ADVERTISEMENT

ಮ್ಯೂಚುವಲ್ ಫಂಡ್ ಆಯ್ಕೆ ಹೇಗೆ?

ಪ್ರಜಾವಾಣಿ ವಿಶೇಷ
Published 13 ಡಿಸೆಂಬರ್ 2019, 5:49 IST
Last Updated 13 ಡಿಸೆಂಬರ್ 2019, 5:49 IST
   

ಮೂಚ್ಯುವಲ್ ಫಂಡ್‌ನಲ್ಲಿ ಹಣ ತೊಡಗಿಸಬೇಕು ಎಂದು ನಿರ್ಧರಿಸಿದ್ದೇನೆ. ಆದರೆ ಯಾವ ಮ್ಯೂಚುವಲ್ ಫಂಡ್ ಸೂಕ್ತ ? ಯಾವ ಕಂಪನಿ
ಯಿಂದ ಮ್ಯೂಚುವಲ್ ಫಂಡ್ ಖರೀದಿಸಿದರೆ ಒಳಿತು? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನುವುದೇ ಬಹುತೇಕರ ಅಳಲು. ಇವತ್ತಿನ ಸಂಚಿಕೆಯಲ್ಲಿ ಮ್ಯೂಚುವಲ್ ಫಂಡ್ ಆಯ್ಕೆಯಲ್ಲಿ ಅರಿಯ ಬೇಕಿರುವ ಅಂಶಗಳ ಬಗ್ಗೆ ಸೂಕ್ತ ವಿವರಣೆ ನೀಡಲಾಗಿದೆ.

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ, ಮೊದಲಿಗೆ ನೀವು ಎಷ್ಟು ಅವಧಿಗೆ ಹೂಡಿಕೆ ಮಾಡಬಯಸಿದ್ದೀರಿ?. ಮಾರುಕಟ್ಟೆ ಏರಿಳಿತದ ಸನ್ನಿವೇಶಗಳನ್ನು ಎದುರಿಸಲು ನೀವೆಷ್ಟು ಸಜ್ಜಾಗಿದ್ದೀರಿ? ಎಂಬ ಎರಡು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಅಗತ್ಯವೆನಿಸಿದರೆ ಈ ನಿರ್ಧಾರ ತೆಗೆದುಕೊಳ್ಳಲು ಪ್ರಮಾಣೀಕೃತ ಹಣಕಾಸು ತಜ್ಞರ ನೆರವು ಪಡೆಯಬೇಕು. ಆಗ ಸೂಕ್ತ ಮ್ಯೂಚುವಲ್ ಫಂಡ್ ಆಯ್ಕೆ ಸುಲಭ.

ದೀರ್ಘಾವಧಿ ಹೂಡಿಕೆ: ದೀರ್ಘಾವಧಿ ಹೂಡಿಕೆಗೆ ಈಕ್ವಿಟಿ ಅಥವಾ ಬ್ಯಾಲೆನ್ಸ್ಡ್‌ ಫಂಡ್ ಹೆಚ್ಚು ಸೂಕ್ತ. 5 ವರ್ಷ, 10 ವರ್ಷ ಮೇಲ್ಪಟ್ಟು ಹೂಡಿಕೆ ಮಾಡಬೇಕು ಎನ್ನುವವರಿಗೆ ಅಥವಾ ನಿವೃತ್ತಿ ಯೋಜನೆ ರೂಪಿಸಿಕೊಳ್ಳಬೇಕು ಎನ್ನುವವರಿಗೆ ಈ ಫಂಡ್‌ಗಳು ಹೆಚ್ಚು ಸೂಕ್ತ.

ADVERTISEMENT

ಅಲ್ಪಾವಧಿ ಹೂಡಿಕೆ:ನಿಮ್ಮ ಬಳಿ ಸದ್ಯಕ್ಕೆ ದೊಡ್ಡ ಮೊತ್ತದ ಹಣವಿದೆ. ಆದರೆ ಕೆಲ ತಿಂಗಳಲ್ಲೇ ಅದನ್ನು ಮಗಳ ಮದುವೆ ಖರ್ಚಿಗಾಗಿ ವಾಪಸ್ ತೆಗೆಯಬೇಕು ಅಥವಾ ತುರ್ತು ಸಂದರ್ಭಗಳಿಗೆ ಆ ಹಣ ಅಗತ್ಯ ಎಂದಾದರೆ ಲಿಕ್ವಿಡ್ ಫಂಡ್‌ನಲ್ಲಿ ಹಣ ತೊಡಗಿಸುವುದು ಸರಿಯಾದ ಆಯ್ಕೆ.

