ADVERTISEMENT

ಈಕ್ವಿಟಿ ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆದಾರರ ಪ್ರಮಾಣ ಹೆಚ್ಚಳ: ಸೆಬಿ ಅಧ್ಯಕ್ಷ

ಪಿಟಿಐ
Published 22 ಜುಲೈ 2021, 14:00 IST
Last Updated 22 ಜುಲೈ 2021, 14:00 IST
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ   

ನವದೆಹಲಿ: ‘ದೇಶದ ಷೇರು ಮಾರುಕಟ್ಟೆಗಳತ್ತ ಸಣ್ಣ ಹೂಡಿಕೆದಾರರು ಹೆಚ್ಚು ಆಕರ್ಷಿತರಾಗಿದ್ದಾರೆ. ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಪ್ರತಿ ತಿಂಗಳೂ ಸರಾಸರಿ 24.5 ಲಕ್ಷ ಡಿಮ್ಯಾಟ್ ಖಾತೆಗಳನ್ನು ಹೊಸದಾಗಿ ತೆರೆಯಲಾಗಿದೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ ಅಧ್ಯಕ್ಷ ಅಜಯ್ ತ್ಯಾಗಿ ಹೇಳಿದರು.

ನಿಶ್ಚಿತ ಠೇವಣಿಗಳಿಗೆ ಕಡಿಮೆ ಬಡ್ಡಿ ಸಿಗುತ್ತಿರುವುದು ಹಾಗೂ ಹಣಕಾಸು ವ್ಯವಸ್ಥೆಯಲ್ಲಿ ನಗದು ಲಭ್ಯತೆ ಜಾಸ್ತಿ ಇರುವುದು ಷೇರು ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಕಾರಣಗಳು ಎಂದು ಅವರು ಹೇಳಿದ್ದಾರೆ. ನಗದು ಲಭ್ಯತೆ ಕಡಿಮೆ ಆದರೆ ಅಥವಾ ಬಡ್ಡಿ ದರ ಜಾಸ್ತಿ ಆದರೆ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಆಗಬಹುದು ಎಂದೂ ಹೇಳಿದ್ದಾರೆ.

2020-21ನೆಯ ಹಣಕಾಸು ವರ್ಷದ ಆರಂಭದಲ್ಲಿ ದೇಶದಲ್ಲಿನ ಡಿಮ್ಯಾಟ್ ಖಾತೆಗಳ ಸಂಖ್ಯೆ 4.1 ಕೋಟಿ ಆಗಿತ್ತು. ಇದು ಆ ಹಣಕಾಸು ವರ್ಷದ ಅಂತ್ಯದ ವೇಳೆಗೆ 5.5 ಕೋಟಿಗೆ ತಲುಪಿದೆ. ಡಿಮ್ಯಾಟ್ ಖಾತೆಗಳ ಪ್ರಮಾಣದಲ್ಲಿ ಶೇಕಡ 34.7ರಷ್ಟು ಹೆಚ್ಚಳ ಕಂಡುಬಂದಿದೆ. 2020–21ರಲ್ಲಿ ಪ್ರತಿ ತಿಂಗಳು ಸರಾಸರಿ 12 ಲಕ್ಷ ಡಿಮ್ಯಾಟ್ ಖಾತೆಗಳನ್ನು, 2019–20ರಲ್ಲಿ ಪ್ರತಿ ತಿಂಗಳು 4.2 ಲಕ್ಷ ಖಾತೆಗಳನ್ನು ತೆರೆಯಲಾಗುತ್ತಿತ್ತು ಎಂದು ತ್ಯಾಗಿ ಮಾಹಿತಿ ನೀಡಿದ್ದಾರೆ.

ADVERTISEMENT

2019-20ರಲ್ಲಿ ಷೇರು ಮಾರುಕಟ್ಟೆಯ ವಾರ್ಷಿಕ ವಹಿವಾಟು ₹ 96.6 ಲಕ್ಷ ಕೋಟಿ ಆಗಿತ್ತು. ಇದು 2020–21ರಲ್ಲಿ ₹ 164.4 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ‘ಷೇರು ವಹಿವಾಟುಗಳು ಮೊಬೈಲ್‌ ಸಾಧನಗಳ ಮೂಲಕ ಆಗುತ್ತಿರುವುದು ಹಾಗೂ ಇಂಟರ್ನೆಟ್ ಆಧಾರಿತ ವೇದಿಕೆಗಳ ಮೂಲಕ ವಹಿವಾಟು ಹೆಚ್ಚು ನಡೆಯುತ್ತಿರುವುದು ಸಣ್ಣ ಹೂಡಿಕೆದಾರರ ಭಾಗವಹಿಸುವಿಕೆ ಜಾಸ್ತಿ ಆಗಿರುವುದರ ಸೂಚಕ’ ಎಂದೂ ತ್ಯಾಗಿ ಹೇಳಿದ್ದಾರೆ.

2020–21ರಲ್ಲಿ ಸಾಂಕ್ರಾಮಿಕದ ಸಮಸ್ಯೆ ಇದ್ದರೂ ಮಾರುಕಟ್ಟೆಗಳಿಂದ ಒಟ್ಟು ₹ 10.12 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಲಾಗಿದೆ. ಅದರ ಹಿಂದಿನ ವರ್ಷದಲ್ಲಿ ₹ 9.96 ಲಕ್ಷ ಕೋಟಿ ಬಂಡವಾಳ ಸಂಗ್ರಹ ಆಗಿತ್ತು.

ಸಣ್ಣ ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು ಇವು

* ಕಂಪನಿಗಳ ಕಡೆಯಿಂದ ನಡೆಯುವ ಆರಂಭಿಕ ಹಂತದ ಷೇರು ಮಾರಾಟ

* ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳು, ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು

* ಇಎಸ್‌ಜಿ (ಪರಿಸರ, ಸಾಮಾಜಿಕ ಬದ್ಧತೆ, ಕಾರ್ಪೊರೇಟ್ ಆಡಳಿತ) ಕೇಂದ್ರಿಕ ಮ್ಯೂಚುವಲ್‌ ಫಂಡ್‌ಗಳು

* ವಿನಿಮಯ ವಹಿವಾಟು ನಿಧಿಗಳು (ಇಟಿಎಫ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.