ADVERTISEMENT

ಕ್ರಿಪ್ಟೋಕರೆನ್ಸಿ ಸುರಕ್ಷಿತ ಹೂಡಿಕೆ ಹೇಗೆ? ಇಲ್ಲಿವೆ ಸಲಹೆಗಳು

ಭಾರತದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ WazirXನಿಂದ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2021, 7:43 IST
Last Updated 6 ಸೆಪ್ಟೆಂಬರ್ 2021, 7:43 IST
ಬಿಟ್‌ಕಾಯಿನ್‌ ವಹಿವಾಟು–ಪ್ರಾತಿನಿಧಿಕ ಚಿತ್ರ
ಬಿಟ್‌ಕಾಯಿನ್‌ ವಹಿವಾಟು–ಪ್ರಾತಿನಿಧಿಕ ಚಿತ್ರ   

ಜಗತ್ತಿನಾದ್ಯಂತ ಆರ್ಥಿಕ ಪರಿಸ್ಥಿತಿ ಈಗ ಅನಿಶ್ಚಿತವಾಗಿದ್ದು, ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ಊಹಿಸಲು ಸಾಧ್ಯವಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಹಣಕಾಸು ವ್ಯವಸ್ಥೆಯ ಸಮಸ್ಯೆಗಳನ್ನು ಪ್ರತಿದಿನ ನೋಡುತ್ತಿದ್ದೇವೆ. ಚಿನ್ನ, ಬೆಳ್ಳಿಯಂಥ ಅಮೂಲ್ಯ ಲೋಹಗಳ ಮೌಲ್ಯಗಳೂ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿವೆ. ಆದರೆ ಕ್ರಿಪ್ಟೋಕರೆನ್ಸಿಯ ಬೆಳವಣಿಗೆ ಬೆರಗುಗೊಳಿಸುವಂತದ್ದು. ಕ್ರಿಪ್ಟೋಕರೆನ್ಸಿಯಾಗಿರುವ ಬಿಟ್‌ಕಾಯಿನ್ 2020ರಲ್ಲಿ ಹೆಚ್ಚು ಹೂಡಿಕೆದಾರರನ್ನು ಸೆಳೆದುಕೊಂಡಿದ್ದು, ಅತ್ಯುತ್ತಮ ಹೂಡಿಕೆಯ ತಾಣ ಎನಿಸಿಕೊಂಡಿದೆ.

ಕೋವಿಡ್ ಮಹಾಮಾರಿಯು ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ನಮ್ಮ ಪ್ರಯಾಣ, ಕೆಲಸ ಮತ್ತು ಖರೀದಿಯ ವಿಧಾನಗಳು ಬದಲಾಗಿವೆ. ನಾವು ಆನ್‌ಲೈನ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೇವೆ. ಇದರಿಂದ ಅನನುಕೂಲದಷ್ಟೇ, ಅನುಕೂಲಗಳೂ ಇವೆ. ನಮ್ಮ ಹಣಕಾಸು ನಿರ್ವಹಣೆಗೆ ಉತ್ತಮ ಅವಕಾಶಗಳೂ ಸಿಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಹೆಚ್ಚಿನ ಹಣಕಾಸು ವಹಿವಾಟುಗಳು ಈಗೀಗ ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ಅದರಲ್ಲೂ ಡಿಜಿಟಲ್ ಕರೆನ್ಸಿಯತ್ತ ಹೆಚ್ಚು ಒಲವು ವ್ಯಕ್ತವಾಗುತ್ತಿದೆ.

ಯಾವುದೇ ಹೂಡಿಕೆಯು ಸ್ವಾಭಾವಿಕ ರಿಸ್ಕ್ ಹೊಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಕ್ರಿಪ್ಟೋಕರೆನ್ಸಿಗೆ ಸಂಬಂಧಪಟ್ಟಂತೆ ಕೂಡ ಇಂಥ ಸಾಕಷ್ಟು ರಿಸ್ಕ್ ಗಳಿವೆ. ಮಾರುಕಟ್ಟೆ ಮರುದಿನ ಹೇಗಿರುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಅಷ್ಟೊಂದು ಏರಿಳಿತಗಳಿರುತ್ತವೆ. ಹಾಗೆಂದು ಅದು ಯಾರನ್ನೂ ಹೂಡಿಕೆ ಮಾಡದಂತೆ ತಡೆಯುವುದಿಲ್ಲ. ಸರಿಯಾದ ರೀತಿಯಲ್ಲಿ ಯೋಚಿಸಿ, ಲೆಕ್ಕಾಚಾರ ಹಾಕಿ, ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಬಹಳ ಮುಖ್ಯ.

ADVERTISEMENT

ಈಗ ನಾವು ಹೇಳಲು ಹೊರಟಿರುವ ಕ್ರಿಪ್ಟೋಕರೆನ್ಸಿ ಎಂಬುದು ಸಾಂಪ್ರದಾಯಿಕ ಆಸ್ತಿ ವರ್ಗವಲ್ಲ. ಹೊಸಬರು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಹೇಗೆ-ಎತ್ತ ಎಂಬ ನಿರ್ಧಾರ ಕೈಗೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ಯಾವುದೇ ಹೊಸದಾದ ಹೂಡಿಕೆಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಕ್ರಿಪ್ಟೋಕರೆನ್ಸಿ ಕೂಡ ಇದರಿಂದ ಹೊರತಲ್ಲ.

