ADVERTISEMENT

ಬಂಡವಾಳ ಮಾರುಕಟ್ಟೆ| ಮ್ಯೂಚುಯಲ್ ಫಂಡ್‌‌: ಲಾಭಕ್ಕೆ ‘ಪಂಚ’ ಸೂತ್ರ

ಅವಿನಾಶ್ ಕೆ.ಟಿ
Published 12 ಸೆಪ್ಟೆಂಬರ್ 2021, 19:31 IST
Last Updated 12 ಸೆಪ್ಟೆಂಬರ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಯಾವುದೇ ಹೂಡಿಕೆಯಿರಲಿ ಕಲಿಕೆಯ ಅಡಿಪಾಯವಿದ್ದಾಗ ಮಾತ್ರ ಗಳಿಕೆಯ ಲಾಭ ಪಡೆಯಬಹುದು. ಹೌದು ಮ್ಯೂಚುಯಲ್ ಫಂಡ್‌‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬೇಕು ಅಂದ್ರೆ ಕೆಲ ಲೆಕ್ಕಾಚಾರಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಹೂಡಿಕೆಗೂ ಮುನ್ನ, ನಿರ್ದಿಷ್ಟ ಮ್ಯೂಚುಯಲ್ ಫಂಡ್‌ನ ವಿವಿಧ ಅನುಪಾತಗಳು ಎಷ್ಟರಮಟ್ಟಿಗೆ ಉತ್ತಮವಾಗಿವೆ? ಮಾರುಕಟ್ಟೆ ಲಾಭಾಂಶಕ್ಕೆ ಹೋಲಿಕೆ ಮಾಡಿ ನೋಡಿದಾಗ ಆ ಫಂಡ್ ಎಷ್ಟು ಲಾಭಾಂಶ ಕೊಟ್ಟಿದೆ? ಹೀಗೆ ಹತ್ತಾರು ಲೆಕ್ಕಾಚಾರಗಳನ್ನು ಗಮನಿಸಿಕೊಳ್ಳುವುದು ಬಹಳ ಮುಖ್ಯ.

ಅವಿನಾಶ್ ಕೆ.ಟಿ.

1) ಸ್ಟ್ಯಾಂಡರ್ಡ್ ಡೀವಿಯೇಷನ್(ಪ್ರಮಾಣಿತ ವಿಚಲನ): ನಿರ್ದಿಷ್ಟ ಮ್ಯೂಚುಯಲ್ ಫಂಡ್, ಹೂಡಿಕೆದಾರರಿಗೆ ಎಷ್ಟು ಲಾಭದ ಸ್ಥಿರತೆ ಒದಗಿಸಿದೆ ಎನ್ನುವುದನ್ನು ಅಳೆಯುವ ಸಾಧನವೇ ಪ್ರಮಾಣಿತ ವಿಚಲನ.