ನಿರ್ದಿಷ್ಟ ಆದಾಯ ಗಳಿಸಲು: ನೀವು ಮ್ಯೂಚುವಲ್ ಫಂಡ್‌ನಲ್ಲಿ ಹಣ ತೊಡಗಿಸಿ ಕಾಲಕಾಲಕ್ಕೆ ನಿರ್ದಿಷ್ಟ ಆದಾಯ ಗಳಿಸಬೇಕು ಎಂದು ನಿರ್ಧರಿಸಿದ್ದಲ್ಲಿ ಮಾಸಿಕ ಆದಾಯ ಯೋಜನೆ (ಮಂತ್ಲಿ ಇನ್‌ಕಂ ಪ್ಲ್ಯಾನ್‌) ಅಥವಾ ಆದಾಯ ನಿಧಿ (ಇನ್‌ಕಂ ಫಂಡ್) ಯೋಜನೆಯನ್ನು ಪರಿಗಣಿಸಬಹುದು.

ಮೇಲಿನ ಮಾಹಿತಿ ಆಧರಿಸಿ ನೀವು ಯಾವ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧರಿಸಿದ ಬಳಿಕ, ಮ್ಯೂಚುವಲ್ ಫಂಡ್ ಕಂಪನಿಯನ್ನು ಆಯ್ಕೆ ಮಾಡಬೇಕು. ನಂತರದಲ್ಲಿ ಆ ಕಂಪನಿಯ ಸ್ಕೀಂ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಮ್ಯೂಚುವಲ್ ಫಂಡ್ ಕಂಪನಿಗಳ ಸ್ಕೀಂ ಫ್ಯಾಕ್ಟ್ ಶೀಟ್ (ಯೋಜನೆ ವಸ್ತುಸ್ಥಿತಿ ಮಾಹಿತಿ) ಮತ್ತು ಕೀ ಇನ್ಫಾರ್ಮೇಷನ್ ಮೆಮೊರಂಡಂಗಳನ್ನು (ಅತಿ ಮಹತ್ವದ ಲಿಖಿತ ಮಾಹಿತಿ) ಪರಿಶೀಲಿಸಬೇಕು. ಈ ಮಾಹಿತಿಗಳು ಮ್ಯೂಚುವಲ್ ಫಂಡ್ ವೆಬ್‌ಸೈಟ್‌
ಗಳಲ್ಲಿ ಲಭ್ಯ.

ಎಸ್ಐಪಿನೋ, ಭಾರಿ ಮೊತ್ತದ ಹೂಡಿಕೆನೋ: ವ್ಯವಸ್ಥಿತ ಹೂಡಿಕೆ ಯೋಜನೆ ( ಸಿಪ್) ಅಥವಾ ಭಾರಿ ಮೊತ್ತದ ಹೊಡಿಕೆ ಪೈಕಿ ಯಾವ ಹೂಡಿಕೆ ಸೂಕ್ತ ಎನ್ನುವ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡುವುದು ಸಾಧ್ಯವಿಲ್ಲ. ಮ್ಯೂಚುವಲ್ ಫಂಡ್‌ಗಳ ಬಗ್ಗೆ ನಿಮಗೆ ಎಷ್ಟು ಅರಿವಿದೆ ಎನ್ನುವುದರ ಜತೆಗೆ ಯಾವ ಫಂಡ್‌ಗಳಲ್ಲಿ , ಯಾವ ಉದ್ದೇಶಕ್ಕಾಗಿ ನೀವು ಹೂಡಿಕೆ ಮಾಡಲು ಬಯಸಿದ್ದೀರಿ ಎನ್ನುವುದನ್ನು ಆಧರಿಸಿ ಇದನ್ನು ತೀರ್ಮಾನಿಸಬೇಕಾಗುತ್ತದೆ.

ಪ್ರತಿ ತಿಂಗಳ ವೇತನದಿಂದ ನಿರ್ದಿಷ್ಟ ಹಣವನ್ನು ಹೂಡಿಕೆ ಮಾಡುತ್ತ ದೊಡ್ಡ ಮೊತ್ತವನ್ನು ಪೇರಿಸಲು ‘ಸಿಪ್’ ಸೂಕ್ತ ಆಯ್ಕೆ. ನಿಮ್ಮ ಬಳಿ ಬೋನಸ್, ಆಸ್ತಿ ಮಾರಾಟ, ಅಥವಾ ನಿವೃತ್ತಿಯಿಂದ ಬಂದಿರುವ ಹೆಚ್ಚುವರಿ ಹಣ ಇದ್ದು, ಅದನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಇದಲ್ಲಿ, ಅದನ್ನು ಡೆಟ್ ಅಥವಾ ಲಿಕ್ವಿಡ್ ಫಂಡ್‌ಗಳಲ್ಲಿ ತೊಡಗಿಸಬಹುದು. ಆದರೆ ನೀವು ಮ್ಯೂಚುವಲ್ ಫಂಡ್ ವಲಯಕ್ಕೆ ಹೊಸಬರಾದರೆ ಸಿಪ್ ಹೂಡಿಕೆ ಸೂಕ್ತ.

