ADVERTISEMENT

ಅನುರಣನ: ಮೈಸೂರಲ್ಲಿ ಹರಾಜಾದ ಐಎಎಸ್ ಮಾನ

ಅಪ್ರಬುದ್ಧ ನಡವಳಿಕೆ ರಾಷ್ಟ್ರೀಯ ವ್ಯಾಧಿಯಾಗಿರುವಾಗ ಐಎಎಸ್‌ನವರು ಹೇಗೆ ಹೊರತಾದಾರು?

ಎ.ನಾರಾಯಣ
Published 10 ಜೂನ್ 2021, 19:30 IST
Last Updated 10 ಜೂನ್ 2021, 19:30 IST
ಅಧಿಕಾರಿಗಳು ಮತ್ತು ರಾಜಕಾರಣಿಗಳು–ಪ್ರಾತಿನಿಧಿಕ ಚಿತ್ರ
ಅಧಿಕಾರಿಗಳು ಮತ್ತು ರಾಜಕಾರಣಿಗಳು–ಪ್ರಾತಿನಿಧಿಕ ಚಿತ್ರ   

ದೇಶ ಕಟ್ಟಲು ದೊಡ್ಡ ಕೊಡುಗೆ ನೀಡಿರುವ ಭಾರತೀಯ ಆಡಳಿತ ಸೇವೆ (ಐಎಎಸ್) ಎಂಬ ಸಾಂವಿಧಾನಿಕ ವ್ಯವಸ್ಥೆಯ ಕ್ಷುಲ್ಲಕೀಕರಣ (trivialisation) ಮತ್ತು ವೈಭವೀಕರಣ (glorification) ಒಟ್ಟೊಟ್ಟಿಗೆ ಕರ್ನಾಟಕದಲ್ಲೀಗ ನಡೆಯುತ್ತಿವೆ. ಐಎಎಸ್‌ಗೆ ಸೇರಿದ ಈರ್ವರು ಸರ್ಕಾರಿ ನೌಕರರ ಜಗಳ ಮತ್ತು ಅದರ ಸುತ್ತಲ ಬೆಳವಣಿಗೆಗಳಿಂದಾಗಿ ಐಎಎಸ್‌ನ ಮಾನ ಅಕ್ಷರಶಃ ಬೀದಿಬೀದಿಗಳಲ್ಲಿ ಹರಾಜಾಗುತ್ತಿದೆ.

ದೇಶದಲ್ಲಿ ಪ್ರಬುದ್ಧತೆ ಎನ್ನುವುದು ಸರ್ವತ್ರ ಕುಸಿಯುತ್ತಿರುವಾಗ, ಐಎಎಸ್‌ನವರನ್ನು ಅದು ಹೇಗಾದರೂ ಬಾಧಿಸದೆ ಬಿಟ್ಟೀತು. ಊರಿಗೆ ಬಂದದ್ದು ಕೇರಿಗೆ ಬರಲೇಬೇಕಲ್ಲ. ಈ ದೇಶದಲ್ಲಿ ಪ್ರಧಾನಿಯಿಂದ ಹಿಡಿದು, ಮುಖ್ಯಮಂತ್ರಿಗಳಿಂದ ಹಿಡಿದು, ನ್ಯಾಯಾಧೀಶರುಗಳಿಂದ ಹಿಡಿದು, ಸಂಸದ-ಶಾಸಕರಿಂದ ಹಿಡಿದು, ಪತ್ರಕರ್ತರಿಂದ ಹಿಡಿದು, ಮಠಾಧೀಶರುಗಳಿಂದ ಹಿಡಿದು, ಸಿನಿಮಾ-ಕ್ರೀಡಾ ರಂಗದ ಸಾಧಕರಿಂದ ಹಿಡಿದು ಯಾರ‍್ಯಾರು ತಮ್ಮ ಸಾಮಾಜಿಕ- ರಾಜಕೀಯ- ಆಡಳಿತಾತ್ಮಕ ಸ್ಥಾನಗಳಲ್ಲಿ ನಿಂತು ಜವಾಬ್ದಾರಿಯಿಂದ ವರ್ತಿಸಬೇಕೋ ಅಂತಹ ಎಲ್ಲಾ ವರ್ಗಗಳಿಗೆ ಸೇರಿದ ಕೆಲವರು ಮತ್ತೆ ಮತ್ತೆ ತೋರುತ್ತಿರುವ ಅಪ್ರಬುದ್ಧ ನಡವಳಿಕೆಗಳ ಪರಂಪರೆಯ ಮುಂದುವರಿದ ಭಾಗವಾಗಿ ಐಎಎಸ್‌ಗೆ ಸೇರಿದ ಇವರೀರ್ವರ ಜಗಳವನ್ನು ಕಾಣಬೇಕಾಗಿದೆ.

