ADVERTISEMENT

‘ಮೈಸೂರು ಆರ್ಗ್ಯಾನಿಕ್‌’ನ ಯಶಸ್ಸು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:30 IST
Last Updated 17 ಡಿಸೆಂಬರ್ 2019, 19:30 IST
ನಿರ್ದೇಶಕ ರಾಘವೇಂದ್ರ ಕೆ.
ನಿರ್ದೇಶಕ ರಾಘವೇಂದ್ರ ಕೆ.   

ಮೈ ಸೂರಿನ ಉದ್ಯಮಿಗಳಾದ ಕೆ.ರಾಘವೇಂದ್ರ ಮತ್ತು ರಸಾಯನ ಶಾಸ್ತ್ರದಲ್ಲಿ ಪಿಎಚ್. ಡಿ ಪದವೀಧರರಾದ ಡಾ.ಮಾರುತಿ ಅವರು ತಮ್ಮ ಸ್ನೇಹಿತರ ಜೊತೆಗೂಡಿ 2010 ರೈತರಿಗೆ ನೆರವಿಗಾಗಿ ಆರಂಭಿಸಿದ್ದ ‘Mysore organic farms pvt ltd’ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ಸಿನ ದಾಪುಗಾಲು ಹಾಕುತ್ತಿದೆ.

ಎರಡೂವರೆ ಎಕರೆ ಪ್ರದೇಶದಲ್ಲಿ ಅತ್ಯಂತ ಸುಸಜ್ಜಿತವಾದ ಅಂಗಾಂಶ ಕೃಷಿ ಪ್ರಯೋಗಾಲಯ, ನುರಿತ ತಜ್ಞರು, ಹಸಿರು ಮನೆ, ಹಣ್ಣು ಮಾಗಿಸುವ ಹಾಗೂ ಸಂಗ್ರಹಿಸಿ ಕಾಪಿಡುವ ಶೈತ್ಯಾಗಾರ ಹೊಂದಿದೆ. ಇವರ ಪ್ರಯೋಗಾಲಯ ಕೇಂದ್ರ ಸರ್ಕಾರದ ಜೈವಿಕ ವಿಜ್ಞಾನ ಕೇಂದ್ರದಿಂದ ಮಾನ್ಯತೆ ಕೂಡಾ ಪಡೆದಿದೆ. ಒಟ್ಟಿಗೇ ಐವತ್ತು ಲಕ್ಷ ಗಿಡಗಳನ್ನು ತಯಾರಿಸುವುದರ ಜೊತೆಗೆ ಒಂದೇ ಬಾರಿಗೆ ಹದಿನೈದು ಟನ್ ಹಣ್ಣುಗಳನ್ನು ಮಾಗಿಸುವ ಮತ್ತು ಕಾಪಿಡುವ ಶೈತ್ಯಾಗಾರದ ಮೂಲ ಸೌಕರ್ಯ ಹೊಂದಿರುವುದು ಇದರ ಹೆಗ್ಗಳಿಕೆಯಾಗಿದೆ.

ಕಂಪನಿಯ ಸಹ ಸ್ಥಾಪಕರು ಕೃಷಿ ರಂಗಕ್ಕೆ ಪಾದಾರ್ಪಣೆ ಮಾಡಿದ ಹೊಸತರಲ್ಲಿ ಖಾಸಗಿ ಕೃಷಿ ಕಂಪನಿಯಿಂದ ಗಿಡ ಖರೀದಿಸಿ, ಕೃಷಿ ಮಾಡಲು ಆರಂಭಿಸಿದ್ದರು. ಖರೀದಿಸಿ ತಂದ ಗಿಡಗಳಲ್ಲಿ ಶೇ 70ರಷ್ಟು ನೆಲ ಕಚ್ಚಿದ್ದವು. ಈ ಬಗ್ಗೆ ಕಂಪನಿಯನ್ನು ಸಂಪರ್ಕಿಸಿದಾಗ ಅವರು ಸಮರ್ಪಕ ಉತ್ತರ ಕೊಡದೇ ನುಣುಚಿಕೊಂಡರು. ಇದರಿಂದ ಕಂಗಾಲಾದ ಇವರು, ತಮಗಾದ ಮೋಸ ಬೇರೆ ಯಾವ ರೈತರಿಗೂ ಆಗಬಾರದೆಂದು ನಿಶ್ಚಯಿಸಿ ಈ ಕ್ಷೇತ್ರಕ್ಕೆ ಬರುತ್ತಾರೆ.

