ADVERTISEMENT

ವಿದೇಶಿ ಹೂಡಿಕೆದಾರರಿಂದ ನವೋದ್ಯಮ ವಸಾಹತು!

ಸಂಜೀವ್ ಬಿಖ್‌ಚಂದಾನಿ ಆರೋಪ

ಪಿಟಿಐ
Published 6 ಡಿಸೆಂಬರ್ 2020, 19:31 IST
Last Updated 6 ಡಿಸೆಂಬರ್ 2020, 19:31 IST
ಉದ್ಯಮಿ ಸಂಜೀವ್ ಬಿಖ್‌ಚಂದಾನಿ
ಉದ್ಯಮಿ ಸಂಜೀವ್ ಬಿಖ್‌ಚಂದಾನಿ   

ನವದೆಹಲಿ: ದೇಶದ ನವೋದ್ಯಮಗಳಲ್ಲಿ ವಿದೇಶಿ ಹಣ ಹೂಡಿಕೆ ಆಗುತ್ತಿರುವುದು ಈಸ್ಟ್ ಇಂಡಿಯಾ ಕಂಪನಿಯ ಹೊಸ ರೂಪವಿದ್ದಂತೆ, ಅವು ಯಶಸ್ವಿ ನವೋದ್ಯಮಗಳನ್ನು ವಸಾಹತೀಕರಣಕ್ಕೆ ಒಳಪಡಿಸುತ್ತಿವೆ ಎಂದು ಉದ್ಯಮಿ ಸಂಜೀವ್ ಬಿಖ್‌ಚಂದಾನಿ ಹೇಳಿದ್ದಾರೆ.

ನವೋದ್ಯಮಗಳ ಬೆಳವಣಿಗೆಗೆ ಅಗತ್ಯವಿರುವ ಹಣ ಹೂಡಿಕೆ ಮಾಡುವುದಾಗಿ ಭರವಸೆ ನೀಡಿ ವಿದೇಶಿ ಹೂಡಿಕೆದಾರರು, ಕಂಪನಿಗಳ ನೆಲೆಯನ್ನು ವಿದೇಶಗಳಿಗೆ ಸ್ಥಳಾಂತರ ಮಾಡಿದ್ದಾರೆ. ಇದರಿಂದಾಗಿ ಅಂದಾಜು ₹ 17 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವು ವಿದೇಶಗಳಿಗೆ ವರ್ಗಾವಣೆ ಆಗಿದೆ ಎಂದು ಅವರು ಹೇಳಿದ್ದಾರೆ.

‘ಇಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಛಾಯೆ ಇರುವಂತಹ ಸ್ಥಿತಿ ಇದೆ – ಮಾರುಕಟ್ಟೆ ಭಾರತದ್ದು, ಗ್ರಾಹಕರು ಭಾರತದವರು, ಕೆಲಸ ಮಾಡುವವರು ಭಾರತ ದವರು, ಡೆವಲಪರ್‌ಗಳು ಭಾರತದವರು. ಆದರೆ, ಮಾಲೀಕತ್ವ ಮತ್ತು ಹೂಡಿಕೆ ಮಾತ್ರ ಸಂಪೂರ್ಣವಾಗಿ ವಿದೇಶಿಯರದ್ದು. ಬೌದ್ಧಿಕ ಆಸ್ತಿ ಮತ್ತು ದತ್ತಾಂಶವನ್ನು ದೇಶದಿಂದ ಹೊರಗೆ ಸಾಗಿಸಲಾಗುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

‘ಭಾರತದ ಮಾರುಕಟ್ಟೆ ಮತ್ತು ಭಾರತದ ಕಾರ್ಮಿಕರನ್ನು ಆಧರಿಸಿ ಕೆಲಸ ನಿರ್ವಹಿಸುತ್ತ, ಸಂಪತ್ತನ್ನು ಸಾಂಸ್ಥಿಕವಾಗಿಯೇ ಭಾರತದಿಂದ ಹೊರಗಡೆ ಒಯ್ಯುವುದು ಕಂಪನಿ ಆಡಳಿತದೊಂದಿಗೆ ಸಾಮ್ಯತೆ ಹೊಂದಿದೆ’ ಎಂದು ಅವರು ಹೇಳಿದ್ದಾರೆ. ಭಾರತದ ನೆಲದಲ್ಲಿ, ಭಾರತೀಯರು ಸೃಷ್ಟಿಸಿದ ಬೌದ್ಧಿಕ ಆಸ್ತಿಯನ್ನು ಜಾಗತಿಕ ಮಟ್ಟದಲ್ಲಿ ಬಳಸಿಕೊಂಡಾಗ ಸಿಗುವ ಲಾಭವನ್ನು ದೇಶದ ಹೊರಗಡೆಯೇ ಇಟ್ಟುಕೊಳ್ಳಲಾಗುತ್ತಿದೆ. ಭಾರತದ ಹೂಡಿಕೆ ದಾರರನ್ನು ಹೊರಗೆ ಇರಿಸಲಾಗುತ್ತಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ವಿದೇಶಿ ಹೂಡಿಕೆದಾರರನ್ನು ಸ್ವಾಗತಿಸಬೇಕು. ಆದರೆ, ದತ್ತಾಂಶ ಮತ್ತು ಬೌದ್ಧಿಕ ಆಸ್ತಿಯು ಭಾರತದ ಕಂಪನಿಯ ಕೈಯಲ್ಲೇ ಇರುವಂತೆ ಸರ್ಕಾರ ಮತ್ತು ಅದು ರೂಪಿಸುವ ನಿಯಮಗಳು ಹೇಳಬೇಕು. ದತ್ತಾಂಶ ಮತ್ತು ಬೌದ್ಧಿಕ ಆಸ್ತಿಯ ಮಾಲೀಕತ್ವವನ್ನು ವಿದೇಶಿ ಸಂಸ್ಥೆಗಳು ಹೊಂದುವಂತಿಲ್ಲ ಎಂದು ಹೇಳಬೇಕು. ಅದರಲ್ಲೂ ಮುಖ್ಯವಾಗಿ ಸೂಕ್ಷ್ಮ ವಲಯಗಳಿಗೆ ಸಂಬಂಧಿಸಿದಂತೆ ಈ ನಿಯಮ ಜಾರಿಯಾಗಬೇಕು’ ಎಂದಿದ್ದಾರೆ.

ಬಿಖ್‌ಚಂದಾನಿ ಅವರ ಇನ್ಫೊ ಎಡ್ಜ್‌ (ಇಂಡಿಯಾ) ಕಂಪನಿಯು ನೌಕ್ರಿ.ಕಾಂ, ಜೀವನ್‌ಸಾಥಿ.ಕಾಂ, 99ಏಕರ್.ಕಾಂ ವೆಬ್‌ಸೈಟ್‌ಗಳ ಮಾಲೀಕತ್ವ ಹೊಂದಿದೆ. ಕಳೆದ ಐದರಿಂದ ಏಳು ವರ್ಷಗಳ ಅವಧಿಯಲ್ಲಿ ಅಂದಾಜು 500ರಿಂದ ಒಂದು ಸಾವಿರ ನವೋದ್ಯಮಗಳು ತಮ್ಮ ನೆಲೆಯನ್ನು ವಿದೇಶಗಳಿಗೆ ವರ್ಗಾವಣೆ ಮಾಡಿಕೊಂಡಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.