ADVERTISEMENT

ಹೆಚ್ಚಿದ ಕೋವಿಡ್, ಷೇರುಪೇಟೆ ಅಲ್ಪ ಕುಸಿತ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 19:31 IST
Last Updated 11 ಏಪ್ರಿಲ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಏಪ್ರಿಲ್ 9ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಪ್ರಮಾಣದಲ್ಲಿ ಕುಸಿತ ದಾಖಲಿಸಿವೆ. 49,591 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇಕಡ 0.87ರಷ್ಟು ತಗ್ಗಿದೆ. 14,834 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.21ರಷ್ಟು ಇಳಿಕೆಯಾಗಿದೆ. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.2ರಷ್ಟು ಗಳಿಕೆ ಕಂಡಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2.5ರಷ್ಟು ಏರಿಕೆ ದಾಖಲಿಸಿದೆ.

ದೇಶೀಯವಾಗಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾದರೂ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿರುವ ಸಕಾರಾತ್ಮಕತೆ, ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳಲ್ಲಿ ಉತ್ತಮ ಲಾಭದ ನಿರೀಕ್ಷೆ, ಆರ್‌ಬಿಐ ರೆಪೊ ದರದಲ್ಲಿ ಬದಲಾವಣೆ ಮಾಡಿದಿರುವುದು ಸೇರಿದಂತೆ ಕೆಲವು ಅಂಶಗಳು ಮಾರುಕಟ್ಟೆಯಲ್ಲಿ ಏರಿಳಿತದ ನಡುವೆಯೂ ಒಂದಿಷ್ಟು ಸ್ಥಿರತೆ ಕಾಯ್ದುಕೊಳ್ಳಲು ಸಹಕಾರ ನೀಡಿವೆ.

ಇನ್ನು ವಲಯವಾರು ಪ್ರಗತಿಯ ವಿಚಾರಕ್ಕೆ ಬಂದರೆ ನಿಫ್ಟಿ ಲೋಹ ಸೂಚ್ಯಂಕ ಶೇ 6.6ರಷ್ಟು, ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 5.3ರಷ್ಟು ಮತ್ತು ಫಾರ್ಮಾ ಸೂಚ್ಯಂಕ ಶೇ 5ರಷ್ಟು ಹೆಚ್ಚಳ ಕಂಡಿವೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 4ರಷ್ಟು ಕುಸಿತ ಕಂಡಿದೆ.

ADVERTISEMENT

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 22ರಷ್ಟು, ಅದಾನಿ ಪೋರ್ಟ್ಸ್ ಶೇ 12ರಷ್ಟು, ವಿಪ್ರೋ ಶೇ 8ರಷ್ಟು, ಸಿಪ್ಲಾ ಶೇ 8ರಷ್ಟು, ಟೆಕ್ ಮಹೀಂದ್ರ ಶೇ 6ರಷ್ಟು ಗಳಿಸಿವೆ. ಬಜಾಜ್ ಫೈನಾನ್ಸ್ ಶೇ 7.5ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 7ರಷ್ಟು, ಎಕ್ಸಿಸ್ ಬ್ಯಾಂಕ್ ಶೇ 6.5ರಷ್ಟು, ಎಸ್‌ಬಿಐ ಶೇ 5ರಷ್ಟು, ಐಸಿಐಸಿಐ ಬ್ಯಾಂಕ್ ಶೇ 4.5ರಷ್ಟು ಕುಸಿದಿವೆ.

ಮುನ್ನೋಟ: ಸದ್ಯದ ಸ್ಥಿತಿಯಲ್ಲಿ ಹೂಡಿಕೆದಾರರು ಗೊಂದಲದಲ್ಲಿದ್ದಾರೆ ಎನ್ನಬಹುದು. ಅಭಿವೃದ್ಧಿ ಹೊಂದಿರುವ ಪ್ರಬಲ ದೇಶಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕಾಗಿ ನಡೆಯುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ನಿಧಾನಗತಿಯಲ್ಲಿದೆ. ಈ ಬೆಳವಣಿಗೆಯು, ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಗಳಿಂದ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳತ್ತ ಹೂಡಿಕೆದಾರರು ಚಿತ್ತಹರಿಸುವಂತೆ ಮಾಡುತ್ತದೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ರೂಪಾಯಿ ಮೌಲ್ಯ ಉತ್ತಮಗೊಂಡಾಗಲೆಲ್ಲ ಷೇರುಪೇಟೆ ಸೂಚ್ಯಂಕ ನಿಫ್ಟಿ ಏರಿಕೆ ಹಾದಿಯಲ್ಲಿ ಸಾಗಿದೆ, ರೂಪಾಯಿ ಮೌಲ್ಯ ಕುಸಿಯುತ್ತ ಸಾಗಿದರೆ ನಿಫ್ಟಿ ಹೇಗೆ ವರ್ತಿಸಲಿದೆ ಎಂಬ ಪ್ರಶ್ನೆ ಹೂಡಿಕೆದಾರರನ್ನು ಕಾಡುತ್ತಿದೆ. ಕೋವಿಡ್ ಪ್ರಕರಣಗಳುಹೆಚ್ಚಾಗುತ್ತಿರುವುದರಿಂದ ಐ.ಟಿ, ಲೋಹ ಮತ್ತು ಫಾರ್ಮಾ ವಲಯಗಳ ಬಗ್ಗೆ ಒಲವು ಹೆಚ್ಚಿದೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶ ಬಹುತೇಕ ಸಕಾರಾತ್ಮಕವಾಗಿರಲಿದೆ ಎಂಬ ನಿರೀಕ್ಷೆಯಿದೆ. ಈ ವಾರ ಟಿಸಿಎಸ್, ಇನ್ಫೊಸಿಸ್, ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.