ADVERTISEMENT

ಅಂಗಾಂಶ ಕೃಷಿಯಿಂದ ತಯಾರಾದ ಅನೇಕ ವಿಧದ ಬಾಳೆ ಗಿಡಗಳು ಇವರ ಬಳಿ ಲಭ್ಯ ಇವೆ. ಮಧುರಂಗ, ನೇಂದ್ರ, ಏಲಕ್ಕಿ, G9 ಪಚ್ಚಬಾಳೆ, ಸುಗಂಧ ಬಾಳೆ ಜೊತೆಗೆ ನಂಜನಗೂಡಿನ ರಸಬಾಳೆಯೂ ಸೇರಿದಂತೆ ಒಟ್ಟು ಏಳು ವಿಧದ ಬಾಳೆ ಗಿಡಗಳು ಇವರ ಬಳಿ ದೊರೆಯುತ್ತವೆ. ಭೌಗೋಲಿಕ ಸೂಚಿಕೆ ‘ಜಿಐ’ ಮಾನ್ಯತೆ ಹೊಂದಿರುವ ನಂಜನಗೂಡು ರಸಬಾಳೆ ಗಿಡಗಳು ಇವರಲ್ಲಿ ಮಾತ್ರ ಲಭ್ಯ ಇವೆ.
ತುಂಬಾ ಅಪರೂಪದ ತಳಿಯಾದ ಸುಗಂಧ ಬಾಳೆಯ ತಳಿಯನ್ನೂ ಕೂಡಾ ಇವರು ತಯಾರಿಸುತ್ತಿದ್ದಾರೆ. ಹಣ್ಣು ಉತ್ತಮ ಸುಗಂಧ ಹೊಂದಿರುವುದು ಈ ತಳಿಯ ವಿಶೇಷ. ಇವೆಲ್ಲವೂ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

ಸಾಮಾನ್ಯ ಬಾಳೆ ಗಿಡಗಳಿಗೆ ಹೋಲಿಸಿದರೆ ಅಂಗಾಂಶ ಕೃಷಿಯ ಗಿಡಗಳು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು , ತಾಯಿ ಗಿಡದ ಮೂಲ ಗುಣಗಳನ್ನು ಹೊಂದಿರುತ್ತವೆ. ಆದ್ದರಿಂದ ಬೆಳೆಗಾರರಿಗೆ ನಷ್ಟದ ಸಂಭವ ಕಡಿಮೆ.

ಬಾಳೆಯ ಹೊರತಾಗಿ ಅಂಗಾಂಶ ಕೃಷಿಯ ವೆನಿಲಾ, ಮೆಣಸು, ಬಿದಿರು, ಪಪಾಯ ಮತ್ತು ಹಲವಾರು ರೀತಿಯ ಆರ್ಕಿಡ್ಸ್ ಮತ್ತು ಅಲಂಕಾರಿಕ ಸಸ್ಯಗಳ ಮೇಲೆ ಪ್ರಯೋಗ ನಡೆಯುತ್ತಿದ್ದು ಸದ್ಯದಲ್ಲೇ ಈ ಗಿಡಗಳೂ ಕೂಡಾ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

ಭಾರತೀಯ ತೋಟಗಾರಿಕೆ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡು ಮೆಣಸಿನ ತಳಿಗಳನ್ನು ಅಭಿವೃದ್ಧಿ ಮಾಡುವ ಕೆಲಸವೂ ಕೂಡ ಇವರ ಪ್ರಯೋಗಾಲಯದಲ್ಲಿ ನಡೆಯುತ್ತಿದೆ. ಇವರು ಪ್ರಯೋಗ ನಡೆಸುತ್ತಿರುವ ಬಿದಿರು 'ಟುಲ್ಡ' ಜಾತಿಯದ್ದಾಗಿದ್ದು ಮುಳ್ಳುಗಳು ಇಲ್ಲದಿರುವುದು ಈ ಬಿದಿರಿನ ವಿಶೇಷವಾಗಿದೆ. ಬಹುತೇಕ ಬಿದಿರನ ತಳಿಗಳು ಒಳಗೆ ಟೊಳ್ಳಾಗಿರುತ್ತವೆ. ಆದರೆ 'ಟುಲ್ಡ' ಜಾತಿಯ ಬಿದಿರು ಒಳಗೆ ಕೂಡಾ ಗಟ್ಟಿಯಾಗಿದ್ದು ಗಿಣ್ಣಿನಿಂದ ಗಿಣ್ಣಿಗೆ 13 ರಿಂದ 15 ಇಂಚು ಅಂತರ ಹೊಂದಿದೆ. ಐದು ವರ್ಷಗಳ ನಂತರ ಕಟಾವಿಗೆ ಸಿದ್ಧವಾಗುವ ಈ ಬಿದಿರು ತಳಿ ರೈತರಿಗೆ ಲಾಭ ತಂದುಕೊಡುವ ನಿರೀಕ್ಷೆಯಿದೆ.