ಕ್ರಿಪ್ಟೋಕರೆನ್ಸಿ ಹೂಡಿಕೆಯನ್ನು ಸುರಕ್ಷಿತವಾಗಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಅದಕ್ಕೂ ಮೊದಲು ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್ ಎಂದರೇನು? ಅದರ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಏನಿದು ಕ್ರಿಪ್ಟೋಕರೆನ್ಸಿ?

2017ರಲ್ಲಿ ಬಿಟ್ ಕಾಯಿನ್ 20,000 ಡಾಲರ್‌ ಮುಟ್ಟಿದಾಗಿನಿಂದ ಕ್ರಿಪ್ಟೋಕರೆನ್ಸಿಗಳು ಎಲ್ಲ ಕಡೆ ಚರ್ಚೆಯಾಗುತ್ತಿವೆ. ಈ ವರ್ಚುವಲ್ ಕರೆನ್ಸಿಗಳ ಬಗ್ಗೆ ಜನರು ಒಳ್ಳೆಯ ಮಾತುಗಳನ್ನಾಡುತ್ತಿರುವುದನ್ನೂ ನೋಡಿರುತ್ತೀರಿ. ಆದರೆ, ಇವುಗಳೇನೆಂದು ನಿಖರವಾಗಿ ತಿಳಿದಿದೆಯೇ? ಸಾಂಪ್ರದಾಯಿಕ ಮತ್ತು ಪರಂಪರಾಗತ ಹಣಕಾಸು ವ್ಯವಸ್ಥೆಗಳಿಗಿಂತ ಇವು ಹೇಗೆ ಭಿನ್ನ?

‘ಕ್ರಿಪ್ಟೋ’ ಮತ್ತು ‘ಕರೆನ್ಸಿ’ ಎಂಬ ಎರಡು ಪದಗಳು ಸೇರಿ ಕ್ರಿಪ್ಟೋಕರೆನ್ಸಿಯಾಗುತ್ತದೆ. ಕ್ರಿಪ್ಟೋ ಅಂದರೆ ಕ್ರಿಪ್ಟೋಗ್ರಫಿ, ಅಂದರೆ ಕನ್ನಡದಲ್ಲಿ ಗೂಢಲಿಪಿಶಾಸ್ತ್ರ. ಕ್ರಿಪ್ಟೋಕರೆನ್ಸಿಯು ವಿತ್ತೀಯ ವಹಿವಾಟುಗಳನ್ನು ಯಶಸ್ವಿಯಾಗಿ ಸುರಕ್ಷಿತಗೊಳಿಸಲು, ನಿರ್ವಹಿಸಲು ಮತ್ತು ಮೌಲ್ಯೀಕರಿಸಲು ಕ್ರಿಪ್ಟೋಗ್ರಫಿಯನ್ನು ಬಳಸುತ್ತದೆ.

ಕ್ರಿಪ್ಟೋಕರೆನ್ಸಿಗಳ ಸೃಷ್ಟಿ ಮತ್ತು ವಿತರಣೆಯನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ನಿಯಂತ್ರಿಸುವುದಿಲ್ಲ. ಅವು ಬ್ಲಾಕ್‌ಚೈನ್‌ಗಳು ಎಂದು ಕರೆಯಲ್ಪಡುವ ವಿಕೇಂದ್ರೀಕೃತ ನೆಟ್‌ವರ್ಕ್‌ಗಳ ಮೂಲಕ ನಿರ್ವಹಣೆಯಾಗುತ್ತವೆ. ಕ್ರಿಪ್ಟೋಕರೆನ್ಸಿಗಳು ಅಥವಾ ಡಿಜಿಟಲ್ ಕರೆನ್ಸಿಗಳು ಕಾರ್ಯನಿರ್ವಹಿಸುವುದು ಬ್ಲಾಕ್‌ಚೈನ್ ನೆಟ್‌ವರ್ಕ್‌ ಎಂದು ಕರೆಯಲಾಗುವ ವಿಶೇಷವಾದ ತಂತ್ರಜ್ಞಾನ ವ್ಯವಸ್ಥೆಯಲ್ಲಿ. ಈ ವಿಕೇಂದ್ರೀಕೃತ ನೆಟ್‌ವರ್ಕ್‌ನಲ್ಲಿ ವಿತರಣೆಯಾಗುವ ಎಲ್ಲ ಕ್ರಿಪ್ಟೋಕರೆನ್ಸಿಗಳನ್ನು ಬ್ಲಾಕ್‌ಚೈನ್ ಖಾತ್ರಿಪಡಿಸುತ್ತದೆ.

