ADVERTISEMENT

ದಾಖಲೆ ಮಟ್ಟಕ್ಕೆ ತಲುಪಿದ ಬಿಎಸ್‌ಇ ಬಂಡವಾಳ ಮೌಲ್ಯ

ಪಿಟಿಐ
Published 14 ಜುಲೈ 2021, 16:04 IST
Last Updated 14 ಜುಲೈ 2021, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ನೋಂದಾಯಿತ ಆಗಿರುವ ಕಂಪನಿಗಳ ಬಂಡವಾಳ ಮೌಲ್ಯವು ಬುಧವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 233 ಲಕ್ಷ ಕೋಟಿಗೆ ತಲುಪಿದೆ.

ದಿನದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 134 ಅಂಶ ಏರಿಕೆ ಆಗಿ 52,904ರಲ್ಲಿ ವಹಿವಾಟು ಅಂತ್ಯಗೊಂಡಿದೆ. ಸತತ ಎರಡನೇ ದಿನವೂ ಸೂಚ್ಯಂಕ ಗಳಿಕೆ ಕಂಡಿತು. ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನ ಮೌಲ್ಯವು ₹ 1.42 ಲಕ್ಷ ಕೋಟಿಗಳಷ್ಟು ಏರಿಕೆ ಆಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 41 ಅಂಶ ಹೆಚ್ಚಾಗಿ 15,853ಕ್ಕೆ ತಲುಪಿತು.

ADVERTISEMENT

ಜಾಗತಿಕ ಷೇರುಪೇಟೆಗಳ ನಕಾರಾತ್ಮಕ ಚಲನೆಯ ಹೊರತಾಗಿಯೂ ದೇಶಿ ಷೇರುಪೇಟೆಗಳ ವಹಿವಾಟು ಆರಂಭದಲ್ಲಿ ಕಂಡಿದ್ದ ಕುಸಿತದಿಂದ ಹೊರಬಂದಿತು. ಮೊದಲ ತ್ರೈಮಾಸಿಕದಲ್ಲಿ ಐ.ಟಿ. ವಲಯದ ಕಂಪನಿಗಳ ಆರ್ಥಿಕ ಸಾಧನೆಯು ಉತ್ತಮವಾಗಿರುವ ನಿರೀಕ್ಷೆ ಹಾಗೂ ಅನುಕೂಲಕರ ಆರ್ಥಿಕ ಬೆಳವಣಿಗೆಯ ಅಂದಾಜು ಸೂಚ್ಯಂಕಗಳ ಏರಿಕೆಗೆ ಕಾರಣವಾದವು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇಕಡ 0.82ರಷ್ಟು ಇಳಿಕೆ ಆಗಿದ್ದು ಬ್ಯಾರಲ್‌ಗೆ 75.86 ಡಾಲರ್‌ಗಳಿಗೆ ತಲುಪಿದೆ. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆ ಆಗಿ ಒಂದು ಡಾಲರ್‌ಗೆ ₹ 74.59ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.