ADVERTISEMENT

ಹೂಡಿಕೆದಾರರ ಸಂಪತ್ತಿನ ಹೆಚ್ಚಳ ₹90.82 ಲಕ್ಷ ಕೋಟಿ!

ಪಿಟಿಐ
Published 31 ಮಾರ್ಚ್ 2021, 16:15 IST
Last Updated 31 ಮಾರ್ಚ್ 2021, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2020–21ನೇ ಹಣಕಾಸು ವರ್ಷದಲ್ಲಿ ಹೂಡಿಕೆದಾರರ ಸಂಪತ್ತಿನ ಒಟ್ಟು ಮೌಲ್ಯದಲ್ಲಿ ₹ 90.82 ಲಕ್ಷ ಕೋಟಿ ಹೆಚ್ಚಳ ಆಗಿದೆ. ಷೇರು ಮಾರುಕಟ್ಟೆಗಳು ಕಂಡ ಅಸಾಮಾನ್ಯ ‍ಪ್ರಮಾಣದ ಏರಿಕೆಯು ಇದಕ್ಕೆ ಕಾರಣ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2020–21ನೇ ಸಾಲಿನಲ್ಲಿ ಒಟ್ಟು 20,040 ಅಂಶಗಳ ಏರಿಕೆ ದಾಖಲಿಸಿದೆ. ಕೋವಿಡ್‌–19 ಸಾಂಕ್ರಾಮಿಕ ತಂದಿತ್ತ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸೆನ್ಸೆಕ್ಸ್ ಅಸಾಮಾನ್ಯ ಎನ್ನುವಂತಹ ಏರಿಕೆಯನ್ನು ಕಂಡಿತು.

ಸಾಂಕ್ರಾಮಿಕದ ಕಾರಣದಿಂದಾಗಿ ಈ ಆರ್ಥಿಕ ವರ್ಷವು ಭಾರತದ ಹಾಗೂ ಜಾಗತಿಕ ಷೇರು ಮಾರುಕಟ್ಟೆಗಳ ಪಾಲಿಗೆ ತೀವ್ರ ಏರಿಳಿತಗಳ ವರ್ಷವಾಗಿತ್ತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗಳು ಏರಿಕೆ ದಾಖಲಿಸಿದ ಕಾರಣದಿಂದಾಗಿ, ಹೂಡಿಕೆದಾರರಿಗೆ ಒಳ್ಳೆಯ ಪ್ರತಿಫಲ ಸಿಕ್ಕಿತು.

ADVERTISEMENT

‘ದೇಶದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಶುರುವಾದ ನಂತರ, ಅರ್ಥ ವ್ಯವಸ್ಥೆಯು ಚೇತರಿಕೆಯ ಹಾದಿಗೆ ಬಂದ ನಂತರ ಮಾರುಕಟ್ಟೆಯಲ್ಲಿನ ಗೂಳಿಯ ಓಟವು ಮತ್ತಷ್ಟು ಬಲ ಪಡೆದುಕೊಂಡಿತು. ಕೋವಿಡ್–19ಕ್ಕೆ ಲಸಿಕೆ ಲಭ್ಯವಾಗಿದ್ದು ಮಾರುಕಟ್ಟೆಯ ಓಟಕ್ಕೆ ನೆರವಾಯಿತು’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಹೂಡಿಕೆ ವಿಭಾಗದ ಮುಖ್ಯಸ್ಥ ವಿ.ಕೆ. ವಿಜಯ ಕುಮಾರ್ ಹೇಳಿದರು.

ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 627 ಅಂಶ ಇಳಿಕೆ ದಾಖಲಿಸಿದೆ. ‘ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು ಹಾಗೂ ಸರ್ಕಾರದಿಂದ ಬೆಂಬಲ ಸಿಕ್ಕಿದ ಕಾರಣದಿಂದಾಗಿ ಈ ಹಣಕಾಸು ವರ್ಷದಲ್ಲಿ ಷೇರು ಮಾರುಕಟ್ಟೆಗಳು ಕಂಡ ಚೇತರಿಕೆಯು ಅತ್ಯುತ್ತಮ ಚೇತರಿಕೆಗಳಲ್ಲಿ ಒಂದು’ ಎಂದು ರೆಲಿಗೇರ್‌ ಬ್ರೋಕಿಂಗ್‌ ಸಂಸ್ಥೆಯ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.