ಕ್ರಿಪ್ಟೋಕರೆನ್ಸಿ ಎನ್ನುವುದು ಒಂದು ಜಾಗತಿಕ ಡಿಜಿಟಲ್ ಕರೆನ್ಸಿ. ಉತ್ಪನ್ನ ಮತ್ತು ಸೇವೆಗಳನ್ನು ಪಡೆಯಲು ಇದನ್ನು ಉಪಯೋಗಿಸಬಹುದಾಗಿದೆ. ಪ್ರಸಕ್ತ ನೂರಾರು ಕ್ರಿಪ್ಟೋಕರೆನ್ಸಿಗಳಿವೆ. ಅದರಲ್ಲಿ ಮೊದಲು ಸೃಷ್ಟಿಯಾದದ್ದು ಮತ್ತು ಪ್ರಮುಖವಾದದ್ದು ಬಿಟ್‌ಕಾಯಿನ್. ಎಲ್ಲ ಕ್ರಿಪ್ಟೋಕರೆನ್ಸಿಗಳೂ ಬ್ಲಾಕ್‌ಚೈನ್ ನೆಟ್‌ವರ್ಕ್‌ ಮೂಲಕವೇ ನಿರ್ವಹಣೆಯಾಗುತ್ತದೆ. ಬ್ಯಾಂಕ್ ಖಾತೆಗಳಿಂದ ಹಣವನ್ನು ಅದಕ್ಕೆ ವರ್ಗಾಯಿಸಿ, ಕ್ರಿಪ್ಟೋಕರೆನ್ಸಿಗಳನ್ನು ಕೊಳ್ಳುವುದು, ಮಾರಾಟ ಮಾಡಬಹುದು. ವಸ್ತುಗಳ ಖರೀದಿ, ಚಿನ್ನ ಖರೀದಿ, ಷೇರು ಪೇಟೆಯಲ್ಲಿ ಹೂಡಿಕೆ... ಹೀಗೆ ಎಲ್ಲದಕ್ಕೂ ಕ್ರಿಪ್ಟೋಕರೆನ್ಸಿಗಳನ್ನು ಬಳಸಬಹುದು. ಈ ಕ್ರಿಪ್ಟೋಕರೆನ್ಸಿ ಭೌತಿಕವಾಗಿ ಕಾಣುವುದಿಲ್ಲ, ಎಲ್ಲವೂ ಇಂಟರ್ನೆಟ್ ಮೂಲಕವೇ ನಡೆಯುತ್ತದೆ.

ವಹಿವಾಟು ಹೇಗೆ?

ಕ್ರಿಪ್ಟೋಕರೆನ್ಸಿಗಳನ್ನು ನಿರ್ವಹಿಸಲು ಇದಕ್ಕಾಗಿಯೇ ಎಕ್ಸ್‌ಚೇಂಜ್‌ಗಳಿವೆ. ಅದರ ಮೂಲಕ ವಹಿವಾಟು ನಡೆಸಬಹುದು. ಹೀಗೆ ಹೂಡಿಕೆ ಮಾಡುವವರಿಗೆ ಸೂಕ್ತ ವ್ಯವಸ್ಥೆಗಳಿರುತ್ತವೆ. ಹಣ ಕಳುಹಿಸುವವರು ಮತ್ತು ಸ್ವೀಕರಿಸುವವರು ತಮ್ಮ ಪಬ್ಲಿಕ್ ಮತ್ತು ಪ್ರೈವೆಟ್ ಕೀಗಳ ಮೂಲಕ ವಹಿವಾಟುಗಳಿಗೆ ಸೈನ್ ಆಫ್ ಮಾಡಬೇಕಾಗುತ್ತದೆ.

ಕ್ರಿಪ್ಟೋಕರೆನ್ಸಿಯ ಎಲ್ಲ ವಹಿವಾಟುಗಳನ್ನು ಕಟ್ಟುನಿಟ್ಟಾದ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕ್ರಿಪ್ಟೋಕರೆನ್ಸಿಯ ಮೈನರ್‌ಗಳು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಸಂಕೀರ್ಣ ಗಣಿತ ಲೆಕ್ಕಾಚಾರಗಳನ್ನು ಪರಿಹರಿಸಲು ಅವರು ಉನ್ನತ ತಂತ್ರಜ್ಞಾನದ ಕಂಪ್ಯೂಟರ್‌ಗಳನ್ನು ಬಳಸುತ್ತಾರೆ. ಪರಿಶೀಲನಾ ಪ್ರಕ್ರಿಯೆಯಲ್ಲಿ ಇದು ಪ್ರಮುಖವಾದುದು. ಸಮಸ್ಯೆಯನ್ನು ಪರಿಹರಿಸುವ ಮೈನರ್ ಮೊದಲು ವ್ಯವಹಾರವನ್ನು ಬ್ಲಾಕ್‌ಚೈನ್‌ಗೆ ಸೇರಿಸುತ್ತಾನೆ. ಈ ಕೆಲಸಕ್ಕೆ ಪ್ರತಿಫಲವಾಗಿ ಮೈನರ್‌ ನಿರ್ದಿಷ್ಟವಾಗಿ ಇಂತಿಷ್ಟು ಕ್ರಿಪ್ಟೋಕರೆನ್ಸಿಗಳನ್ನು ಗಳಿಸುತ್ತಾನೆ.

ಬಿಟ್‌ಕಾಯಿನ್ ಎಂದರೇನು?

ಬಿಟ್‌ಕಾಯಿನ್ ಸೃಷ್ಟಿಸಿರುವುದು ಜಪಾನ್‌ ನಿವಾಸಿ ಎಂದು ಹೇಳಲಾಗಿರುವ ಸಟೋಶಿ ನಕಾಮೊಟೊ. 2009ರಲ್ಲಿ ಪ್ರಥಮ ವಿಕೇಂದ್ರೀಕೃತ ಕ್ರಿಪ್ಟೋಕರೆನ್ಸಿ ಸ್ಥಾಪಿಸುವ ಮೂಲಕ ಡಿಜಿಟಲ್ ಕರೆನ್ಸಿ ಜಗತ್ತಿಗೆ ಹೊಸ ಬೆಳಕು ತೋರಿಸಿದವರು. ಆದರೆ ಇದುವರೆಗೂ ಅವರ ಗುರುತು ಪರಿಚಯ ನಿಗೂಢವಾಗಿಯೇ ಉಳಿದಿದೆ. ಅವರು ಯಾರೆಂಬುದು ಜಗತ್ತಿಗೆ ಇನ್ನೂ ತಿಳಿದಿಲ್ಲ.