ಚುನಾವಣೆ ಆಯ್ತು, ಪೇಟೆಯಲ್ಲಿ ಮುಂದೇನು?

ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಷೇರು ಮಾರುಕಟ್ಟೆಗೆ ಏನಾಗುತ್ತದೆ? ಒಂದೊಮ್ಮೆ ಮತ್ತೊಂದು ಸರ್ಕಾರ ದೇಶದ ಚುಕ್ಕಾಣಿ ಹಿಡಿದರೆ ಮಾರುಕಟ್ಟೆಯಲ್ಲಿ ಆಗಬಹುದಾದ ಬದಲಾವಣೆಗಳೇನು? ಹೀಗೆ ಚುನಾವಣೆ ಮತ್ತು ಷೇರು ಮಾರುಕಟ್ಟೆ ಕುರಿತು ಸರಣಿ ಚರ್ಚೆಗಳು ಹೂಡಿಕೆದಾರರ ವಲಯದಲ್ಲಿ ವ್ಯಾಪಕವಾಗಿದ್ದವು. ಆದರೆ ಈಗ ಅದೆಲ್ಲದಕ್ಕೂ ಪೂರ್ಣ ವಿರಾಮ ಬಿದ್ದಿದೆ. ನಿರೀಕ್ಷೆಯಂತೆ ಮತ್ತೆ ಬಿಜೆಪಿ ಅಧಿಕಾರಕ್ಕೇರಿದೆ. ಇಂತಹ ಸಂದರ್ಭದಲ್ಲಿ ಹೊಸ ಸರ್ಕಾರದಿಂದ ಷೇರುಮಾರುಕಟ್ಟೆಗೆ ಸಿಗಬಹುದಾದ ಲಾಭವೇನು? ಮೋದಿ ಸರ್ಕಾರಕ್ಕೆ ಷೇರು ಮಾರುಕಟ್ಟೆ ಒಡ್ಡಬಹುದಾದ ಸವಾಲುಗಳೇನು? ಎನ್ನುವ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಮೋದಿ ಆಡಳಿತ ಅವಧಿಯಲ್ಲಿ ಸೆನ್ಸೆಕ್ಸ್ ಕೆಲ ಮಹತ್ವದ ಮೈಲುಗಲ್ಲುಗಳನ್ನು ನಿರ್ಮಿಸಿದೆ. 2014 , ಮೇ 26 ರಂದು ಮೋದಿ ಪ್ರಧಾನಿ ಪಟ್ಟಕ್ಕೇರಿದಾಗ ಷೇರು ಮಾರುಕಟ್ಟೆ 25,000 ಅಂಶಗಳ ಗಡಿ ದಾಟಿ ದಾಖಲೆ ನಿರ್ಮಿಸಿತ್ತು. ಅಲ್ಲಿಂದ, ಅಂದರೆ ಕಳೆದ 5 ವರ್ಷಗಳಲ್ಲಿ ಸೆನ್ಸೆಕ್ಸ್ 15,000 ಅಂಶಗಳ ಏರಿಕೆ ಕಂಡು ಹೊಸ ದಾಖಲೆ ಬರೆದಿದೆ. 2019, ಮೇ 23 ರಂದು ಸೆನ್ಸೆಕ್ಸ್ 40,000 ಅಂಶಗಳಿಗೆ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಅದೇ ದಿನ ನಿಫ್ಟಿ ಸೂಚ್ಯಂಕ ಸಹ 12,000 ಅಂಶಗಳ ಏರಿಕೆ ಕಂಡು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.

ಸ್ಥಿರ ಸರ್ಕಾರ ಪೇಟೆಗೆ ಪೂರಕ: ಸ್ಥಿರವಾದ ಸರ್ಕಾರ ಎನ್ನುವುದು ಯಾವುದೇ ಮಾರುಕಟ್ಟೆಗೆ ಪೂರಕ ಅಂಶ. ಸರ್ಕಾರ ಬದಲಾದಾಗ ಆರ್ಥಿಕ ನೀತಿಗಳು ಕೂಡ ಬದಲಾಗುತ್ತವೆ. ಹೀಗಾದಾದ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಸರ್ಕಾರದ ಬದಲಾವಣೆ ಆಗದಿದ್ದಾಗ ಆರ್ಥಿಕ ಸುಧಾರಣೆಗಳಿಗೆ ಅಡೆತಡೆಗಳಿರುವುದಿಲ್ಲ.

