ADVERTISEMENT

ಷೇರು ಮಾತು – ಇನ್ವೆಸ್ಟಿಂಗ್ ಅಥವಾ ಟ್ರೇಡಿಂಗ್: ಯಾವುದು ಸೂಕ್ತ?

ಶರತ್ ಎಂ.ಎಸ್.
Published 12 ಜುಲೈ 2021, 19:55 IST
Last Updated 12 ಜುಲೈ 2021, 19:55 IST
   

ಷೇರು ಮಾರುಕಟ್ಟೆಯಲ್ಲಿ ಹಣ ಗಳಿಸಲು ಎರಡು ಮಾರ್ಗಗಳಿವೆ. ಒಂದನೆಯದ್ದು ದೀರ್ಘಾವಧಿ ಹೂಡಿಕೆ (ಇನ್ವೆಸ್ಟಿಂಗ್), ಮತ್ತೊಂದು ಅಲ್ಪಾವಧಿ ಹೂಡಿಕೆ (ಟ್ರೇಡಿಂಗ್). ಇನ್ವೆಸ್ಟಿಂಗ್‌ನಲ್ಲಿ ಹೂಡಿಕೆದಾರರು ದೀರ್ಘಾವಧಿಗೆ ಷೇರುಗಳನ್ನು ಖರೀದಿಸಿಟ್ಟುಕೊಂಡು ನಿರ್ದಿಷ್ಟ ಕಂಪನಿ ಬೆಳವಣಿಗೆ ಸಾಧಿಸಿದಂತೆ ತಾವೂ ಲಾಭ ಗಳಿಸುತ್ತಾರೆ.

ಟ್ರೇಡಿಂಗ್‌ನಲ್ಲಿ ಹೂಡಿಕೆದಾರರು ಮಾರುಕಟ್ಟೆಯ ಏರಿಳಿತಗಳ ಅನುಕೂಲ ಪಡೆದು ಅಲ್ಪಾವಧಿಯಲ್ಲಿ ಲಾಭಗಳಿಸಲು ಪ್ರಯತ್ನಿಸುತ್ತಾರೆ. ಈ ಎರಡು ಮಾರ್ಗಗಳಲ್ಲಿ ನಿಮಗೆ ಸರಿಹೊಂದುವ ಹಾದಿ ಯಾವುದು, ತಿಳಿಯೋಣ ಬನ್ನಿ.

ದೀರ್ಘಾವಧಿ ಹೂಡಿಕೆ: ಆರ್ಥಿಕವಾಗಿ ಉತ್ತಮವಾಗಿರುವ ಮತ್ತು ಭವಿಷ್ಯದ ಬೆಳವಣಿಗೆಯ ಬಗ್ಗೆ ಸ್ಪಷ್ಟ ಯೋಜನೆ ಇರುವ ಕಂಪನಿಗಳ ಷೇರನ್ನು ಅಧ್ಯಯನದ ಮೂಲಕ ಆಯ್ಕೆ ಮಾಡಿ ಆ ಕಂಪನಿಗಳಲ್ಲಿ ಹಣ ತೊಡಗಿಸಿ, ಕೆಲವು ಕಾಲ ಮಾರುಕಟ್ಟೆ ಏರಿಳಿತಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸುಮ್ಮನಿರುವುದು ಇನ್ವೆಸ್ಟಿಂಗ್. ಇಲ್ಲಿ ಹೂಡಿಕೆದಾರ ದೀರ್ಘಾವಧಿಯಲ್ಲಿ ಉತ್ತಮ ಲಾಭಗಳಿಸುವ ಉದ್ದೇಶ ಹೊಂದಿರುತ್ತಾನೆ. ಇನ್ವೆಸ್ಟಿಂಗ್‌ಗೆ ನಾವು ನಮ್ಮ ಹೆಚ್ಚಿನ ಸಮಯ ಮೀಸಲಿಡಬೇಕಿಲ್ಲ.

ADVERTISEMENT

ಟ್ರೇಡಿಂಗ್‌ನಲ್ಲಿ ಇರುವಷ್ಟು ರಿಸ್ಕ್ ಇಲ್ಲಿ ಇರುವುದಿಲ್ಲ. ಉದಾಹರಣೆಗೆ, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಐ.ಟಿ. ಕಂಪನಿಯೊಂದರ ಷೇರನ್ನು ನೀವು ಇಂದು ₹ 600ಕ್ಕೆ ಖರೀದಿಸಿರುತ್ತೀರಿ ಎಂದುಕೊಳ್ಳೋಣ. ಕೆಲವು ಸಮಯದ ಬಳಿಕ ಅದೇ ಷೇರಿನ ಬೆಲೆ ₹ 2,000 ಆಗಬಹುದು. ಈ ಏರಿಕೆಯಿಂದ ಹೂಡಿಕೆದಾರನಿಗೆ ಲಾಭವಾಗುತ್ತದೆ. ಆಗ ಷೇರನ್ನು ಮಾರಾಟ ಮಾಡಿ, ಲಾಭವನ್ನು ನಗದಾಗಿ ಪರಿವರ್ತಿಸಿಕೊಳ್ಳಬಹುದು.

