ADVERTISEMENT

ಷೇರು ಹೂಡಿಕೆ ಯಶಸ್ಸಿಗೆ 4 ಸೂತ್ರಗಳು

ಪ್ರಮೋದ್
Published 30 ಮೇ 2021, 19:30 IST
Last Updated 30 ಮೇ 2021, 19:30 IST
ಪ್ರಮೋದ್ ಬಿ.ಪಿ.
ಪ್ರಮೋದ್ ಬಿ.ಪಿ.   

ಸಂಪತ್ತು ಗಳಿಕೆಯ ಹಾದಿಯಲ್ಲಿರುವ ಹೂಡಿಕೆ ಆಯ್ಕೆಗಳಲ್ಲಿ ಷೇರುಪೇಟೆ ಪ್ರಮುಖವಾದದ್ದು. ಷೇರು ಮಾರುಕಟ್ಟೆಯ ಇತಿಹಾಸವನ್ನು ತಿರುವಿ ನೋಡಿದಾಗ ದೀರ್ಘಾವಧಿಯಲ್ಲಿ ಷೇರು ಹೂಡಿಕೆ ಲಾಭ ತಂದುಕೊಟ್ಟಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಮಾರ್ಚ್ 2020 ರಲ್ಲಿ 25,000 ಅಂಶಗಳಿಗೆ ಕುಸಿದಿದ್ದ ಸೆನ್ಸೆಕ್ಸ್ ಸೂಚ್ಯಂಕ ನಂತರದಲ್ಲಿ 51,000 ಅಂಶಗಳ ಗಡಿದಾಟಿ ಮುನ್ನುಗ್ಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅಲ್ಪಾವಧಿಯಲ್ಲಿ ಕುಸಿತ ಕಾಣಬಹುದು, ಆದರೆ ದೀರ್ಘಾವಧಿಯಲ್ಲಿ ಷೇರುಪೇಟೆಯಲ್ಲಿ ಲಾಭ ಗಳಿಕೆಯ ಸಾಧ್ಯತೆ ಹೆಚ್ಚು ಎನ್ನುವುದು ಈ ಹಿಂದಿನ ಹಲವು ನಿದರ್ಶನಗಳಲ್ಲಿ ರುಜುವಾತಾಗಿದೆ. ಕೋವಿಡ್‌ನಂತಹ ಅನಿಶ್ಚಿತ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಯಾವಾಗ ಕುಸಿಯಬಹುದು? ಎಷ್ಟರ ಮಟ್ಟಿಗೆ ಕುಸಿತ ಕಾಣಬಹುದು? ಷೇರುಗಳನ್ನು ಖರೀದಿಸಿ ಇಟ್ಟುಕೊಳ್ಳಬೇಕಾ ಇಲ್ಲಾ ಮಾರಾಟ ಮಾಡುವುದು ಒಳಿತಾ ಎಂಬಿತ್ಯಾದಿ ಪ್ರಶ್ನೆಗಳು ಹೂಡಿಕೆದಾರರ ಮನದಲ್ಲಿವೆ. ಈ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿ ಯಶಸ್ಸು ತಂದುಕೊಂಡುವ ಯಾವ ಸಿದ್ಧ ಸೂತ್ರವೂ ಲಭ್ಯವಿಲ್ಲ. ಆದರೆ ಷೇರು ಮಾರುಕಟ್ಟೆ ವಿಚಾರದಲ್ಲಿ ಸರ್ವಕಾಲಕ್ಕೂ ಸಲ್ಲುವ ಕೆಲ ಲೆಕ್ಕಾಚಾರಗಳಿವೆ. ಅವನ್ನು ಪಾಲಿಸಿದರೆ ಸಂಪತ್ತು ಸೃಷ್ಟಿಯ ಹಾದಿ ಸುಗಮವಾಗುತ್ತದೆ.