ಬಿಟ್‌ಕಾಯಿನ್‌ನಲ್ಲಿ ಪ್ರಮುಖವಾಗಿ ಎರಡು ಅಂಶಗಳಿವೆ. ಟೋಕನ್ ಮತ್ತು ಟೋಕನನ್ನು ಶಕ್ತಗೊಳಿಸುವ ಪ್ರೋಟೋಕಾಲ್. ಸಟೋಶಿ ನಕಾಮೊಟೊ ಅವರು ವೈಟ್ ಪೇಪರ್‌ನಲ್ಲಿ ಎರಡನ್ನೂ 'ಪೀರ್-ಟು-ಪೀರ್ ಎಲೆಕ್ಟ್ರಾನಿಕ್ ಕ್ಯಾಶ್ ಸಿಸ್ಟಮ್' ಎಂದು ಉಲ್ಲೇಖಿಸಿದ್ದಾರೆ. BTC ಸಿಂಬಲ್ ಹೊಂದಿರುವ ಬಿಟ್‌ಕಾಯಿನ್ ಒಂದು ವಿನಿಮಯ ಮಾಧ್ಯಮ. ಬಿಟ್‌ಕಾಯಿನ್‌ನ ಒಟ್ಟು ಪೂರೈಕೆಗೆ ಒಂದು ಮಿತಿಯನ್ನು ನಿಗದಿ ಮಾಡಲಾಗಿದೆ. ಅದರಂತೆ, ಕೇವಲ 21 ಮಿಲಿಯನ್ ಬಿಟ್‌ಕಾಯಿನ್‌ಗಳು ಮಾತ್ರ ಲಭ್ಯವಿರುತ್ತವೆ.

ಬಿಟ್‌ಕಾಯಿನ್‌ನ ಸೃಷ್ಟಿ ಮತ್ತು ಚಲಾವಣೆಯನ್ನು ಯಾವುದೇ ವ್ಯಕ್ತಿ ಅಥವಾ ಕೇಂದ್ರೀಕೃತ ವ್ಯವಸ್ಥೆ ನಿಯಂತ್ರಿಸುವುದಿಲ್ಲ. ಪೂರೈಕೆ, ವಿತರಣೆ ಮತ್ತು ವಹಿವಾಟು ಪರಿಶೀಲನೆಗಾಗಿ ಕ್ರಿಪ್ಟೋಗ್ರಫಿಯನ್ನು ಬಿಟಿಸಿ ಬಳಸಿಕೊಳ್ಳುತ್ತದೆ. ಇದೇ ಕಾರಣದಿಂದ ಬಿಟ್‌ಕಾಯಿನ್ ಅನ್ನು ಒಂದು ಕ್ರಿಪ್ಟೋಕರೆನ್ಸಿ ಎಂದು ಗುರುತಿಸಲಾಗುತ್ತದೆ.

ಸುರಕ್ಷಿತ ಕ್ರಿಪ್ಟೋಕರೆನ್ಸಿ ಹೂಡಿಕೆಗಾಗಿ ಸಲಹೆಗಳು:

‘ನಿಮಗೆ ಅರ್ಥವಾಗದ ಕ್ಷೇತ್ರಗಳಲ್ಲಿ ಯಾವತ್ತೂ ಹೂಡಿಕೆ ಮಾಡಬೇಡಿ’ –ವಾರೆನ್ ಬಫೆಟ್ ಅವರ ಈ ಜನಪ್ರಿಯ ಉಲ್ಲೇಖ ಯಾವುದೇ ರೀತಿಯ ಹೂಡಿಕೆಗೆ ಅನ್ವಯವಾಗುತ್ತದೆ. ನೀವು ಕಷ್ಟ ಪಟ್ಟು ದುಡಿದಿರುವ ಹಣವನ್ನು ಹೂಡಿಕೆ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ಮೂಲಭೂತ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿರ್ದಿಷ್ಟ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳು ಮತ್ತು ಲಾಭಗಳನ್ನು ಅರಿತುಕೊಳ್ಳಬೇಕು.

ಹೂಡಿಕೆ ಮೊದಲು ಅಧ್ಯಯನ ಮುಖ್ಯ

DYOR (Do your own research) ಅಂದರೆ, ನೀವು ಸ್ವತಃ ಅಧ್ಯಯನ ಮಾಡಿ ಎನ್ನುವುದು ಜನಪ್ರಿಯ ಕ್ರಿಪ್ಟೋದ ಆಡುನುಡಿಯಾಗಿದೆ. ಹೂಡಿಕೆ ಮಾಡುವ ಮೊದಲು ನೀವು ಅದಕ್ಕೆ ಸಂಬಂಧಿಸಿ ಅಧ್ಯಯನಕ್ಕೆ ಸಮಯ ಮೀಸಲಿಡಬೇಕು. ಸಂಬಂಧಿಸಿದ ವೆಬ್‌ಸೈಟ್‌ ನೋಡಬೇಕು. ಟೀಮ್ ವಿವರಗಳು ಮತ್ತು ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ಗಳನ್ನು ಗಮನಿಸಿ. ಅದರ ವೈಟ್ ಪೇಪರನ್ನೂ (ಅಧಿಕೃತ ವರದಿ) ಪರಿಶೀಲನೆ ಮಾಡಬೇಕು. ವೈಟ್ ಪೇಪರ್ ಎನ್ನುವುದು ತಂತ್ರಜ್ಞಾನ, ಉತ್ಪನ್ನ ಮತ್ತು ಸೇವಾ ವಿಧಾನದ ಬಗ್ಗೆ ಮಾಹಿತಿ ನೀಡುವ ಯಾವುದೇ ಬ್ಲಾಕ್‌ಚೈನ್ ಪ್ರಾಜೆಕ್ಟ್ ನೀಡುವ ಅಧಿಕೃತ ದಾಖಲೆಯಾಗಿದೆ. ವೈಟ್ ಪೇಪರ್‌ನ ತಾಂತ್ರಿಕ ವಿವರಗಳನ್ನು ಅರ್ಥ ಮಾಡಿಕೊಳ್ಳುವುದು ನಿಮಗೆ ಅಷ್ಟು ಸುಲಭವಲ್ಲ. ಆದರೆ ನೀವು ಮೂಲಭೂತ ಅಂಶಗಳನ್ನು ಅರ್ಥ ಮಾಡಿಕೊಳ್ಳಬಹುದು. ಸಂಬಂಧಿಸಿದ ಯೂಟ್ಯೂಬ್ ವಿಡಿಯೋಗಳು ಮತ್ತು ಲೇಖನಗಳನ್ನು ಇಂಟರ್ನೆಟ್‌ನಲ್ಲಿ ಹುಡುಕಿಯೂ ಪರಿಶೀಲಿಸಬಹುದು.

