ADVERTISEMENT

ಷೇರು ಮಾತು: ದುಡ್ಡು ಬೆಳೆಸುವ ‘ವ್ಯಾಲ್ಯು ಇನ್ವೆಸ್ಟಿಂಗ್’

ಶರತ್ ಎಂ.ಎಸ್.
Published 20 ಸೆಪ್ಟೆಂಬರ್ 2021, 19:20 IST
Last Updated 20 ಸೆಪ್ಟೆಂಬರ್ 2021, 19:20 IST
ಶರತ್ ಎಂ.ಎಸ್.
ಶರತ್ ಎಂ.ಎಸ್.   

ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಹೂಡಿಕೆದಾರ ಬೆಂಜಮಿನ್ ಗ್ರಹಾಂ 1920ರ ಸುಮಾರಿನಲ್ಲಿ ‘ವ್ಯಾಲ್ಯು ಇನ್ವೆಸ್ಟಿಂಗ್’ – ಅಂದರೆ ಕಂಪನಿಯ ಷೇರುಗಳ ಮೌಲ್ಯವನ್ನು ಗಮನಿಸಿ, ಅದರ ಆಧಾರದಲ್ಲಿ ಮಾಡುವ ಹೂಡಿಕೆ – ಎಂಬ ಹೊಸ ವಿಧಾನ ಹುಟ್ಟುಹಾಕಿದರು. ಒಂದು ಶತಮಾನದ ಬಳಿಕವೂ ಬೆಂಜಮಿನ್ ಗ್ರಹಾಂ ತತ್ವಗಳು ಹೂಡಿಕೆದಾರರಿಗೆ ಪ್ರಸ್ತುತವಾಗಿವೆ. ಜಗತ್ತಿನ ಶ್ರೀಮಂತ ಹೂಡಿಕೆದಾರ ವಾರನ್ ಬಫೆಟ್ ಸಂಪತ್ತು ಸೃಷ್ಟಿಸಿದ್ದು ಕೂಡ ಇದೇ ‘ವ್ಯಾಲ್ಯು ಇನ್ವೆಸ್ಟಿಂಗ್’ ಮೂಲಕ.ಬನ್ನಿ ‘ಮೌಲ್ಯಾಧಾರಿತ ಹೂಡಿಕೆ’ಯ ಬಗ್ಗೆ ಹೆಚ್ಚು ಕಲಿತು ಪ್ರಜ್ಞಾವಂತ ಹೂಡಿಕೆದಾರರಾಗೋಣ.

ಏನಿದು ವ್ಯಾಲ್ಯು ಇನ್ವೆಸ್ಟಿಂಗ್?: ಷೇರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿರುವ, ಅತ್ಯುತ್ತಮ ಕಂಪನಿಗಳ ಷೇರುಗಳನ್ನು ಹುಡುಕಿ ಹಣ ತೊಡಗಿಸುವ ಪ್ರಕ್ರಿಯೆಯನ್ನು ವ್ಯಾಲ್ಯು ಇನ್ವೆಸ್ಟಿಂಗ್ ಎನ್ನಬಹುದು. ಅತ್ಯುತ್ತಮ ಕಂಪನಿಯೊಂದರ ಷೇರನ್ನು ಗುರುತಿಸಿ, ಕಡಿಮೆ ಬೆಲೆಗೆ ಅದನ್ನು ಖರೀದಿಸಿದ್ದೀರಿ ಎಂದ ಮೇಲೆ ಮುಂದೊಂದು ದಿನ ಆ ಷೇರಿನ ಮೌಲ್ಯ ಏರಿಕೆಯಾಗಲೇಬೇಕು ಅಲ್ಲವೇ? ಷೇರಿನ ಬೆಲೆ ಜಿಗಿದಾಗ ನೀವು ಹೂಡಿಕೆ ಮಾಡಿದ್ದ ಕಡಿಮೆ ಬಂಡವಾಳಕ್ಕೆ ಹೆಚ್ಚು ಲಾಭ ಸಿಗುತ್ತದಲ್ಲವೇ? ಇದೇ ವ್ಯಾಲ್ಯೂ ಇನ್ವೆಸ್ಟಿಂಗ್ ಅಂತರಂಗ.

