸ್ನೇಹಿತರಿಗೆ, ಬಂಧುಗಳಿಗೆ ನೀಡಿದೆ ಮತ್ತು ಕಡ್ಡಾಯವಾಗಿ ಅವರಿಂದ ಸಲಹೆ, ಸೂಚನೆ, ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದೆ. ಎಲ್ಲರೂ ಇಷ್ಟಪಟ್ಟರು, ತಮ್ಮ ಸ್ನೇಹಿತರಿಗೆ ನನ್ನ ಈ ಉತ್ಪನ್ನದ ಬಗ್ಗೆ ತಿಳಿಸಿ, ಕೊಳ್ಳಲು ಹೇಳಿದರು. ಸಣ್ಣಪುಟ್ಟ ತಿದ್ದುಪಡಿಗಳನ್ನು ತಿಳಿಸಿದರು. ಆಗ ನನ್ನ ಯೋಜನೆ ವಿಸ್ತಾರವಾಗಿ ಅರಳಲು ಪ್ರಾರಂಭಿಸಿತು. ನಾನು ಮತ್ತು ನನ್ನ ಪತಿ ಹೆಚ್ಚು ಹೆಚ್ಚು ಡೈಪರ್‌ಗಳನ್ನು ತಯಾರಿಸಿ ಪ್ಯಾಕ್ ಮಾಡುತ್ತಿದ್ದೆವು. ಪ್ರತಿ ಶನಿವಾರ ಅಂಚೆ ಕಚೇರಿಗೆ ಹೋಗಿ ಅವುಗಳನ್ನು ಕೇಳಿದವರಿಗೆ ಪೋಸ್ಟ್‌ ಮಾಡುತ್ತಿದ್ದೆವು.

ಇದೆಲ್ಲದರ ನಡುವೆ ನನಗೆ ನಮ್ಮ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವ ದಿಕ್ಕಿನೆಡೆಗೆ ಸಾಗಿದೆ ಎನ್ನುವುದನ್ನು ನೋಡಲು ಸಮಯಾವಕಾಶವಿರಲಿಲ್ಲ. ಅದನ್ನು ತಿಳಿದುಕೊಳ್ಳುವ ಮೊದಲೇ ನಮ್ಮ ಉತ್ಪನ್ನ ಬಿಸಿ ಕೇಕ್‌ಗಳಂತೆ ಮಾರಾಟವಾಗಲು ಪ್ರಾರಂಭಿಸಿತ್ತು. ನಮಗೇ ಗೊತ್ತಿಲ್ಲದೇ ನಾವು ಮಾರುಕಟ್ಟೆಯಲ್ಲಿ ನಿರ್ಣಾಯಕ ಸ್ಥಾನದಲ್ಲಿ ನಿಂತಿದ್ದೆವು!

ನಮ್ಮಲ್ಲಿ ಶಿಶುಗಳು ಜನಿಸಿದಾಗ ಅಜ್ಜಿಯರು/ಅಮ್ಮಂದಿರು ಮಾಡುವ ಮೊದಲ ಕೆಲಸ ಎಂದರೆ ಹಳೆಯ ಸೀರೆಗಳಿಂದ ಹಾಗೂ ಬೆಡ್‌ಶೀಟ್‌ಗಳಿಂದ ಲಂಗೋಟಿಗಳನ್ನು ಹೊಲಿಯುವುದು. 90ರ ದಶಕದಲ್ಲಿ ನಮ್ಮಲ್ಲಿಯೂ ಬಿಸಾಡಬಹುದಾದ ಡೈಪರ್‌ಗಳು ಲಗ್ಗೆ ಇಟ್ಟವು. ಅವುಗಳದ್ದೇ ಆದ ಅಡೆತಡೆಗಳ ಕಾರಣದಿಂದ ಅಂತಹ ಡೈಪರ್‌ಗಳನ್ನು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಮನೆಯಿಂದ ಹೊರಬಂದಾಗ ಅಥವಾ ರಾತ್ರಿಯಲ್ಲಿ ಮಾತ್ರ ಬಿಸಾಡಬಹುದಾದ ಡೈಪರ್‌ಗಳನ್ನು ಬಳಸುತ್ತಾರೆ. ಆದರೆ ಹೆಚ್ಚಿನ ಮಕ್ಕಳಿಗೆ ಇವುಗಳ ಬಳಕೆಯಿಂದ ಅಸಹನೆ, ತುರಿಕೆ, ದದ್ದುಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಲಂಗೋಟಿಗಳು, ಇವು ಹೀರಿಕೊಳ್ಳುವಿಕೆ ಅಥವಾ ಶುಷ್ಕ ಅನುಭವವನ್ನು ನೀಡುವುದಿಲ್ಲ. ಈ ಎರಡೂ ಡೈಪರ್‌ಗಳಿಂದ ಅತ್ಯುತ್ತಮ ಗುಣಗಳನ್ನು ಆಯ್ದುಕೊಂಡು ‘ಸೂಪರ್ ಬಾಟಮ್ಸ್’ ಡೈಪರ್‌ಗಳು ಹೊರಹೊಮ್ಮಿವೆ.

