ADVERTISEMENT

ಎ.ನಾರಾಯಣ ಬರಹ: ಮುಗಿದ ವರ್ಷ, ಮುಗಿಯದ ಸಂಘರ್ಷ

ಪ್ರತಿಭಟನೆಯಲ್ಲಿ ಆರಂಭ ಮತ್ತು ಅಂತ್ಯ ಕಂಡ 2020ರ ಅಂತಿಮ ಸಂದೇಶಗಳೇನು?

ನಾರಾಯಣ ಎ
Published 30 ಡಿಸೆಂಬರ್ 2020, 19:31 IST
Last Updated 30 ಡಿಸೆಂಬರ್ 2020, 19:31 IST
   
""

ಸಂಕಷ್ಟವೇ ಕಾಲದ ರೂಪದಲ್ಲಿ ಎದ್ದು ಬಂದಿತೋ ಎಂಬಂತೆ ಕಾಣಿಸಿಕೊಂಡ 2020ನೇ ಇಸವಿ ಇಂದಿಗೆ ಮುಗಿಯುತ್ತಿದೆ. ವರ್ಷ ಮಾತ್ರ ಕೊನೆಗೊಂಡು ಅದು ಹೊತ್ತು ತಂದ ಸಂಕಷ್ಟ ಇನ್ನೂ ಪೂರ್ತಿ ಮುಗಿಯದೇ ಉಳಿದುಕೊಂಡಿರುವಾಗ, ಹಳೆಯ ವರ್ಷ ಮುಗಿಯು ವುದು ಎಂದರೇನು? ಹೊಸ ವರ್ಷ ಆರಂಭವಾಗುವುದು ಎಂದರೇನು? ಕಾಲಚಕ್ರದಲ್ಲಿ ಆರಂಭ ಎಂಬುದು ಇಲ್ಲ, ಅಂತ್ಯ ಎಂಬುದೂ ಇಲ್ಲ ಎನ್ನುವ ತತ್ತ್ವಶಾಸ್ತ್ರೀಯ ಸತ್ಯ ಇದ್ದಕ್ಕಿದ್ದಂತೆಯೇ ವ್ಯಾವಹಾರಿಕ ಸತ್ಯವಾಗಿ ಪರಿವರ್ತನೆ ಆಗಿಬಿಟ್ಟಿದೆಯೇನೋ ಅಂತ ಅನ್ನಿಸುತ್ತದೆ.

ಕ್ಯಾಲೆಂಡರ್ ಮಾತ್ರವನ್ನಷ್ಟೇ ನೋಡಿ ಹೇಳುವುದಾದರೆ ವರ್ಷ ಮುಗಿದಿದೆ. ಹಳೆಯ ಕ್ಯಾಲೆಂಡರ್‌ನಲ್ಲಿ ಮುಗಿದುಹೋದದ್ದು, ಹೊಸ ಕ್ಯಾಲೆಂಡರ್‌ನಲ್ಲಿ ಪ್ರಾರಂಭವಾಗಲೇಬೇಕಲ್ಲ?

ಪ್ರತೀ ವರ್ಷ ಅದು ಕೊನೆಗೊಳ್ಳುವ ಕಾಲಕ್ಕೆ ಒಂದೊಂದು ದೇಶಕ್ಕೆ, ಒಂದೊಂದು ದೇಶದೊಳಗಣ ಒಂದೊಂದು ಪ್ರದೇಶಕ್ಕೆ, ಒಂದೊಂದು ಪ್ರದೇಶದ ಪ್ರತಿಯೋರ್ವ ವ್ಯಕ್ತಿಗೆ ಒಂದೊಂದು ರೀತಿಯ ನೆನಪು ಗಳನ್ನು ಉಳಿಸಿ ಹೋಗುವುದು ರೂಢಿ. ಈ ವರ್ಷ ಮಾತ್ರ ಹಾಗಲ್ಲ. ಅದು ಇಡೀ ಮಾನವ ಕೋಟಿಯ ಪಾಲಿಗೆ ಉಳಿಸಿಹೋದದ್ದು ಒಂದೇ ನೆನಪು. ಒಂದು ಸಾಂಕ್ರಾಮಿಕದ ನೆನಪು. ಸಾಂಕ್ರಾಮಿಕ ತಂದ ಸಕಲ ಸಂಕಷ್ಟಗಳ ನೆನಪು. ಸಂಕಷ್ಟಗಳು ಉಂಟುಮಾಡಿದ ಸ್ತಬ್ಧತೆಯ ನೆನಪು. ಆ ನೆನಪಿನ ಆಳದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಅನುಭವ ಬೇರೆ ಬೇರೆ ಆಗಿರಬಹುದಾದರೂ ಇಡೀ ಪ್ರಪಂಚದ ಪಾಲಿಗೆ ಇಡೀ ಒಂದು ವರ್ಷದ ಚರಿತ್ರೆ ಹೀಗೆ ಏಕರೂಪವಾಗುತ್ತಲೇ ನೀರಸವಾಗಿ ಹೋದದ್ದು, ನೀರಸವಾಗುತ್ತಲೇ ಭಯಾನಕವಾಗಿ ಹೋದದ್ದು, ಭಯಾನಕವಾಗುತ್ತಲೇ ಬೀಭತ್ಸವಾಗಿಯೂ ಹೋದದ್ದು ಇದೇ ಮೊದಲಿರಬೇಕು.