ವಿನಿಮಯ ಆಯ್ಕೆಯಲ್ಲಿ ಎಚ್ಚರಿಕೆ

ಕ್ರಿಪ್ಟೋಕರೆನ್ಸಿ ಹೆಚ್ಚು ಅನಿಯಂತ್ರಿತ ವಲಯವಾಗಿರುವುದರಿಂದ ನೀವು ವಹಿವಾಟಿಗಾಗಿ ನಿಮ್ಮ ಕೇಂದ್ರೀಕೃತ ವಿನಿಮಯ (centralized exchange) ಕೇಂದ್ರವನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ. ಅವರು ಯಾವ ಫಿಯಟ್ ಕರೆನ್ಸಿ ಗೇಟ್‌ವೇ ಒದಗಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ. ಅವರು ಎಷ್ಟು ಸಮಯದಿಂದ ಈ ವಹಿವಾಟು ನಡೆಸುತ್ತಿದ್ದಾರೆ? ಅವರ ವಹಿವಾಟಿನ ಕುರಿತ ಸಾರ್ವಜನಿಕ ಅಭಿಪ್ರಾಯಗಳೇನು ಎಂಬುದನ್ನು ಪರಿಶೀಲಿಸಿ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ಎಕ್ಸ್‌ಚೇಂಜ್‌ಗಳು ಹ್ಯಾಕ್ ಆಗಿದ್ದು, ಹಲವು ಕಚೇರಿಗಳು ಮುಚ್ಚಿವೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಿ.

ವಾಲೆಟ್ಸ್ ಮತ್ತು ಕೀಸ್ ಅರಿವು

ಸೆಂಟ್ರಲೈಸ್ಡ್ ಎಕ್ಸ್‌ಚೇಂಜ್ ನಿಮ್ಮ ವಾಲೆಟ್ ಅಲ್ಲ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ಎಕ್ಸ್‌ಚೇಂಜ್‌ನಲ್ಲಿ ಮೊತ್ತವನ್ನು ಹಿಡಿದಿಟ್ಟುಕೊಳ್ಳುವುದು ಸುಲಭ. ಆದರೆ, ಎಕ್ಸ್‌ಚೇಂಜ್‌ನಲ್ಲಿ ಮೊತ್ತವನ್ನು ಹೋಲ್ಡ್ ಮಾಡುವಾಗ ನೀವು ಕೀಗಳನ್ನು ಹೊಂದಿರುವುದಿಲ್ಲ. ಹೆಚ್ಚಿನವರು ತಮ್ಮ ವೈಯಕ್ತಿಕ ವಾಲೆಟ್‌ಗಳಲ್ಲಿ ದೀರ್ಘಾವಧಿಗೆ ಗಣನೀಯ ಮೊತ್ತವನ್ನು ಇಟ್ಟಿರುತ್ತಾರೆ. ನೀವು ಒಂದು ಕ್ರಿಪ್ಟೋಕರೆನ್ಸಿ ವಾಲೆಟ್ ಕ್ರಿಯೇಟ್ ಮಾಡಿದಾಗ ನಿಮಗೆ ಒಂದು ಪ್ರೈವೆಟ್ ಕೀ ಮತ್ತು ಪಬ್ಲಿಕ್ ಕೀ ಸಿಗುತ್ತದೆ. ಪಬ್ಲಿಕ್ ಕೀ ಸಾರ್ವಜನಿಕ ವೀಕ್ಷಣೆಗೆ ಲಭಿಸುತ್ತದೆ. ಆದರೆ, ಪ್ರೈವೆಟ್ ಕೀ ನಿಮ್ಮ ಪಾಸ್‌ವರ್ಡ್‌ನಂತೆ. ಪ್ರೈವೆಟ್ ಕೀಯನ್ನು ಸುರಕ್ಷಿತ ಸ್ಥಳದಲ್ಲಿರಿಸಿ. ಪ್ರೈವೆಟ್ ಕೀಯನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಅನೇಕ ವಾಲೆಟ್‌ಗಳು ನಿಮಗೆ ನೆನಪಲ್ಲಿ ಇಟ್ಟುಕೊಳ್ಳಬಹುದಾದ ಪದಗುಚ್ಛ ಅಥವಾ ನುಡಿಗಟ್ಟುಗಳನ್ನು ನೀಡುತ್ತವೆ. ಈ ಜ್ಞಾಪಕ ಸೂತ್ರದ ರೀತಿಯ ಪದಗುಚ್ಛಗಳನ್ನು ನೀವು ಯಾವುದೇ ಕಾಗದದಲ್ಲಿ ಬರೆದು ಸುರಕ್ಷಿತವಾಗಿ ಇಡಬಹುದು. ಆದರೆ, ಈ ನಿಮ್ಮ ಪ್ರೈವೆಟ್ ಕೀ ಅಥವಾ ಜ್ಞಾಪಕ ಸೂತ್ರ ಪದಗುಚ್ಛಗಳು ಯಾರಿಗೂ ಸಿಗದಂತೆ ಎಚ್ಚರಿಕೆ ವಹಿಸಿ. ಸಂರಕ್ಷಿತ ಕ್ರಿಪ್ಟೋ ಪದಗುಚ್ಛವನ್ನು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಿ.