ಉದಾಹರಣೆಗೆ ‘ಎ’ ಎನ್ನುವ ಮ್ಯೂಚುಯಲ್ ಫಂಡ್ ಮೊದಲ ವರ್ಷದಲ್ಲಿ ಶೇ 13 ರಷ್ಟು, ಎರಡನೇ ವರ್ಷದಲ್ಲಿ ಶೇ -7 ರಷ್ಟು ಮತ್ತು ಮೂರನೇ ವರ್ಷದಲ್ಲಿ ಶೇ 25 ರಷ್ಟು ಲಾಭಾಂಶ ಕೊಟ್ಟಿದೆ ಎಂದು ಭಾವಿಸಿ. ‘ಬಿ’ ಎನ್ನುವ ಮ್ಯೂಚುಯಲ್ ಫಂಡ್ ಮೊದಲ ವರ್ಷದಲ್ಲಿ ಶೇ 10 ರಷ್ಟು, ಎರಡನೇ ವರ್ಷದಲ್ಲಿ ಶೇ 9 ರಷ್ಟು ಮತ್ತು ಮೂರನೇ ವರ್ಷದಲ್ಲಿ ಶೇ 12 ರಷ್ಟು ಲಾಭಾಂಶ ಕೊಟ್ಟಿದೆ ಎಂದುಕೊಳ್ಳಿ. ಈ ಎರಡು ಉದಾಹರಣೆಗಳನ್ನು ತೆಗೆದುಕೊಂಡಾಗ ‘ಬಿ’ ಮ್ಯೂಚುಯಲ್ ಫಂಡ್‌ನಲ್ಲಿ ಹೆಚ್ಚು ಸ್ಥಿರತೆ ಇರುವುದು ತಿಳಿಯುತ್ತದೆ. ಮ್ಯೂಚುಯಲ್ ಫಂಡ್ ಹೂಡಿಕೆ ವೇಳೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ ಎನ್ನುವ ಹೂಡಿಕೆದಾರರು ಕಡಿಮೆ ಪ್ರಮಾಣಿತ ವಿಚಲನ ಇರುವ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚು ರಿಸ್ಕ್ ತೆಗೆದುಕೊಳ್ಳುತ್ತೇವೆ ಎನ್ನುವವರು ಹೆಚ್ಚು ಪ್ರಮಾಣಿತ ವಿಚಲನ ಇರುವ ಫಂಡ್‌ಗಳನ್ನು ಪರಿಗಣಿಸಬಹುದು.

ADVERTISEMENT

2) ಆಲ್ಫಾ: ಹಣಕಾಸು ಮಾರುಕಟ್ಟೆಯಲ್ಲಿ, ಸಾಮಾನ್ಯವಾಗಿ ಬಳಸುವ ಪ್ರಮುಖ ಮಾನದಂಡ ಆಲ್ಫಾ. ಷೇರು ಮಾರುಕಟ್ಟೆಯಲ್ಲಿ ಮ್ಯೂಚುವಲ್ ಫಂಡ್‌ನ ಕಾರ್ಯಕ್ಷಮತೆಯನ್ನು ಇದು ಪ್ರಮಾಣೀಕರಿಸುತ್ತದೆ. ಸಂವೇದಿ ಸೂಚ್ಯಂಕದ ಬೆಳವಣಿಗೆಗೆ ಹೋಲಿಸಿದಾಗ ಮ್ಯೂಚುಯಲ್ ಫಂಡ್ ಅನ್ನು ಲಾಭದಾಯಕವಾಗಿಸುವಲ್ಲಿ ಫಂಡ್ ಮ್ಯಾನೇಜರ್ ತೋರಿರುವ ಕಾರ್ಯಕ್ಷಮತೆಯನ್ನು ಆಲ್ಫಾ ಪ್ರತಿನಿಧಿಸುತ್ತದೆ. ಉದಾಹರಣೆಗೆ ಮಾರುಕಟ್ಟೆಯಿಂದ ಶೇ 10 ರಷ್ಟು ಲಾಭಾಂಶ ನಿರೀಕ್ಷೆ ಮಾಡಲಾಗಿತ್ತು ಎಂದು ಭಾವಿಸಿ. ಫಂಡ್ ಮ್ಯಾನೇಜರ್ ಶೇ 13 ರಷ್ಟು ಲಾಭಾಂಶ ತಂದುಕೊಟ್ಟರು ಎಂದುಕೊಳ್ಳಿ. ಆಗ (ಗಳಿಸಿರುವ ಲಾಭಾಂಶ ಮೈನಸ್ ನಿರೀಕ್ಷಿತ ಲಾಭಾಂಶ ಅಂದರೆ 13-10= 3) ಆಲ್ಫಾ 3 ಎಂದಾಗುತ್ತದೆ.