ಐಎಎಸ್ ವ್ಯವಸ್ಥೆಯ ಚರಿತ್ರೆಯಲ್ಲಿ ಆಗಬಾರದ ಹಲವು ಘಟನಾವಳಿಗಳು ಆಗಿವೆ. ಆದರೆ, ಈ ಸೇವೆಗೆ ಸೇರಿದ ಒಬ್ಬರು ಇನ್ನೊಬ್ಬರ ಮೇಲೆ ವೃತ್ತಿ ಸಂಬಂಧಿ ಆಪಾದನೆಗಳನ್ನು ಹೊರಿಸಲು ಪತ್ರಿಕಾಗೋಷ್ಠಿ ಕರೆಯುವುದು, ಮಾಧ್ಯಮಗಳ ಮುಂದೆ ಹುಸಿ ರಾಜೀನಾಮೆ ಪತ್ರ ಓದುವುದು, ಇನ್ನೊಬ್ಬರು ತಮ್ಮ ವೃತ್ತಿಯ ಭಾಗವಾಗಿ ನಿಭಾಯಿಸಬೇಕಾಗಿರುವ ಸ್ಥಳೀಯ ರಾಜಕಾರಣಿಗಳ ಅವ್ಯವಹಾರಗಳನ್ನು ಪತ್ರಿಕೆಗಳ ಮೂಲಕ ಬಹಿರಂಗಪಡಿಸುವುದು ಇತ್ಯಾದಿಗಳೆಲ್ಲಾ ಎಲ್ಲೂ ನಡೆದ ಹಾಗಿಲ್ಲ. ಇದು ಸಂಬಂಧಪಟ್ಟವರ ಅಪ್ರಬುದ್ಧತೆಯ ಪ್ರಶ್ನೆ ಮಾತ್ರವಲ್ಲ, ರಾಜಧಾನಿಯಿಂದ ಇವರನ್ನು ನಿಯಂತ್ರಿಸಬೇಕಾದವರ ಸರ್ವತ್ರ ವೈಫಲ್ಯದ ಪ್ರಶ್ನೆ ಕೂಡಾ.

