ADVERTISEMENT

ಬಂಡವಾಳ ಮಾರುಕಟ್ಟೆ: ‘ಎಂಎಫ್‌’ ಹೂಡಿಕೆ ನಿಜಕ್ಕೂ ಅಗತ್ಯವೇ?

ಅವಿನಾಶ್ ಕೆ.ಟಿ
Published 1 ಆಗಸ್ಟ್ 2021, 19:29 IST
Last Updated 1 ಆಗಸ್ಟ್ 2021, 19:29 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

‘ನಿಶ್ಚಿತ ಠೇವಣಿ (ಎಫ್‌.ಡಿ.), ಪಿಪಿಎಫ್, ಇಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ಮನಿ ಬ್ಯಾಕ್ ವಿಮಾ ಪಾಲಿಸಿಗಳಲ್ಲಿ ಹಣ ತೊಡಗಿಸಿದ್ದೇನೆ. ಹೀಗಿದ್ದರೂ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಅಗತ್ಯವೇ’ ಎಂದು ಸ್ನೇಹಿತರೊಬ್ಬರು ಪ್ರಶ್ನಿಸಿದರು. ಈ ಗೊಂದಲ ಅವರದ್ದಷ್ಟೇ ಅಲ್ಲ. ಬಹಳಷ್ಟು ಜನರಿಗೆ ಹೂಡಿಕೆ ಮಾಡುವಾಗ ಈ ಪ್ರಶ್ನೆ ಎದುರಾಗುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ನಿಜಕ್ಕೂ ಅಗತ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ.

ಬೆಲೆ ಏರಿಕೆ ಮತ್ತು ಮ್ಯೂಚುವಲ್ ಫಂಡ್: ಮೊನ್ನೆ ಮೊನ್ನೆವರೆಗೆ ₹ 80ರ ಆಸುಪಾಸಿನಲ್ಲಿದ್ದ ಪೆಟ್ರೋಲ್ ಬೆಲೆ ಈಗ ₹ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ. ₹ 75ರ ಸಮೀಪದಲ್ಲಿದ್ದ ಅಡುಗೆ ಎಣ್ಣೆಯ ಬೆಲೆ ₹ 175ಕ್ಕೆ ಏರಿಕೆಯಾಗಿದೆ. ಅಂದರೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಆದರೆ ಬೆಲೆ ಏರಿಕೆಗೆ ಅನುಗುಣವಾಗಿ ನಿಮ್ಮ ಹೂಡಿಕೆಗಳು ಲಾಭ ತಂದುಕೊಡುತ್ತಿಲ್ಲ. ಎಫ್.ಡಿ.ಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚೆಂದರೆ ಶೇಕಡ 6ರಿಂದ ಶೇ 7ರಷ್ಟು ಬಡ್ಡಿ ಲಾಭ ಸಿಗುತ್ತಿದೆ. ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದರೆ ಗರಿಷ್ಠ ಶೇ 8ರಷ್ಟು ಲಾಭ (ಚಕ್ರಬಡ್ಡಿ ಸೇರಿ) ಲಭಿಸುತ್ತಿದೆ.

ಇನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು ಅಂದರೆ ದೊಡ್ಡ ಮೊತ್ತದ ಬಂಡವಾಳ ಹೊಂದಿಸುವ ಜೊತೆಗೆ ನೋಂದಣಿ ಖರ್ಚು, ದಲ್ಲಾಳಿ ಕಮಿಷನ್ ಭರಿಸಬೇಕು, ಆಸ್ತಿ ಮಾರಾಟ ಮಾಡುವಾಗ ಬಂಡವಾಳ ವೃದ್ಧಿ ತೆರಿಗೆ ಕಟ್ಟಬೇಕು. ಚಿನ್ನದ ಮೇಲೆ ಹೂಡಿಕೆ ಅಂದರೆ ಮೇಕಿಂಗ್ ಚಾರ್ಜಸ್‌ನ ಹೊರೆ ಹೊರಬೇಕು. ಮನಿ ಬ್ಯಾಕ್ ವಿಮಾ ಪಾಲಿಸಿಗಳಲ್ಲಿ ದೀರ್ಘಾವಧಿಯಲ್ಲಿ ಸಿಗುವ ಲಾಭ ಶೇ 3ರಿಂದ ಶೇ 4 ಮಾತ್ರ. ಇಷ್ಟೆಲ್ಲ ಮಿತಿಗಳಿರುವಾಗ ಸರಳವಾಗಿರುವ, ಮೇಲಿನ ಎಲ್ಲಾ ಹೂಡಿಕೆಗಳಿಗಿಂತಲೂ ಹೆಚ್ಚು ಲಾಭ ತಂದುಕೊಡುವ ಸಾಮರ್ಥ್ಯವಿರುವ ಹೂಡಿಕೆ ಯಾವುದು ಅಂದರೆ ಅದು ಮ್ಯೂಚುವಲ್ ಫಂಡ್. ದೀರ್ಘಾವಧಿಯಲ್ಲಿ ಲಾರ್ಜ್ ಕ್ಯಾಪ್ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಗೆ ಶೇ 12ರಿಂದ ಶೇ 13ರಷ್ಟು ಲಾಭ ತಂದುಕೊಡುವ ಸಾಮರ್ಥ್ಯವಿದೆ. ಆದರೆ ನೆನಪಿಡಿ, ಇಲ್ಲಿ ಪಿಪಿಎಫ್, ಇಪಿಎಫ್, ಎಫ್.ಡಿ.ಗಳಲ್ಲಿ ಸಿಗುವಂತೆ ಇಂತಿಷ್ಟೇ ಲಾಭ ಸಿಗುತ್ತದೆ ಎನ್ನುವ ಖಾತರಿಯಿಲ್ಲ. ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆಗಳು ಮಾರುಕಟ್ಟೆ ರಿಸ್ಕ್ ಒಳಗೊಂಡಿರುತ್ತವೆ.

ADVERTISEMENT

10.26 ಕೋಟಿ ಖಾತೆಗಳು: ನಿಮಗೆ ಗೊತ್ತಾ? ಭಾರತದಲ್ಲಿ ಈವರೆಗೆ ಸುಮಾರು 10.26 ಕೋಟಿ ಮ್ಯೂಚುವಲ್ ಫಂಡ್‌ ಖಾತೆಗಳಲ್ಲಿ ಹಣ ಹೂಡಿಕೆ ಆಗಿದೆ. 2020-21ರಲ್ಲಿ 81 ಲಕ್ಷ ಖಾತೆಗಳು ಮ್ಯೂಚುವಲ್ ಫಂಡ್ ಜಗತ್ತಿಗೆ ಸೇರಿಕೊಂಡಿವೆ. 2021-22ನೇ ಸಾಲಿನಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಅಂದರೆ ಮ್ಯೂಚುವಲ್ ಫಂಡ್ ಹೂಡಿಕೆಗಳು ಇತ್ತೀಚೆಗೆ ಎಷ್ಟು ವೇಗವಾಗಿ ಬೆಳೆಯುತ್ತಿವೆ ಎಂದು ಅಂದಾಜು ಮಾಡಿಕೊಳ್ಳಿ.