ಕ್ರಿಪ್ಟೋಕರೆನ್ಸಿಗಳನ್ನು ಕೋಲ್ಡ್ ವಾಲೆಟ್ ಅಥವಾ ಹಾಟ್ ವಾಲೆಟ್‌ನಲ್ಲಿ ಇಡಬಹುದು. ಈ ಎರಡು ರೀತಿಯ ವಾಲೆಟ್‌ಗಳ ನಡುವೆ ವ್ಯತ್ಯಾಸವಿದೆ. ಹಾಗೆಂದ ಕೂಡಲೇ, ತಾಪಮಾನ ಇರಬಹುದು ಎಂದುಕೊಳ್ಳಬೇಡಿ. ಹಾಟ್ ವಾಲೆಟ್‌ಗಳೆಂದರೆ ಆನ್‌ಲೈನ್ ವಾಲೆಟ್‌ಗಳು. ಹಾಟ್ ವಾಲೆಟ್‌ಗಳ ಆಕ್ಸೆಸ್ ತುಂಬಾ ಸುಲಭ. ಹ್ಯಾಕ್‌ಗಳಿಗೆ ಒಳಗಾಗುವುದೂ ಜಾಸ್ತಿ. ಕೋಲ್ಡ್ ವಾಲೆಟ್‌ಗಳು ಹೆಚ್ಚು ಸುರಕ್ಷಿತವಾಗಿದ್ದು, ಇವುಗಳು ಫಿಸಿಕಲ್ ಹಾರ್ಡ್‌ವೇರ್ ಹೊಂದಿರುತ್ತವೆ. ನೀವು ನಿರ್ದಿಷ್ಟ ಕ್ರಿಪ್ಟೋಕರೆನ್ಸಿಯನ್ನು ದೀರ್ಘಕಾಲ ಉಳಿಸಿಕೊಳ್ಳಲು ಮುಂದಾಗಿದ್ದೀರಿ ಎಂದಾದರೆ, ಅದನ್ನು ಯಾವತ್ತೂ ಕೋಲ್ಡ್ ವಾಲೆಟ್‌ನಲ್ಲಿ ಇಡುವುದು ಸೂಕ್ತ. ನೀವು ನಿಯಮಿತವಾಗಿ ಬಳಸುವುದಾದರೆ ಹಾಟ್ ವಾಲೆಟ್ ಆಯ್ಕೆ ಮಾಡಬಹುದು.

ಅಸ್ಥಿರ ಸವಾರಿಗೆ ಸಿದ್ಧರಾಗಿ

ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಅಸ್ಥಿರವಾಗಿರುತ್ತದೆ. ಹೀಗೆ ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಬದಲಾಗುವ ಪ್ರಯಾಣಕ್ಕೆ ನಿಮ್ಮನ್ನು ನೀವು ಸಿದ್ಧಗೊಳಿಸಿ. ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಾಣದ ರೀತಿಯ ದರ ಏರಿಳಿತಗಳನ್ನು ನೀವಿಲ್ಲಿ ಕಾಣಬಹುದು. ವಹಿವಾಟು ಸಂದರ್ಭ ತಾಳ್ಮೆ ಇರಲಿ. ನಿಮ್ಮ ಭಾವನೆಗಳನ್ನು ಆಧರಿಸಿ ವಹಿವಾಟು ನಡೆಸಬೇಡಿ.

ಕೆಟ್ಟ ಹೂಡಿಕೆ ಮಾಡದಿರಿ

ಕೆಟ್ಟ ಮತ್ತು ಉತ್ತಮ ಹೂಡಿಕೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಯಾವಾಗಲೂ ತುಂಬಾ ಕಷ್ಟಕರವಾಗಿರುತ್ತದೆ. ಕ್ರಿಪ್ಟೋ ವ್ಯವಹಾರವು ಅನಿಯಂತ್ರಿತವಾಗಿರುವುದರಿಂದ ಬಹಳಷ್ಟು ಪಂಪ್-ಡಂಪ್ (ವಂಚನೆ) ಚಟುವಟಿಕೆಗಳು ನಡೆಯುತ್ತವೆ. ಈ ಕುರಿತು ತಥಾಕಥಿತ ಕ್ರಿಪ್ಟೋ ಪ್ರಭಾವಿಗಳೆಂದು ಹೇಳಿಕೊಳ್ಳುವ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ದಾರಿತಪ್ಪಿಸುವ ರೀತಿಯ ಮಾಹಿತಿಗಳನ್ನು ಪಸರಿಸುತ್ತಿರುತ್ತಾರೆ. ನಿಮ್ಮ ತೀರ್ಮಾನ ಬುದ್ಧಿವಂತಿಕೆಯಿಂದ ಕೂಡಿರಲಿ. ನಿಮ್ಮದೇ ಆದ ವಹಿವಾಟು ತಂತ್ರಗಾರಿಕೆ ರೂಪಿಸಿಕೊಳ್ಳಿ.