ಇವುಗಳನ್ನು ಪ್ರಮಾಣೀಕೃತ ಸಾವಯವ ಹತ್ತಿಯಿಂದ ತಯಾರಿಸಲಾಗುತ್ತದೆ. ಇದು ಶಿಶುಗಳಿಗೆ ಸುರಕ್ಷಿತ ಡೈಪರ್ ಆಗಿದ್ದು, ಬಿಸಾಡಬಹುದಾದ ಡೈಪರ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ರಾತ್ರಿಯಿಡೀ ಹೀರಿಕೊಳ್ಳುತ್ತದೆ. ಜಲನಿರೋಧಕವಾಗಿದೆ ಮತ್ತು ಮಗುವಿಗೆ ಶುಷ್ಕ ಅನುಭವವನ್ನು ನೀಡುತ್ತದೆ. ಆದರೆ ಮಗುವಿನ ಚರ್ಮಕ್ಕೂ, ಪರಿಸರಕ್ಕೂ ಯಾವುದೇ ರೀತಿಯ ಹಾನಿಯನ್ನುಂಟು ಮಾಡದು.

ಈ ಡೈಪರ್‌ಗಳನ್ನು ಮರುಬಳಕೆ ಮಾಡಬಹುದಾದ್ದರಿಂದ ಆರ್ಥಿಕವಾಗಿಯೂ ಅನುಕೂಲ. ಇದನ್ನು 300ಕ್ಕೂ ಹೆಚ್ಚು ಬಾರಿ ತೊಳೆದು ಮರುಬಳಿಕೆ ಮಾಡಬಹುದು. 3 ತಿಂಗಳಿಂದ 3 ವರ್ಷದ ಮಗುವಿನವರೆಗೂ ಉಪಯೋಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ನಮ್ಮ ಅನೇಕ ಗ್ರಾಹಕರು ಒಮ್ಮೆ ಖರೀದಿಸಿದ ಡೈಪರ್‌ಗಳನ್ನು ತಮ್ಮ ಎರಡನೇ ಮಕ್ಕಳಿಗೂ ಮರುಬಳಕೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಪೋಷಕರು ಡೈಪರ್‌ಗಾಗಿ ಮಾಡುವ ಶೇ 70ರಷ್ಟು ವೆಚ್ಛವನ್ನು ಉಳಿಸಬಹುದು.

ಒಂದು ಡೈಪರ್ ಭೂಮಿಯಲ್ಲಿ ಕೊಳೆಯಲು ಕನಿಷ್ಠ 500 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಆಘಾತಕಾರಿ. ಭಾರತದಲ್ಲಿ ಪ್ರತಿ ವರ್ಷ 3 ಕೋಟಿ ಶಿಶುಗಳು ಜನಿಸುತ್ತವೆ ಮತ್ತು ಪ್ರತಿ ಮಗುವಿಗೆ ಸುಮಾರು 5000 ಡೈಪರ್‌ಗಳನ್ನು ಬಳಸುತ್ತೇವೆ. ಅಂದರೆ ಭೂಮಿಯ ಒಡಲು ಸೇರಿ ಕೊಳೆಯದೇ ಉಳಿದ ಡೈಪರ್‌ಗಳ ಸಂಖ್ಯೆಯನ್ನು ನಾವು ಅಂದಾಜು ಮಾಡಬಹುದು. ನಮ್ಮ ಮಕ್ಕಳ ಆರೋಗ್ಯದ ಜೊತೆಗೆ ಭೂಮಿಯ ಆರೋಗ್ಯವನ್ನು ನಾವು ಕಡೆಗಣಿಸುತ್ತಿದ್ದೇವೆ. ತೊಳೆಯಬಹುದಾದ ಮತ್ತು ಮರುಬಳಕೆ ಮಾಡಬಹುದಾದ ಡೈಪರ್‌ಗಳ ಬಳಕೆಯಿಂದ ನಮ್ಮ ಕಂದನ ಚರ್ಮವನ್ನು ಕಾಪಾಡುವ ಜೊತೆಗೆ ನಾವು ವಾಸಿಸುವ ಪರಿಸರ ಹಾಗೂ ನಾವು ಜೀವಿಸುವ ಭೂಮಿಯ ಋಣವನ್ನೂ ತೀರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.