ಅಲ್ಪಾವಧಿ ಹೂಡಿಕೆ (ಟ್ರೇಡಿಂಗ್): ಮಾರುಕಟ್ಟೆ ಏಳಲಿ ಅಥವಾ ಬೀಳಲಿ, ಟ್ರೇಡಿಂಗ್‌ನ ಮುಖ್ಯ ಉದ್ದೇಶ ಥಟ್ ಅಂತ ಲಾಭ ಗಳಿಸುವುದು. ಟ್ರೇಡಿಂಗ್ ಅನ್ನೋದು ಸೆಕೆಂಡು, ನಿಮಿಷ ಮತ್ತು ದಿನಗಳ ಲೆಕ್ಕದಲ್ಲಿ ನಡೆಯುತ್ತದೆ. ಇಲ್ಲಿ ರಿಸ್ಕ್ ಹೆಚ್ಚು. ಆದರೆ, ಹೂಡಿಕೆ ನಿರ್ಧಾರ ಸರಿಯಾದರೆ ಲಾಭದ ಸಾಧ್ಯತೆ ಜಾಸ್ತಿ.

ಉದಾಹರಣೆಗೆ ಇಂದು ಬೆಳಗ್ಗೆ 10 ಗಂಟೆಗೆ ವ್ಯಕ್ತಿಯೊಬ್ಬ ಪ್ರತಿ ಷೇರಿಗೆ ₹ 200ರಂತೆ ಕಂಪನಿಯೊಂದರ ನೂರು ಷೇರುಗಳನ್ನು ಖರೀದಿಸುತ್ತಾನೆ ಎಂದಿಟ್ಟುಕೊಳ್ಳಿ. ಮಧ್ಯಾಹ್ನ 12 ಗಂಟೆಗೆ ಆ ಷೇರಿನ ಬೆಲೆ ₹ 220 ಆಗುತ್ತದೆ. ಆಗ ಟ್ರೇಡರ್ ಷೇರುಗಳನ್ನು ಮಾರಾಟ ಮಾಡಿ ಲಾಭ ಗಳಿಸಲು ಮುಂದಾಗುತ್ತಾನೆ. ನೆನಪಿರಲಿ, ₹ 200 ಕೊಟ್ಟು ಬೆಳಿಗ್ಗೆ ಖರೀದಿಸಿದ್ದ ಷೇರಿನ ಬೆಲೆ ಸಂಜೆ ವೇಳೆಗೆ ₹ 170 ಕೂಡ ಆಗಬಹುದು. ಹೀಗಾಗಿ ಟ್ರೇಡಿಂಗ್‌ನಲ್ಲಿ ಲಾಭ-ನಷ್ಟಗಳೆರಡರ ಸಾಧ್ಯತೆ ಹೆಚ್ಚು. ಟ್ರೇಡಿಂಗ್ ಅನ್ನುವುದು ಪೂರ್ಣಾವಧಿ ಉದ್ಯೋಗವಿದ್ದಂತೆ, ಇದರಲ್ಲಿ ಬಹಳ ಗಂಭೀರವಾಗಿ ತೊಡಗಿಸಿಕೊಳ್ಳಬೇಕು.

ಮಾರುಕಟ್ಟೆಯ ಆಳ–ಅಗಲ ಸರಿಯಾಗಿ ತಿಳಿದಿದ್ದರೆ ಮಾತ್ರ ಟ್ರೇಡರ್ ಆಗಬಹುದು. ಪರಿಣತಿ ಇಲ್ಲದೆ ಟ್ರೇಡಿಂಗ್ ಮಾಡಿದರೆ ನಿಮ್ಮ ದುಡ್ಡು ಬೆಣ್ಣೆಯಂತೆ ಕರಗಬಹುದು. ಹೂಡಿಕೆ ಅನ್ನುವುದು ನಿಧಾನಗತಿಯ ಓಟ. ಅರಿತು ಹೂಡಿಕೆ ಮಾಡಿದರೆ ಲಾಭದ ಸಿಹಿ ಉಣ್ಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.