ADVERTISEMENT

ಈ ವರ್ಷ ಅರ್ಧ ಮುಗಿದಿದ್ದಾಗ ಸಾಂಕ್ರಾಮಿಕ ತಾರಕ ಸ್ಥಿತಿಯಲ್ಲಿತ್ತು. ಆಗ ಸಿಎನ್ಎನ್ ಜಾಲತಾಣದಲ್ಲಿ ಪ್ರಕಟವಾದ ಲೇಖನವೊಂದರ ಆರಂಭದ ಸಾಲು ಹೀಗಿತ್ತು: ‘ಈ ವರ್ಷದಲ್ಲಿ ಇನ್ನೂ ಆರು ತಿಂಗಳು ಗಳು ಉಳಿದಿವೆ ಅಂತ ವಿಷಾದಪೂರ್ವಕವಾಗಿ ಹೇಳ ಬೇಕಾಗಿದೆ’. ಮುಗಿದು ಹೋದದ್ದಕ್ಕೆ ವಿಷಾದ ವ್ಯಕ್ತಪಡಿ ಸುವುದು ಸಹಜ. ಇನ್ನೂ ಆರು ತಿಂಗಳು ಉಳಿದಿವೆ ಎನ್ನುವುದೇ ವಿಷಾದದ ವಿಷಯವಾಗಿ ಹೋದದ್ದು ಎಂದರೆ ಅದು ಈ ವರ್ಷ ಮಾತ್ರ ಇರಬೇಕು. 2020 (ಟ್ವೆಂಟಿ-ಟ್ವೆಂಟಿ) ಎನ್ನುವುದು ಕ್ರಿಕೆಟ್ ಸುತ್ತ ರೂಪುಗೊಂಡಿರುವ ಭಾರತದ ಜನಪ್ರಿಯ ಸಂಸ್ಕೃತಿಯಲ್ಲಿ (popular culture) ಅಲ್ಪಾವಧಿಗೊಂದು ರೂಪಕ. ಆದರೆ ಅದೇ ಸಂಖ್ಯೆಯಲ್ಲಿ ನಮೂದಾಗುವ ಈ ವರ್ಷವು ಚರಿತ್ರೆಯಲ್ಲಿ ದಾಖಲಾಗುವುದು ಇಡೀ ಮಾನವ ಕುಲಕ್ಕೆ ಅತ್ಯಂತ ಸುದೀರ್ಘ ಅಂತ ಅನ್ನಿಸಿದ 365 ದಿನಗಳ ರೂಪದಲ್ಲಿ. ಇದು ಚರಿತ್ರೆ ಕಂಡ ಅತ್ಯಂತ ಕೆಟ್ಟ ವರ್ಷ ಎನ್ನಬಹುದೇ? ಕೆಲವರು ಹಾಗೆ ಕರೆದಿದ್ದಾರೆ.

ಇದಕ್ಕಿಂತಲೂ ಕ್ರೂರ ದಿನಗಳನ್ನು ಸಮಾಜಕ್ಕೆ ಒದಗಿಸಿದ ವರ್ಷವೊಂದು ಹಿಂದೆ ಆಗಿಲ್ಲ ಅಂತ ಸ್ಪಷ್ಟ ವಾಗಿ ಹೇಳಬಲ್ಲಷ್ಟು ಆಳಕ್ಕೆ ನಮ್ಮ ಚರಿತ್ರೆಯ ಜ್ಞಾನ ಇರ ಲಾರದು. ಒಂದಂತೂ ಸತ್ಯ. ಮಾನವಕೋಟಿ ಕಂಡಿರುವ, ಕೇಳಿರುವ ಮತ್ತು ಅನುಭವಿಸಿರುವ ಅತೀ ಕೆಟ್ಟ ವರ್ಷಗಳ ಪೈಕಿ ಇದೂ ಒಂದು.