ADVERTISEMENT

ಜಗಳವಾಡುತ್ತಿದ್ದವರು ಎತ್ತಿದ ವಿಷಯಗಳ ತಪ್ಪು- ಸರಿ ಏನೇ ಇರಲಿ, ಸರ್ಕಾರಿ ನೌಕರಿಗೆ ಸೇರಿ ದಶಕ ಪೂರೈಸುವುದಕ್ಕೆ ಮುನ್ನವೇ ಯಾರಿಗಾದರೂ ಹೀಗೆಲ್ಲಾ ಬಾಲಿಶ ಪ್ರಹಸನಗಳನ್ನು ನಡೆಸಲು ಧೈರ್ಯ ಬರುವುದು ರಾಜಕೀಯ ನಾಯಕತ್ವ ಎನ್ನುವುದು ಸತ್ತುಹೋಗಿದ್ದಾಗ. ಇಲ್ಲವೇ ರಾಜಕೀಯ ನಾಯಕತ್ವವು ಬಾಲಿಶಕ್ಕಿಂತ ಹೆಚ್ಚು ಬಾಲಿಶವಾಗಿ ವರ್ತಿಸುವ ವ್ಯಾಧಿಯಿಂದ ಬಳಲುತ್ತಿರುವಾಗ. ಇಷ್ಟೇ ಅಲ್ಲ, ಪತ್ರಿಕಾಗೋಷ್ಠಿಯಲ್ಲಿ ನೀಡಿದ ‘ರಾಜೀನಾಮೆ’ಯನ್ನು ಸ್ಥಳೀಯ ಮಠದ ಮುಖ್ಯಸ್ಥರೊಬ್ಬರು ಪೌರೋಹಿತ್ಯ ವಹಿಸಿ ಹಿಂತೆಗೆಸಿದರು ಎನ್ನುವ ವರ್ತಮಾನವಿದೆ. ಹಾಗೆಯೇ ಪತ್ರಿಕಾಗೋಷ್ಠಿ, ‘ರಾಜೀನಾಮೆ’ ಇತ್ಯಾದಿಗಳೆಲ್ಲ ಸ್ಥಳೀಯ ಜಗಳಗಂಟಿ ರಾಜಕೀಯ ನಾಯಕರುಗಳು ಹೂಡಿದ ದಾಳವೊಂದರ ಭಾಗವಾಗಿ ನಡೆದದ್ದು ಎಂಬ ಗುಮಾನಿ ಇದೆ. ಇವೆಲ್ಲವೂ ಸತ್ಯವೇ ಆಗಿದ್ದರೆ ಮೈಸೂರಿನಲ್ಲಿ ನಡೆದದ್ದು ಐಎಎಸ್‌ನ ಚಾರಿತ್ರಿಕ ಕ್ಷುಲ್ಲಕೀಕರಣ.

ಒಂದು ಹಳೆಯ ಪ್ರಕರಣ ನೆನಪಾಗುತ್ತದೆ. ತನ್ನ ಮಹಿಳಾ ಸಹೋದ್ಯೋಗಿಗೆ ಕುಡಿತದ ಅಮಲಿನಲ್ಲಿ ರೈಫಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಕ್ಕಾಗಿ ವಿ.ಕೆ.ಸಿಂಗ್ ಎಂಬ 1981ರ ಬ್ಯಾಚ್‌ನ ಐಎಎಸ್ ಪ್ರೊಬೇಷನರ್‌ನನ್ನು ವಜಾಗೊಳಿಸಬೇಕು ಎಂದು, ಆಗ ಮಸ್ಸೂರಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯ ನಿರ್ದೇಶಕರಾಗಿದ್ದ ಪಿ.ಎಸ್‌.ಅಪ್ಪು ಕೇಂದ್ರ ಸರ್ಕಾರಕ್ಕೆ ಬರೆಯುತ್ತಾರೆ. ಸರ್ಕಾರ ಹಿಂದೇಟು ಹಾಕಿದ್ದನ್ನು ಪ್ರತಿಭಟಿಸಿ ಅಪ್ಪು ಐಎಎಸ್‌ಗೆ ರಾಜೀನಾಮೆ ನೀಡುತ್ತಾರೆ. ವಿ.ಕೆ.ಸಿಂಗ್ ಅಂತಹವರು ಐಎಎಸ್‌ನಲ್ಲಿ ಯಾಕೆ ಇರಬಾರದು ಎಂಬ ತಮ್ಮ ವಾದವನ್ನು ಸಮರ್ಥಿಸುತ್ತಾ ಅಪ್ಪು ಹೀಗೆ ಬರೆಯುತ್ತಾರೆ: ‘ಸಾಮಾಜಿಕ ನಡವಳಿಕೆಗಳ ಮಟ್ಟ ತೀವ್ರವಾಗಿ ಕುಸಿಯುತ್ತಿರುವ ಈ ಹೊತ್ತಿನಲ್ಲಿ, ಎಲ್ಲರನ್ನೂ ನಿಯಂತ್ರಿಸಬೇಕಾದ ಹೊಣೆ ಹೊತ್ತಿರುವ ಐಎಎಸ್‌ನಂತಹ ಸೇವೆಯಲ್ಲಿ ಪ್ರಬುದ್ಧತೆ ಮತ್ತು ನಿಯಂತ್ರಣದ ಗುಣಗಳನ್ನು ತಮ್ಮ ವೈಯಕ್ತಿಕ ನಡವಳಿಕೆಯಲ್ಲೇ ರೂಢಿಸಿಕೊಳ್ಳಲಾಗದವರು ಯಾವ ಕಾರಣಕ್ಕೂ ಮುಂದುವರಿಯಬಾರದು’.

