ADVERTISEMENT

ಹೂಡಿಕೆದಾರರ ಸಂಪತ್ತು ₹ 7.45 ಲಕ್ಷ ಕೋಟಿ ವೃದ್ಧಿ

ಷೇರುಪೇಟೆಯ ವಾರದ ವಹಿವಾಟು ಸಕಾರಾತ್ಮಕ ಅಂತ್ಯ

​ಪ್ರಜಾವಾಣಿ ವಾರ್ತೆ
Published 22 ಮೇ 2021, 19:18 IST
Last Updated 22 ಮೇ 2021, 19:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದೇಶದ ಷೇರುಪೇಟೆಗಳ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯವಾಗಿದೆ. ಹೂಡಿಕೆದಾರರ ಸಂಪತ್ತು ₹ 7.45 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದಾಗಿ ಮುಂಬೈ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 218.05 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಕೋವಿಡ್‌–19 ಪ್ರಕರಣಗಳು ಕಡಿಮೆ ಆಗುತ್ತಿರುವುದು ಹಾಗೂ ಕಂಪನಿಗಳ ತ್ರೈಮಾಸಿಕ ಫಲಿತಾಂಶವು ಮಾರುಕಟ್ಟೆಯ ನಿರೀಕ್ಷೆಗೆ ಅನುಗುಣವಾಗಿ ಇರುವುದು ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿವೆ.

2020–21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಮುಖ ಕಂಪನಿಗಳ ಹಣಕಾಸು ಸಾಧನೆಯು ಮಾರುಕಟ್ಟೆಯ ನಿರೀಕ್ಷೆಯಂತೆಯೇ ಉತ್ತಮವಾಗಿದೆ. ಇದು ಆಯಾ ಕಂಪನಿಗಳ ಷೇರುಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗುತ್ತಿದೆ. ಮುಖ್ಯವಾಗಿ ನಿಫ್ಟಿ ಮಿಡ್‌ಕ್ಯಾಪ್‌ ಸೂಚ್ಯಂಕವು ಮೇ ತಿಂಗಳಿನಲ್ಲಿ ಇದುವರೆಗೆ ಶೇ 4.5ರಷ್ಟು ಏರಿಕೆ ಕಂಡಿವೆ. ಆದರೆ ನಿಫ್ಟಿ ಸೂಚ್ಯಂಕವು ಶೇ 2ರಷ್ಟು ಮಾತ್ರವೇ ಏರಿಕೆಯಾಗಿದೆ. ಈ ಪ್ರವೃತ್ತಿಯು ಮುಂದುವರಿಯುವ ಸಾಧ್ಯತೆ ಇದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ADVERTISEMENT

ಮಾರುಕಟ್ಟೆಯಲ್ಲಿಸದ್ಯ, ಬ್ಯಾಂಕಿಂಗ್‌ ವಲಯವು ದುರ್ಬಲ ಆಗಿದೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ ವಸೂಲಾಗದ ಸಾಲ (ಎನ್‌ಪಿಎ) ಹೆಚ್ಚಾಗುವ ಆತಂಕ ಮತ್ತು ಸಾಲ ನೀಡಿಕೆಯಲ್ಲಿನ ನಿಧಾನಗತಿಯ ಬೆಳವಣಿಗೆಯು ಉತ್ತಮ ಬ್ಯಾಂಕ್‌ಗಳ ಷೇರುಗಳನ್ನೂ ಸಹ ಒತ್ತಡಕ್ಕೆ ಸಿಲುಕುವಂತೆ ಮಾಡಿವೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರಿ ಸಾಲಪತ್ರಗಳ ಮೇ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯ ಆಗಲಿದ್ದು, ಷೇರುಪೇಟೆಯ ವಹಿವಾಟಿನಲ್ಲಿ ಹೆಚ್ಚಿನ ಏರಿಳಿತ ಉಂಟುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು 46 ಪೈಸೆಗಳಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.