ಅಗತ್ಯಕ್ಕೆ ತಕ್ಕಂತಹ ಹೂಡಿಕೆ: ಬೇರೆ ಹೂಡಿಕೆಗಳು ಪ್ಲೇಟ್ ಮೀಲ್ಸ್ ತರಹ, ಅವರು ಏನು ಬಡಿಸುತ್ತಾರೋ ಅದನ್ನು ಉಣ್ಣಬೇಕು. ಮ್ಯೂಚುವಲ್ ಫಂಡ್ ಒಂದು ರೀತಿ ಬಫೆ ತರಹ. ನಿಮಗೆ ಏನು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಹೌದು, ನಿಮ್ಮ ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ಹಲವಾರು ಹೂಡಿಕೆ ಆಯ್ಕೆಗಳು ಇಲ್ಲಿವೆ. ನಿಮಗೆ ಬೇಕಾದಾಗ ಹಣ ಸಿಗುವಂತಿರಬೇಕು ಅಂದರೆ ಲಿಕ್ವಿಡ್ ಫಂಡ್ ಹೂಡಿಕೆ ಸೂಕ್ತ. 6–8 ತಿಂಗಳ ಅವಧಿಯಲ್ಲಿ ಹೂಡಿಕೆ ಮೊತ್ತ ಬೇಕಾಗಬಹುದು ಅಂದರೆ ಅಲ್ಟ್ರಾ ಶಾರ್ಟ್ ಟರ್ಮ್ ಡೆಟ್ ಫಂಡ್ ಪರಿಗಣಿಸಬಹುದು. 3-5 ವರ್ಷಗಳಲ್ಲಿ ಹಣ ಬೇಕಾಗಿದ್ದರೆ ಕನ್ಸರ್ವೇಟಿವ್ ಬ್ಯಾಲೆನ್ಸ್ಡ್ ಫಂಡ್ ಸರಿ ಹೊಂದುತ್ತದೆ. ನಿವೃತ್ತಿಗಾಗಿ ಹೂಡಿಕೆ ಮಾಡುತ್ತೀರಿ ಎಂದಾದರೆ, ಈಕ್ವಿಟಿ ಮ್ಯೂಚುವಲ್ ಫಂಡ್ ಆಯ್ದುಕೊಳ್ಳಬಹುದು.

ಹಲವು ಅನುಕೂಲಗಳು: ಮ್ಯೂಚುವಲ್ ಫಂಡ್‌ಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್ ನಿರ್ವಹಿಸುತ್ತಾರೆ. ಹಾಗಾಗಿ ಮಾರುಕ್ಟಟೆಯ ಏರಿಳಿತಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ. ಕೆಲವು ಫಂಡ್‌ಗಳನ್ನು ಹೊರತುಪಡಿಸಿದರೆ, ಬಹಳಷ್ಟು ಫಂಡ್‌ಗಳಲ್ಲಿ ಲಾಕ್ ಇನ್ ಪಿರಿಯಡ್ (ಹಣ ಹಿಂದಕ್ಕೆ ಪಡೆಯಲು ನಿರ್ಬಂಧ ಇರುವ ಅವಧಿ) ಇಲ್ಲದಿರುವುದರಿಂದ ಬೇಕಾದಾಗ ಹಣ ಪಡೆಯಬಹುದು. ಫಂಡ್ ಮ್ಯಾನೇಜರ್ ನಿಮ್ಮ ಹಣವನ್ನು ಹತ್ತಾರು ಕಂಪನಿಗಳಲ್ಲಿ ತೊಡಗಿಸುವ ಕಾರಣ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ವೈವಿಧ್ಯ ಸಾಧ್ಯವಿದೆ.

ವಿಮೆ ಹೂಡಿಕೆಗಳಲ್ಲಿ ಶೇ 30ರಿಂದ ಶೇ 40ರಷ್ಟು ಕಮಿಷನ್ ಇರುತ್ತದೆ. ಎಫ್.ಡಿ.ಯನ್ನು ಅವಧಿಗೆ ಮೊದಲೇ ತೆಗೆದರೆ ಶುಲ್ಕ ಹಾಕುತ್ತಾರೆ ಅಥವಾ ಕಡಿಮೆ ಬಡ್ಡಿ ಕೊಡುತ್ತಾರೆ. ಆದರೆ ಶೂನ್ಯ ಕಮಿಷನ್ನಿನ ಡೈರೆಕ್ಟ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಒಟ್ಟು ಲಾಭಾಂಶದ ಶೇ 0.5ರಿಂದ ಶೇ 1.5ರಷ್ಟು ಮಾತ್ರ ಶುಲ್ಕ ಇರುತ್ತದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು ಮ್ಯೂಚುವಲ್ ಫಂಡ್‌ಗಳನ್ನು ನಿಯಂತ್ರಿಸುವುದರಿಂದ ಮೋಸಕ್ಕೆ ಅವಕಾಶವಿಲ್ಲ.

