ADVERTISEMENT

1,939 ಅಂಶ ಇಳಿಕೆ ಕಂಡ ಸೆನ್ಸೆಕ್ಸ್

ಪಿಟಿಐ
Published 26 ಫೆಬ್ರುವರಿ 2021, 14:04 IST
Last Updated 26 ಫೆಬ್ರುವರಿ 2021, 14:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ 1,939 ಅಂಶಗಳ ಕುಸಿತ ಕಂಡಿತು. ಹಿಂದಿನ ವರ್ಷದ ಮೇ 4ರ ನಂತರ ಸೆನ್ಸೆಕ್ಸ್ ಒಂದೇ ದಿನದಲ್ಲಿ ಕಂಡ ಅತಿದೊಡ್ಡ ಕುಸಿತ ಇದು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವಾದ ನಿಫ್ಟಿ 568 ಅಂಶಗಳ ಇಳಿಕೆ ದಾಖಲಿಸಿತು.

ಜಾಗತಿಕ ಮಟ್ಟದಲ್ಲಿ ಬಾಂಡ್‌ ಮಾರುಕಟ್ಟೆಯಲ್ಲಿ ಉಂಟಾದ ತಳಮಳ, ಅಮೆರಿಕ ಮತ್ತು ಸಿರಿಯಾ ನಡುವೆ ಬಿಕ್ಕಟ್ಟು ತೀವ್ರಗೊಂಡಿರುವುದು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದವು.

ಬ್ಯಾಂಕಿಂಗ್‌ ವಲಯದ ಷೇರುಗಳು ಅತಿಹೆಚ್ಚಿನ ಇಳಿಕೆ ಕಂಡವು. ಹಣಕಾಸು ಮತ್ತು ದೂರಸಂಪರ್ಕ ವಲಯದ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಕೂಡ ದೊಡ್ಡ ಮಟ್ಟದ ಇಳಿಕೆ ಆಯಿತು. ‘ಬಾಂಡ್‌ ಗಳಿಕೆಯಲ್ಲಿನ ತೀವ್ರ ಹೆಚ್ಚಳವು ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತಕ್ಕೆ ದಾರಿ ಮಾಡಿಕೊಟ್ಟಿತು. ಇದರ ಪರಿಣಾಮವು ದೇಶಿ ಮಾರುಕಟ್ಟೆಯ ಮೇಲೆಯೂ ಆಯಿತು. ಅಮೆರಿಕ ಮತ್ತು ಸಿರಿಯಾ ನಡುವಿನ ಬಿಕ್ಕಟ್ಟು ಉಲ್ಬಣಿಸಿದ್ದು ಷೇರುಗಳ ಮಾರಾಟಕ್ಕೆ ಇನ್ನಷ್ಟು ತೀವ್ರತೆ ತಂದುಕೊಟ್ಟಿತು’ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ADVERTISEMENT

ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಕುಸಿತ ಕಂಡರೂ, ಅವುಗಳು ಸೆನ್ಸೆಕ್ಸ್‌ನಷ್ಟು ತೀವ್ರವಾಗಿ ಇಳಿಯಲಿಲ್ಲ. ಹೂಡಿಕೆದಾರರು ಆ ವಲಯವ ಷೇರುಗಳಲ್ಲಿ ಹೆಚ್ಚಿನ ವಿಶ್ವಾಸ ತೋರಿಸಿದರು ಎಂದು ನಾಯರ್ ಹೇಳಿದ್ದಾರೆ. ಏಷ್ಯಾದ ಇತರ ಷೇರು ಮಾರುಕಟ್ಟೆಗಳು ಕೂಡ ಭಾರಿ ಇಳಿಕೆ ಕಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.