ADVERTISEMENT

ಕೋವಿಡ್‌ ಪ್ರಭಾವ; ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ

ಏಜೆನ್ಸೀಸ್
Published 25 ಮಾರ್ಚ್ 2021, 9:39 IST
Last Updated 25 ಮಾರ್ಚ್ 2021, 9:39 IST
ಮುಂಬೈ ಷೇರುಪೇಟೆಯಲ್ಲಿ ಸೂಚ್ಯಂಕದ ಮಾಹಿತಿ ಪ್ರದರ್ಶಿಸುತ್ತಿರುವ ಪರದೆ, ಅದರ ಮುಂದೆ ಮೊಬೈಲ್‌ನಲ್ಲಿ ಅಪ್‌ಡೇಟ್‌ ನೋಡುತ್ತ ಸಾಗುತ್ತಿರುವ ವ್ಯಕ್ತಿ
ಮುಂಬೈ ಷೇರುಪೇಟೆಯಲ್ಲಿ ಸೂಚ್ಯಂಕದ ಮಾಹಿತಿ ಪ್ರದರ್ಶಿಸುತ್ತಿರುವ ಪರದೆ, ಅದರ ಮುಂದೆ ಮೊಬೈಲ್‌ನಲ್ಲಿ ಅಪ್‌ಡೇಟ್‌ ನೋಡುತ್ತ ಸಾಗುತ್ತಿರುವ ವ್ಯಕ್ತಿ   

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಹೆಚ್ಚಳದಿಂದಾಗಿ ದೇಶದ ಷೇರುಪೇಟೆಗಳ ವಹಿವಾಟಿನ ಮೇಲೆ ಆಗುತ್ತಿರುವ ಪ್ರಭಾವ ಮುಂದುವರಿದಿದ್ದು, ಗುರುವಾರ ಸಹ ವಹಿವಾಟು ಕುಸಿತ ಕಂಡಿದೆ.

ಹಣಕಾಸು ಮತ್ತು ತಂತ್ರಜ್ಞಾನ ಕಂಪನಿಗಳ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕಿ ನಷ್ಟ ದಾಖಲಿಸಿವೆ. ವಹಿವಾಟು ಆರಂಭದಿಂದಲೇ ಇಳಿಮುಖವಾದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಧ್ಯಾಹ್ನ 2:40ರ ವರೆಗೂ 517ಕ್ಕೂ ಹೆಚ್ಚು ಅಂಶಗಳು ಕಡಿಮೆಯಾಗಿ, 48,662 ಅಂಶಗಳಲ್ಲಿ ವಹಿವಾಟು ನಡೆದಿದೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 150 ಅಂಶಗಳಷ್ಟು ಇಳಿಕೆಯಾಗಿ 14,400 ಅಂಶಗಳಲ್ಲಿ ವಹಿವಾಟು ನಡೆದಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳ ಬೆಲೆ ಶೇ 2ಕ್ಕೂ ಹೆಚ್ಚು ಕಡಿಮೆಯಾಗಿವೆ. ಇದೇ ತಿಂಗಳು ನಿಫ್ಟಿ ಬ್ಯಾಂಕ್‌ ಸೂಚ್ಯಂಕ ಶೇ 5ರಷ್ಟು ಕುಸಿತ ದಾಖಲಿಸಿದೆ.

ADVERTISEMENT

ರಿಲಯನ್ಸ್‌, ಟಿಸಿಎಸ್‌ ನಂತಹ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳ ಷೇರು ಬೆಲೆಯೂ ಇಳಿಮುಖವಾಗಿದೆ. ಭಾರ್ತಿ ಏರ್‌ಟೆಲ್‌ ಹಾಗೂ ವೊಡಾಫೋನ್‌ ಐಡಿಯಾ ಷೇರುಗಳು ದಿನದ ವಹಿವಾಟಿನಲ್ಲಿ 3 ತಿಂಗಳ ಕನಿಷ್ಠ ಮಟ್ಟ ತಲುಪಿದವು.

ಲಕ್ಷ್ಮಿ ಆರ್ಗಾನಿಕ್‌ ಷೇರು ಐಪಿಒ ಬೆಲೆಗಿಂತ ಶೇ 20ರಷ್ಟು ಹೆಚ್ಚಳದೊಂದಿಗೆ (₹155.50) ಷೇರುಪೇಟೆ ವಹಿವಾಟು ಆರಂಭಿಸಿದೆ. ಕ್ರಾಫ್ಟ್ಸ್‌ಮನ್‌ ಆಟೊಮೇಷನ್‌ ಷೇರು ಶೇ 9ರಷ್ಟು ಕಡಿಮೆ ಬೆಲೆಯೊಂದಿಗೆ ವಹಿವಾಟಿಗೆ ತೆರೆದುಕೊಂಡಿದೆ.

ಬುಧವಾರ ಸೆನ್ಸೆಕ್ಸ್‌ 871 ಅಂಶ ಕುಸಿತ ಕಂಡು 49,180 ಅಂಶಗಳಲ್ಲಿ ವಹಿವಾಟು ಕೊನೆಯಾಗಿತ್ತು. ನಿಫ್ಟಿ 266 ಅಂಶಗಳಷ್ಟು ಕಡಿಮೆಯಾಗಿ 14,549 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನ ₹ 3.27 ಲಕ್ಷ ಕೋಟಿಗಳಷ್ಟು ಕರಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.