ವಿ.ಕೆ.ಸಿಂಗ್ ಪ್ರಕರಣಕ್ಕೂ ಮೈಸೂರು ಪ್ರಕರಣಕ್ಕೂ ನೇರ ಹೋಲಿಕೆ ಇಲ್ಲ. ಆದರೆ, ಅಪ್ಪು ಅವರ ಎಚ್ಚರಿಕೆ ಇಲ್ಲೂ ಪ್ರಸ್ತುತ. ಸರ್ಕಾರದ ಕಡೆಯಿಂದ ಒಂದು ಕಠಿಣ ಸಂದೇಶ, ಜಗಳಾಡುತ್ತಿರುವ ಈರ್ವರಿಗೂ ಹೋಗಿಲ್ಲ ಎನ್ನುವುದು ದುರಂತ. ಕಠಿಣ ಸಂದೇಶವು ಹಾಗಿರಲಿ, ಜಗಳದ ಓರ್ವರು ಭಾಗೀದಾರರ ಬಗ್ಗೆ ಚಲನಚಿತ್ರ ಮಾಡಲು ತಯಾರಿ ನಡೆಯುತ್ತಿದೆಯಂತೆ. ಕನ್ನಡ ಸಿನಿಮಾದ ಯೋಚನಾ ದಾರಿದ್ರ್ಯದ ಬಗ್ಗೆ ಏನು ಹೇಳುವುದು? ಪ್ರಚಾರದಲ್ಲಿರುವವರೆಲ್ಲಾ ಮಹಾನ್ ಸಾಧಕರಲ್ಲ ಅಂತ ಸಿನಿಮಾದವರಿಗೆ ಯಾವತ್ತು ತಿಳಿಯುವುದು? ಹಿಂದೆ ಬಂದ ಇಂತಹ ಭಟ್ಟಂಗಿ ಚಲನಚಿತ್ರಗಳೇ ಕನ್ನಡಕ್ಕೊಂದು ಕಳಂಕ.

ಐಎಎಸ್‌, ಐಪಿಎಸ್‌ನ ಅಸಹ್ಯಕರ ವೈಭವೀಕರಣ ಒಂದು ಪಿಡುಗು. ಎಲ್ಲ ರಾಷ್ಟ್ರಗಳಲ್ಲೂ ಉನ್ನತ ಆಡಳಿತ ಸೇವೆ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳೂ ನಡೆಯುತ್ತವೆ. ಆದರೆ ಯಾವ ರಾಷ್ಟ್ರಗಳಲ್ಲೂ ಆಯ್ಕೆಯಾದವರ ಫೋಟೊಗಳನ್ನು ಪತ್ರಿಕೆಗಳು ಪ್ರಕಟಿಸುವುದಿಲ್ಲ. ಸೇವೆಗೆ ಸೇರಿದವರು ಸಾಯುವವರೆಗೆ ಐಎಎಸ್, ಐಪಿಎಸ್ ಅಂತ ಹೆಸರಿನೆದುರು ಬರೆದುಕೊಳ್ಳುವುದಿಲ್ಲ. ಉಳಿದ ಸೇವೆಗಳಲ್ಲಿರುವವರು ಪ್ರಾಯ, ಪರಿಣತಿ, ಆತ್ಮಗೌರವ ಬಿಟ್ಟು ಇವರುಗಳಿಗೆ ಡೊಗ್ಗು ಸಲಾಂ ಮಾಡಬೇಕಾದ ಪರಿಪಾಟ ಎಲ್ಲೂ ಇಲ್ಲ. ಹಾಗಾಗಿ ಭಾರತದಲ್ಲೀಗ ಬೇಕಾಗಿರುವುದು ಐಎಎಸ್, ಐಪಿಎಸ್‌ಗಳನ್ನು ಸ್ವಲ್ಪ ನೆಲಕ್ಕಿಳಿಸುವ ಸಿನಿಮಾಗಳು; ಹೊಗಳಿ ಅಟ್ಟಕ್ಕೇರಿಸುವ ಸಿನಿಮಾಗಳಲ್ಲ.

