ADVERTISEMENT

ಷೇರುಪೇಟೆ: ಸೆನ್ಸೆಕ್ಸ್‌ 765 ಅಂಶ ಜಿಗಿತ

ಜಾಗತಿಕ ಷೇರುಪೇಟೆಯ ಬೆಂಬಲ, ದೇಶದಲ್ಲಿ ಉತ್ತಮ ಖರೀದಿ

ಪಿಟಿಐ
Published 30 ಆಗಸ್ಟ್ 2021, 15:55 IST
Last Updated 30 ಆಗಸ್ಟ್ 2021, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರದ ವಹಿವಾಟಿನಲ್ಲಿ 765 ಅಂಶ ಜಿಗಿತ ಕಂಡಿತು. ದಿನದ ಅಂತ್ಯಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 56,889 ಅಂಶಗಳಲ್ಲಿ ಕೊನೆಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 16,900 ಅಂಶಗಳ ಮಟ್ಟವನ್ನು ದಾಟಿತು.

ಜಾಗತಿಕ ಷೇರುಪೇಟೆಯ ಬೆಂಬಲ ಮತ್ತು ದೇಶಿ ಷೇರುಪೇಟೆಯಲ್ಲಿ ನಡೆದ ಉತ್ತಮ ಖರೀದಿ ವಹಿವಾಟಿನಿಂದಾಗಿ ಎರಡೂ ಷೇರುಪೇಟೆಗಳು ಉತ್ತಮ ವಹಿವಾಟು ನಡೆಸಿದವು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 40 ಪೈಸೆ ಹೆಚ್ಚಾಗಿದ್ದು ಸಹ ಸೂಚ್ಯಂಕಗಳ ಓಟಕ್ಕೆ ಬೆಂಬಲ ನೀಡಿತು. ರೂಪಾಯಿ ಮೌಲ್ಯವು ಡಾಲರ್ ಎದುರು ಮೂರು ದಿನಗಳಲ್ಲಿ 95 ಪೈಸೆಯಷ್ಟು ಹೆಚ್ಚಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ ದಿನದ ವಹಿವಾಟಿನ ಒಂದು ಹಂತದಲ್ಲಿ 56,958 ಅಂಶಗಳಿಗೆ ಏರಿಕೆ ಆಗಿತ್ತು.

ADVERTISEMENT

ನಿಫ್ಟಿ ಸತತ ಆರನೇ ದಿನವೂ ಏರಿಕೆಯ ಓಟ ಮುಂದುವರಿಸಿದ್ದು, ಸೋಮವಾರ 226 ಅಂಶ ಹೆಚ್ಚಾಗಿ 16,931 ಅಂಶಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ 16,951 ಅಂಶಕ್ಕೆ ಏರಿಕೆ ಆಗಿತ್ತು.

ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್‌ನಲ್ಲಿ ಭಾರ್ತಿ ಏರ್‌ಟೆಲ್‌ ಷೇರು ಮೌಲ್ಯ ಶೇ 4.44ರಷ್ಟು ಹೆಚ್ಚಾಗಿದೆ. ಹಣಕಾಸು ಮತ್ತು ಲೋಹ ವಲಯದ ಷೇರುಗಳು ಉತ್ತಮ ಚೇತರಿಕೆ ಕಂಡವು. ಐ.ಟಿ. ವಲಯ ಹೊರತುಪಡಿಸಿ ಉಳಿದೆಲ್ಲ ಪ್ರಮುಖ ವಲಯಗಳ ಸೂಚ್ಯಂಕಗಳು ಗಳಿಕೆ ಕಂಡುಕೊಂಡವು. ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೋದ್‌ ಮೋದಿ ಹೇಳಿದ್ದಾರೆ.

ಬಂಡವಾಳ ಮೌಲ್ಯ ವೃದ್ಧಿ: ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಸೋಮವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟವಾದ ₹ 247.30 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ. ಮೂರು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 5.76 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.