ಈ ನಿಟ್ಟಿನಲ್ಲಿ ಎರಡು ಉಪಯುಕ್ತ ಪದಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ: ಮೊದಲನೆಯದ್ದು FOMO, ಅಂದರೆ Fear of Missing Out, ಕಳೆದುಕೊಳ್ಳುವ ಭಯ. ಎರಡನೆಯದ್ದು FUD, ಎಂದರೆ Fear, Uncertainty, and Disinformation - ಭಯ, ಅನಿಶ್ಚಿತತೆ ಮತ್ತು ತಪ್ಪು ಮಾಹಿತಿ.

ನಿಮ್ಮ ನಿಧಿ ಸುರಕ್ಷಿತವಾಗಿರಲಿ

ಪರ್ಸನಲ್ ವಾಲೆಟ್ ಬಳಸುವವರಾದರೆ ನೀವು ನಿಮ್ಮ ಪ್ರೈವೆಟ್ ಕೀಯನ್ನು ಸುರಕ್ಷಿತ ಜಾಗದಲ್ಲಿ ಇರಿಸಬೇಕೆಂಬುದನ್ನು ತಿಳಿದುಕೊಂಡಿದ್ದೀರಿ. ನೀವು ಸೆಂಟ್ರಲೈಜ್ಡ್ ಎಕ್ಸ್‌ಚೇಂಜ್‌ಗಳಲ್ಲಿ ವಹಿವಾಟು ನಡೆಸುವಾಗ ದಯವಿಟ್ಟು 2FA ಅಥವಾ ಟು ಫ್ಯಾಕ್ಟರ್ ಆತೆಂಟಿಕೇಶನನ್ನು ಸಕ್ರಿಯಗೊಳಿಸಿ. ಎಸ್ಎಂಎಸ್ ಒಟಿಪಿ ಆಧರಿತ ಆತೆಂಟಿಕೇಶನ್‌ಗಿಂತಲೂ Google Authenticator/Authyನಂತಹ ಸಾಫ್ಟ್‌ವೇರ್ ಆಧರಿತ ಆತೆಂಟಿಕೇಶನ್ ವ್ಯವಸ್ಥೆಯನ್ನು ಬಳಸುವುದು ಉತ್ತಮ. Google Authenticatorನಂತಹ ಸಾಫ್ಟ್‌ವೇರ್ ಆಧರಿತ ಅಥೆಂಟಿಕೇಶನ್ ವ್ಯವಸ್ಥೆಯನ್ನು ಬಳಸುವಾಗ ದಯವಿಟ್ಟು ನಿಮ್ಮ ಅಥೆಂಟಿಕೇಶನ್ ಕೀಯನ್ನು ಸುರಕ್ಷಿತ ಜಾಗದಲ್ಲಿ ಇರಿಸಿ. ಒಂದು ವೇಳೆ ನಿಮ್ಮ ಎಕ್ಸ್‌ಚೇಂಜ್ ಲಾಗಿನ್ ಐಡಿ ಅಥವಾ ಪಾಸ್‌ವರ್ಡ್ ಹ್ಯಾಕರ್‌ಗಳಿಗೆ ಸಿಕ್ಕಿದರೂ, ನೀವು 2FA ಸಕ್ರಿಯಗೊಳಿಸಿದ್ದರೆ ಅವರಿಗೆ ನಿಮ್ಮ ಎಕ್ಸ್‌ಚೇಂಜ್ ಖಾತೆಗೆ ಪ್ರವೇಶಿಸುವುದು ಕಷ್ಟವಾಗುತ್ತದೆ. ಅದೇ ಹೊತ್ತಿಗೆ ನೀವು ನಿಮ್ಮ ಎಕ್ಸ್‌ಚೇಂಜ್‌ಗೆ ನೀವು ಕ್ಲಿಷ್ಟ ಪಾಸ್‌ವರ್ಡ್ ಬಳಸುವುದು ಮುಖ್ಯ. ನಿಮ್ಮ ಇಮೇಲ್ ಐಡಿಯ ಪಾಸ್‌ವರ್ಡನ್ನೇ ಎಕ್ಸ್‌ಚೇಂಜ್ ಲಾಗಿನ್‌ಗೂ ಬಳಸುವುದು ಬೇಡ.

