ADVERTISEMENT

ಜೊಮ್ಯಾಟೊ ಐಪಿಒ: ಪ್ರತಿ ಷೇರಿಗೆ ₹ 72ರಿಂದ 76 ನಿಗದಿ

ರಾಯಿಟರ್ಸ್
Published 8 ಜುಲೈ 2021, 7:31 IST
Last Updated 8 ಜುಲೈ 2021, 7:31 IST
ಜೊಮ್ಯಾಟೊ ಕಂಪನಿಯ ಸಿಬ್ಬಂದಿ–ಸಾಂದರ್ಭಿಕ ಚಿತ್ರ
ಜೊಮ್ಯಾಟೊ ಕಂಪನಿಯ ಸಿಬ್ಬಂದಿ–ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದಾದ್ಯಂತ ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಸೇವೆ ನೀಡುವ ಜೊಮ್ಯಾಟೊ ಕಂಪನಿಯು ಸಾರ್ವಜನಿಕರಿಗೆ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಪ್ರಕ್ರಿಯೆಯಲ್ಲಿ ಪ್ರತಿ ಷೇರು ಬೆಲೆಯು ₹ 72ರಿಂದ ₹76ರವರೆಗೂ ನಿಗದಿಯಾಗಿರುವುದಾಗಿ ಗುರುವಾರ ತಿಳಿಸಿದೆ.

ಜೊಮ್ಯಾಟೊದ ಐಪಿಒಗೆ ಜುಲೈ 14ರಿಂದ ಜುಲೈ 16ರ ವರೆಗೂ ಬಿಡ್‌ ಸಲ್ಲಿಸಲು ಅವಕಾಶವಿದೆ. ಕಂಪನಿಯು1.25 ಬಿಲಿಯನ್‌ ಡಾಲರ್‌ (₹ 9,341 ಕೋಟಿ ) ಮೌಲ್ಯದ ಐಪಿಒಗೆ ಮುಂದಾಗಿದೆ.

ಕೊರೊನಾ ಸಾಂಕ್ರಾಮಿಕದ ಕಾರಣಗಳಿಂದಾಗಿ ಆನ್‌ಲೈನ್‌ ಆರ್ಡರ್‌ಗಳ ಮೂಲಕ ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳಿಂದ ಆಹಾರವನ್ನು ಮನೆ ಅಥವಾ ಕಚೇರಿಗೆ ತರಿಸಿಕೊಳ್ಳುವುದು ಹೆಚ್ಚಿದೆ. ಏಪ್ರಿಲ್‌ನಲ್ಲಿ ಐಪಿಒಗಾಗಿ ಜೊಮ್ಯಾಟೊ ಕಂಪನಿಯು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮನವಿ ಸಲ್ಲಿಸಿತ್ತು. ಇದು ದೇಶದಲ್ಲಿ ಐಪಿಒಗೆ ತೆರೆದುಕೊಂಡಿರುವ ಮೊದಲ ಆಹಾರ ಡೆಲಿವರಿ ಕಂಪನಿಯಾಗಿದೆ.

ADVERTISEMENT

ದೇಶದ ಷೇರುಪೇಟೆಗಳು ಏರುಗತಿಯಲ್ಲಿರುವುದರಿಂದ ಐಪಿಒಗೆ ಮುಂದಾಗುತ್ತಿರುವ ಕಂಪನಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2021ರಲ್ಲಿ ಈವರೆಗೂ 22 ಕಂಪನಿಗಳು ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆಗಳು ಹಾಗೂ ದೇಶದ ರಿಟೇಲ್‌ ಹೂಡಿಕೆದಾರರ ಪ್ರಮಾಣ ಏರಿಕೆಯಿಂದ ಷೇರುಪೇಟೆಗೆ ಹಣದ ಹರಿವು ಹೆಚ್ಚಳವಾಗಿದೆ.

ಇನ್ಫೊ ಎಡ್ಜ್‌ (ಇಂಡಿಯಾ) ಲಿಮಿಟೆಡ್‌ ಕಂಪನಿಯು ಜೊಮ್ಯಾಟೊದಲ್ಲಿ ಹೊಂದಿರುವ ಷೇರುಗಳನ್ನು ಆಫರ್‌ ಫಾರ್ ಸೇಲ್‌ (ಒಎಫ್‌ಸಿ) ಮೂಲಕ ಮಾರಾಟ ಮಾಡಲಿದೆ. ಹೊಸದಾಗಿ ಜೊಮ್ಯಾಟೊ 9,000 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ವಿತರಣೆ ಮಾಡಲಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಪ್ರತಿ ಷೇರು ಗರಿಷ್ಠ ಬೆಲೆಗೆ ವಿತರಣೆಯಾದರೆ, ಕಂಪನಿಯ ಮಾರುಕಟ್ಟೆ ಮೌಲ್ಯ ₹59,623 ಕೋಟಿಗೆ ಏರಿಕೆಯಾಗಲಿದೆ.

2008ರಲ್ಲಿ ಆರಂಭವಾದ ಜೊಮ್ಯಾಟೊ, ಭಾರತದಲ್ಲಿ ಸ್ವಿಗ್ಗಿ ಮತ್ತು ಅಮೆಜಾನ್‌ ಜೊತೆ ಪೈಪೋಟಿ ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.