ADVERTISEMENT

ಷೇರುಪೇಟೆ: ಏಳು ವಾರಗಳ ಗರಿಷ್ಠ ಏರಿಕೆ

ಪಿಟಿಐ
Published 17 ಮೇ 2021, 15:10 IST
Last Updated 17 ಮೇ 2021, 15:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿರುವುದು ಹೂಡಿಕೆದಾರರಲ್ಲಿ ಆಶಾವಾದ ಮೂಡಿಸಿದೆ. ಇದರಿಂದಾಗಿ ದೇಶದ ಷೇರುಪೇಟೆ ಸಂವೇದಿ ಸೂಚ್ಯಂಕಗಳು ದಿನದ ವಹಿವಾಟಿನಲ್ಲಿಏಳು ವಾರಗಳ ಗರಿಷ್ಠ ಏರಿಕೆಯನ್ನು ಸೋಮವಾರ ದಾಖಲಿಸಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 848 ಅಂಶ ಏರಿಕೆ ಕಂಡು 49,581 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 245 ಅಂಶ ಹೆಚ್ಚಾಗಿ 14,923 ಅಂಶಗಳಿಗೆ ತಲುಪಿತು. ಮಾರ್ಚ್‌ 30ರ ಬಳಿಕ ದಿನದ ವಹಿವಾಟೊಂದರಲ್ಲಿ ಸೂಚ್ಯಂಕಗಳ ಗರಿಷ್ಠ ಏರಿಕೆ ಇದಾಗಿದೆ.

‘ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿದೆ. ಇದರಿಂದಾಗಿ ಬ್ಯಾಂಕ್‌, ಲೋಹ ಮತ್ತು ವಾಹನ ವಲಯಗಳ ಷೇರುಗಳು ಉತ್ತಮ ಗಳಿಕೆ ಕಂಡವು. ಹೀಗಾಗಿ, ಸೂಚ್ಯಂಕಗಳು ಏರಿಕೆ ಕಂಡವು. ದಿನವೊಂದಕ್ಕೆ ವರದಿಯಾಗುವ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುವ ನಿರೀಕ್ಷೆಯನ್ನು ಮಾರುಕಟ್ಟೆ ಹೊಂದಿದೆ. ಲಾಕ್‌ಡೌನ್‌ ವಿಸ್ತರಣೆ ಮತ್ತು ಆರ್ಥಿಕ ಬೆಳವಣಿಗೆಯ ಕುರಿತು ಮೂಡಿರುವ ಆತಂಕ ತಗ್ಗಲು ಇದು ನೆರವಾಗಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ADVERTISEMENT

2020–21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಗಳ ಉತ್ತಮ ಹಣಕಾಸು ಸಾಧನೆ ಮತ್ತು ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಆಗುವ ಮುನ್ಸೂಚನೆಯು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿತು. ಇದರಿಂದಾಗಿ ಷೇರುಪೇಟೆಗಳು ಉತ್ತಮ ಚೇತರಿಕೆ ಕಂಡವು ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೋದ್‌ ಮೋದಿ ತಿಳಿಸಿದ್ದಾರೆ.

ಸಂಪತ್ತು ವೃದ್ಧಿ: ಹೂಡಿಕೆದಾರರ ಸಂಪತ್ತು ಒಂದೇ ದಿನ ₹ 3 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 213 ಲಕ್ಷ ಕೋಟಿಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.