ADVERTISEMENT

ಮಾರಾಟದ ಒತ್ತಡ: ಸೆನ್ಸೆಕ್ಸ್ 465 ಅಂಶ ಇಳಿಕೆ

ಪಿಟಿಐ
Published 4 ಮೇ 2021, 13:45 IST
Last Updated 4 ಮೇ 2021, 13:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ಪ್ರಮುಖ ಕಂಪನಿಗಳ ಷೇರುಗಳು ಮಂಗಳವಾರ ಮಾರಾಟದ ಒತ್ತಡಕ್ಕೆ ಒಳಗಾದವು. ಹೀಗಾಗಿ ದೇಶದ ಷೇರುಪೇಟೆಗಳು ದಿನದ ಆರಂಭದಲ್ಲಿ ಕಂಡುಕೊಂಡಿದ್ದ ಗಳಿಕೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾದವು. ಇದರಿಂದಾಗಿ, ಸತತ ಮೂರನೇ ದಿನವೂ ವಹಿವಾಟು ನಕಾರಾತ್ಮಕವಾಗಿ ಅಂತ್ಯವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಲಾಭ ಗಳಿಕೆಯ ಮಾರಾಟದ ಒತ್ತಡಕ್ಕೆ ಒಳಗಾಗಿ 465 ಅಂಶ ಇಳಿಕೆ ಕಂಡು, 48,253 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 138 ಅಂಶ ಇಳಿಕೆಯಾಗಿ 14,496 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ದಿನದ ವಹಿವಾಟಿನಲ್ಲಿ ಡಾ ರೆಡ್ಡೀಸ್‌ ಷೇರು ಶೇಕಡ 2.26ರಷ್ಟು ಗರಿಷ್ಠ ನಷ್ಟ ಕಂಡಿತು. ರಿಲಯನ್ಸ್‌ ಇಂಡಸ್ಟ್ರೀಸ್‌, ಸನ್‌ ಫಾರ್ಮಾ, ಇನ್ಫೊಸಿಸ್‌, ಮಹೀಂದ್ರ, ಭಾರ್ತಿ ಏರ್‌ಟೆಲ್‌ ಷೇರುಗಳ ಬೆಲೆಯಲ್ಲಿಯೂ ಇಳಿಕೆ ಆಯಿತು.

ADVERTISEMENT

ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ಅನಿಶ್ಚಿತ ಸ್ಥಿತಿಯು ತೀವ್ರವಾಗುತ್ತಿದೆ. ಇದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೋದ್‌ ಮೋದಿ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ತೈಲ ದರವು ಶೇ 1.79ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 68.77 ಡಾಲರ್‌ಗಳಿಗೆ ತಲುಪಿದೆ.

ರೂಪಾಯಿ ಮೌಲ್ಯ ಏರಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 10 ಪೈಸೆ ಏರಿಕೆಯಾಗಿ ಒಂದು ಡಾಲರ್‌ಗೆ ₹ 73.85ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.