ಸೂಕ್ತ ಸಮಯಕ್ಕಾಗಿ ಕಾಯುತ್ತಾ ಕೂರಬೇಡಿ: ಷೇರು ಮಾರುಕಟ್ಟೆ ಹೂಡಿಕೆ ಆರಂಭಿಸಲು ಯಾವುದು ಸೂಕ್ತ ಸಮಯ ಎಂಬ ಪ್ರಶ್ನೆಯನ್ನು ಬಹುತೇಕರು ಕೇಳುತ್ತಾರೆ. ಷೇರು ಹೂಡಿಕೆಯನ್ನು ಕೂಡಲೇ ಆರಂಭಿಸುವುದು ಷೇರು ಹೂಡಿಕೆಗೆ ಸರಿಯಾದ ಸಮಯ. ಷೇರಿನ ಬೆಲೆ ಅತಿ ಕಡಿಮೆಯಾದಾಗ ನಾನು ಖರೀದಿ ಮಾಡುತ್ತೇನೆ ಮತ್ತು ಬೆಲೆ ಅತಿ ಹೆಚ್ಚಾದಾಗ ಮಾರಾಟ ಮಾಡುತ್ತೇನೆ ಎನ್ನುವ ಲೆಕ್ಕಾಚಾರ ವಾಸ್ತವದಲ್ಲಿ ಸಾಧ್ಯವಾಗುವುದಿಲ್ಲ. ವ್ಯವಸ್ಥಿತವಾಗಿ ಹೂಡಿಕೆ ಮಾಡುತ್ತಾ ಸಾಗಿದರೆ ಮಾರುಕಟ್ಟೆಯ ಏರಿಳಿತದ ಲಾಭ ನಿಮಗೆ ಸಿಗುತ್ತದೆ. ಊಹಾಪೋಹಗಳನ್ನು ಪಕ್ಕಕ್ಕಿಟ್ಟು, ಮಾರುಕಟ್ಟೆ ತಲ್ಲಣಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮೂಲಭೂತವಾಗಿ ಭದ್ರ ಬುನಾದಿ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಸಂಪತ್ತು ಗಳಿಕೆ ಖಂಡಿತ ಸಾಧ್ಯ. ಅರಿತು ಹೂಡಿಕೆ ಮಾಡಿ: ಯಾವುದೇ ಷೇರನ್ನು ಖರೀದಿಸುವ ಮೊದಲು ಆ ಕಂಪನಿಯ ಪೂರ್ವಾಪರ ಅರಿತುಕೊಳ್ಳಿ. ಕಂಪನಿಯ ಹಿನ್ನೆಲೆ ಏನು, ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಈವರೆಗೆ ಕಂಪನಿ ಯಾವ ರೀತಿಯ ಆರ್ಥಿಕ ಪ್ರಗತಿ ಸಾಧಿಸಿದೆ, ಭವಿಷ್ಯದಲ್ಲಿ ಎಷ್ಟರ ಮಟ್ಟಿಗೆ ಬೆಳವಣಿಗೆ ಸಾಧಿಸಲು ಅವಕಾಶವಿದೆ. ಹೀಗೆ ಎಲ್ಲಾ ಆಯಾಮಗಳಲ್ಲೂ ಹೂಡಿಕೆ ಮಾಡಬೇಕೆಂದುಕೊಂಡಿರುವ ಕಂಪನಿಯ ಬಗ್ಗೆ ತಿಳಿದುಕೊಳ್ಳಿ. ಸಾಕಷ್ಟು ಅಧ್ಯಯನ ಮಾಡಿದ ಬಳಿಕವಷ್ಟೇ ಹೂಡಿಕೆ ತೀರ್ಮಾನ ಕೈಗೊಳ್ಳಿ. ಷೇರು ಮಾರುಕಟ್ಟೆ ಬಗ್ಗೆ ಗೊತ್ತಿಲ್ಲ ಅಂದ್ರೆ ಹೂಡಿಕೆ ಮಾಡಲೇಬೇಡಿ. ಷೇರು ಮಾರುಕಟ್ಟೆ ಬಗ್ಗೆ ಒಂದಿಷ್ಟು ಅಗತ್ಯ ವಿಚಾರಗಳನ್ನು ಅರಿತ ಮೇಲಷ್ಟೇ ಮುಂದುವರಿಯಿರಿ. ಯಾಕಂದ್ರೆ ಈ ಹೂಡಿಕೆಯಲ್ಲಿ ನಿಮ್ಮ ಬಂಡವಾಳದ ಮೊತ್ತಕ್ಕೂ ಖಾತರಿ ಇರುವುದಿಲ್ಲ.

