ADVERTISEMENT

ಏಷಿಯನ್‌ ಪೇಂಟ್ಸ್‌, ಇನ್ಫೊಸಿಸ್‌ ಷೇರು ಬೆಲೆ ಗಳಿಕೆ; ಸೆನ್ಸೆಕ್ಸ್‌ ಹಾವು–ಏಣಿ ಆಟ

ಏಜೆನ್ಸೀಸ್
Published 25 ಮೇ 2021, 6:10 IST
Last Updated 25 ಮೇ 2021, 6:10 IST
ಮುಂಬೈ ಷೇರುಪೇಟೆ ಕಚೇರಿಯ ಕಟ್ಟಡ–ಸಾಂದರ್ಭಿಕ ಚಿತ್ರ
ಮುಂಬೈ ಷೇರುಪೇಟೆ ಕಚೇರಿಯ ಕಟ್ಟಡ–ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಹಲವು ಭಾಗಗಳಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದು ಹಾಗೂ ಕಂಪನಿಗಳು ಉತ್ತಮ ಲಾಭಾಂಶ ದಾಖಲಿಸಿರುವುದು ಹೂಡಿಕೆದಾರರಲ್ಲಿ ಷೇರು ಖರೀದಿಯ ಉತ್ಸಾಹ ಹೆಚ್ಚಿಸಿದೆ. ಮಂಗಳವಾರ ವಹಿವಾಟು ಆರಂಭದಲ್ಲಿ ಸೆನ್ಸೆಕ್ಸ್‌ 250 ಅಂಶ ಹೆಚ್ಚಳ ಕಂಡಿದೆ. ಇನ್ಫೊಸಿಸ್‌, ಏಷಿಯನ್‌ ಪೇಂಟ್ಸ್‌ ಷೇರುಗಳು ಗಳಿಕೆ ದಾಖಲಿಸಿವೆ.

ಸೆನ್ಸೆಕ್ಸ್‌ 265 ಅಂಶಗಳ ವರೆಗೂ ಏರಿಕೆಯಾಗಿ 50,916.97 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ. ನಿಫ್ಟಿ 86 ಅಂಶ ಹೆಚ್ಚಳವಾಗಿ 15,283.70 ಅಂಶಗಳು ತಲುಪಿದೆ. ಏಷಿಯನ್‌ ಪೇಂಟ್ಸ್‌ ಷೇರು ಶೇ 3ರಷ್ಟು ಹೆಚ್ಚಳ ಕಂಡಿದೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಟೈಟಾನ್‌, ಬಜಾಜ್‌ ಫಿನ್‌ಸರ್ವ್‌, ನೆಸ್ಟ್ಲೆ ಇಂಡಿಯಾ, ಎನ್‌ಟಿಪಿಸಿ, ಎಚ್‌ಯುಎಲ್‌, ಒಎನ್‌ಜಿಸಿ ಹಾಗೂ ಇನ್ಫೊಸಿಸ್‌ ಷೇರುಗಳ ಬೆಲೆ ಸಹ ಏರಿಕೆಯಾಗಿದೆ. ಆದರೆ, ಬ್ಯಾಂಕ್‌ ಷೇರುಗಳು ಇಳಿಮುಖವಾಗಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್, ಎಸ್‌ಬಿಐ ಹಾಗೂ ಡಾ.ರೆಡ್ಡೀಸ್‌ ಷೇರು ಬೆಲೆ ಕಡಿಮೆಯಾಗಿದೆ.

ADVERTISEMENT

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 111.42 ಅಂಶ ಚೇತರಿಕೆ ಕಂಡು 50,651.90 ಅಂಶಗಳು ತಲುಪಿತ್ತು ಹಾಗೂ ನಿಫ್ಟಿ 22.40 ಅಂಶ ಹೆಚ್ಚಳದೊಂದಿಗೆ 15,197.70 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ ₹585.36 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರುಗತಿಯಲ್ಲಿದ್ದ ಸೆನ್ಸೆಕ್ಸ್‌ ಬೆಳಿಗ್ಗೆ 11:30ರ ವೇಳೆಗೆ ಇಳಿಮುಖವಾಗಿದ್ದು, 50,709 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.