ADVERTISEMENT

‘ತಪ್ಪು ವರದಿ’ಗೆ ಅದಾನಿ ಕಂಪನಿಗಳ ಷೇರು ಮೌಲ್ಯ ಇಳಿಕೆ

‘ಖಾತೆಗಳ ಮುಟ್ಟುಗೋಲು ವರದಿ ಸುಳ್ಳು’

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 22:58 IST
Last Updated 14 ಜೂನ್ 2021, 22:58 IST

ನವದೆಹಲಿ (ಪಿಟಿಐ): ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಕೆಲವು ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಖಾತೆಗಳನ್ನು ನ್ಯಾಷನಲ್‌ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಸ್ಥಗಿತಗೊಳಿಸಿದೆ ಎನ್ನುವ ವರದಿಗಳಿಂದಾಗಿ ಕಂಪನಿಗಳ ಷೇರುಗಳ ಮೌಲ್ಯವು ಸೋಮವಾರದ ವಹಿವಾಟಿನಆರಂಭದಲ್ಲಿ ಗರಿಷ್ಠ ಶೇಕಡ 25ರವರೆಗೂ ಕುಸಿದಿತ್ತು.

ಮುಂಬೈ ಷೇರುಪೇಟೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಷೇರು ಶೇ 24.99ರಷ್ಟು ಕುಸಿತ ಕಂಡು ಪ್ರತಿ ಷೇರಿನ ಬೆಲೆ ₹ 1,201.10ಕ್ಕೆ ಇಳಿಕೆ ಆಗಿತ್ತು. ವಹಿವಾಟಿನ ಅಂತ್ಯದ ವೇಳೆಗೆ ಇಳಿಕೆ ಪ್ರಮಾಣವು ಶೇ 6.26ಕ್ಕೆ ಬಂದು ಪ್ರತಿ ಷೇರಿನ ಬೆಲೆ ₹ 1,501.25ಕ್ಕೆ ತಲುಪಿತು. ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಜೋನ್ ಷೇರು ಮೌಲ್ಯ ಶೇ 18.75ರಷ್ಟು ಕುಸಿದು ₹ 681.50ಕ್ಕೆ ತಲುಪಿತ್ತು. ದಿನದ ಅಂತ್ಯಕ್ಕೆ ಕುಸಿತವು ಶೇ 8.36ರಷ್ಟಾಗಿ, ಷೇರು ಬೆಲೆ ₹ 768.70ಕ್ಕೆ ತಲುಪಿತು.

ಅದಾನಿ ಗ್ರೀನ್ ಎನರ್ಜಿ ಶೇ 4.13ರಷ್ಟು, ಅದಾನಿ ಟೋಟಲ್ ಗ್ಯಾಸ್ ಹಾಗೂ ಅದಾನಿ ಟ್ರಾನ್ಸ್‌ಮಿಷನ್ ತಲಾ ಶೇ 5ರಷ್ಟು, ಅದಾನಿ ಪವರ್ ಶೇ 4.99ರಷ್ಟು ಇಳಿಕೆ ಕಂಡವು.

ADVERTISEMENT

ಅದಾನಿ ಸಮೂಹದ ಕಂಪನಿಗಳಲ್ಲಿ ಷೇರು ಹೊಂದಿರುವ ಮೂರು ಎಫ್‌ಪಿಐ ಖಾತೆಗಳನ್ನು ಮೇ 31 ಅಥವಾ ಅದಕ್ಕೂ ಮೊದಲೇ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳಲ್ಲಿ
ಹೇಳಲಾಗಿತ್ತು.

ಕಂಪನಿಗಳಲ್ಲಿ ಇರುವ ಪ್ರಮುಖ 12 ಹೂಡಿಕೆದಾರರಲ್ಲಿ ಈ ಮೂರು ಹೂಡಿಕೆದಾರರು ಸೇರಿದ್ದಾರೆ. ಅದಾನಿ ಸಮೂಹದ ಐದು ಕಂಪನಿಗಳಲ್ಲಿ ಈ ಹೂಡಿಕೆದಾರರು ಶೇ 2.1ರಿಂದ ಶೇ 8.91ರವರೆಗೆ ಷೇರುಪಾಲು ಹೊಂ ದಿದ್ದಾರೆ. ಸೋಮವಾರದ ಕುಸಿತಕ್ಕೂ ಮುನ್ನ ಈ ಮೂರು ಎಫ್‌ಪಿಐಗಳು ಅದಾನಿ ಸಮೂಹದ ಐದು ಕಂಪನಿಗಳಲ್ಲಿ ಹೊಂದಿರುವ ಷೇರು ಮೌಲ್ಯವು ₹ 57,019 ಕೋಟಿಗಳಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.