ಹೂಡಿಕೆ ಮಾಡುವಾಗ ಭಾವನಾತ್ಮಕವಾಗಿ ಯೋಚಿಸಬೇಡಿ: ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಎಲ್ಲದಕ್ಕಿಂತಲೂ ಮುಖ್ಯವಾದ ವಿಚಾರ ನಿಮ್ಮ ಮೂಲ ಬಂಡವಾಳವನ್ನು ಉಳಿಸಿಕೊಳ್ಳುವುದು. ಷೇರು ಖರೀದಿಸುವವರಿಗೆ ಅತಿಯಾದ ಭಯ ಮತ್ತು ದುರಾಸೆ ಎರಡೂ ಅಪಾಯಕಾರಿ. ಅಳೆದು ತೂಗಿ, ಅಧ್ಯಯನ ಮಾಡಿ ಖರೀದಿಸಿದ ಷೇರುಗಳನ್ನು ದೀರ್ಘಾವಧಿಗೆ ಇಟ್ಟುಕೊಂಡರೆ ಲಾಭ ಗಳಿಕೆಯ ಹಾದಿ ಸುಗಮವಾಗುತ್ತದೆ. ಅಂದಾಜಿಗೆ ಗುಂಡು ಹಾರಿಸುವ ಲೆಕ್ಕಾಚಾರ ಇಲ್ಲಿ ಬೇಡವೇ ಬೇಡ.

ADVERTISEMENT

ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ನೀವೇ ನಿರ್ಧರಿಸಿ: ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ ಎನ್ನುವ ಮಾತನ್ನು ನೀವು ಕೇಳಿರಬೇಕಲ್ಲವೇ? ಹೌದು ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು, ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ತೊಡಗಿಸಬೇಕು ಎಂಬ ನಿರ್ಧಾರಗಳನ್ನು ನೀವೇ ಮಾಡಬೇಕು. ನಿಮ್ಮ ಒಟ್ಟು ಆದಾಯದಲ್ಲಿ ಎಷ್ಟು ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು ಎಂಬ ಲೆಕ್ಕಾಚಾರದ ಬಗ್ಗೆ ನಿಮಗೆ ಸ್ಪಷ್ಟತೆ ಇರಬೇಕು. ಯಾರೋ ಹೇಳಿದರು ಎನ್ನುವ ಕಾರಣಕ್ಕೆ ಅಳತೆ ಅಂದಾಜಿಲ್ಲದೆ ಎಲ್ಲಾ ಹಣವನ್ನು ಷೇರುಪೇಟೆಯಲ್ಲಿ ತೊಡಗಿಸಬಾರದು.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ. ನ ಸಂಶೋಧನಾ ವಿಭಾಗದ ಮುಖ್ಯಸ್ಥ)

***

ಸತತ ಎರಡನೆಯ ವಾರ ಜಿಗಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೆಯ ವಾರವೂ ಗಳಿಕೆ ಕಂಡಿವೆ. 51,422 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 2 ರಷ್ಟು ಗಳಿಕೆ ಕಂಡಿದೆ. 15,435 ಅಂಶಗಳಿಗೆ ಏರಿಕೆ ಕಂಡಿರುವ ನಿಫ್ಟಿ ಶೇ 1.72 ರಷ್ಟು ಜಿಗಿದಿದೆ. ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.5 ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2 ರಷ್ಟು ಹೆಚ್ಚಳ ದಾಖಲಿಸಿವೆ. ಬಜೆಟ್ ನಂತರದಲ್ಲಿ ಕಂಡಿದ್ದ ದೊಡ್ಡ ಮಟ್ಟದ ಜಿಗಿತವನ್ನು ನಿಫ್ಟಿ ಮತ್ತೆ ತಲುಪಿರುವುದು ಮಾರುಕಟ್ಟೆಯಲ್ಲಿ ಉತ್ಸಾಹ ಹೆಚ್ಚಿಸಿದೆ. ಆದರೆ ಏರಿಳಿತದ ಸ್ಥಿತಿ ಇನ್ನೂ ಒಂದಷ್ಟು ಕಾಲ ಮುಂದುವರಿಯಲಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕತೆ, ಕೋವಿಡ್ ಪ್ರಕರಣಗಳ ಸಂಖ್ಯೆ 4 ಲಕ್ಷದ ಆಸುಪಾಸಿನಿಂದ 2 ಲಕ್ಷದ ಆಸುಪಾಸಿಗೆ ಇಳಿಕೆ, ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳಲ್ಲೂ ಉತ್ತಮ ಸಾಧನೆ ಸೇರಿ ಹಲವು ಅಂಶಗಳು ಕಳೆದ ವಾರದ ಜಿಗಿತಕ್ಕೆ ಅನುಕೂಲ ಮಾಡಿಕೊಟ್ಟಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 1.5 ರಷ್ಟು ಜಿಗಿದಿದೆ. ಮಾಧ್ಯಮ ವಲಯ, ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಮಾಹಿತಿ ತಂತ್ರಜ್ಞಾನ ವಲಯ, ಉತ್ತಮ ಗಳಿಕೆ ಕಡಿವೆ, ಲೋಹ ವಲಯ ಶೇ 1 ರಷ್ಟು ತಗ್ಗಿದೆ.

