ADVERTISEMENT

ಕೋವಿಡ್‌ ಪ್ರಕರಣ ಹೆಚ್ಚಳ: ಸೂಚ್ಯಂಕ 871 ಅಂಶ ಕುಸಿತ

ಪಿಟಿಐ
Published 24 ಮಾರ್ಚ್ 2021, 15:32 IST
Last Updated 24 ಮಾರ್ಚ್ 2021, 15:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವುದರಿಂದ ಷೇರುಪೇಟೆಗಳ ವಹಿವಾಟು ಬುಧವಾರ ಭಾರಿ ಕುಸಿತ ಕಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 871 ಅಂಶ ಕುಸಿತ ಕಂಡು 49,180 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ಫೆಬ್ರುವರಿ 26ರ ನಂತರ ದಿನದ ವಹಿವಾಟಿನ ಗರಿಷ್ಠ ಕುಸಿತ ಇದಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 266 ಅಂಶಗಳಷ್ಟು ಕಡಿಮೆಯಾಗಿ 14,549 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಸೆನ್ಸೆಕ್ಸ್‌ನಲ್ಲಿ ಏಷ್ಯನ್‌ ಪೇಂಟ್ಸ್‌ ಮತ್ತು ಪವರ್‌ ಗ್ರಿಡ್‌ ಹೊರತುಪಡಿಸಿ ಉಳಿದೆಲ್ಲ ಕಂಪನಿಗಳ ಷೇರುಗಳು ಇಳಿಕೆ ದಾಖಲಿಸಿದವು.

ADVERTISEMENT

ಬಿಎಸ್‌ಇ ಮಿಡ್‌, ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇಕಡ 1.69ರವರೆಗೂ ಇಳಿಕೆಯಾದವು.

‘ಜಾಗತಿಕ ವಿದ್ಯಮಾನಗಳು ಮತ್ತು ಕೋವಿಡ್‌ ಪ್ರಕರಣಗಳ ಹೆಚ್ಚಳದಿಂದಾಗಿ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಕಂಡುಬಂದಿತು. ಔಷಧ ವಲಯವನ್ನು ಬಿಟ್ಟು ಉಳಿದೆಲ್ಲ ವಲಯಗಳು ಮಾರಾಟದ ಒತ್ತಡಕ್ಕೆ ಒಳಗಾದವು’ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 12 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 72.55ಕ್ಕೆ ತಲುಪಿತು.

ಕರಗಿತು ₹ 3.27 ಲಕ್ಷ ಕೋಟಿ: ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ₹ 3.27 ಲಕ್ಷ ಕೋಟಿಗಳಷ್ಟು ಕರಗಿತು. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 202.48 ಲಕ್ಷ ಕೋಟಿಗೆ ಇಳಿಕೆ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.