ಭಾರತದಲ್ಲಿ ವರ್ಷ ಪ್ರಾರಂಭವಾಗುವ ಹೊತ್ತಿಗೆ ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು ವಿರೋಧಿಸುವ ಪ್ರತಿಭಟನೆಗಳು ದೇಶದಾದ್ಯಂತ ನಡೆಯುತ್ತಿದ್ದವು. ಆ ಪ್ರತಿಭಟನೆಯ ವ್ಯಕ್ತರೂಪವನ್ನು ಕೊರೊನಾ ಸಾಂಕ್ರಾಮಿಕ ಕೊನೆಗೊಳಿಸಿತು. ಈಗ ವರ್ಷದ ಅಂತ್ಯದಲ್ಲೂ ಪ್ರತಿಭಟನೆಯೊಂದು ದೇಶದ ರಾಜಧಾನಿಯ ಸುತ್ತ ಆವರಿಸಿಕೊಂಡಿದೆ. ಅದು ಕೃಷಿಗೆ ಸಂಬಂಧಿಸಿದ ಕಾಯ್ದೆಗಳ ವಿರುದ್ಧ. ಸಾಂಕ್ರಾಮಿಕದ ಭಯ ಈ ಪ್ರತಿಭಟನೆಯನ್ನು ಬಾಧಿಸಿದಂತೆ ಕಾಣುತ್ತಿಲ್ಲ. ಕೊರೆವ ಚಳಿ ಅದರ ಕಾವನ್ನು ತಗ್ಗಿಸುತ್ತಿಲ್ಲ. ಈ ಎರಡು ಪ್ರತಿಭಟನೆಗಳ ನಡುವೆ ವಿಜೃಂಭಿಸಿದ ಸಾಂಕ್ರಾಮಿಕವೂ ಒಂದು ರೀತಿಯ ಪ್ರತಿಭಟನೆಯೇ. ವರ್ಷದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಕಂಡದ್ದು ಮನುಷ್ಯರು ನಡೆಸಿದ ಪ್ರತಿಭಟನೆಗಳಾದರೆ, ವರ್ಷದುದ್ದಕ್ಕೂ ಕಾಡಿದ ಮತ್ತು ಇನ್ನೂ ಕಾಡುತ್ತಲೇ ಇರುವ ಸಾಂಕ್ರಾಮಿಕವು ಪ್ರಕೃತಿಯೇ ಎದ್ದು ಮಾನವನ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ. ಒಟ್ಟಿನಲ್ಲಿ, ಪ್ರತಿಭಟನೆಯೇ ಮೂರ್ತ ಸ್ವರೂಪ ಪಡೆದ ರೀತಿಯಲ್ಲಿ ಬಂದು ಹೋಯಿತು 2020.

ಜನರು ನಡೆಸುವ ಪ್ರತಿಭಟನೆಯು ಅಧಿಕಾರಸ್ಥರ ವಿರುದ್ಧವಾಗಿರುತ್ತದೆ. ಅಧಿಕಾರದಾಹದ ವಿರುದ್ಧ ಇರುತ್ತದೆ. ಅಧಿಕಾರದ ದುರ್ಬಳಕೆಯ ವಿರುದ್ಧ ಇರುತ್ತದೆ. ಅಧಿಕಾರದಲ್ಲಿ ಇರುವವರಿಗೆ ಪ್ರತಿಭಟನೆಯ ಸಂದೇಶ ಕಾಣಿಸುವುದಿಲ್ಲ. ಪ್ರತಿಭಟನೆಯ ಮೂಲ ಎಲ್ಲಿದೆ ಎನ್ನುವುದನ್ನು ಹುಡುಕುವ ಅಗತ್ಯವನ್ನು ಅವರು ಮನಗಾಣುವುದಿಲ್ಲ. ಅಂತಹ ವ್ಯವಧಾನವಾಗಲೀ ಪ್ರಬುದ್ಧತೆಯಾಗಲೀ ಅವರಲ್ಲಿ ಇರುವುದಿಲ್ಲ. ಪ್ರತಿಭಟನೆಗಳನ್ನು ಹೇಗಾದರೂ ಮಾಡಿ ಪ್ರತಿಬಂಧಿಸಬೇಕು ಮತ್ತು ಅವುಗಳ ಸದ್ದಡಗಿಸಬೇಕು ಎಂಬುದಷ್ಟೇ ಅಧಿಕಾರದಲ್ಲಿ ಇರುವವರ ಯೋಚನೆಯಾಗಿರುತ್ತದೆ. ಅದನ್ನವರು ಹೇಗೋ ಮಾಡುತ್ತಾರೆ ಕೂಡಾ. ಆದರೆ ಹೀಗೆ ಕೃತಕ ವಾಗಿ ಒಂದು ಕಡೆ ಕೊನೆಯಾದ ಪ್ರತಿಭಟನೆಗಳು ಮತ್ತೊಂದು ಕಡೆ ಮತ್ತೊಂದು ರೂಪದಲ್ಲಿ ಕಾಣಿಸಿಕೊಳ್ಳು ತ್ತವೆ. ವರ್ಷದ ಆರಂಭದಲ್ಲೂ ಪ್ರತಿಭಟನೆ, ವರ್ಷದ ಅಂತ್ಯದಲ್ಲೂ ಪ್ರತಿಭಟನೆ- ತತ್ಪರಿಣಾಮವಾಗಿ ಹೊಸ ವರ್ಷದ ಆರಂಭದಲ್ಲೂ ಪ್ರತಿಭಟನೆ ಎಂಬಲ್ಲಿ ಈ ಸತ್ಯ ಗೋಚರಿಸುತ್ತದೆ.