ಉದಾಹರಣೆಗೆ ಮತ್ತೊಂದು ಮ್ಯೂಚುಯಲ್ ಫಂಡ್ ಒಂದರ ಆಲ್ಫಾ ಶೇ 2 ಎಂದು ಭಾವಿಸಿ, ಅಂದರೆ ಮಾರುಕಟ್ಟೆಗಿಂತ ಈ ಫಂಡ್ ಶೇ 2 ರಷ್ಟು ಉತ್ತಮ ಫಲಿತಾಂಶ ಕೊಟ್ಟಿದೆ ಎಂದು ಅರ್ಥ. ಒಂದೊಮ್ಮೆ ಮ್ಯೂಚುಯಲ್ ಫಂಡ್ ಒಂದರ ಆಲ್ಫಾ ಶೇ -2 ಎಂದುಕೊಳ್ಳಿ. ಆಗ ಆ ಮ್ಯೂಚುಯಲ್ ಫಂಡ್ ಮಾರುಕಟ್ಟೆಗಿಂತ ಶೇ 2 ರಷ್ಟು ಕಡಿಮೆ ಲಾಭ ಕೊಟ್ಟಿದೆ ಎಂದು ಅರ್ಥೈಸಿಕೊಳ್ಳಬೇಕು. ಸರಳವಾಗಿ ಹೇಳುವುದಾದರೆ ಆಲ್ಫಾ ಹೆಚ್ಚಿಗೆಯಿದ್ದಷ್ಟೂ ಹೂಡಿಕೆದಾರನಿಗೆ ಒಳ್ಳೆಯದು.

3) ಟ್ರೇನೋರ್ ರೇಶಿಯೋ (ಅನುಪಾತ): ನೀವು ಹೂಡಿಕೆಯಲ್ಲಿ ಎಷ್ಟು ರಿಸ್ಕ್ ತೆಗೆದುಕೊಳ್ಳುತ್ತಿದ್ದೀರಿ, ಅದಕ್ಕೆ ಎಷ್ಟು ಲಾಭಾಂಶ ಸಿಗುತ್ತಿದೆ ಎನ್ನುವುದರ ನಡುವಿನ ಸಂಬಂಧವನ್ನು ಟ್ರೇನೋರ್ ರೇಶಿಯೋ ಎನ್ನಬಹುದು. ಹೂಡಿಕೆದಾರರಿಗೆ ಪರಿಹಾರ ನೀಡುವಲ್ಲಿ ಹೂಡಿಕೆಯ ಯಶಸ್ಸು ಎಷ್ಟು ಎನ್ನುವುದನ್ನು ಇದು ತಿಳಿಸಿಕೊಡುತ್ತದೆ. ಅಮೆರಿಕದ ಅರ್ಥಶಾಸ್ತ್ರಜ್ಞ ಜಾಕ್ ಟ್ರೇನೋರ್ ಅನುಪಾತವನ್ನು ಕೊಟ್ಟಿದ್ದಾರೆ. ಹೂಡಿಕೆ ಮಾಡುವಾಗ ಟ್ರೆನೋರ್ ಅನುಪಾತ ಹೆಚ್ಚಿಗೆ ಇರುವ ಮ್ಯೂಚುಯಲ್ ಫಂಡ್‌ಗಳನ್ನು ಪರಿಗಣಿಸಬೇಕು.