ಬಹಳ ಮಂದಿಗೆ ತಿಳಿಯದ ಒಂದು ವಿಷಯ. ಐಎಎಸ್, ಐಪಿಎಸ್ ಮತ್ತು ಐಎಫ್ಎಸ್‌ಗಳೊಳಗೂ ಒಂದು ವರ್ಣಾಶ್ರಮ ಪದ್ಧತಿ ಇದೆ. ಸಮಾಜದಲ್ಲಿ ನಾಲ್ಕು ವರ್ಣಗಳಿದ್ದರೆ, ಇಲ್ಲಿ ಮೂರು ವರ್ಣಗಳಿವೆ. ನೇರವಾಗಿ ಆಯ್ಕೆಯಾದ ‘ಮೇಲ್ವರ್ಗ’ (RR), ರಾಜ್ಯ ಆಡಳಿತ ಸೇವೆಗೆ ಸೇರಿ ಅಲ್ಲಿಂದ ಪದೋನ್ನತಿ ಪಡೆದ ‘ಮಧ್ಯಮ ವರ್ಗ’ (SCS), ರಾಜ್ಯಗಳ ಕಿರಿಯ ಶ್ರೇಣಿಯ ಹುದ್ದೆಗಳಿಂದ ಪದೋನ್ನತಿ ಪಡೆಯುವ ‘ಕೆಳವರ್ಗ’ (Non-SCS). ಈ ವರ್ಣಗಳ ಕುರಿತು ಬಹಳಷ್ಟು ಹೇಳುವುದಿದೆ. ಅವುಗಳ ಸೃಷ್ಟಿಯ ಹಿನ್ನೆಲೆಯಲ್ಲಿರುವ ಸಾಂವಿಧಾನಿಕ ಕಾರಣಗಳೂ ಕುತೂಹಲಕಾರಿಯಾಗಿವೆ. ಎಲ್ಲವನ್ನೂ ವಿವರಿಸಲು ಸ್ಥಳಾವಕಾಶ ಇಲ್ಲ. ಪ್ರಸ್ತುತವಾಗಿರುವ ಒಂದು ವಿಷಯ ಮಾತ್ರ ಹೇಳಲೇಬೇಕಿದೆ.

ಎ.ನಾರಾಯಣ

ಐಎಎಸ್, ಐಪಿಎಸ್‌ಗೆ ನೇರವಾಗಿ ಆಯ್ಕೆ ಆಗುವವರು ತಮ್ಮ ಇಪ್ಪತ್ತು-ಮೂವತ್ತರ ಹರೆಯದಲ್ಲಿ ಒಂದೆರಡು ವರ್ಷಗಳ ವೃತ್ತಿ ಅನುಭವ ಪಡೆದು ಜಿಲ್ಲಾಡಳಿತದ/ ಜಿಲ್ಲಾ ಪೊಲೀಸ್ ವ್ಯವಸ್ಥೆಯ ಮುಖ್ಯಸ್ಥರಾಗಿ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ. ಇದು ಬ್ರಿಟಿಷ್ ಬಳುವಳಿ. ಇದನ್ನೀಗ ಬದಲಿಸಬೇಕಿದೆ.

