ADVERTISEMENT

ಷೇರು ಹೂಡಿಕೆ: ಅಲ್ಪವಿದ್ಯೆ ಅಪಾಯಕಾರಿ

ಶರತ್ ಎಂ.ಎಸ್.
Published 28 ಜೂನ್ 2021, 18:50 IST
Last Updated 28 ಜೂನ್ 2021, 18:50 IST
ಶರತ್ ಎಂ.ಎಸ್.
ಶರತ್ ಎಂ.ಎಸ್.   

ಅಡಿಪಾಯ ಭದ್ರವಾಗಿದ್ದರಷ್ಟೇ ಕಟ್ಟಡ ಬಲಿಷ್ಠವಾಗಿ ನಿಲ್ಲುತ್ತದೆ. ಷೇರು ಹೂಡಿಕೆಯಲ್ಲಿ ಕಲಿಕೆಯ ಅಡಿಪಾಯವಿದ್ದರಷ್ಟೇ ಗಳಿಕೆಯ ಲಾಭ ಪಡೆಯಲು ಸಾಧ್ಯ. ಷೇರುಗಳಲ್ಲಿನ ಹೂಡಿಕೆ ವಿಷಯದಲ್ಲಿ ಅವಸರದಲ್ಲಿ ಶ್ರೀಮಂತರಾಗುವ ಕನಸು ಕಂಡರೆ ಅಪಾಯ ಕಟ್ಟಿಟ್ಟಬುತ್ತಿ.

ನನ್ನ ಸ್ನೇಹಿತನೊಬ್ಬ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾನೆ. ಆತನ ವೇತನ ಅಷ್ಟೇನೂ ಉತ್ತಮವಾಗಿಲ್ಲ. ಕಾರಣಾಂತರಗಳಿಂದ ಅವನ ಕುಟುಂಬದ ಆರ್ಥಿಕ ಸ್ಥಿತಿ ಕೆಟ್ಟಿತ್ತು. ಹಣಕಾಸಿನ ಪರಿಸ್ಥಿತಿ ಸುಧಾರಿಸಿಕೊಳ್ಳಲು ಏನಾದರೊಂದು ಪರ್ಯಾಯ ಆದಾಯದ ಮೂಲ ಹುಡುಕಬೇಕು ಎಂದು ಆತ ಆಲೋಚಿಸುತ್ತಿದ್ದ. ಆಗ, ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡಿ ಸಿಕ್ಕಾಪಟ್ಟೆ ದುಡ್ಡು ಮಾಡಬಹುದು ಎಂಬ ಜಾಹೀರಾತು ಸಾಮಾಜಿಕ ಜಾಲತಾಣವೊಂದಲ್ಲಿ ಗೋಚರಿಸಿತು. ಹಿಂದೆ ಮುಂದೆ ಯೋಚಿಸದೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ತೆರೆದ. ಷೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಲಾಭ ಕೊಟ್ಟಿರುವ ಕಂಪನಿಗಳು ಯಾವುವು ಎಂದು ಗೂಗಲ್ ಮಾಡಿದ. ಒಂದು ದೊಡ್ಡ ಪಟ್ಟಿ ಬಂತು. ಅದನ್ನು ನಂಬಿ ಉಳಿತಾಯದ ದುಡ್ಡನ್ನೆಲ್ಲಾ ಷೇರು ಟ್ರೇಡಿಂಗ್‌ಗೆ ಬಳಸಿ ರಾತ್ರೋರಾತ್ರಿ ಶ್ರೀಮಂತನಾಗುವ ಕನಸು ಕಂಡ.

