ADVERTISEMENT

ಜಾಗತಿಕ ಷೇರುಪೇಟೆಗಳಿಗೆ ಬಾಂಡ್‌ ಗಳಿಕೆಯ ಹೊಡೆತ; 726 ಅಂಶ ಕುಸಿದ ಸೆನ್ಸೆಕ್ಸ್‌

ಪಿಟಿಐ
Published 4 ಮಾರ್ಚ್ 2021, 8:37 IST
Last Updated 4 ಮಾರ್ಚ್ 2021, 8:37 IST
ಮುಂಬೈ ಷೇರುಪೇಟೆ–ಸಾಂದರ್ಭಿಕ ಚಿತ್ರ
ಮುಂಬೈ ಷೇರುಪೇಟೆ–ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ ವಹಿವಾಟು ಆರಂಭದಲ್ಲಿ 726 ಅಂಶಗಳು ಕುಸಿದಿದ್ದು, 51,000 ಅಂಶಗಳಿಗೂ ಕೆಳಗಿನ ಮಟ್ಟದಲ್ಲಿ ವಹಿವಾಟು ನಡೆದಿದೆ.

ಶೇ 1.14ರಷ್ಟು ಇಳಿಕೆಯಾಗಿರುವ ಸೆನ್ಸೆಕ್ಸ್‌ 50,718.36 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 197.05 ಅಂಶ ಇಳಿಕೆಯಾಗಿ 15,048.55 ಅಂಶಗಳಲ್ಲಿ ವಹಿವಾಟು ನಡೆದಿದೆ.

ಸೆನ್ಸೆಕ್ಸ್‌ ಸಾಲಿನಲ್ಲಿ ಎಚ್‌ಡಿಎಫ್‌ಸಿ, ಬಜಾಜ್‌ ಫಿನ್‌ಸರ್ವ್‌, ಕೊಟ್ಯಾಕ್‌ ಬ್ಯಾಂಕ್‌ ಹಾಗೂ ಬಜಾಜ್‌ ಫೈನಾನ್ಸ್‌ ಷೇರುಗಳ ಬೆಲೆ ಶೇ 2ರಷ್ಟು ಇಳಿಕೆಯಾಗಿದೆ. ಸೆನ್ಸೆಕ್ಸ್‌ನ 27 ಷೇರುಗಳ ಬೆಲೆ ಕುಸಿದಿದೆ. ಬೆಳಿಗ್ಗೆ 11ಕ್ಕೆ ಸೆನ್ಸೆಕ್ಸ್ 50,846.76 ಅಂಶಗಳು ಹಾಗೂ ನಿಫ್ಟಿ 15,100 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ADVERTISEMENT

ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 2,344.66 ಅಂಶಗಳು (ಶೇ 4.77ರಷ್ಟು) ಏರಿಕೆ ದಾಖಲಿಸಿತ್ತು ಹಾಗೂ ನಿಫ್ಟಿ ಶೇ 4.93 ಅಥವಾ 716.45 ಅಂಶಗಳು ಹೆಚ್ಚಳವಾಗಿತ್ತು. ಅಮೆರಿಕದಲ್ಲಿ ಬಾಂಡ್‌ಗಳ ಮೇಲಿನ ಗಳಿಕೆ ಹೆಚ್ಚಿರುವುದು ಷೇರುಪೇಟೆಗಳಲ್ಲಿ ತಲ್ಲಣ ಉಂಟು ಮಾಡಿದೆ.

ಜಾಗತಿಕವಾಗಿ ಷೇರುಗಳ ಬೆಲೆಯು ಬಾಂಡ್‌ಗಳ ಗಳಿಕೆಯ ಪ್ರಭಾವಕ್ಕೆ ಒಳಗಾಗುತ್ತಿದೆ. ಫೆಬ್ರುವರಿ 25ರಂದು ಶೇ 1.6ಕ್ಕೆ ಏರಿಕೆಯಾಗಿದ್ದ ಅಮೆರಿಕದ 10 ವರ್ಷಗಳ ಬಾಂಡ್‌ ಗಳಿಕೆ, ಶೇ 1.4ಕ್ಕೆ ಕುಸಿಯಿತು ಹಾಗೂ ನಿನ್ನೆ ಮತ್ತೆ ಶೇ 1.48ಕ್ಕೆ ಹೆಚ್ಚಳವಾಗಿರುವುದು ಷೇರುಗಳ ಮೇಲೆ ಪರಿಣಾಮ ಬೀರಿದೆ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಹೂಡಿಕೆ ತಜ್ಞ ವಿ.ಕೆ.ವಿಜಯಕುಮಾರ್‌ ಹೇಳಿದ್ದಾರೆ.

ಷೇರುಪೇಟೆಯ ಮಾಹಿತಿ ಪ್ರಕಾರ, ಬುಧವಾರ ವಿದೇಶಿ ಹೂಡಿಕೆದಾರರು ₹2,088.70 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಕಚ್ಚಾ ತೈಲ ಬೆಲೆ ಶೇ 0.36ರಷ್ಟು ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್‌ಗೆ 64.22 ಅಮೆರಿಕನ್‌ ಡಾಲರ್‌ಗಳಲ್ಲಿ ವಹಿವಾಟು ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.