ಬಹಳ ಸರಳ ಎಂದು ಅನ್ನಿಸಿದರೂಇದು ಅತ್ಯಂತ ಶಕ್ತಿಶಾಲಿ ತತ್ವ ಎಂಬುದನ್ನು ಮರೆಯುವಂತೆ ಇಲ್ಲ. ಉದಾಹರಣೆಗೆ ₹ 500ರಷ್ಟು ಆಂತರಿಕ ಮೌಲ್ಯ (Intrinsic Value) ಹೊಂದಿರುವ ಷೇರಿನ ಬೆಲೆ ಇಂದು ₹ 100 ಇದ್ದು, ಅದನ್ನು ನೀವು ಖರೀದಿಸಿದಿರಿ ಎಂದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಆ ಷೇರಿನ ಬೆಲೆ ₹ 500 ಆದಾಗ ನಿಮಗೆ ₹ 400 ಲಾಭವಾಗುತ್ತದೆ. ಹೀಗೆ ಕಡಿಮೆ ಬಂಡವಾಳ ಹೂಡಿಕೆ ಮಾಡಿ, ದೀರ್ಘಾವಧಿಯಲ್ಲಿ ಹೆಚ್ಚು ಲಾಭ ಗಳಿಸುವ ತತ್ವವೇ ವ್ಯಾಲ್ಯು ಇನ್ವೆಸ್ಟಿಂಗ್.

ADVERTISEMENT

ಓವರ್ ವ್ಯಾಲ್ಯೂಡ್, ಅಂಡರ್ ವ್ಯಾಲ್ಯೂಡ್ ಎಂದರೇನು?: ವಾಸ್ತವದಲ್ಲಿ ಹೊಂದಿರಬೇಕಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯ ಹೊಂದಿರುವ ಷೇರುಗಳನ್ನು ‘ಓವರ್ ವ್ಯಾಲ್ಯೂಡ್’ ಷೇರು ಎನ್ನುತ್ತಾರೆ. ವಾಸ್ತವದಲ್ಲಿ ಹೊಂದಿರಬೇಕಾದ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ಹೊಂದಿರುವ ಷೇರುಗಳು ‘ಅಂಡರ್ ವ್ಯಾಲ್ಯೂಡ್’ ಎಂದು ಪರಿಗಣಿತ ಆಗುತ್ತವೆ. ಷೇರು ಹೂಡಿಕೆ ಮಾಡುವಾಗ ಅಂಡರ್ ವ್ಯಾಲ್ಯೂಡ್ ಷೇರುಗಳಿಗೆ ಆದ್ಯತೆ ಕೊಡಬೇಕು.

ಕಂಪನಿಗಳನ್ನು ಹುಡುಕುವುದು ಹೇಗೆ?: ಷೇರುಪೇಟೆಯಲ್ಲಿ ಅಂಡರ್ ವ್ಯಾಲ್ಯೂಡ್ ಷೇರುಗಳನ್ನು ಗುರುತಿಸಲುಹಲವು ಅನುಪಾತಗಳನ್ನು ಬಳಸಲಾಗುತ್ತದೆ. ಫ್ರೈಸ್ ಟು ಅರ್ನಿಂಗ್ಸ್ ರೇಷಿಯೋ, ಪ್ರೈಸ್ ಅರ್ನಿಂಗ್ಸ್ ಟು ಗ್ರೋಥ್ ರೇಷಿಯೋ, ಪ್ರೈಸ್ ಟು ಬುಕ್ ರೇಷಿಯೋ, ಡಿವಿಡೆಂಡ್ ಈಲ್ಡ್ ರೇಷಿಯೋ, ಡೆಟ್ ಟು ಈಕ್ವಿಟಿ ರೇಷಿಯೋ, ರಿಟರ್ನ್ ಆನ್ ಈಕ್ವಿಟಿ ರೇಷಿಯೋ, ಪ್ರೈಸ್ ಟು ಸೇಲ್ಸ್ ಹೀಗೆ ಹಲವು ಅನುಪಾತಗಳು ಇಂತಹ ಷೇರುಗಳನ್ನು ಗುರುತಿಸಲು ನೆರವಿಗೆ ಬರುತ್ತವೆ.

ಪ್ರತಿ ಅನುಪಾತವನ್ನು ಗ್ರಹಿಸಿ, ಅರ್ಥ ಮಾಡಿಕೊಂಡು ಮುಂದುವರಿದಾಗ ನಿರ್ದಿಷ್ಟ ಷೇರಿನ ಭವಿಷ್ಯದ ಬಗ್ಗೆ ನಿಮ್ಮ ಲೆಕ್ಕಾಚಾರ ನಿಖರವಾಗುತ್ತದೆ.ವ್ಯಾಲ್ಯು ಇನ್ವೆಸ್ಟಿಂಗ್‌ಗೆ ಅಗತ್ಯ ಕಂಪನಿಗಳನ್ನು ಗುರುತಿಸಲು ನೆರವಿಗೆ ಬರುವಅನುಪಾತಗಳ ಬಗ್ಗೆ ಮತ್ತಷ್ಟು ವಿವರವಾಗಿ ಮುಂದೆ ತಿಳಿಯೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.