ನಾರಾಯಣ ಎ.

ಸಾಂಕ್ರಾಮಿಕವನ್ನು ಪಸರಿಸಿ ಪ್ರಕೃತಿ ನಡೆಸಿದ ಪ್ರತಿಭಟನೆಯೂ ಅಷ್ಟೇ. ಅದು ಇಡೀ ಮಾನವಕೋಟಿಯ ಕೊನೆಯೇ ಇಲ್ಲದ ಅಭಿವೃದ್ಧಿ ದಾಹದ ವಿರುದ್ಧದ ಪ್ರತಿಭಟನೆ. ಅದು, ಲಸಿಕೆ ಬಂದಾಕ್ಷಣ ಕೊನೆಗೊಳ್ಳುವುದಿಲ್ಲ. ಈ ಬಾರಿ ಪ್ರಕೃತಿ ಪ್ರಯೋಗಿಸಿದ ಪ್ರತಿಭಟನೆಯ ಅಸ್ತ್ರವನ್ನು ಲಸಿಕೆಯ ಮೂಲಕ ದುರ್ಬಲಗೊಳಿಸಬಹುದು. ಆಗ ಪ್ರಕೃತಿ ಇನ್ನೊಂದು ರೀತಿಯಲ್ಲಿ, ಇನ್ನೊಂದು ವರ್ಷದಲ್ಲಿ ಇನ್ಯಾವುದೋ ಅಸ್ತ್ರ ಬಳಸಿ ಕೊಂಡು ಮತ್ತೆ ಪ್ರತಿಭಟನೆ ನಡೆಸುತ್ತದೆ.

ಸಾಮಾನ್ಯ ಜನ ಪ್ರತಿಭಟಿಸುತ್ತಿದ್ದರೆ ಅಥವಾ ಪ್ರತಿಭಟಿಸುತ್ತಲೇ ಇದ್ದರೆ ಅದು ಅಧಿಕಾರಸ್ಥರು ಜನರ ಸಾಮಾನ್ಯ ಬದುಕನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದರ ಸೂಚನೆ. ಪ್ರಕೃತಿಯು ಪ್ರತಿಭಟನೆ ನಡೆಸುತ್ತಿದ್ದರೆ ಅಥವಾ ಪ್ರತಿಭಟನೆ ನಡೆಸು ತ್ತಲೇ ಇದ್ದರೆ ಅದು ಮನುಷ್ಯಕೋಟಿ ಪ್ರಕೃತಿಯ ಜತೆ ಹೊಂದಿಕೊಂಡು ಬದುಕುತ್ತಿಲ್ಲ ಎನ್ನುವುದರ ಸೂಚನೆ. ಪ್ರತಿಭಟಿಸುತ್ತಿರುವ ಆ ಜನರು ಸರ್ಕಾರಕ್ಕೆ ಏನೋ ‘ಬೇಡಾ, ಬೇಡಾ’ ಎನ್ನುತ್ತಿದ್ದಾರೆ.

