ADVERTISEMENT

ಕೋವಿಡ್‌ ಹೆಚ್ಚಳ: ಸೂಚ್ಯಂಕ 870 ಅಂಶ ಕುಸಿತ

ಮಾರಾಟದ ಒತ್ತಡ: ಕರಗಿತು ₹ 2.16 ಲಕ್ಷ ಕೋಟಿ

ಪಿಟಿಐ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಸೋಮವಾರ ಒಂದೇ ದಿನ ಒಂದು ಲಕ್ಷವನ್ನು ದಾಟಿದ್ದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿತು. ಇದರಿಂದಾಗಿ ಷೇರುಪೇಟೆಗಳಲ್ಲಿ ಅತಿಯಾದ ಮಾರಾಟದ ಒತ್ತಡ ಸೃಷ್ಟಿಯಾಗಿ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸೂಚ್ಯಂಕದಿನದ ವಹಿವಾಟಿನ ಒಂದು ಹಂತದಲ್ಲಿ 1,400 ಅಂಶಗಳಷ್ಟು ಕುಸಿದಿತ್ತು. ಆ ಬಳಿಕ ಮಾರಾಟದ ಒತ್ತಡ ತುಸು ತಗ್ಗಿದ್ದರಿಂದ ಸೂಚ್ಯಂಕದ ಇಳಿಕೆಯು 870 ಅಂಶಗಳಷ್ಟಾಯಿತು. 49,159 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇಕಡ 1.13ರವರೆಗೂ ಇಳಿಕೆ ಕಂಡವು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 229 ಅಂಶ ಇಳಿಕೆ ಕಂಡು 14,638 ಅಂಶಗಳಿಗೆ ತಲುಪಿತು.

ಬಜಾಜ್‌ ಫೈನಾನ್ಸ್‌ ಷೇರು ಶೇ 5.81ರಷ್ಟು ನಷ್ಟ ಕಂಡಿತು. ಇಂಡಸ್‌ಇಂಡ್ ಬ್ಯಾಂಕ್‌, ಎಸ್‌ಬಿಐ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಎಕ್ಸಿಸ್‌ ಬ್ಯಾಂಕ್‌, ಬಜಾಜ್‌ ಆಟೊ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳ ಮೌಲ್ಯವೂ ಇಳಿಕೆ ಆಯಿತು.

ADVERTISEMENT

ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯು ನಿರೀಕ್ಷೆಗಿಂತಲೂ ಹೆಚ್ಚು ಅಪಾಯಕಾರಿ ಆಗಿದ್ದು, ಆರ್ಥಿಕ ಚೇತರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಷೇರುಪೇಟೆಯಲ್ಲಿ ಅತಿಯಾದ ಮಾರಾಟದ ಒತ್ತಡ ಕಂಡುಬಂದಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ನಿರ್ಧಾರಗಳು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಗಳ ಗಳಿಕೆಯು ಮುಂದಿನ ದಿನಗಳಲ್ಲಿ ಷೇರುಪೇಟೆಯ ಚಂಚಲತೆಯನ್ನು ನಿರ್ಧರಿಸಲಿವೆ ಎಂದೂ ಹೇಳಿದ್ದಾರೆ. ಎಂಪಿಸಿಯು ಬುಧವಾರ ತನ್ನ ನಿರ್ಧಾರ ಪ್ರಕಟಿಸಲಿದೆ.

ಕರಗಿತು ₹ 2.16 ಲಕ್ಷ ಕೋಟಿ: ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಸೋಮವಾರ ₹ 2.16 ಲಕ್ಷ ಕೋಟಿಗಳಷ್ಟು ಕರಗಿತು. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 205.09 ಲಕ್ಷ ಕೋಟಿಗಳಿಗೆ ತಲುಪಿದೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆ ಇಳಿಕೆಯಾಗಿದ್ದು, ಒಂದು ಡಾಲರ್‌ಗೆ ₹ 73.30ರಂತೆ ವಿನಿಮಯಗೊಂಡಿತು.

ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿನ ಭಾರಿ ಏರಿಕೆಯು ರೂಪಾಯಿ ವಹಿವಾಟಿನ ಮೇಲೆ ಪರಿಣಾಮ ಬೀರಿತು ಎಂದು ತಜ್ಞರು ಹೇಳಿದ್ದಾರೆ. ‘ಡಾಲರ್ ಮೌಲ್ಯ ವೃದ್ಧಿ ಮತ್ತು ದೇಶಿ ಷೇರುಪೇಟೆಗಳ ಇಳಿಮುಖ ವಹಿವಾಟಿನಿಂದಾಗಿ ರೂಪಾಯಿ ಮೌಲ್ಯ ಇಳಿಕೆ ಕಾಣುವಂತಾಗಿದೆ’ ಎಂದು ಶೇರ್‌ಖಾನ್‌ ಸಂಸ್ಥೆಯ ಸಂಶೋಧನಾ ವಿಶ್ಲೇಷಕರ ಸೈಫ್‌ ಮುಕ್ದಮ್‌ ಹೇಳಿದ್ದಾರೆ.

ಕಚ್ಚಾತೈಲ ದರ ಇಳಿಕೆ: ಕಚ್ಚಾತೈಲ ಉತ್ಪಾದನೆಯನ್ನು ಕ್ರಮೇಣ ಹೆಚ್ಚಿಸಲು ಒಪೆಕ್‌ ಮತ್ತು ಅದರ ಮಿತ್ರರಾಷ್ಟ್ರಗಳು ಒಪ್ಪಿರುವುದರಿಂದ ಸೋಮವಾರ ಕಚ್ಚಾ ತೈಲ ದರದಲ್ಲಿ ಇಳಿಕೆ ಕಂಡುಬಂತು. ಬ್ರೆಂಟ್‌ ತೈಲ ದರ ಶೇ 2.20ರಷ್ಟು ಇಳಿಕೆ ಆಗಿದ್ದು, ಒಂದು ಬ್ಯಾರಲ್‌ಗೆ 63.43 ಡಾಲರ್‌ಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.