ಮುನ್ನೋಟ: ಆರ್‌ಬಿಐ ಹಣಕಾಸು ನೀತಿ ಈ ವಾರ ಹೊರಬೀಳಲಿದೆ. ಜಿಡಿಪಿ ದತ್ತಾಂಶ, ಆಮದು ರಫ್ತು ಅಂಕಿ-ಅಂಶ, ಉತ್ಪಾದನೆ ಸ್ಥಿತಿಗತಿಯ ದತ್ತಾಂಶ ಸೇರಿ ಪ್ರಮುಖ ಮಾಹಿತಿಗಳು ಕೂಡ ಲಭಿಸಲಿವೆ. ತೈಲ ಉತ್ಪನ್ನ ರಾಷ್ಟಗಳ ಸಭೆಯಿಂದಾಗಿ (ಒಪೆಕ್) ತೈಲ ಬೆಲೆಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಉಕ್ಕಿನ ಬೆಲೆಯನ್ನು ಜೂನ್‌ನಲ್ಲಿ ಕಂಪನಿಗಳು ಏರುವ ಸಂಭವವಿದ್ದು, ಅದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಉಂಟುಮಾಡಲಿದೆ. ಇದಲ್ಲದೆ ಕೋವಿಡ್ ಪ್ರಕರಣಗಳ ಸ್ಥಿತಿಗತಿ, ಲಾಕ್‌ಡೌನ್ ವಿಸ್ತರಣೆ ಅಥವಾ ಹಿಂಪಡೆಯುವುದು, ಕೇಂದ್ರ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ನಿರೀಕ್ಷೆ ಸೇರಿ ಹಲವು ವಿದ್ಯಮಾನಗಳು ಮಾರುಕಟ್ಟೆಯ ದಿಕ್ಕು ನಿರ್ಧರಿಸಲಿವೆ. ಈ ವಾರ ಐಟಿಸಿ, ಅರಬಿಂದೋ ಫಾರ್ಮಾ, ಮದರ್ ಸನ್ ಸುಮಿ ಸಿಸ್ಟಮ್ಸ್, ಮುತ್ತೂಟ್ ಫೈನಾನ್ಸ್, ಪಿವಿಆರ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ನಿಫ್ಟಿಯಲ್ಲಿ ಏರಿಕೆ–ಇಳಿಕೆ (%)

ಏರಿಕೆ

ಗ್ರಾಸಿಮ್;3.38

ಇಂಡಿಯನ್ ಆಯಿಲ್ ಕಾರ್ಪೊರೇಷನ್;5.32

ಎಸ್‌ಬಿಐ;5.18

ವಿಪ್ರೊ;4.89

ಟೆಕ್ ಮಹಿಂದ್ರ;4.67

ಇಳಿಕೆ

ಎನ್‌ಟಿಪಿಸಿ;3.46

ಸನ್ ಫಾರ್ಮಾ;2.57

ಹಿಂದುಸ್ಥಾನ್ ಯುನಿಲಿವರ್;1.44

ಏರ್‌ಟೆಲ್‌;1.21

ಜೆಎಸ್‌ಡಬ್ಲ್ಯೂ ಸ್ಟೀಲ್;1.20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.