ADVERTISEMENT

ಸ್ಫೂರ್ತಿಯ ಉದ್ಯಮಿ: ನಿಧಿ ಅವರ ಹೂವಿನ ಹಾದಿ

ಎಂ.ಶ್ರೀನಿವಾಸ
Published 6 ಜನವರಿ 2021, 19:31 IST
Last Updated 6 ಜನವರಿ 2021, 19:31 IST
ನಿಧಿ ಗುಪ್ತಾ
ನಿಧಿ ಗುಪ್ತಾ   

‘ಶೇಡ್ಸ್‌ ಆಫ್‌ ಸ್ಪ್ರಿಂಗ್‌’ ಬೆಂಗಳೂರಿನ ಪುಷ್ಪ ಕಂಪನಿ. ರೈತರ ತೋಟಗಳಿಂದ ನೇರವಾಗಿ 500ಕ್ಕೂ ಹೆಚ್ಚು ಮಾದರಿಯ ಹೂವುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ ಇದು. ದೇಶದ ವಿವಿಧ ಭಾಗಗಳ ಬೆಳೆಗಾರರಿಂದ ಈ ಕಂಪನಿ ಹೂವು ಸಂಗ್ರಹಿಸುತ್ತದೆ. ಅಲ್ಲದೆ, ಹೂವು ಬೆಳೆಗಾರರೊಂದಿಗೆ ಪಾಲುದಾರಿಕೆಯಲ್ಲಿ ವಿಶೇಷ ಮಾದರಿಯ ಹೂವುಗಳನ್ನು ಬೆಳೆಯುತ್ತಿದೆ.

‘ನಾನು ಶೇಡ್ಸ್‌ ಆಫ್‌ ಸ್ಪ್ರಿಂಗ್‌ ಶುರು ಮಾಡಿದ್ದು 2019ರಲ್ಲಿ. ವಹಿವಾಟು ನಿಧಾನವಾಗಿ ಬೆಳೆಯುತ್ತಿದ್ದಾಗಲೇ ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ವಿಶೇಷ ರೀತಿಯ ಹೂವುಗಳನ್ನು ಪೂರೈಸುವ ಚಂದಾ ಆಧಾರಿತ ಸೇವೆ ಆರಂಭಿಸಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ತಾಜಾ ಹೂವು ಪೂರೈಸುವುದು ಇದರ ಉದ್ದೇಶವಾಗಿತ್ತು. ಕೇವಲ ಎರಡು ವರ್ಷಗಳಲ್ಲಿ ಕಂಪನಿಗೆ ಐದು ಸಾವಿರಕ್ಕೂ ಹೆಚ್ಚು ಗ್ರಾಹಕರು ಸಿಕ್ಕಿದರು. ದೇಶದಲ್ಲಿ ಅತ್ಯುತ್ತಮವಾಗಿ ಹೂವು ಅಲಂಕಾರ ಮಾಡುವವರ ಪೈಕಿ ಹಲವರು ನಮ್ಮ ತಂಡದಲ್ಲಿದ್ದಾರೆ. ಇವರು ಅತ್ಯಾಕರ್ಷಕ ಗುಚ್ಛಗಳನ್ನು ಕೈಯಲ್ಲಿಯೇ ಸಿದ್ಧಪಡಿಸುತ್ತಾರೆ’ ಎಂದು ‘ಶೇಡ್ಸ್‌ ಆಫ್‌ ಸ್ಪ್ರಿಂಗ್‌’ನ ಸ್ಥಾಪಕಿ ನಿಧಿ ಗುಪ್ತಾ ಹೇಳುತ್ತಾರೆ.

ಚಂದಾ ಆಧಾರದಲ್ಲಿ ಹೂವು ಪೂರೈಕೆ ಹಾಗೂ ಉಡುಗೊರೆ ರೂಪದಲ್ಲಿ ಹೂವು ನೀಡುವಲ್ಲಿ ಬೆಂಗಳೂರಿನಲ್ಲಿ ಶೇಡ್ಸ್‌ ಆಫ್‌ ಸ್ಪ್ರಿಂಗ್‌ ಈಗ ಅಗ್ರಮಾನ್ಯ ಬ್ರ್ಯಾಂಡ್‌ ಆಗಿದೆ ಎಂದು ನಿಧಿ ಹೇಳುತ್ತಾರೆ.

