ADVERTISEMENT

ಶುಕ್ರವಾರ ಕರಡಿ ಹಿಡಿತದಲ್ಲಿ ಷೇರುಪೇಟೆ: 1,800 ಅಂಶ ಕುಸಿದ ಸೆನ್ಸೆಕ್ಸ್

ಏಜೆನ್ಸೀಸ್
Published 26 ಫೆಬ್ರುವರಿ 2021, 16:29 IST
Last Updated 26 ಫೆಬ್ರುವರಿ 2021, 16:29 IST
ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಕರಡಿ ಹಿಡಿತ–ಪ್ರಾತಿನಿಧಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಕರಡಿ ಹಿಡಿತ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಷೇರುಪೇಟೆ ಶುಕ್ರವಾರ ಕರಡಿ ಹಿಡಿತಕ್ಕೆ ಸಿಲುಕಿತು. ವಹಿವಾಟು ಆರಂಭದಿಂದ ಇಳಿಮುಖವಾದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, ಮಧ್ಯಾಹ್ನದ ನಂತರ ಇನ್ನಷ್ಟು ಕುಸಿತ ಕಂಡಿತು. ಸೂಚ್ಯಂಕ ಶೇ 3ರಷ್ಟು ಇಳಿಕೆಯಾಗಿದೆ.

ಷೇರು ಮಾರಾಟದಿಂದ ಉಂಟಾದ ತಲ್ಲಣದಿಂದ ಸೆನ್ಸೆಕ್ಸ್‌ 1,600 ಅಂಶ ಇಳಿಕೆಯಾಗಿ 50,000 ಅಂಶಗಳ ಗಡಿಯಿಂದ ಕೆಳಗಿಳಿದಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 49,171 ಅಂಶ ಕನಿಷ್ಠ ಮಟ್ಟ ತಲುಪಿತ್ತು. ನಿಫ್ಟಿ 50 ಸಹ 14,600 ಅಂಶಗಳಿಗಿಂತ ಕೆಳಗೆ ಇಳಿದಿದೆ. ಐಸಿಐಸಿಐ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ, ಎಸ್‌ಬಿಐ ಬ್ಯಾಂಕ್‌ ಷೇರುಗಳ ಬೆಲೆ ಶೇ 3ರಿಂದ 5ರಷ್ಟು ಕಡಿಮೆಯಾಗಿದೆ.

ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಕಂಪನಿಗಳ ಷೇರುಗಳು ಕ್ರಮವಾಗಿ ಶೇ 2 ಮತ್ತು ಶೇ 1ರಷ್ಟು ಕುಸಿತ ಕಂಡಿವೆ. ಯುರೋಪ್‌ ಮತ್ತು ಅಮೆರಿಕ ಸೇರಿದಂತೆ ಜಾಗತಿಕ ಷೇರುಪೇಟೆಗಳ ಪರಿಣಾಮ ದೇಶದ ಷೇರುಪೇಟೆ ಹೂಡಿಕೆದಾರರ ಮೇಲೂ ಆಗಿದ್ದು, ಹೂಡಿಕೆ ಹಿಂಪಡೆಯಲು ಮುಂದಾಗಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆಯಲ್ಲಿ 1,913 ಕಂಪನಿಗಳ ಷೇರು ಬೆಲೆ ಇಳಿಮುಖವಾಗಿದ್ದರೆ, 852 ಕಂಪನಿಗಳ ಷೇರು ಬೆಲೆ ಹೆಚ್ಚಳ ಕಂಡಿದೆ. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 67 ಪೈಸೆ ಕಡಿಮೆಯಾಗಿದ್ದು, ಪ್ರತಿ ಡಾಲರ್‌ಗೆ ₹73.10ರಲ್ಲಿ ವಹಿವಾಟು ನಡೆದಿದೆ.

ಮಧ್ಯಾಹ್ನ 3ಗಂಟೆಗೆ ಸೆನ್ಸೆಕ್ಸ್‌ 1,867.93 ಅಂಶ (ಶೇ 3.66) ಕಡಿಮೆಯಾಗಿ 49,171.38 ಅಂಶಕ್ಕೆ ಕುಸಿದರೆ, ನಿಫ್ಟಿ 550.25 ಅಂಶ (ಶೇ 3.64) ಕಡಿಮೆಯಾಗಿ 14,547.10 ಅಂಶಗಳಲ್ಲಿ ವಹಿವಾಟು ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.