ಮೊದಲ ದಿನ, ಹೂಡಿದ ಹಣ ಹೋದಾಗ ಮರುದಿನ ಮರಳಿ ಬರಬಹುದೇನೋ ಎಂದು ಹೂಡಿಕೆ ಮುಂದುವರಿಸಿದ. ಲಾಭದ ವಿಚಾರ ಹಾಗಿರಲಿ, ₹ 20,000 ಅಸಲು ಕಳೆದುಕೊಂಡ. ಇಷ್ಟೆಲ್ಲಾ ಆದಮೇಲೆ ನನಗೆ ಕರೆ ಮಾಡಿದ. ‘ಏನು ಮಾಡಲಿ? ಟ್ರೇಡಿಂಗ್ ಮಾಡಲು ಹೋಗಿ ಇಷ್ಟೆಲ್ಲಾ ಸಮಸ್ಯೆಯಾಗಿದೆ’ ಎಂದು ಹೇಳಿದ. ‘ಟ್ರೇಡಿಂಗ್ ಬಗ್ಗೆ ನಿನಗೆ ಏನು ಗೊತ್ತು’ ಎಂದು ಕೇಳಿದೆ. ‘ಅಷ್ಟೇನೂ ತಿಳಿದಿಲ್ಲ. ಚೆನ್ನಾಗಿ ದುಡ್ಡು ಗಳಿಸಬಹುದು ಎಂದು ಕೆಲವರು ಹೇಳಿದ್ದರು. ಹಾಗಾಗಿ ಹಣ ಹಾಕಿದೆ’ ಅಂದ!

ADVERTISEMENT

‘ಹೋಗಿದ್ದು ಹೊಯ್ತು, ಕೂಡಲೇ ಟ್ರೇಡ್ ಮಾಡುವುದನ್ನು ನಿಲ್ಲಿಸು. ಷೇರು ಮಾರುಕಟ್ಟೆಯ ಬಗ್ಗೆ ಸರಿಯಾಗಿ ತಿಳಿದ ನಂತರದಲ್ಲಿ ಹೂಡಿಕೆ ಮಾಡು’ ಎಂದು ಸಲಹೆ ನೀಡಿದೆ. ಇಷ್ಟೆಲ್ಲಾ ಆದ ಮೇಲೆ, ಈಗ ಆತ ಹೂಡಿಕೆಯ ಅ, ಆ, ಇ, ಈ ಕಲಿಯಲು ಶುರು ಮಾಡಿದ್ದಾನೆ. ಷೇರು ಮಾರುಕಟ್ಟೆಗೆ ಬೇಕಾದ ಮೂಲಭೂತ ತಿಳಿವಳಿಕೆ ಪಡೆಯುವೆ, ನಷ್ಟವಾಗಿರುವ ಹಣದ ಜತೆಗೆ ಲಾಭವನ್ನೂ ಗಳಿಸುವೆ ಎಂದು ನಿಶ್ಚಯ ಮಾಡಿದ್ದಾನೆ.

‘ಅಯ್ಯೋ ₹ 20,000 ಅಷ್ಟು ದೊಡ್ಡ ಮೊತ್ತವೇ? ಹೋಗಲಿ ಬಿಡಿ, ಮತ್ತ್ಯಾವತ್ತೋ ಲಾಭ ಆಗುತ್ತೆ’ ಅಂತ ನೀವು ಸುಲಭವಾಗಿ ನಿರ್ಧಾರಕ್ಕೆ ಬಂದುಬಿಟ್ಟಿರಬಹುದು. ಆದರೆ ಬಡವರಿಗೆ, ಮಧ್ಯಮ ವರ್ಗದವರಿಗೆ ₹ 20,000 ಎನ್ನುವುದು ಬಹಳ ದೊಡ್ಡ ಮೊತ್ತ. ಎಷ್ಟೋ ಜನರಿಗೆ ಅದು ಎರಡು ತಿಂಗಳ ಸಂಬಳ, ಕೆಲವರಿಗೆ ಮೂರು ತಿಂಗಳ ಗಳಿಕೆ.

ಅರಿತು ಹೂಡಿಕೆ ಮಾಡಬೇಕು, ಅದರ ಆಳ–ಅಗಲ ಗೊತ್ತಿರಬೇಕು. ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ಎಂಬ ಎರಡು ಪ್ರಮುಖ ವಿಚಾರಗಳ ಬಗ್ಗೆ ಪ್ರತಿ ಹೂಡಿಕೆದಾರನೂ ತಿಳಿದಿರಲೇಬೇಕಾದ ವಿವರಗಳನ್ನು ಮುಂದಿನ ಕಂತಿನಲ್ಲಿ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.