ADVERTISEMENT

₹ 200 ಲಕ್ಷ ಕೋಟಿ ದಾಟಿದ ಷೇರುಪೇಟೆ ಬಂಡವಾಳ

ಪಿಟಿಐ
Published 4 ಫೆಬ್ರುವರಿ 2021, 19:30 IST
Last Updated 4 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ಮುಂಬೈ: ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳವು ಇದೇ ಮೊದಲ ಬಾರಿಗೆ ₹ 200 ಲಕ್ಷ ಕೋಟಿಯ ಗಡಿ ದಾಟಿದೆ.

ಷೇರುಪೇಟೆಯಲ್ಲಿ ನಡೆಯುತ್ತಿರುವ ದಾಖಲೆಯ ವಹಿವಾಟಿನ ಪರಿಣಾಮದಿಂದಾಗಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘₹ 200 ಲಕ್ಷ ಕೋಟಿ ಸಂಪತ್ತು ಸೃಷ್ಟಿಸಲು ಬಿಎಸ್‌ಇ ಕಾರಣವಾಗಿರುವುದು ಹೆಮ್ಮೆಯ ವಿಷಯ’ ಎಂದು ಬಿಎಸ್‌ಇನ ವ್ಯವಸ್ಥಾಪಕ ನಿರ್ದೇಶಕ ಆಶಿಶ್‌ ಕುಮಾರ್‌ ಚೌಹಾಣ್‌ ಹೇಳಿದ್ದಾರೆ.

ADVERTISEMENT

‘ದೇಶದಲ್ಲಿ ಸಂಪತ್ತು ಸೃಷ್ಟಿಸುವ ಪ್ರಾಥಮಿಕ ಮೂಲವಾಗಿ ಬಿಎಸ್‌ಇ ಮುಂದುವರಿಯಲಿದೆ ಎನ್ನುವುದು ಸಂತೋಷದ ವಿಷಯ. ಭಾರತದಷ್ಟೇ ಅಭಿವೃದ್ಧಿ ಹೊಂದುತ್ತಿರುವ ಬೇರಾವುದೇ ದೇಶವು ಈ ಪ್ರಮಾಣದ ಬಂಡವಾಳ ಮಾರುಕಟ್ಟೆಯನ್ನು ಹೊಂದಿಲ್ಲ ಎನ್ನುವುದನ್ನು ಗಮನಿಸಬೇಕು’ ಎಂದು ಅವರು ತಿಳಿಸಿದ್ದಾರೆ.

ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಬಂಡವಾಳ ಮಾರುಕಟ್ಟೆಯ ಆಧಾರದಲ್ಲಿ, ಬಿಎಸ್‌ಇ ವಿಶ್ವದ 9ನೇ ಅತಿದೊಡ್ಡ ಷೇರು ವಿನಿಮಯ ಕೇಂದ್ರವಾಗಿಗುರುವಾರ ಹೊರಹೊಮ್ಮಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಾಲ್ಕು ದಿನಗಳ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯು (ಬಿಎಸ್‌ಇ) 4,328 ಅಂಶಗಳಷ್ಟು ಏರಿಕೆ ದಾಖಲಿಸಿದೆ. ಇದೇ ವೇಳೆ ಹೂಡಿಕೆದಾರರ ಸಂಪತ್ತು ₹ 14.34 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ.

ದಿನದ ವಹಿವಾಟು: ಗುರುವಾರದ ವಹಿವಾಟಿನಲ್ಲಿ ಬಿಎಸ್‌ಇ 359 ಅಂಶ ಏರಿಕೆ ಕಂಡು, ಹೊಸ ಎತ್ತರವಾದ 50,614 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 106 ಅಂಶಗಳಷ್ಟು ಏರಿಕೆ ಕಂಡು 14,896 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ಗಳಿಕೆ: ದಿನದ ವಹಿವಾಟಿನಲ್ಲಿ ಐಟಿಸಿ ಷೇರು ಶೇ 6.11ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಬಜಾಜ್‌ ಫೈನಾನ್ಸ್‌, ಒಎನ್‌ಜಿಸಿ, ಮಹೀಂದ್ರ, ಕೋಟಕ್‌ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್‌, ಎನ್‌ಟಿಪಿಸಿ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ ಷೇರುಗಳೂ ಗಳಿಕೆ ಕಂಡವು.

ಎಸ್‌ಬಿಐ ಷೇರು ಶೇ 5.73ರಷ್ಟು ಏರಿಕೆ ದಾಖಲಿಸಿತು. ಪಿಎಸ್‌ಬಿ ಮತ್ತು ಎಫ್‌ಎಂಸಿಜಿ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದರಿಂದ ಬಂಡವಾಳ ಮೌಲ್ಯವು ಗುರುವಾರ ₹ 200 ಲಕ್ಷ ಕೋಟಿಯ ಗಡಿ ದಾಟಿತು ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ವಿನೋದ್‌ ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.