ಪ್ರತಿಭಟಿಸುತ್ತಿರುವ ಪ್ರಕೃತಿಯೂ ಸಮಸ್ತ ವಿಶ್ವದ ಜನಸಮೂಹಕ್ಕೆ ಏನನ್ನೋ ‘ಬೇಡಾ, ಬೇಡಾ’ ಎನ್ನುತ್ತಿದೆ. ಅಧಿಕಾರದ ಅಹಂ ಮತ್ತು ಅಭಿವೃದ್ಧಿಯ ದಾಹ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸದಾ ‘ಬೇಕು, ಬೇಕು’ ಎನ್ನುತ್ತಲೇ ಇರುವ ನಮ್ಮ ಅಧಿಕಾರ ರಾಜಕೀಯ ವ್ಯವಸ್ಥೆಗೆ ಮತ್ತು ನಮ್ಮ ಅಭಿವೃದ್ಧಿಯ ಮಾದರಿಗೆ ‘ಬೇಡಾ, ಬೇಡಾ’ ಎನ್ನುವ ಬೇಡಿಕೆಯ ಒಳಧ್ವನಿ ಅರ್ಥವಾಗುವ ತನಕ ಇಂದು ಮುಗಿಯುವ 2020 ನಮ್ಮೆಲ್ಲರನ್ನೂ ಶಾಶ್ವತವಾಗಿ ಕಾಡಲಿದೆ.

ಹಾಗಾದರೆ ವರ್ಷ- 2020ರ ಸಂದೇಶವೇನು? ಅದು ಹೆಚ್ಚು ಬಳಸದೆ ಬದುಕು ಎನ್ನುವ ಸಂದೇಶ. ಹೆಚ್ಚು ಪ್ರಯಾಣಿಸದೆ ಬದುಕು ಎನ್ನುವ ಸಂದೇಶ. ಭೌತಿಕವಾಗಿ ಹೆಚ್ಚು ಕಟ್ಟದೆ ಬದುಕು ಎನ್ನುವ ಸಂದೇಶ. ಹೆಚ್ಚು ಕೆಡವದೆ ಬದುಕು ಎನ್ನುವ ಸಂದೇಶ. ಹತ್ತಿರವಿದ್ದೂ ದೂರವಾಗಿ ಇರುವುದಕ್ಕಿಂತ ದೂರದಲ್ಲಿದ್ದೂ ಹತ್ತಿರವಾಗು ಎನ್ನುವ ಸಂದೇಶ. ಕೇಂದ್ರೀಕೃತ ಅಧಿಕಾರಕ್ಕೆ ಎಂದೂ ಜನಪರವಾಗಿರಲು ಸಾಧ್ಯವಿಲ್ಲ ಎನ್ನುವ ಸಂದೇಶ. ಆಡಳಿತ ವ್ಯವಸ್ಥೆ ಎನ್ನುವುದನ್ನು ಪಳಗಿಸದೆ ಬೆಳೆಸಿದರೆ ಅದು ಜನಜೀವನದ ದುರ್ಬರ ಕ್ಷಣಗಳಲ್ಲೂ ಆತ್ಮರಹಿತ ಯಂತ್ರವಾಗಿಯೇ ಉಳಿಯುತ್ತದೆ ಎನ್ನುವ ಮಹಾತ್ಮ ಗಾಂಧಿಯ ಸಂದೇಶ.

ಅಧ್ಯಾತ್ಮದ ಆಳಕ್ಕಿಳಿದು ಕೇಳಿಸಿಕೊಂಡರೆ ಅದು ಅಹಂ ಬ್ರಹ್ಮಾಸ್ಮಿ ಎನ್ನುವ ಸಂದೇಶ. ವ್ಯಾವಹಾರಿಕವಾಗಿ ಯೋಚಿಸಿದರೆ ಅದು ‘ನಮ್ಮ ತಲೆಗೆ ನಮ್ಮದೇ ಕೈ’ ಎನ್ನುವ ಜನಪದ ಸಂದೇಶ. ಏಪ್ರಿಲ್-ಮೇ ತಿಂಗಳ ಬಿಸಿಲ ಬೆಂಕಿಗೆ ಮೈಯೊಡ್ಡಿ ಇಂಡಿಯಾ ಮತ್ತು ಭಾರತದ ನಡುವಣ ಅಗಣಿತ ಅಂತರವನ್ನು ಕ್ರಮಿಸಿದ ಧ್ವನಿ ಇರದ ಬಾಯಿಗಳ, ದಣಿವಿರದ ಕಾಲುಗಳ ಆ ಲಕ್ಷೋಪಲಕ್ಷ ಜನ ಸಮೂಹದ ಚಿತ್ರವಿದೆಯಲ್ಲಾ ಅದು 2020ರ ಎಲ್ಲಾ ಸಂದೇಶಗಳ ಸಾರ ಸಂಗ್ರಹ. ಅದು ಕೊರೊನೋತ್ತರ ಭಾರತದ ಅನಧಿಕೃತ ರಾಷ್ಟ್ರೀಯ ಲಾಂಛನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.