ಉತ್ತಮ ಪೋರ್ಟ್‌ಫೋಲಿಯೋ

ಬಿಟ್‌ಕಾಯಿನ್ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ. ಆದರೆ, ಇತರ ಹಲವು ಕ್ರಿಪ್ಟೋಕರೆನ್ಸಿಗಳಿವೆ. ಒಂದೇ ಕಡೆಯಲ್ಲಿ ಹೂಡಿಕೆ ಮಾಡಬೇಡಿ. ಗರಿಷ್ಠ ಆದಾಯದ ಗುರಿಯೊಂದಿಗೆ ಸಮತೋಲಿತ ಪೋರ್ಟ್‌ಫೋಲಿಯೋ ನಿರ್ವಹಿಸಿ. ನಿಮ್ಮ ಪೋರ್ಟ್‌ಫೋಲಿಯೋದಲ್ಲಿ ಗಣನೀಯ ಪ್ರಮಾಣದ ಬಿಟ್‌ಕಾಯಿನ್ ಹೊಂದಿರುವುದು ಯಾವತ್ತಿಗೂ ಉತ್ತಮ. ಆಲ್ಟ್‌ಕಾಯಿನ್‌ಗಳು ನಿಸ್ಸಂಶಯವಾಗಿ ರಿಸ್ಕ್ ಹೊಂದಿರುತ್ತವೆ. ರಿಸ್ಕ್ ಗಮನಿಸಿ ಹೂಡಿಕೆ ಮಾಡಬೇಕು. ನೀವು ಹೊಸಬರಾಗಿದ್ದರೆ ಹೆಚ್ಚಿನ ಮಾರುಕಟ್ಟೆ ಬಂಡವಾಳದೊಂದಿಗೆ ಜನಪ್ರಿಯ ಕ್ರಿಪ್ಟೋ ಅಸೆಟ್‌ಗಳಲ್ಲಿ ವಹಿವಾಟು ಆರಂಭಿಸುವುದು ಉತ್ತಮ.

ಪ್ರತ್ಯೇಕ ಇಮೇಲ್ ರಚಿಸಿ

ನೀವು ನಿಮ್ಮ ರೆಗ್ಯುಲರ್ ಇಮೇಲ್ ವಿಳಾಸವನ್ನು ಕ್ರಿಪ್ಟೋಕರೆನ್ಸಿ ವಹಿವಾಟಿನಲ್ಲಿ ಬಳಸಬಾರದು. ಅನಗತ್ಯವಾಗಿ ಅಮೂಲ್ಯ ಮಾಹಿತಿ ಸೋರಿಕೆಗೆ ನೀವೇ ಅವಕಾಶ ಮಾಡಿಕೊಡಬೇಡಿ. ಕ್ರಿಪ್ಟೋಕರೆನ್ಸಿ ಸಂಬಂಧಿತ ಕೆಲಸಗಳಿಗಾಗಿ ಪ್ರತ್ಯೇಕ ಇಮೇಲ್ ವಿಳಾಸವನ್ನು ಸೃಜಿಸಿಕೊಳ್ಳಿ.

ಮೊಬೈಲ್ ಟ್ರೇಡಿಂಗ್‌ನಲ್ಲಿ ಎಚ್ಚರಿಕೆ

ಮೊಬೈಲ್ ಮೂಲಕ ವಹಿವಾಟು ಮಾಡುವುದು ತುಂಬಾ ಅನುಕೂಲ. ವಿವಿಧ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಆಪ್‌ಗಳು ನಮ್ಮ ಕೆಲಸವನ್ನು ತುಂಬಾ ಸುಲಭವಾಗಿಸುತ್ತವೆ. ಆದರೆ ನಿಮ್ಮ ಮೊಬೈಲ್ ಬೇರೆ ಬೇರೆ ಕಾರಣಗಳಿಂದ ನಿಮ್ಮನ್ನು ಅಸುರಕ್ಷತೆಯ ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬುದನ್ನೂ ನೆನಪಿನಲ್ಲಿ ಇಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಮೊಬೈಲ್ ಕಳವಾದರೆ, ಆಗ ನೀವು ದೊಡ್ಡ ಸಮಸ್ಯೆಗೆ ಸಿಲುಕುತ್ತೀರಿ. ದೊಡ್ಡ ಮೊತ್ತದ ವಹಿವಾಟುಗಳ ಸಂದರ್ಭ ಸುರಕ್ಷತೆಯ ಅಂಶಗಳಲ್ಲಿ ರಾಜಿ ಮಾಡಿಕೊಳ್ಳಲು ಹೋಗಬೇಡಿ.

ಕ್ರಿಪ್ಟೋಕರೆನ್ಸಿ ವಹಿವಾಟನ್ನು ಹೊಸತಾಗಿ ಆರಂಭಿಸುವವರಿಗೆ ಉಪಯುಕ್ತ ಎನಿಸುವ ಒಂದಷ್ಟು ಸಲಹೆಗಳಿವು. ಹೊಸಬರು ಯಾವಾಗಲೂ ಸುಲಭ ವಹಿವಾಟಿಗಾಗಿ ಹೆಸರಾಂತ ಸೆಂಟ್ರಲೈಜ್ಡ್ ಎಕ್ಸ್‌ಚೇಂಜ್‌ಗಳಲ್ಲಿ ವಹಿವಾಟು ನಡೆಸಬೇಕು. ಅವರು ನಿಮಗೆ ಫಿಯಟ್ ಗೇಟ್‌ವೇಗಳನ್ನು ಒದಗಿಸುವುದರಿಂದ ನೀವು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಜಮಾ ಮಾಡುವುದು ಮತ್ತು ಎಕ್ಸ್‌ಚೇಂಜ್‌ನಿಂದ ಹಿಂಪಡೆಯುವುದು ಸುಲಭ. ಆರಂಭದಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡಲು ಮುಂದಾಗಬೇಡಿ. ಸೂಕ್ತ ಅಧ್ಯಯನ ಮತ್ತು ಜಾಗರೂಕತೆಯಿಂದ ವಹಿವಾಟು ನಡೆಸುವ ಮೂಲಕ ಮುಂದಿನ ಪೀಳಿಗೆಯ ವಿತ್ತೀಯ ಕ್ರಾಂತಿಯಲ್ಲಿ ನೀವೂ ಪಾಲುದಾರರಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.