ಸತತ ಎರಡನೇ ವಾರ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಕುಸಿತ ದಾಖಲಿಸಿವೆ. 52,586 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.73ರಷ್ಟು ಇಳಿದಿದೆ. 15,763 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.58ರಷ್ಟು ತಗ್ಗಿದೆ. ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1.3ರಷ್ಟು ಜಿಗಿದರೆ, ಮಿಡ್ ಕ್ಯಾಪ್ ಸೂಚ್ಯಂಕ ಶೇ 0.29ರಷ್ಟು ಏರಿಕೆಯಾಗಿದೆ.

ಜಾಗತಿಕ ವಿದ್ಯಮಾನಗಳ ಜೊತೆ ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆ ಲೆಕ್ಕಾಚಾರಕ್ಕೆ ಅನುಗುಣವಾಗಿ ಬಾರದಿರುವ ಕಾರಣ ಸೂಚ್ಯಂಕಗಳು ಕುಸಿದಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ವಲಯ ಶೇ 8ರಷ್ಟು ಹೆಚ್ಚಳ ಕಂಡಿದೆ. ಮಾಧ್ಯಮ ಮತ್ತು ಐ.ಟಿ. ವಲಯ ತಲಾ ಶೇ 2ರಷ್ಟು ಏರಿಕೆಯಾಗಿವೆ. ನಿಫ್ಟಿ ಇಂಧನ ಮತ್ತು ವಾಹನ ವಲಯ ಶೇ 1.5ರಿಂದ ಶೇ 3ರಷ್ಟು ಇಳಿಕೆ ಕಂಡಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 10,825.21 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 8,206.32 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಹಿಂಡಾಲ್ಕೊ ಶೇ 13ರಷ್ಟು, ಟಾಟಾ ಸ್ಟೀಲ್ ಶೇ 12ರಷ್ಟು, ಸನ್ ಫಾರ್ಮಾ ಶೇ 11ರಷ್ಟು, ಬಜಾಜ್ ಫಿನ್‌ಸರ್ವ್ ಶೇ 8ರಷ್ಟು, ಟೆಕ್ ಮಹೀಂದ್ರ ಶೇ 7ರಷ್ಟು ಏರಿಕೆಯಾಗಿವೆ. ಡಿಆರ್‌ಎಲ್ ಶೇ 13ರಷ್ಟು, ಎಕ್ಸಿಸ್ ಬ್ಯಾಂಕ್ ಶೇ 6ರಷ್ಟು, ಮಾರುತಿ ಸುಜುಕಿ ಶೇ 4ರಷ್ಟು, ಏಷ್ಯನ್ ಪೇಂಟ್ಸ್ ಶೇ 4ರಷ್ಟು ಮತ್ತು ಕೋಟಕ್ ಬ್ಯಾಂಕ್ ಶೇ 4ರಷ್ಟು ಕುಸಿದಿವೆ.

ಮುನ್ನೋಟ: ಆಗಸ್ಟ್ 4ರಿಂದ 6ರವರೆಗೆ ಆರ್‌ಬಿಐ ಹಣಕಾಸು ಸಮಿತಿ ಸಭೆ ಇದೆ. ಈ ವಾರ ಮಹೀಂದ್ರ ಆ್ಯಂಡ್ ಮಹೀಂದ್ರ, ಅದಾನಿ ಪೋರ್ಟ್ಸ್, ಅದಾನಿ ಪವರ್, ಅದಾನಿ ಗ್ರೀನ್, ಟಾಟಾ ಕನ್ಸ್ಯೂಮರ್, ಎಚ್‌ಡಿಎಫ್‌ಸಿ, ಡಾಬರ್, ಗೇಲ್, ಇಂಡಿಗೊ ಪೇಂಟ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.