4) ಶಾರ್ಪೇ ರೇಶಿಯೋ: ಮ್ಯೂಚುಯಲ್ ಫಂಡ್‌ನ ಅಪಾಯ-ಹೊಂದಾಣಿಕೆಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಶಾರ್ಪೇ ರೇಶಿಯೋ ಬಳಸಲಾಗುತ್ತದೆ. ಮೂಲಭೂತವಾಗಿ, ಈ ಅನುಪಾತವು ಹೆಚ್ಚು ರಿಸ್ಕ್ ಇರುವ ಹೂಡಿಕೆಗಳನ್ನು ಹೊಂದಿರುವಾಗ ಹೂಡಿಕೆದಾರರು ಎಷ್ಟು ಹೆಚ್ಚುವರಿ ಆದಾಯ ಪಡೆಯುತ್ತಾರೆ ಎಂದು ಹೇಳುತ್ತದೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಹಣಕಾಸು ವಿಭಾಗದ ಪ್ರಾಧ್ಯಾಪಕ ವಿಲಿಯಂ ಎಫ್ ಶಾರ್ಪ್ ಅವರ ಹೆಸರನ್ನು ಈ ಕ್ರಮಕ್ಕೆ ಇಡಲಾಗಿದೆ. ಶಾರ್ಪೇ ರೇಶಿಯೋ ಹೆಚ್ಚಿಗೆ ಹೊಂದಿರುವ ಮ್ಯೂಚುಯಲ್ ಫಂಡ್ ಆಯ್ಕೆ ಉತ್ತಮ.

5) ವೆಚ್ಚ ಅನುಪಾತ (ಎಕ್ಸ್‌ಪೆನ್ಸ್‌ ರೇಶಿಯೋ): ನೀವು ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ಅದರ ನಿರ್ವಹಣೆಗೆ ಮ್ಯೂಚುಯಲ್ ಫಂಡ್ ಸಂಸ್ಥೆ ವೆಚ್ಚಗಳನ್ನು ಮಾಡಬೇಕಾಗುತ್ತದೆ. ನಿರ್ವಹಣಾ ಶುಲ್ಕ, ಏಜೆಂಟ್ ಶುಲ್ಕ, ನೋಂದಣಿ ಶುಲ್ಕ, ಲೆಕ್ಕಪರಿಶೋಧನೆ ಶುಲ್ಕ, ಜಾಹೀರಾತು ಶುಲ್ಕ ಹೀಗೆ ಹಲವು ವೆಚ್ಚಗಳನ್ನು ಫಂಡ್ ಹೌಸ್ ಹೊರಬೇಕಾಗುತ್ತದೆ. ಈ ವೆಚ್ಚಗಳನ್ನು ನಿಭಾಯಿಸಲು ಹೂಡಿಕೆದಾರರಿಂದ ಪಡೆಯುವ ವಾರ್ಷಿಕ ಶುಲ್ಕವೇ ವೆಚ್ಚ ಅನುಪಾತ. ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಪ್ರತಿ ಮಾದರಿಯ ಮ್ಯೂಚುಯಲ್ ಫಂಡ್‌ಗೂ ಗರಿಷ್ಠ ವೆಚ್ಚ ಮಿತಿ ನಿಗದಿಪಡಿಸಿದೆ. ಈಕ್ವಿಟಿ ಫಂಡ್ ಆದರೆ ಶೇ 2.5, ಡೆಟ್ ಫಂಡ್ ಆದರೆ ಶೇ 2.25 ಮತ್ತು ಇಂಡಕ್ಸ್ ಫಂಡ್ ಆದರೆ ಶೇ 1.5 ರ ವರೆಗೆ ಶುಲ್ಕ ವಿಧಿಸಬಹುದು. ವೆಚ್ಚ ಅನುಪಾತ ಎಷ್ಟು ಕಡಿಮೆ ಇರುತ್ತದೋ ಹೂಡಿಕೆದಾರನಿಗೆ ಅಷ್ಟು ಲಾಭ.

ಯಥಾಸ್ಥಿತಿಯಲ್ಲಿ ಸೂಚ್ಯಂಕಗಳು

ಸೆಪ್ಟೆಂಬರ್ 9ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಮೊತ್ತದ ಗಳಿಕೆಯೊಂದಿಗೆ ವಹಿವಾಟು ಪೂರ್ಣಗೊಳಿಸಿವೆ. 58,305 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ಮತ್ತು 17,369 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ವಾರದ ಅವಧಿಯಲ್ಲಿ ಶೇ 0.30 ರಷ್ಟು ಮಾತ್ರ ಗಳಿಕೆ ಕಂಡಿವೆ. ನಿಫ್ಟಿಯಲ್ಲಿರುವ 25 ಕಂಪನಿಗಳು ಈ ವಾರ ನಕಾರಾತ್ಮಕ ಫಲಿತಾಂಶ ಕೊಟ್ಟಿವೆ.