ಮುಂದಿವೆ ಸವಾಲು: ಮೋದಿ ಸರ್ಕಾರಕ್ಕೆ ಭಾರಿ ಬಹುಮತ ನೀಡಿರುವ ಜನರ ಮನದಲ್ಲಿ ದೇಶದ ಆರ್ಥಿಕ ಪ್ರಗತಿ ಬಗ್ಗೆ ದೊಡ್ಡ ನಿರೀಕ್ಷೆಗಳಿವೆ . ಅವನ್ನು ಈಡೇರಿಸುವ ಹೊಣೆಗಾರಿಕೆಯ ಕಠಿಣ ಹಾದಿ ಸರ್ಕಾರದ ಮುಂದಿದೆ. ಆರ್ಥಿಕತೆಯ ಮೂಲ ಬೇರುಗಳು ಸ್ಥಿರವಾಗಿ ಕಾಣಿಸಿದರೂ ಖರೀದಿಯಲ್ಲಿರುವ ನಿಧಾನಗತಿ, ರೈತರ ಸಂಕಷ್ಟ, ನಿರುದ್ಯೋಗ, ಅರ್ಥವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಗದು ಕೊರತೆ, ಆರಕ್ಕೇರದ ಮೂರಕ್ಕಿಳಿಯದಂತಿರುವ ಖಾಸಗಿ ವಲಯದ ಹೂಡಿಕೆ ಸೇರಿ ಹಲವು ಅಂಶಗಳು ಸರ್ಕಾರಕ್ಕೆ ಸವಾಲೊಡ್ಡಲಿವೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ), ಆಟೋಮೊಬೈಲ್ ಕ್ಷೇತ್ರ, ರಿಯಲ್ ಎಸ್ಟೇಟ್ ವಲಯಗಳು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನಾ ನಡುವಣ ವ್ಯಾಪಾರ ಬಿಕ್ಕಟ್ಟು,ಕಚ್ಚಾ ತೈಲ ಬೆಲೆ, ಹಣದುಬ್ಬರ ನಿಯಂತ್ರಣ, ಮತ್ತಿತರ ವಿದ್ಯಮಾನಗಳು ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಲಿವೆ.

ಈಗ ಹೂಡಿಕೆ ಸೂಕ್ತವೇ?: ಕಳೆದ 10 ವರ್ಷಗಳ ದತ್ತಾಂಶ ನೋಡಿದಾಗ ಷೇರುಪೇಟೆಯಲ್ಲಿನ ಹೂಡಿಕೆ ಶೇ 13 ರಷ್ಟು ಲಾಭ ತಂದುಕೊಟ್ಟಿರುವುದು ಕಂಡುಬರುತ್ತದೆ. ಈಗಲೂ ಹೂಡಿಕೆದಾರರು ದೀರ್ಘಾವಧಿಯತ್ತ ಗಮನಹರಿಸಿದರೆ ಚಿಂತೆ ಮಾಡಬೇಕಿಲ್ಲ. ಆದರೆ ಆಯ್ಕೆ ಮಾಡುವಾಗ ಎಚ್ಚರಿಕೆಯ ಹೆಜ್ಜೆ ಇಡುವುದು ಅಗತ್ಯ. ಮೂಲಸೌಕರ್ಯ, ವಿದ್ಯುತ್ ಉತ್ಪಾದನೆ, ಸಿಮೆಂಟ್ ಉತ್ಪಾದನೆ, ಸರ್ಕಾರಿ ಸ್ವಾಮ್ಯದ ಕಂಪನಿಗಳು, ರಕ್ಷಣಾ ವಲಯದ ಕಂಪನಿಗಳು , ಫಾರ್ಮಾ ಕಂಪನಿಗಳಲ್ಲಿ ಹೂಡಿಕೆ ಮಾಡಲು ಮನಸ್ಸು ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ದೇಶಿಯ ಹೂಡಿಕೆ ಪ್ರಮಾಣವೂ ಹೆಚ್ಚಳವಾಗುತ್ತಿರುವುದರಿಂದ ಅದು ಕೂಡ ಪೂರಕ ಅಂಶವಾಗಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.