ಕೇವಲ ಬಾಳೆ ಗಿಡಗಳನ್ನು ಮಾರಿ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುವ ಅನೇಕ ಕೃಷಿ ಕಂಪನಿಗಳ ನಡುವೆ ವಿಭಿನ್ನವಾಗಿ ನಿಲ್ಲುತ್ತದೆ ಮೈಸೂರು ಆರ್ಗಾನಿಕ್‌. ಇವರ ಬಳಿ ಗಿಡಗಳನ್ನು ಖರೀದಿಸಿದ ನಂತರ ತಜ್ಞರ ತಂಡವೊಂದು ರೈತರ ಜಮೀನಿಗೆ ಹೋಗಿ ಅವರಿಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ. ಭೂ ವಿನ್ಯಾಸ, ಬೆಳೆಗಳ ನಡುವಣ ಅಂತರ, ಬಳಸಬೇಕಾದ ಔಷಧಿ, ಗೊಬ್ಬರಗಳ ಮಾಹಿತಿ, ನೀರಿನ ಸಮರ್ಥ ನಿರ್ವಹಣೆ, ಬಂಡವಾಳ ಹೂಡಿಕೆ ಮತ್ತು ಮಾರುಕಟ್ಟೆ ಬೆಂಬಲದವರೆಗೂ ಮೈಸೂರು ಆರ್ಗಾನಿಕ್ಸ್ ರೈತರಿಗೆ ಮಾರ್ಗದರ್ಶನ ನೀಡುತ್ತದೆ.

ರೈತರು ಶ್ರಮ ಹಾಕಿ ಬೆಳೆದ ನಂತರ ಮಾರುಕಟ್ಟೆ ಸಿಗದೆ ಕಷ್ಟ ಪಡುತ್ತಿರುವುದನ್ನು ನೋಡಿ, ಇವರೇ ರೈತರಿಂದ ಖರೀದಿಸುವ ಸೌಲಭ್ಯ ಕಲ್ಪಿಸುವ ಸಲುವಾಗಿ ‘ಮೈಸೂರು ಪುಷ್ಟಿ ಆಗ್ರೊ ಪ್ರಾಡಕ್ಟ್’ ಹೆಸರಿನ ಮತ್ತೊಂದು ಕಂಪನಿ ಆರಂಭಿಸಿದ್ದಾರೆ. ಇವರಿಂದ ಸಸಿ ಪಡೆದ ರೈತರ ಜಮೀನಿಗೆ ಹೋಗಿ ಅವರ ಬೆಳೆಯನ್ನು ಇವರೇ ಖರೀದಿಸುತ್ತಾರೆ. ಇವರಿಂದ ಸಸಿ ಕೊಂಡವರು ಇವರಿಗೇ ಮಾರಬೇಕೆಂಬ ನಿಯಮವೇನೂ ಇಲ್ಲ. ಅದು ರೈತರ ಆಯ್ಕೆಗೆ ಬಿಟ್ಟದ್ದು.

ಇವರಿಗೆ ಮಾರಲಿಚ್ಚಿಸುವವರ ಜಮೀನಿಗೆ 'ಮೈಸೂರು ಪುಷ್ಟಿ ಆಗ್ರೊ ಪ್ರಾಡಕ್ಟ್ ' ತಂಡ ಹೋಗಿ ಕಟಾವು ಮಾಡಿ, ರೈತರ ಎದುರೇ ತೂಕ ಮಾಡಿ ಅಂದಿನ ‘ಹಾಪ್‌ಕಾಮ್‌’ ಬೆಲೆಗೆ ಖರೀದಿಸುತ್ತಾರೆ. ಹಣವನ್ನು ನೇರ ಬೆಳೆಗಾರನ ಖಾತೆಗೆ ಜಮಾ ಮಾಡುತ್ತಾರೆ.
ಸಾಗಾಣಿಕೆ ವೆಚ್ಚವನ್ನು ಮಾತ್ರ ರೈತರು ಭರಿಸಬೇಕಾಗುತ್ತದೆ. ರೈತರ ಎದುರೇ ಈ ಎಲ್ಲ ಚಟುವಟಿಕೆಗಳು ನಡೆಯುವುದರಿಂದ ಯಾವ ರೀತಿಯಿಂದಲೂ ರೈತರಿಗೆ ಮೋಸವಾಗುವ ಸಂಭವ ಇರುವುದಿಲ್ಲ. ಬೆಳೆಗೆ ಅನಾಯಾಸವಾಗಿ ಮಾರುಕಟ್ಟೆ ದೊರಕುವುದರಿಂದ ರೈತರ ನೆಮ್ಮದಿ ಹೆಚ್ಚಿದೆ.