ಜಾಗತಿಕ ವಿದ್ಯಮಾನಗಳು, ಷೇರುಪೇಟೆಯಲ್ಲಿ ಲಾಭ ಗಳಿಕೆಗಾಗಿ ಮಾರಾಟದ ಒತ್ತಡ, ದೇಶಿಯವಾಗಿ ಮಾರುಕಟ್ಟೆಗೆ ಪುಷ್ಠಿ ಕೊಡುವಂತಹ ಯಾವುದೇ ಬೆಳವಣಿಗೆಗಳು ಆಗದಿರುವುದು ಸೇರಿ ಇನ್ನು ಕೆಲ ಅಂಶಗಳು, ಸೂಚ್ಯಂಕಗಳು ಬಹುತೇಕ ಯಥಾಸ್ಥಿತಿಯಲ್ಲಿರಲು ಕಾರಣವಾಗಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಗ್ರಾಸಿಮ್ ಶೇ 1.34, ಏರ್‌ಟೆಲ್ ಶೇ 2.64, ಎಚ್‌ಡಿಎಫ್‌ಸಿ ಶೇ 2.59, ಎಚ್‌ಸಿಎಲ್ ಟೆಕ್ ಶೇ 2.03 ಮತ್ತು ಹಿಂದುಸ್ಥಾನ್ ಯುನಿಲಿವರ್ ಶೇ 1.59 ರಷ್ಟು ಗಳಿಸಿವೆ. ಡಿವೀಸ್ ಲ್ಯಾಬ್ಸ್ ಶೇ 2.95, ಎನ್‌ಟಿಪಿಸಿ ಶೇ 2.09, ಸನ್ ಫಾರ್ಮಾ ಶೇ 1.66, ಬಜಾಜ್ ಆಟೋ ಶೇ 1.51 ಮತ್ತು ಟಿಸಿಎಸ್ ಶೇ 1.32 ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಸದ್ಯ ಷೇರುಪೇಟೆಯಲ್ಲಿ ಗೂಳಿ ಓಟವಿರುವುದು ನಗದು ಲಭ್ಯತೆಯ ಕಾರಣದಿಂದ. ಬ್ಯಾಂಕ್‌ಗಳಲ್ಲಿ ಬಡ್ಡಿದರ ಕಡಿಮೆ ಇರುವುದರಿಂದ ಜಾಗತಿಕವಾಗಿ ಮತ್ತು ದೇಶಿಯವಾಗಿ ಷೇರುಪೇಟೆಗೆ ಹೆಚ್ಚು ಹೂಡಿಕೆ ಹರಿದುಬರುತ್ತಿದೆ. ಈ ಸನ್ನಿವೇಷದಲ್ಲಿ ಕಂಪನಿಗಳ ಆಂತರಿಕ ಮೌಲ್ಯದ ಆಧಾರದಲ್ಲಿ ಷೇರುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳುವುದು ಕಷ್ಟ. ಸದ್ಯದ ಸ್ಥಿತಿಯಲ್ಲಿ ಷೇರುಪೇಟೆಯಲ್ಲಿ ಅನಿಶ್ಚಿತ ವಾತಾವರಣ ಮುಂದುವರಿಯುವುದರಿಂದ ಅಳೆದು ತೂಗಿ ಆಯ್ದ ಕಂಪನಿಗಳಲ್ಲಷ್ಟೇ ಹೂಡಿಕೆ ಮಾಡುವ ನಿರ್ಧಾರಕ್ಕೆ ಬರುವುದು ಸೂಕ್ತ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.