ADVERTISEMENT

ಷೇರುಪೇಟೆಯಲ್ಲಿ ಗೂಳಿ ಓಟ ಅಬಾಧಿತ

ಆರನೇ ದಿನವೂ ಮುಂದುವರಿದ ಸಕಾರಾತ್ಮಕ ವಹಿವಾಟು

ಪಿಟಿಐ
Published 8 ಫೆಬ್ರುವರಿ 2021, 19:30 IST
Last Updated 8 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಬಜೆಟ್‌ ನಂತರದ ಸಕಾರಾತ್ಮಕ ಚಲನೆಯು ಸತತ ಆರನೇ ದಿನವೂ ಮುಂದುವರಿಯಿತು.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ಫಲಿತಾಂಶ ಉತ್ತಮವಾಗಿರುವುದು ಹಾಗೂ ವಿದೇಶಿ ಬಂಡವಾಳ ಒಳಹರಿವಿನ ಕಾರಣಗಳಿಂದಾಗಿ ಸೋಮವಾರ ಷೇರುಪೇಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 617 ಅಂಶಗಳ ಜಿಗಿತದೊಂದಿಗೆ ದಾಖಲೆಯ 51,348 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ದಿನದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 51,523 ಅಂಶಗಳಿಗೆ ತಲುಪಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಸಹ 192 ಅಂಶ ಹೆಚ್ಚಾಗಿ 11,116 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ 15,160 ಅಂಶಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು.

ಗಳಿಕೆ: ದಿನದ ವಹಿವಾಟಿನಲ್ಲಿ ಮಹೀಂದ್ರಾ ಆ್ಯಂಡ್‌ ಮಹೀಂದ್ರ ಕಂಪನಿ ಷೇರು ಬೆಲೆ ಶೇ 7.23ರಷ್ಟು ಗರಿಷ್ಠ ಗಳಿಕೆ ಕಂಡಿತು. ಬಜಾಜ್‌ ಫಿನ್‌ಸರ್ವ್‌, ಭಾರ್ತಿ ಏರ್‌ಟೆಲ್‌, ಪವರ್‌ ಗ್ರಿಡ್‌, ಇನ್ಫೊಸಿಸ್‌ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳ ಬೆಲೆಯೂ ಹೆಚ್ಚಾಗಿದೆ.

ಇಳಿಕೆ: ಎಚ್‌ಯುಎಲ್‌, ಕೋಟಕ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್, ಐಟಿಸಿ, ಬಜಾಜ್‌ ಆಟೊ ಮತ್ತು ಸನ್‌ ಫಾರ್ಮಾ ಷೇರುಗಳ ಬೆಲೆ ಶೇ 1.43ರವರೆಗೂ ಇಳಿಕೆ ಆಗಿದೆ.

‘ವಾಹನ, ಐಟಿ ಮತ್ತು ಲೋಹ ವಲಯಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿವೆ. ದೇಶಿ ಮುನ್ನೋಟದಲ್ಲಿ ಸುಧಾರಣೆ ಆಗಿರುವುದರಿಂದ ವಿದೇಶಿ ಬಂಡವಾಳ ಒಳಹರಿವನ್ನು ಉತ್ತೇಜಿಸುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ವಲಯವಾರು ಬಿಎಸ್‌ಇ ಆಟೊ, ಲೋಹ, ಕೈಗಾರಿಕೆ, ದೂರಸಂಪರ್ಕ, ತಂತ್ರಜ್ಞಾನ ಸೂಚ್ಯಂಕಗಳು ಶೇ 3.07ರವರೆಗೂ ಏರಿಕೆ ಕಂಡಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ₹ 138 ಲಕ್ಷ ಕೋಟಿಯ ಪರಿಹಾರ ಪ್ಯಾಕೇಜ್‌ಗೆ ಅನುಮತಿ ಸಿಗುವ ಭರವಸೆ ಇದೆ. ಈ ಕಾರಣದಿಂದ ಜಾಗತಿಕ ಷೇರುಪೇಟೆಗಳ ವಹಿವಾಟು ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿದವು. ಏಷ್ಯಾದಲ್ಲಿ, ಶಾಂಘೈ, ಹಾಂಕಾಂಗ್‌ ಮತ್ತು ಟೋಕಿಯೊ ಷೇರುಪೇಟೆಗಳು ಗಳಿಕೆ ಕಂಡವು. ಯುರೋಪ್‌ನಲ್ಲಿಯೂ ಸಕಾರಾತ್ಮಕ ವಹಿವಾಟು ನಡೆಯಿತು.

ಹೂಡಿಕೆದಾರರ ಸಂಪತ್ತು ವೃದ್ಧಿ: ಆರು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 16.70 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 202.82 ಲಕ್ಷ ಕೋಟಿಗಳಿಗೆ ತಲುಪಿದೆ.

ಮುಖ್ಯಾಂಶಗಳು
*
ಆರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 5,063 ಅಂಶ ಏರಿಕೆ
*ಬಿಎಸ್‌ಇ ಮಿಡ್‌ಕ್ಯಾಪ್‌, ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 1.53ರವರೆಗೂ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.