ಖರೀದಿಸಿದ ಬಾಳೆಯನ್ನು ಹಣ್ಣು ಮಾಗಿಸುವ ಕೋಣೆಗಳಲ್ಲಿ ಮಾಗಿಸುತ್ತಾರೆ. ಇದಕ್ಕಾಗಿ ಇವರು ಇಥಿಲಿನ್ ಬಳಸುತ್ತಾರೆ. ಈ ವಿಧಾನ ಸುರಕ್ಷಿತವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಮಾಗಿಸುವ ಮತ್ತು ಕಾಪಿಡುವ ಶೈತ್ಯಾಗಾರಗಳು ಸಂಪೂರ್ಣ ಗಣಕೀತೃತವಾಗಿವೆ. ರೈತರಿಂದ ಕೊಂಡ ಬಾಳೆಯನ್ನು ಸೂಪರ್ ಮಾರ್ಕೆಟ್ಟಿಗೆ ಮಾರುತ್ತಾರೆ. ಸದ್ಯಕ್ಕೆ ಪ್ರತಿದಿನ ಆರು ಟನ್ಗಳಷ್ಟು ಬಾಳೆ ವ್ಯಾಪಾರ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಿನಕ್ಕೆ ಇಪ್ಪತ್ತು ಟನ್ ವಹಿವಾಟು ನಡೆಸುವುದು ಇವರ ಗುರಿಯಾಗಿದೆ.

ಬರೀ ಹಣ್ಣು ಮಾಗಿಸುವ ಉದ್ದೇಶ ಇದ್ದವರೂ ಕೂಡಾ ಮೈಸೂರು ಆರ್ಗಾನಿಕ್‌ ಸಂಪರ್ಕಿಸಬಹುದು. ಮುಂದಿನ ದಿನಗಳಲ್ಲಿ ಬಾಳೆಯ ಮೌಲ್ಯವರ್ಧನೆ ಮಾಡಿ ಅನೇಕ ಉತ್ಪನ್ನಗಳನ್ನು ತಯಾರಿಸುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಸಸಿ ಕೊಳ್ಳಲು ಬರುವ ರೈತರಿಗೆ ಪೂರ್ಣಾವಧಿ ಸಹಕಾರ, ಮಾರ್ಗದರ್ಶನದ ಜೊತೆಗೆ ಮಾರುಕಟ್ಟೆಯನ್ನೂ ಒದಗಿಸುತ್ತಿರುವುದು ಮೈಸೂರು ಆರ್ಗಾನಿಕ್‌ನ ಮತ್ತೊಂದು ಹೆಗ್ಗಳಿಕೆಯಾಗಿದೆ.

ಬಾಳೆ ಹೊರತಾಗಿ ಇತರ ಹಣ್ಣಿನ ಗಿಡಗಳಿಗೂ ರೈತರಿಂದ ಬೇಡಿಕೆ ಕಂಡು ಬರುತ್ತಿತ್ತು. ಇದಕ್ಕೆ ಉತ್ತರವಾಗಿ ‘ವನಸಿರಿ’ ಹೆಸರಿನಲ್ಲಿ ಮತ್ತೊಂದು ಕಂಪನಿ ವನಸಿರಿಯನ್ನು 2017ರಲ್ಲಿ ಆರಂಭಿಸಲಾಗಿದೆ. ಇದೊಂದು ನರ್ಸರಿಯಾಗಿದ್ದು ಇಲ್ಲಿ ಮಾವು, ಹಲಸು, ಸೀಬೆ, ಸಪೋಟ ಸೇರಿದಂತೆ ಇನ್ನೂ ಅನೇಕ ಜಾತಿಯ ಹಣ್ಣಿನ ಗಿಡಗಳು ದೊರೆಯುತ್ತವೆ. ಹೊಸ ಉದ್ಯಮಕ್ಕೆ ಕಾಲಿಟ್ಟು ಹಲವಾರು ಸವಾಲುಗಳು ಮತ್ತು ಸೋಲುಗಳನ್ನು ಎದುರಿಸಿದ ಕಂಪನಿಯು ಒಂಬತ್ತು ವರ್ಷಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ತನ್ನ ಉದ್ದೇಶಿತ ಗುರಿ ತಲುಪಿ ಯಶಸ್ಸಿನ ಕಡೆ ಮುನ್ನುಗ್ಗುತ್ತಿದೆ.

ಗಿಡ ಬೇಕಾದವರು ಮೈಸೂರು ಆರ್ಗಾನಿಕ್‌ ಕಂಪನಿಯನ್ನು ನೇರವಾಗಿ ಸಂಪರ್ಕಿಸಬಹುದು. ಮುಂಗಡ ಕಾಯ್ದಿರಿಸುವ ವ್ಯವಸ್ಥೆಯೂ ಇದೆ.ಮಾಹಿತಿಗೆ: 98801 11593 / 95608 33311 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.