ADVERTISEMENT

ಉದ್ಯಮ ಆರಂಭಕ್ಕೆ ಸ್ವಾವಲಂಬನೆಯೇ ಒತ್ತಾಸೆ

ಸ್ಫೂರ್ತಿಯ ಉದ್ಯಮಿ

ಎಂ.ಶ್ರೀನಿವಾಸ
Published 4 ನವೆಂಬರ್ 2020, 19:30 IST
Last Updated 4 ನವೆಂಬರ್ 2020, 19:30 IST
ಸುರಭಿ
ಸುರಭಿ   
""

ಪ್ರಯೋಗಶೀಲತೆಯು ಸುರಭಿ ಅವರಿಗೆ ಬಾಲ್ಯದಿಂದಲೇ ಮೈಗೂಡಿದೆ. ಇದು ಅವರನ್ನು ಸಹಜವಾಗಿ ಉದ್ಯಮಶೀಲತೆಯೆಡೆ ಸೆಳೆಯಿತು. ಧಾರವಾಡ ಮತ್ತು ಬೆಂಗಳೂರಿನಲ್ಲಿ ಬಾಲ್ಯ ಕಳೆದ ಸುರಭಿ ಅವರಿಗೆ ಪೋಷಕರು ಬಿರುಸುತನವನ್ನೂ ಸಹಾನುಭೂತಿಯನ್ನೂ ಕಲಿಸಿದರು. ಫಲವಾಗಿ, ಯಾವ ವಿಷಯದಲ್ಲಿಯೂ ಹೊಸದಕ್ಕೆ ಹೊಂದಿಕೊಳ್ಳಲು ಸುರಭಿಯವರಿಗೆ ಹಿಂಜರಿಕೆ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೇ, ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟವನ್ನು ಸುರಭಿ ಅಮೆಜಾನ್ ಮೂಲಕ ಮಾಡಿದ್ದರು. ಅವರ ಗೆಳತಿಯರು ಹೇಳುವಂತೆ, ಸುರಭಿ ಅವರಲ್ಲಿ ಬಿಸಿನೆಸ್ ಐಡಿಯಾಗಳಿಗೆ ಕೊರತೆ ಇರಲಿಲ್ಲ. ಆದರೆ ಉದ್ಯಮವನ್ನೇ ವೃತ್ತಿಯಾಗಿ ತೆಗೆದುಕೊಳ್ಳದಿರುವಂತೆ ಅವರೆಲ್ಲ ಸಲಹೆ ನೀಡಿದ್ದರು!

ಶ್ರೀನಿವಾಸ ರಾವ್‌

ಸುರಭಿ ಅವರ ಅಜ್ಜಿ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾರೆ. ಚೆನ್ನಾಗಿ ಅಡುಗೆ ಮಾಡುವ ಮೂಲಕವೇ ಅವರು ಕುಟುಂಬದ ಬಗ್ಗೆ ತಮಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ, ಅವರಿಗೆ ತಾವು ಸ್ವತಂತ್ರರಾಗಿ, ಸುಶಿಕ್ಷಿತರಾಗಿರಬೇಕಿತ್ತು ಎಂಬ ಬಯಕೆಯಿತ್ತು. ಅಡುಗೆಯ ಮೂಲಕವೇ ಅಂತಹ ಬಯಕೆಯನ್ನು ಈಡೇರಿಸುವ ಆಸೆ ಸುರಭಿ ಅವರದ್ದು.

ಮಹಿಳೆಯರು ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳು ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ, ಉತ್ಪನ್ನಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ನೆರವು ನೀಡುವುದಕ್ಕಾಗಿ ‘ಚ್ಯೂಡಾ’ ಹೆಸರಿನ ಆನ್‌ಲೈನ್ ವೇದಿಕೆಯೊಂದನ್ನು ಸುರಭಿ ಶುರು ಮಾಡಿದರು.

ADVERTISEMENT

ಸೂಕ್ತ ಬೆಂಬಲವೇ ಯಶಸ್ಸಿಗೆ ಮೂಲ ಎಂಬುದು ಸುರಭಿಯವರ ನಂಬಿಕೆ. ತಮ್ಮ ಪತಿ ಅರವಿಂದ ದೇವರಮನೆ ಅವರಿಂದ ಸುರಭಿ ಅವರಿಗೆ ಪ್ರೋತ್ಸಾಹ, ಬೆಂಬಲ ದೊರೆಯಿತು. ಅರವಿಂದ ಅವರನ್ನು ಸುರಭಿ ಪ್ರಥಮ ಬಾರಿಗೆ ಭೇಟಿ ಮಾಡಿದಾಗ, ಅವರು ತಮ್ಮ ತಾಯಿ ಮತ್ತು ಅತ್ತೆ ಸಿದ್ಧಪಡಿಸಿದ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದರು. ಸುರಭಿ ಅವರಿಗೆ ತಮ್ಮ ಅಜ್ಜಿಯಂತಹ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಇತ್ತು. ಹಾಗಾಗಿ, ಅರವಿಂದ ಅವರು ನಡೆಸುತ್ತಿದ್ದ ವಹಿವಾಟು, ಸುರಭಿ ಅವರ ಧ್ಯೇಯಕ್ಕೆ ಹೊಂದಿಕೆಯಾಗುವಂತೆ ಇತ್ತು. ಅರವಿಂದ ಅವರ ಬೆಂಬಲದೊಂದಿಗೆ ಸುರಭಿ, ಮೂವರು ಮಹಿಳೆಯರನ್ನು ನೇಮಿಸಿಕೊಂಡು ಒಂದು ತಿಂಗಳ ಅವಧಿಯಲ್ಲಿ ತಮ್ಮದೇ ಆದ ವೆಬ್‌ಸೈಟ್ ವಿನ್ಯಾಸ ಮಾಡಿದರು.