ADVERTISEMENT

ಭಾರತದಲ್ಲಿ ವಿವಿಧ ಬಗೆಯ ತಾಜಾ ಹೂವುಗಳನ್ನು ದೊಡ್ಡ ಪ್ರಮಾಣದಲ್ಲಿ ಸರಿಯಾದ ಬೆಲೆಯಲ್ಲಿ ಸಂಗ್ರಹಿಸುವುದು ಸುಲಭದ ಮಾತಲ್ಲ. ಅಲ್ಲದೆ, ಸ್ಥಳೀಯವಾಗಿ ಹೂವಿನ ವ್ಯಾಪಾರಿಗಳಲ್ಲಿ ಮತ್ತು ಆನ್‌ಲೈನ್‌ ಮಾರುಕಟ್ಟೆಗಳಲ್ಲಿ ದೊರೆಯುವ ಹೂವುಗಳು ಎಲ್ಲ ಸಂದರ್ಭಗಳಲ್ಲೂ ತಾಜಾ ಆಗಿರುವುದಿಲ್ಲ. ಗ್ರಾಹಕರಿಗೆ ಸಾಮಾನ್ಯವಾಗಿ ಎಂಟರಿಂದ ಹತ್ತು ಬಗೆಯ ಹೂವುಗಳು ಮಾತ್ರ ಸಿಗುತ್ತವೆ, ಅದೂ ಅಧಿಕ ಬೆಲೆಯಲ್ಲಿ. ಆದರೆ, ಶೇಡ್ಸ್‌ ಆಫ್‌ ಸ್ಪ್ರಿಂಗ್‌ ಈ ವಿಚಾರದಲ್ಲಿ ತುಸು ಭಿನ್ನ. ‘ದೇಶದಾದ್ಯಂತ ನಾವು ಹೂವು ಬೆಳೆಗಾರರೊಂದಿಗೆ ನೆರ ಪಾಲುದಾರಿಕೆ ಹೊಂದಿರುವುದರಿಂದ 500ಕ್ಕೂ ಹೆಚ್ಚು ಮಾದರಿಯ ಹೂವುಗಳನ್ನು, ಕಟಾವು ಆದ 24ರಿಂದ 48 ಗಂಟೆಗಳಲ್ಲಿ ಸಂಗ್ರಹಿಸಿ, ಪುಷ್ಪೋದ್ಯಮದಲ್ಲೇ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ತಲುಪಿಸುತ್ತೇವೆ. ಇದರಿಂದಾಗಿ ಗ್ರಾಹಕರು ನಮ್ಮ ಬಗ್ಗೆ ಇತರರಿಗೂ ತಿಳಿಸುತ್ತಿದ್ದಾರೆ. ಕಳೆದ ಒಂದೇ ವರ್ಷದಲ್ಲಿ ನಮ್ಮ ವಹಿವಾಟು ಎಂಟು ಪಟ್ಟು ಹೆಚ್ಚಾಗಿದೆ’ ಎಂದು ನಿಧಿ ಗುಪ್ತಾ ಖುಷಿಯಿಂದ ಹೇಳುತ್ತಾರೆ.

ಉದ್ಯಮಿಯಾಗಿ ತಮ್ಮ ಆಸೆಯನ್ನು ಹಂಚಿಕೊಳ್ಳುವ ನಿಧಿ ಅವರು, ಕಂಪನಿಯನ್ನು ದೇಶದ ಅಗ್ರಮಾನ್ಯ ಹೂವು ಶಾಪಿಂಗ್‌ ತಾಣವನ್ನಾಗಿಸುವ ಬಯಕೆ ಇದೆ ಎನ್ನುತ್ತಾರೆ. ಜನ ಒಂದೇ ತಾಣದ ಮೂಲಕ, ದೇಶದ ವಿವಿಧ ಭಾಗಗಳಲ್ಲಿ ಬೆಳೆದ ಬಗೆಬಗೆಯ ತಾಜಾ ಹೂವುಗಳನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸುವಂತಾಗಬೇಕು ಎನ್ನುತ್ತಾರೆ. ತಮ್ಮ ಸಹ ಉದ್ಯಮಿಗಳಿಗೆ ಅವರು ಹೇಳುವ ಕಿವಿ ಮಾತು ಇದು: ‘ಉದ್ಯಮ ಮುನ್ನಡೆಸುವುದು ಕಠಿಣ. ನೀವು ಗಂಭೀರವಾಗಿದ್ದರೆ ಮಾತ್ರ ಮುನ್ನುಗ್ಗಿ. ಪ್ರಾಮಾಣಿಕ ಪ್ರಯತ್ನ ಮಾಡಿ. ಮುಂದೆ ಎಲ್ಲವೂ ನೀವಂದುಕೊಂಡಂತೆಯೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.