ಭಾರತೀಯ ಸಮಾಜದ ಒಟ್ಟು ಪ್ರಬುದ್ಧತೆಯ ಮಟ್ಟ ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ನಮ್ಮ ಉನ್ನತ ಶಿಕ್ಷಣವು ಹೃದಯವಂತ ಮನುಷ್ಯರಿಗಿಂತ ಹೆಚ್ಚಾಗಿ ‘ಬುದ್ಧಿವಂತ ಯಂತ್ರ’ಗಳಂತಹವರನ್ನು ಮಾತ್ರ ಸೃಷ್ಟಿಸುತ್ತಿರುವುದರಿಂದ ನೇರ ಐಎಎಸ್, ಐಪಿಎಸ್‌ಗೆ ಆಯ್ಕೆ ಆಗುವವರು ತಮ್ಮ ವೃತ್ತಿಯ ಆರಂಭದಲ್ಲೇ ಜಿಲ್ಲಾಧಿಕಾರಿ/ ಪೊಲೀಸ್ ವರಿಷ್ಠರಾಗಲು ಅಥವಾ ಸ್ಥಳೀಯ ಸರ್ಕಾರಗಳಾದ ಜಿಲ್ಲಾ ಪಂಚಾಯಿತಿ, ನಗರಪಾಲಿಕೆಗಳಲ್ಲಿ ಆಡಳಿತದ ಮುಖ್ಯಸ್ಥರಾಗಲು ಬೇಕಾದಷ್ಟು ಮಾನಸಿಕ-ಭಾವನಾತ್ಮಕ ಪಕ್ವತೆ
ಗಳಿಸಿರುವುದಿಲ್ಲ ಅನ್ನಿಸುತ್ತದೆ. ಕೇವಲ ಬುದ್ಧಿವಂತಿಕೆಯಿಂದ ಆಡಳಿತ ನಡೆಸುವ ಕಾಲ ಮುಗಿದಿದೆ. ಹಾಗಾಗಿ, ರಾಜ್ಯ ಸೇವೆಯಿಂದ ಐಎಎಸ್‌ಗೆ ಬಡ್ತಿ ಪಡೆಯುವವರನ್ನೇ (SCS) ಜಿಲ್ಲಾ ಮಟ್ಟದ ಆಡಳಿತ ಮುಖ್ಯಸ್ಥರ ಹುದ್ದೆಗಳಿಗೆ ನೇಮಿಸಿದರೆ ಉತ್ತಮ. ಅವರಿಗೆ ದೀರ್ಘ ಅನುಭವ ಇರುತ್ತದೆ. ಮಣ್ಣಿನ ಸಂಪರ್ಕ ಹೆಚ್ಚಿರುತ್ತದೆ. ಮುಖ್ಯವಾಗಿ, ವಯಸ್ಸಿನ ಹಿರಿತನ ಇರುತ್ತದೆ. ಆದರೆ ಇಲ್ಲೊಂದು ಅಪಾಯ ಇದೆ. ರಾಜ್ಯ ಆಡಳಿತ/ಪೊಲೀಸ್ ಸೇವೆಗೆ ರಾಜ್ಯ ಲೋಕಸೇವಾ ಆಯೋಗದ ಮೂಲಕ ನಡೆಯುವ ಆಯ್ಕೆಯ ಹತ್ತಿಪ್ಪತ್ತು ಪ್ರತಿಶತ ಅಷ್ಟೇ ಸಮರ್ಪಕವಾಗಿ ನಡೆಯುವುದು. ಉಳಿದದ್ದು ಜಾತಿ, ಹಣ, ವೈವಾಹಿಕ ಒಪ್ಪಂದ ಇತ್ಯಾದಿಗಳ ಆಧಾರದ ಮೇಲೆ ಹರಾಜಾಗುತ್ತದೆ. ಇದನ್ನು ಸರಿಪಡಿಸಲು ಸಾಧ್ಯವಾದಲ್ಲಿ, ರಾಜ್ಯ ಸೇವೆಯಿಂದ ಪದೋನ್ನತಿ ಪಡೆದವರು ಜಿಲ್ಲಾ ಮಟ್ಟದ ಆಡಳಿತಕ್ಕೆ ಹೆಚ್ಚು ಸೂಕ್ತರಾಗಬಹುದು.

ಏನೇ ಮಾಡಿದರೂ ಸರಿ, ಸ್ಥಳೀಯ ರಾಜಕೀಯ ನಾಯಕರು ಮತ್ತು ಸರ್ಕಾರಿ ಸೇವೆಯಲ್ಲಿ ಇರುವವರು ಆಡಳಿತದ ಹೆಸರಿನಲ್ಲಿ ನಡೆಸುತ್ತಿರುವ ಮಕ್ಕಳಾಟವನ್ನು ನಿಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.