ಉದ್ಯಮಶೀಲತೆಯ ಹಾದಿಯಲ್ಲಿ ಅಡಚಣೆಗಳು ಯಾವಾಗಲೂ ಇರುತ್ತವೆ. ತಮ್ಮ ಜೊತೆ ಸೇರಿಕೊಳ್ಳಲು ಒಪ್ಪುವ ಮಹಿಳೆಯರನ್ನು ಹುಡುಕುವುದೇ ಸುರಭಿ ಅವರಿಗೆ ದೊಡ್ಡ ಸವಾಲಾಗಿತ್ತು. ಹಲವಾರು ಮಹಿಳೆಯರು ಸುರಭಿ ಅವರ ಆಲೋಚನೆಗಳನ್ನು ಒಪ್ಪಲು ನಿರಾಕರಿಸಿದರು. ಅವರಿಗೆ ಈ ಉದ್ಯಮದ ಯಶಸ್ಸಿನ ಕುರಿತು ಯಾವುದೇ ಭರವಸೆ ಇರಲಿಲ್ಲ. ಈ ಸಂದರ್ಭದಲ್ಲಿ ಸುರಭಿಯವರ ಕುಟುಂಬದ ಸದಸ್ಯರು ಮತ್ತು ಗೆಳೆಯರು ನೆರವಿಗೆ ಬಂದರು. ಗೆಳೆಯರ ಸಹಾಯದಿಂದ ಸುರಭಿ ತಮ್ಮ ವೆಬ್‌ ವೇದಿಕೆಯ ಮೂಲಕ ಖಾದ್ಯಗಳನ್ನು ಮಾರಾಟ ಮಾಡಲು ಪ್ರಥಮ ವ್ಯಕ್ತಿಯನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಈ ಮಹಿಳೆ ತಮ್ಮ ಗೆಳೆಯರಿಗೆ ಚಟ್ನಿಪುಡಿ ಮಾರಾಟ ಮಾಡುವ ಕೆಲಸದಲ್ಲಿ ಅದಾಗಲೇ ತೊಡಗಿದ್ದರು.

ಆ ಮಹಿಳೆಯ ಮನೆಗೆ ಭೇಟಿ ನೀಡಿ ಸುರಭಿ ಅವರು, ಚ್ಯೂಡಾ ಮೂಲಕ ಹೇಗೆ ಹೊಸ ಗ್ರಾಹಕರನ್ನು ಪಡೆಯಬಹುದು ಎಂಬು ದನ್ನು ವಿವರಿಸಿದರು. ಖಾದ್ಯಗಳನ್ನು ರವಾನೆ ಮಾಡುವುದು ಮತ್ತು ಪ್ಯಾಕೇಜ್ ಮಾಡುವುದರಲ್ಲಿ ಯಾವ ರೀತಿ ಸಹಾಯವನ್ನು ಪಡೆಯಬಹುದು ಎಂಬುದನ್ನೂ ಸುರಭಿ, ಅವರಿಗೆ ವಿವ ರಿಸಿದರು. ತಮ್ಮ ಜೊತೆ ಸೇರಿಕೊಳ್ಳಬಲ್ಲ ವ್ಯಕ್ತಿಗ
ಳನ್ನು ಸುರಭಿ ಅವರು ಫೇಸ್‌ಬುಕ್ ಮತ್ತು ‘ಜಾಬ್ಸ್‌ಫಾರ್‌ಹರ್’ ವೇದಿಕೆಯ ಮೂಲಕವೂ ಗುರುತಿಸಿದರು.

ಕೋವಿಡ್–19 ಸಾಂಕ್ರಾಮಿಕವು ‘ಚ್ಯೂಡಾ’ಗೆ ಉತ್ತಮ ವಹಿವಾಟಿನ ಅವಕಾಶಗಳನ್ನು ಒದಗಿಸಿತು. ಲಾಕ್‌ಡೌನ್ ಸಮಯದಲ್ಲಿ ಹಲವಾರು ಮಂದಿ ಬಗೆಬಗೆಯ ಖಾದ್ಯಗಳನ್ನು ಸವಿಯಲು ಇಚ್ಛಿಸಿದ ಪರಿಣಾಮ, ‘ಚ್ಯೂಡಾ’ಗೆ ಹೆಚ್ಚಿನ ಗ್ರಾಹಕರು ದೊರೆತರು. ಮನೆಯಲ್ಲಿ ಶುಚಿರುಚಿಯಾಗಿ ತಯಾರಿಸಿದ ಆಹಾರವನ್ನು ‘ಚ್ಯೂಡಾ’ ಒದಗಿಸುತ್ತಿದೆ. ಉದ್ಯಮಶೀಲತೆಯು ಸುರಭಿ ಅವರ ಪ್ರಕಾರ ಈಜು ಇದ್ದಂತೆ. ಪ್ರಾಯೋಗಿಕ ಅನುಭವವಿಲ್ಲದೆ, ನೀರಿಗಿಳಿಯದೆ ಈಜಲು ಸಾಧ್ಯವಿಲ್ಲ. ಉದ್ಯಮಶೀಲತೆಯಲ್ಲಿ ಎದುರಾ ಗುವ ಸವಾಲುಗಳು ಈಜುವಾಗ ಬರುವ ಅಲೆಗಳಂತೆ. ಸೂಕ್ತ ಬೆಂಬಲವಿದ್ದಲ್ಲಿ ಮಾತ್ರ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಬಹುದು ಎಂಬುದು ಅವರ ಅನಿಸಿಕೆ.

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.